Site icon Vistara News

Bus Accident: ಮುಂಡರಗಿ ಬಳಿ ಸಾರಿಗೆ ಬಸ್ ಪಲ್ಟಿಯಾಗಿ 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

Bus Accident

ಗದಗ: ಚಾಲಕನ ನಿಯಂತ್ರಣ ತಪ್ಪಿ ಸಾರಿಗೆ ಬಸ್ ಪಲ್ಟಿಯಾಗಿ 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ (Bus Accident) ಜಿಲ್ಲೆಯ ಮುಂಡರಗಿ ತಾಲೂಕಿನ ಬಾಗೇವಾಡಿ ಗ್ರಾಮದ ಬಳಿ ನಡೆದಿದೆ. ಪಾಟಾ ಕಟ್ ಆಗಿದ್ದರಿಂದ ಏಕಾಏಕಿ ಬಸ್‌ ಪಲ್ಟಿಯಾಗಿದೆ.

ಬೆಳ್ಳಟ್ಟಿಯಿಂದ ಮುಂಡರಗಿ ಹೋಗುತ್ತಿದ್ದ ಬಸ್ ಪಲ್ಟಿಯಾಗಿದೆ. ಈ ವೇಳೆ ಪ್ರಯಾಣಿಕರ ಕೂಗಾಟ, ಚೀರಾಟ ಕೇಳಿಬಂದಿದೆ. ಹೀಗಾಗಿ ಗ್ರಾಮಸ್ಥರು ಬಸ್ ಮುಂದಿನ ಗ್ಲಾಸ್ ಒಡೆದು ಪ್ರಯಾಣಿಕರನ್ನು ರಕ್ಷಣೆ ಮಾಡಿದ್ದಾರೆ. ಗಾಯಾಳುಗಳನ್ನು ಆಂಬ್ಯುಲೆನ್ಸ್ ಮೂಲಕ ಮುಂಡರಗಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ ಸುಸ್ಥಿತಿಯಲ್ಲಿ ಇಲ್ಲದ ಕಾರಣ ಅಪಘಾತವಾಗಿದೆ ಎಂದು ಪ್ರಯಾಣಿಕರ ಆರೋಪಿಸಿದ್ದಾರೆ.

ಇದನ್ನೂ ಓದಿ | Rameshwaram Cafe Blast: ರಾಮೇಶ್ವರಂ ಕೆಫೆ ಬಾಂಬರ್‌ಗಳಿಗೆ 10 ದಿನ ಎನ್‌ಐಎ ಕಸ್ಟಡಿ; ಮತ್ತಷ್ಟು ಗ್ರಿಲ್‌ ಮಾಡಲು ಪೊಲೀಸರು ಸಜ್ಜು

ಮೂರು ಭೀಕರ ರಸ್ತೆ ಅಪಘಾತ; 6 ಮಂದಿ ಸಾವು; ಬಬಲೇಶ್ವರದಲ್ಲಿ 4 ಬಲಿ ಪಡೆದ ಆ್ಯಕ್ಸಿಡೆಂಟ್

vijyapura road accident

ವಿಜಯಪುರ: ರಾಜ್ಯದಲ್ಲಿ ನಿನ್ನೆ ರಾತ್ರಿ ಮೂರು ಕಡೆ ನಡೆದ ಭೀಕರ ರಸ್ತೆ ಅಪಘಾತಗಳಲ್ಲಿ (Road Accident) ಒಟ್ಟು 6 ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ ವಿಜಯಪುರದಲ್ಲಿ (vijayapura news) ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರು ಹಾಗೂ ಟ್ರಕ್ (car truck collision) ಮಧ್ಯೆ ಮುಖಾಮುಖಿ ಡಿಕ್ಕಿಯಾಗಿದೆ.

ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಅರ್ಜುಣಗಿ ಗ್ರಾಮದ ಬಳಿ ಈ ದುರ್ಘಟನೆ ನಡೆದಿದೆ. ವಿಜಯಪುರದಿಂದ ಜಮಖಂಡಿಗೆ ಹೊರಟಿದ್ದ ಕಾರು ಹಾಗೂ ಜಮಖಂಡಿ ಕಡೆಯಿಂದ ವಿಜಯಪುರಕ್ಕೆ ಬರುತ್ತಿದ್ದ ಸಿಮೆಟ್‌ ಸಾಗಿಸುತ್ತಿದ್ದ ಲಾರಿ ಮುಖಾಮುಖಿಯಾಗಿ ಡಿಕ್ಕಿಯಾಗಿವೆ. ಕಾರಿನಲ್ಲಿದ್ದ ನಾಲ್ಕೂ ಮಂದಿ ಸ್ಥಳದಲ್ಲೇ ಅಸುನೀಗಿದ್ದಾರೆ. ಮೃತರಲ್ಲಿ ಇಬ್ಬರು ಪುರುಷರು, ಒಬ್ಬ ಮಹಿಳೆ, ಒಬ್ಬ ಬಾಲಕ ಇದ್ದಾರೆ.

