ಹಾವೇರಿ: ಗ್ರಾಮದಲ್ಲಿ ನಡೆದ ಹೋರಿ ಹಬ್ಬದ (Bullock Festival) ವೇಳೆ ಮುಸ್ಲಿಮರ ಹೋರಿಯನ್ನು ಹಿಡಿದ ಕಾರಣಕ್ಕಾಗಿ ಹಿಂದು ಯುವಕರ (Hindu Youths) ಮೇಲೆ ಮುಸ್ಲಿಂ ಯುವಕರು Muslim youths attack muslim youths) ಬೇಕಾಬಿಟ್ಟಿ ಹಲ್ಲೆ ಮಾಡಿದ ಘಟನೆ ಹಾವೇರಿ ತಾಲೂಕಿನ ಕೋಳೂರು ಗ್ರಾಮದಲ್ಲಿ (Koluru Village) ನಡೆದಿದೆ.
ಊರಿನ ಹಲವಾರು ಮಂದಿ ಒಟ್ಟು ಸೇರಿ ಹಿಂದು ಯುವಕರ ಮೇಲೆ ಸಿಕ್ಕಿದ ದೊಣ್ಣೆ ಬಡಿಗೆಗಳಿಂದ ಹೊಡೆದಿದ್ದಾರೆ. ಗಾಯಾಳುಗಳನ್ನು ಈಗ ಆಸ್ಪತ್ರೆಗೆ ಸೇರಿಸಲಾಗಿದ್ದು, 15 ಮಂದಿಯ ಮೇಲೆ ಕೇಸು ದಾಖಲಾಗಿದೆ.
ಕೋಳೂರು ನಿವಾಸಿ ಶಿವಪ್ಪ ಫಕೀರಪ್ಪ ಅವರು ನೀಡಿರುವ ದೂರಿನ ಪ್ರಕಾರ, ಕಳೆದ ನವೆಂಬರ್ 14ರಂದು ಕೋಳೂರು ಗ್ರಾಮದಲ್ಲಿ ಹೋರಿ ಹಬ್ಬ ನಡೆದಿತ್ತು. ಊರಿನ ಸಾಕಷ್ಟು ಮಂದಿ ನೆರೆದಿದ್ದರು. ಹಲವಾರು ಹೋರಿಗಳನ್ನು ಬಿಡಲಾಗಿದ್ದು, ಅವುಗಳನ್ನು ತಡೆಯುವ ಸಂಪ್ರದಾಯ ಯಥಾವತ್ತಾಗಿ ನಡೆದಿತ್ತು. ಇದರಲ್ಲಿ ಮದರಾನ ಸಾಬಾ ಮಹಬೂಬ ಸಾಬ ಮುಂದಿನಮನಿ ಎಂಬವರಿಗೆ ಸೇರಿದ ಹೋರಿಯೂ ಇತ್ತು. ಇದೊಂದು ಕೊಬ್ಬರಿ ಹೋರಿಯಾಗಿದ್ದು, ಅದನ್ನು ಬಿಡುತ್ತಿದ್ದಂತೆಯೇ ಕೆಲವು ಹುಡುಗರು ಅದನ್ನು ಬೆನ್ನು ಹತ್ತಿ ಹಿಡಿದು ಅದರ ಮೈಮೇಲಿದ್ದ ಕೊಬ್ಬರಿಯನ್ನು ಕಿತ್ತುಕೊಂಡಿದ್ದರು. ಇವರೆಲ್ಲರೂ ಹಿಂದು ಯುವಕರಾಗಿದ್ದರು.
ಯಾವುದೇ ಹೋರಿಯನ್ನು ಯಾರು ಬೇಕಾದರೂ ತಡೆಯಬಹುದು. ಅವರೇ ತಡೆಯಬೇಕು, ಇವರೇ ತಡೆಯಬೇಕು ಎನ್ನುವ ನಿಯಮವೇನೂ ಇಲ್ಲ. ಆದರೆ, ಇಲ್ಲಿ ಮಾತ್ರ ಮುಸ್ಲಿಮರ ಹೋರಿಯನ್ನು ಹಿಂದು ಹುಡುಗರು ಹಿಡಿದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಲಾಗಿತ್ತು ಮತ್ತು ಸಣ್ಣ ಮಟ್ಟದ ಜಗಳವೂ ನಡೆದಿತ್ತು.
