ಬೆಂಗಳೂರು: ರಾಜ್ಯದಲ್ಲಿ ಸುರಿಯುತ್ತಿರುವ ಮಳೆಯು (Heavy Rain) ನಾನಾ ಅವಾಂತರವನ್ನು ಸೃಷ್ಟಿ ಮಾಡಿದೆ. ರಾಜ್ಯದ ಪ್ರತ್ಯೇಕ ಕಡೆಗಳಲ್ಲಿ ಐವರು ಮೃತಪಟ್ಟಿದ್ದರೆ, ಬಹುತೇಕ ಎಲ್ಲ ಕಡೆಗಳಲ್ಲಿ ಕಟ್ಟಡ ಕುಸಿತ, ಬೆಳೆ ನಷ್ಟದ ಪ್ರಕರಣಗಳು ವರದಿಯಾಗಿದೆ.
ಅನ್ನದಾತರು ಕಂಗಾಲು
ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಜಾನೆಕೆರೆ ಗ್ರಾಮದಲ್ಲಿಸತತ ಮಳೆಯಿಂದಾಗಿ ರೈತರು ಕಂಗಾಲಾಗಿದ್ದಾರೆ. ಬಿತ್ತನೆಯಾದ ಪೈರಿನ ಗದ್ದೆ ಜತೆಗೆ ನಾಟಿಗೆ ಸಜ್ಜಾದ ಗದ್ದೆಗಳಿಗೆ ಮಳೆ ನೀರು ನಿಂತು ಕೆರೆಯಂತಾಗಿದೆ. ಮಳೆಯಿಂದ ಕೃಷಿ ಚಟುವಟಿಕೆಗೆ ಭಾರಿ ಹಿನ್ನಡೆ ಆಗಿದೆ.
ಹಾವೇರಿ ಜಿಲ್ಲೆಯ ರಾಣೇಬೆನ್ನೂರ ತಾಲೂಕಿನ ಮೆಡ್ಲೇರಿ, ಸೋಮಲಾಪುರ ಗ್ರಾಮದಲ್ಲಿ ನೂರಾರು ಎಕರೆ ಗೋವಿನಜೋಳ ಗಾಳಿ ಮಳೆಗೆ ನೆಲಕಚ್ಚಿದೆ. ಹಲವು ಕಡೆಗಳಲ್ಲಿ ಹೊಲದಲ್ಲಿ ನೀರು ನಿಂತಿದ್ದು, ಬೆಳೆ ಹಾಳಾಗಿದೆ.
ಶಿಥಿಲಗೊಂಡಿದ್ದ ಕಟ್ಟಡ ಗೋಡೆ ಕುಸಿತ
ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಕಾಡನಕೊಪ್ಪ ಗ್ರಾಮದಲ್ಲಿ ಮನೆಯ ಗೋಡೆ ಕುಸಿದಿದೆ. ಅಶೋಕ್ ಸಿದ್ದಪ್ಪ ಮಿಶಿಕೋಟಿ ಎಂಬುವರ ಮನೆಯ ಗೋಡೆ ಏಕಾಏಕಿ ನೆಲಕ್ಕೆ ಉರುಳಿದೆ. ನಿರಂತರವಾಗಿ ಮಳೆ ಬೀಳುತ್ತಿರುವ ಕಾರಣ ಮನೆ ಗೋಡೆ ಶಿಥಿಲಗೊಂಡಿತ್ತು. ಮನೆಯಲ್ಲಿ ಹತ್ತು ಜನ ವಾಸವಿದ್ದು, ಎಲ್ಲರೂ ಒಂದೆಡೆ ಕುಳಿತು ಊಟ ಮಾಡುತ್ತಿದ್ದಾಗ, ಗೋಡೆ ಕುಸಿತದ ಶಬ್ದ ಕೇಳಿ ಎಲ್ಲರೂ ಹೊರಗೆ ಓಡಿ ಬಂದಿದ್ದಾರೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಯಾದಗಿರಿ ತಾಲೂಕಿನ ಮುಷ್ಠೂರು ಗ್ರಾಮದಲ್ಲಿ ಮಳೆ ಅವಾಂತರಕ್ಕೆ 8 ಮನೆಗಳು ಕುಸಿದು ಬಿದ್ದಿದೆ. ವಾಸಕ್ಕೆ ಮನೆಯಿಲ್ಲದೇ ಕುಟುಂಬಗಳು ಪರದಾಡುತ್ತಿದ್ದು, ಪರಿಹಾರ ನೀಡಿ ಅನುಕೂಲ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ.
ಬೆಳಗಾವಿ ನಗರದ ಶಹಾಪುರದ ಸಪಾರ್ ಗಲ್ಲಿಯಲ್ಲಿ ಎರಡು ಮನೆ ಕುಸಿದಿದೆ. ಶಂಕ್ರೆವ್ವಾ ಹಂಗರಕಿ, ಮಲ್ಲವ್ವಾ ಕುಮಶೆಟ್ಟಿ ಎಂಬುವರ ಮನೆ ಬಿದ್ದಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಎಲ್ಲರೂ ಪಾರಾಗಿದ್ದಾರೆ.
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಹೆಬ್ಬಾಳು ಗ್ರಾಮದಲ್ಲಿ ಸುಭದ್ರಮ್ಮ ಎಂಬುವವರಿಗೆ ಸೇರಿದ ಮನೆಯು ಏಕಾಏಕಿ ಕುಸಿದು ಬಿದ್ದಿದೆ. ರಾತ್ರಿ ಊಟಕ್ಕೆ ಕುಳಿತಿದ್ದಾಗ ಮನೆ ಕುಸಿದಿದ್ದು, ಕೂದಲೆಳೆ ಅಂತರದಲ್ಲಿ ಮನೆಯವರು ಬದುಕುಳಿದಿದ್ದಾರೆ. ಮತ್ತೊಂದು ಕಡೆ ನಿರಂತರ ಮಳೆಯಿಂದ ಸಕಲೇಶಪುರ ತಾಲ್ಲೂಕಿನ ದೋಣಿಗಲ್ ಸಮೀಪದ ರಸ್ತೆ ತಡೆಗೋಡೆ ಕುಸಿದಿದೆ. ಸುಮಾರು 25 ಮೀಟರ್ ಉದ್ದಕ್ಕೂ ಬೃಹತ್ ತಡೆಗೋಡೆ ಕೊಚ್ಚಿ ಹೋಗಿದೆ.
ಇದನ್ನೂ ಓದಿ | Rain News | ಮಳೆ ಪರಿಹಾರದಲ್ಲಿ ತಾರತಮ್ಯ: ಸಿಎಂ ವಿರುದ್ಧ ವಿವಿಧ ಜಿಲ್ಲೆಗಳ ಜನ, ಜನಪ್ರತಿನಿಧಿಗಳ ಆಕ್ರೋಶ