ಮೃತರನ್ನು ವಿಜಯಪುರ ಮೂಲದ ಅರ್ಜುನ ಕುಶಾಲಸಿಂಗ್ ರಜಪೂತ (32), ರವಿನಾಥ ಸುನಿಲಾಲ್ ಪತ್ತಾರ (52), ಪುಷ್ಟಾ ರವಿನಾಥ ಪತ್ತಾರ (40), ಮೇಘರಾಜ ಅರ್ಜುನಸಿಂಗ್ ರಜಪೂತ (12) ಎಂದು ಗುರುತಿಸಲಾಗಿದೆ. ಇವರು ವಿಜಯಪುರದಿಂದ ಜಮಖಂಡಿಯ ದೇವಸ್ಥಾನಕ್ಕೆ KA 28 D 1021 ನಂಬರಿನ ಕಾರಿನಲ್ಲಿ ತೆರಳುತ್ತಿದ್ದರು. ಜಮಖಂಡಿಯಿಂದ ಸಿಮೆಂಟ್ ಲೋಡ್ ಇದ್ದ KA 16 B 6472 ನಂಬರಿನ ಲಾರಿ ವಿಜಯಪುರದತ್ತ ಬರುತ್ತಿದ್ದ ವೇಳೆ ಮುಖಾಮುಖಿ ಡಿಕ್ಕಿಯಾಗಿದೆ.

ಬಬಲೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಎಸ್ಪಿ ಋಷಿಕೇಶ ಸೋನೆವಣೆ ಹಾಗೂ ಇತರ ಪೊಲೀಸ್‌ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ನಿರ್ಲಕ್ಷ್ಯದ ಚಾಲನೆ, ಬೈಕ್ ಸವಾರ ಸಾವು

ಬೆಂಗಳೂರು: ಅಪರಿಚಿತ ವಾಹನ‌ ಡಿಕ್ಕಿಯಾಗಿ ಬೈಕ್ ಸವಾರ ಸಾವಿಗೀಡಾದ ಘಟನೆ ರಾಜಧಾನಿಯ (Bangalore news) ಕೆಂಗೇರಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮುಖೇಶ್ (22) ಸಾವನ್ನಪ್ಪಿರುವ ಯುವಕ. ನಿನ್ನೆ ರಾತ್ರಿ 9.30ರ ಸುಮಾರಿಗೆ ಬೈಕ್‌ನಲ್ಲಿ ಹೊಸಕೆರೆಹಳ್ಳಿ ನೈಸ್ ರಸ್ತೆಯ ಕಡೆಯಿಂದ ಸೋಂಪುರ ಕ್ಲವರ್ ಲೀಫ್ ಕಡೆಗೆ ಮುಖೇಶ್ ಹೋಗುತ್ತಿದ್ದಾಗ ಅಪರಿಚಿತ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ.

ಅತಿ ವೇಗ ಮತ್ತು ನಿರ್ಲಕ್ಷ್ಯದಿಂದ ಮುಂದೆ ಹೋಗುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ. ಪರಿಣಾಮ ತಲೆಗೆ ಗಂಭೀರ ಗಾಯಗಳಾಗಿ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಘಟನಾ ಸ್ಥಳಕ್ಕೆ ಕೆಂಗೇರಿ‌ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಕಾರು ಡಿಕ್ಕಿ, ಬೈಕ್‌ ಸವಾರ ಸಾವು

ಧಾರವಾಡ: ಧಾರವಾಡ ಬಳಿ (Dharwad news) ಬೈಕ್ ಮತ್ತು ಕಾರ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್‌ ಸವಾರ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಬೈಕ್ ಸವಾರ ಜಿಲ್ಲಾ ಕಾರಾಗೃಹ ಸಿಬ್ಬಂದಿ ರುದ್ರಪ್ಪ ಸಿದ್ದಣ್ಣವರ ಎಂದು ಗುರುತಿಸಲಾಗಿದೆ.

