ಶಿವಮೊಗ್ಗ: ರಾಜ್ಯದ ಅನೇಕ ಭಾಗಗಳಂತೆ ರಸ್ತೆಗಳಲ್ಲಿ ಗೂಳಿಗಳ ಅಬ್ಬರ (Bullock attack) ಶಿವಮೊಗ್ಗ ಜಿಲ್ಲೆಯಲ್ಲೂ ಜೋರಾಗಿದೆ. ಸಾಗರದಲ್ಲಿ ಬಾಲಕನ ಮೇಲೆ ಗೂಳಿಯೊಂದು ದಾಳಿ ಮಾಡಿದ ಘಟನೆ ಇದಕ್ಕೆ ಸಾಕ್ಷ್ಯ ಒದಗಿಸಿದೆ.
ಸಾಗರದ ನೆಹರು ನಗರದಲ್ಲಿ ನಡೆದ ಘಟನೆ ಇದಾಗಿದ್ದು, ನಜಾನ್ ಆಲಿಖಾನ್ (6) ಎಂಬ ಬಾಲಕ ಗಾಯಗೊಂಡಿದ್ದಾನೆ. ಭಾನುವಾರ ರಾತ್ರಿ ಮನೆಯ ಸಮೀಪವೇ ಏಕಾಏಕಿ ಬಂದು ಗೂಳಿ ಗುಮ್ಮಿದೆ.
ಬಾಲಕ ನಜಾನ್ ಭಾನುವಾರ ರಾತ್ರಿ ಮನೆಯ ಸಮೀಪವೇ ನಿಂತುಕೊಂಡಿದ್ದ. ಸಹೋದರರು ಸೈಕಲ್ ನಲ್ಲಿ ಆಟವಾಡುತ್ತಿರುವುದನ್ನು ನೋಡುತ್ತಿದ್ದ. ಆಗ ಎಲ್ಲಿಂದಲೋ ಬಂದ ಗೂಳಿಯೊಂದು ಆತನ ಮೇಲೆ ನೇರವಾಗಿ ದಾಳಿ ಮಾಡಿದೆ ಮತ್ತು ಬಾಲಕನನ್ನು ಕೊಂಬಿನಿಂದ ಎತ್ತಿ ಎಸೆದಿದೆ.
ಈ ಘಟನೆಯನ್ನು ಗಮನಿಸಿದ ಸ್ಥಳೀಯರು ಓಡೋಡಿ ಬಂದು ಗೂಳಿಯನ್ನು ಓಡಿಸಿ ಬಾಲಕನ್ನು ರಕ್ಷಿಸಿದ್ದಾರೆ. ಬಾಲಕನ ತಲೆ, ಕಾಲಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಆದರೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಗೂಳಿ ಬಾಲಕನನ್ನು ಎತ್ತಿ ಎಸೆಯುವ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ.
ಶಿವಮೊಗ್ಗ ನಗರದಲ್ಲೇ ಜನವರಿಯಲ್ಲಿ ಇಂಥಹುದೇ ಘಟನೆ ನಡೆದಿತ್ತು
ಶಿವಮೊಗ್ಗ ನಗರದಲ್ಲಿ ಗೋಪಿಶೆಟ್ಟಿ ಕೊಪ್ಪದಲ್ಲಿ ಕಳೆದ ಜನವರಿ 16ರಂದು ಇಂಥಹುದೇ ಘಟನೆ ನಡೆದಿತ್ತು. ಆವತ್ತಿನ ಏಳು ವರ್ಷದ ಪುಟ್ಟ ಬಾಲಕ ಜೀವ ಉಳಿಸಿಕೊಂಡಿದ್ದೇ ಪವಾಡ ಎಂಬಂತಿದೆ. ಸೈಕಲ್‌ನಲ್ಲಿ ಹೋಗುತ್ತಿದ್ದ ಬಾಲಕನ ಮೇಲೆ ಎರಡು ಗೂಳಿಗಳು (Bull attack) ದಾಳಿ ನಡೆಸಿದ್ದವು. ಬಾಲಕ ಹೇಗೋ ತಪ್ಪಿಸಿಕೊಂಡು ಬಚಾವಾಗಿದ್ದ.
ಗೋಪಿಶೆಟ್ಟಿ ಕೊಪ್ಪದಲ್ಲಿ ಸೈಕಲ್‌ನಲ್ಲಿ ಹೋಗುತ್ತಿದ್ದ ಸನತ್ (7) ಎಂಬ ಬಾಲಕನ ಎರಡು ಗೂಳಿಗಳು ಏಕಾಏಕಿ ದಾಳಿ ಮಾಡಿವೆ. ಮನೆ ಸಮೀಪದ ಅಂಗಡಿಯಿಂದ ಹಾಲು ತರುವಾಗ ಈ ಘಟನೆ ನಡೆದಿದೆ. ಮೊದಲು ಒಂದು ಗೂಳಿ ಬಾಲಕನನ್ನು ಕೊಂಬಿನಿಂದ ಎತ್ತಿ ಎಸೆದು ತಿವಿದರೆ, ಬಳಿಕ ಇನ್ನೊಂದು ಧಾವಿಸುತ್ತದೆ.
ಆಗ ಅಕ್ಕಪಕ್ಕದ ಮನೆಯವರು ಬೊಬ್ಬೆ ಹೊಡೆದುಕೊಂಡು ಓಡಿ ಬಂದಿದ್ದರಿಂದ ಬಾಲಕ ಬಚಾವಾಗುತ್ತಾನೆ. ಗೂಳಿ ದಾಳಿಯಲ್ಲಿ ಬಾಲಕನಿಗೆ ತಲೆ, ಕಾಲಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬಾಲಕನಿಗೆ ಗೂಳಿ ದಾಳಿ ಮಾಡಿದ ದೃಶ್ಯ ಸಮೀಪದ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಶಿವಮೊಗ್ಗದಲ್ಲಿ ಬೀಡಾಡಿ ಜಾನುವಾರುಗಳ ಸಮಸ್ಯೆಗೆ ತ್ವರಿತ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಲಾಗಿದೆ.
ಇದನ್ನೂ ಓದಿ : Road accident : ಬೈಕ್‌ಗೆ ಕಾರು ಡಿಕ್ಕಿಯಾಗಿ ತಂದೆ- ಮಗಳು ಸ್ಥಳದಲ್ಲೇ ಸಾವು, ಶಾಲೆಗೆ ಬಿಟ್ಟು ಬರಲು ಹೋಗುತ್ತಿದ್ದಾಗ ದುರಂತ