Site icon Vistara News

Bangalore Airport : ವಿಮಾನ ನಿಲ್ದಾಣದಲ್ಲಿ ಬಸ್‌ ಅಪಘಾತ; 8 ಪ್ರಯಾಣಿಕರಿಗೆ ಗಾಯ, ಆಶ್ಚರ್ಯ ಆಯ್ತಾ?

Airport accident

#image_title

ಬೆಂಗಳೂರು: ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Bangalore International Airport) ಬಸ್‌ ಅಪಘಾತ (Bus accident) ಸಂಭವಿಸಿ 15ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಏನಿದು, ವಿಮಾನ ನಿಲ್ದಾಣದಲ್ಲಿ (Bangalore Airport) ಬಸ್‌ ಅಪಘಾತವೇ ಎಂದು ಅಚ್ಚರಿಪಡಬೇಡಿ.. ಇದು ಭಾನುವಾರ ಬೆಳಗ್ಗೆ ಸಂಭವಿಸಿದ ನಿಜವಾದ ಘಟನೆ!

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ಸಮೀಪ ಬೆಳ್ಳಿಗೆ 4.45ರ ಹೊತ್ತಿಗೆ ನಡೆದಿರುವ ಅಪಘಾತ ಇದಾಗಿದ್ದು, ಬಸ್‌ನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.

ಎಲ್ಲರಿಗೂ ತಿಳಿದಿರುವಂತೆ, ವಿಮಾನ ನಿಲ್ದಾಣದ ಟರ್ಮಿನಲ್‌ನಿಂದ ವಿಮಾನ ನಿಂತಿರುವ ರನ್‌ವೇ ವರೆಗೆ ಪ್ರಯಾಣಿಕರನ್ನು ಕರೆದೊಯ್ಯಲು ಬಸ್ಸಿನ ವ್ಯವಸ್ಥೆ ಇರುತ್ತದೆ. ಹೆಚ್ಚೆಂದರೆ 500 ಮೀಟರ್‌ ದೂರದ ಪಯಣವಿದು. ಅಂತೆಯೇ ವಿಮಾನದಿಂದ ಇಳಿದವರನ್ನು ಟರ್ಮಿನಲ್‌ಗೆ ಕರೆತರುವ ಕೆಲಸವನ್ನು ಇದೇ ಬಸ್‌ಗಳು ಮಾಡುತ್ತವೆ.

ಭಾನುವಾರ ಮುಂಜಾನೆ 4.45ರ ಹೊತ್ತಿಗೆ ಇದೇ ರೀತಿ KA51AJ0480 ನಂಬರ್‌ನ ಏರ್‌ ಇಂಡಿಯಾ ಸ್ಯಾಟ್ಸ್ ಶಟಲ್ ಬಸ್ ಎರಡನೇ ನಂಬರ್‌ನ ಟರ್ಮಿನಲ್‌ನಿಂದ 12 ಮಂದಿ ಪ್ರಯಾಣಿಕರನ್ನು ವಿಮಾನದ ಬಳಿಗೆ ಕರೆದೊಯ್ಯಲು ಸಿದ್ಧವಾಗಿತ್ತು. 12 ಮಂದಿ ಪ್ರಯಾಣಿಕರು ಹತ್ತುತ್ತಿದ್ದಂತೆಯೇ ಬಸ್‌ ಮುಂದೆ ಸಾಗಿದ್ದು, ಕೆಲವೇ ಸೆಕೆಂಡ್‌ಗಳಲ್ಲಿ ಬಸ್‌ ಟರ್ಮಿನಲ್ 2 ಬಳಿಯಿರುವ ಪಿಲ್ಲರ್ ಗೆ ಡಿಕ್ಕಿ ಹೊಡೆದಿದೆ.

ರಾತ್ರಿ ಪಾಳಿಯಲ್ಲಿ ಕೆಲಸಕ್ಕಿದ್ದ ಚಾಲಕ ನಿದ್ದೆ ಮಂಪರಿಯಲ್ಲಿ ಈ ರೀತಿ ಮಾಡಿದನೋ ಅಥವಾ ಬೇರೆ ಏನೋ ತಾಂತ್ರಿಕ ಸಮಸ್ಯೆ ಇತ್ತೋ ಗೊತ್ತಿಲ್ಲ. ಅಂತೂ ಬಸ್‌ ಪಿಲ್ಲರ್‌ಗೆ ಡಿಕ್ಕಿ ಹೊಡೆಯುತ್ತಿದ್ದಂತೆಯೇ ಪ್ರಯಾಣಿಕರು ಉರುಳಿಬಿದ್ದು ಎಂಟು ಮಂದಿಗೆ ಗಾಯಗಳಾಗಿವೆ.

ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಅವರಿಗೆ ಮುಂದಿನ ವಿಮಾನದಲ್ಲಿ ಪ್ರಯಾಣಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಏರ್ಪೋರ್ಟ್ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ. ಅಂತೂ ವಿಮಾನ ನಿಲ್ದಾಣದಲ್ಲಿ ಬಸ್‌ ಅಪಘಾತ ಉಂಟಾಗಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ : Fire Accident: ಸಾವಿರಾರು ಪ್ರಯಾಣಿಕರಿದ್ದ ಕೋಲ್ಕೊತಾ ವಿಮಾನ ನಿಲ್ದಾಣದಲ್ಲಿ ಅಗ್ನಿ ಅವಘಡ

Exit mobile version