ಧಾರವಾಡ ತಾಲೂಕಿನ ಗರಗ ಗ್ರಾಮದ ಬಳಿ‌ ನಡೆದ ಘಟನೆಯಿದು. ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಪೇದೆಯಾಗಿ ಕೆಲಸ ಮಾಡುತಿದ್ದ ರುದ್ರಪ್ಪ ಕರ್ತವ್ಯ ಮುಗಿಸಿ ವಾಪಸ್ ತಮ್ಮ ಗ್ರಾಮಕ್ಕೆ ಹೋಗುವಾಗ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಗರಗ ಠಾಣೆ ಪೊಲೀಸರು ಭೇಟಿ ನೀಡಿದ್ದು, ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ: Honeybee Attack : ಹುಲಿ ‌ಸೆರೆ ಕಾರ್ಯಾಚರಣೆ ವೇಳೆ ಹೆಜ್ಜೇನು ದಾಳಿ; ಬೆದರಿ ಓಡಿ‌ದ ಸಾಕಾನೆ ಭೀಮ

ಬಸ್‌ ಗುದ್ದಿದ ರಭಸಕ್ಕೆ ಅಪ್ಪಚ್ಚಿಯಾದ ಓಮ್ನಿ ಕಾರು; ಮೂವರು ದಾರುಣ ಸಾವು

ಶಿವಮೊಗ್ಗ/ದಾವಣಗೆರೆ: ದಾವಣಗೆರೆಯ ನ್ಯಾಮತಿ ತಾಲೂಕಿನ ಚಿನ್ನಿಕಟ್ಟಿ ಗ್ರಾಮದ ಬಳಿ ಭೀಕರ ಅಪಘಾತ ಸಂಭವಿಸಿದೆ. ಕೆಎಸ್‌ಆರ್‌ಟಿಸಿ ಬಸ್ ಮತ್ತು ಓಮ್ನಿ ಕಾರು ಮಧ್ಯೆ ಡಿಕ್ಕಿಯಾಗಿದ್ದು, ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತರನ್ನು ನಂಜುಂಡಪ್ಪ (83), ರಾಕೇಶ್ (27), ದೇವರಾಜ್ (30) ಎಂದು ಗುರುತಿಸಲಾಗಿದೆ. ಈ ಮೂವರು ಶಿವಮೊಗ್ಗ ಗ್ರಾಮಾಂತರ ತಾಲೂಕಿನ ಹರಮಘಟ್ಟ ಗ್ರಾಮದವರು ಎಂದು ತಿಳಿದು ಬಂದಿದೆ.

ಕೆಎಸ್‌ಆರ್‌ಟಿಸಿ ಬಸ್‌ ಶಿಕಾರಿಪುರದ ಕಡೆಯಿಂದ ಬರುತ್ತಿತ್ತು. ಶಿವಮೊಗ್ಗದ ಕಡೆಯಿಂದ ಹೊರಟಿದ್ದ ಕಾರಿನ ನಡುವೆ ಅಪಘಾತ ಸಂಭವಿಸಿದೆ. ಬಸ್‌-ಕಾರು ಮುಖಾಮುಖಿ ಡಿಕ್ಕಿಯಾಗಿ ಓಮ್ನಿ ಕಾರು ಗುರುತು ಸಿಗದಂತೆ ಅಪ್ಪಚ್ಚಿ ಆಗಿತ್ತು. ಡಿಕ್ಕಿ ರಭಸಕ್ಕೆ ಕಾರಿನಲ್ಲಿ ಸಿಲುಕಿದ್ದ ಮೂವರು ಚೆಲ್ಲಾಪಿಲ್ಲಿಯಾಗಿದ್ದರು. ಇನ್ನೂ ಬಸ್ಸಿನ ಮುಂಭಾಗವು ಛಿದ್ರಗೊಂಡಿತ್ತು.

ಘಟನೆಯಲ್ಲಿ ಆರಕ್ಕೂ ಹೆಚ್ಚು ಮಂದಿಗೆ ಗಾಯವಾಗಿದ್ದು, ತೀವ್ರ ಗಾಯಗೊಂಡ ಇಬ್ಬರನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸಣ್ಣ ಪುಟ್ಟ ಗಾಯಗೊಂಡವರನ್ನು ನ್ಯಾಮತಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಇದನ್ನೂ ಓದಿ: Road Accident: ಎಲೆಕ್ಷನ್‌ ಡ್ಯೂಟಿಗೆ ಹೋಗುತ್ತಿದ್ದಾಗ ತಮಿಳುನಾಡಲ್ಲಿ ಅಪಘಾತ; ಕರ್ನಾಟಕ ಪೊಲೀಸ್‌ ಸೇರಿ ಇಬ್ಬರ ಸಾವು

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ನ್ಯಾಮತಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಮೂವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ನ್ಯಾಮತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನ್ಯಾಮತಿ ತಾಲೂಕಿನ ಚಿನ್ನಕಟ್ಟೆ-ಶಿವಪುರ ಬಳಿ ರಾಜ್ಯ ಹೆದ್ದಾರಿಯಲ್ಲಿ ಘಟನೆ ನಡೆದಿದೆ.

Exit mobile version