ಈ ನಡುವೆ, ಹಿಂದುಗಳು ಮತ್ತು ಮುಸ್ಲಿಮರ ನಡುವೆ ಸಣ್ಣ ಮಟ್ಟದ ಅಸಮಾಧಾನ ಮುಂದುವರಿದಿತ್ತು. ಇದು ಅಕ್ಟೋಬರ್ 16ರಂದು ಸಂಜೆಯ ಹೊತ್ತಿಗೆ ಭುಗಿಲೆದ್ದಿದೆ. ಗುರುವಾರ ಸಂಜೆ ಕೋಳೂರು ಬಸ್ ನಿಲ್ದಾಣದ ಸಮೀಪದ ಅಂಗಡಿಯೊಂದರ ಬಳಿ ಲೋಕೇಶ ಕಾಂಡಗಿ, ಸಚಿನ್ ಶಿವಪ್ಪ ಹರಿಜನ ಸೇರಿ ಕೆಲವು ಹುಡುಗರು ಕುಳಿತಿದ್ದಾಗ ಮಹಬೂಬ ಸಾಬ ಮುಂದಿನಮನಿ ಅವರ ಮಗ ಮುಸ್ತಾಫ ಮತ್ತು ಇತರ 15 ಮಂದಿ ಸೇರಿ ಅವರನ್ನು ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ ಮತ್ತು ಸಿಕ್ಕ ಸಿಕ್ಕ ಬಡಿಗೆ ಮತ್ತು ದೊಣ್ಣೆಗಳಿಂದ ಹೊಡೆದಿದ್ದಾರೆ ಎಂದು ದೂರಲಾಗಿದೆ.
ಹಿಂದು ಯುವಕರನ್ನು ಹೆಚ್ಚಿನವರು ಪರಿಶಿಷ್ಟ ಜಾತಿಯಡಿ ಬರುವ ಮಾದರ ಜಾತಿಗೆ ಸೇರಿದವರು. ನೀವು ನಮ್ಮ ಹೋರಿಯನ್ನು ಹಿಡಿಯುವಷ್ಟು ಗಂಡಸರಾ? ಎಸ್ಸಿ ಎಸ್ಟಿ ಎಂದು ಹಾರಾಡುತ್ತೀರಾ ಎಂದೆಲ್ಲ ಕೇಳಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಶಿವಪ್ಪ ಫಕೀರಪ್ಪ ಮಾದರ ಅವರ ತಲೆಗೆ ಗಾಯಗಳಾಗಿದ್ದು, ಅವರು ತಮ್ಮ ಮನೆಗೆ ಓಡಿ ಹೋದಾಗ ಕೆಲವರು ಅವರನ್ನು ಬೆನ್ನಟ್ಟಿ ಹಲ್ಲೆ ಮಾಡಿದ್ದಾರೆ. ತಡೆಯಲು ಬಂದ ಅವರ ಪತ್ನಿಯ ಮೇಲೂ ಹಲ್ಲೆ ಮಾಡಲಾಗಿದೆ. ಅವರ ಮಾಂಗಲ್ಯ ಸರವನ್ನು ಕೂಡಾ ಕಿತ್ತು ಕೊಳ್ಳಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ನೀವು ಎಲ್ಲಿರಬೇಕೋ ಅಲ್ಲಿರಬೇಕು, ಬಾಲ ಬಿಚ್ಚಿದರೆ ಹುಷಾರ್ ಎಂದು ಎಚ್ಚರಿಸಿದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದೀಗ ಹಾವೇರಿ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ 15 ಜನ ಮುಸ್ಲಿಮರ ಮೇಲೆ ಪ್ರಕರಣ ದಾಖಲಾಗಿದೆ.