Site icon Vistara News

Bus accident | ಮೈಸೂರಿನ ಶಾಲಾ ಪ್ರವಾಸಿ ಬಸ್‌ ಸಾಗರದಲ್ಲಿ ಪಲ್ಟಿ: 25ಕ್ಕೂ ಹೆಚ್ಚು ಮಕ್ಕಳಿಗೆ ಗಾಯ

Bus Accident Children injured School Tourist Bus

ಸಾಗರ: ತಾಲೂಕಿನ ಕುದುರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಕ್ಕೋಡಿ ಬಳಿ ಶಾಲಾ ಪ್ರವಾಸಿ ಬಸ್‍ವೊಂದು ಪಲ್ಟಿ (Bus accident)‌ ಹೊಡೆದು 25ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡ ಘಟನೆ ಗುರುವಾರ (ಡಿ.೧೫) ನಡೆದಿದೆ.

ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಧರ್ಮಪುರ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಮಂಗಳವಾರ (ಡಿ.೧೩) ಪ್ರವಾಸಕ್ಕೆ ಹೊರಟಿದ್ದರು. ಬುಧವಾರ ಕೊಲ್ಲೂರು ಪ್ರವಾಸ ಮುಗಿಸಿ ಗುರುವಾರ ಬೆಳಗ್ಗೆ ಸಿಗಂದೂರಿಗೆ ಬರುತ್ತಿದ್ದಾಗ ವಕ್ಕೋಡಿ ತಿರುವಿನ ಬಳಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿ

ಬಸ್‍ನಲ್ಲಿ 63 ವಿದ್ಯಾರ್ಥಿಗಳು ಹಾಗೂ 5ಕ್ಕೂ ಹೆಚ್ಚು ಶಿಕ್ಷಕರು ಇದ್ದರು. ಅಪಘಾತದಲ್ಲಿ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದಾರೆ. ಈ ಪೈಕಿ ಗಂಭೀರವಾಗಿ ಗಾಯಗೊಂಡಿರುವ ಕೀರ್ತಿ ಕುಮಾರಿ ಮತ್ತು ರಾಜೇಶ್ ಎಂಬುವವರನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೊಬ್ಬ ವಿದ್ಯಾರ್ಥಿನಿ ವಿದ್ಯಾ ಎಂಬಾಕೆಗೆ ಸ್ಥಳೀಯ ಆಸ್ಪತ್ರೆಯಲ್ಲಿಯೇ ವೈದ್ಯರು ಚಿಕಿತ್ಸೆ ನೀಡಿದರು. ವಿಷಯ ತಿಳಿಯುತ್ತಿದ್ದಂತೆಯೇ ಶಾಸಕ ಹಾಲಪ್ಪ ಹರತಾಳು ಉಪವಿಭಾಗೀಯ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರಿಗೆ ಸೂಕ್ತ ಸೂಚನೆ ನೀಡಿ ತಕ್ಷಣ ಚಿಕಿತ್ಸೆ ನೀಡಲು ಸಲಹೆ ನೀಡಿದರು.

ವಿಷಯ ತಿಳಿದು ಉಪವಿಭಾಗೀಯ ಆಸ್ಪತ್ರೆಗೆ ಭೇಟಿ ನೀಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ. ರಾಜನಂದಿನಿ ಕಾಗೋಡು ಆರೋಗ್ಯ ವಿಚಾರಿಸಿದರಲ್ಲದೆ, ಉಪಾಹಾರದ ವ್ಯವಸ್ಥೆ ಮಾಡಿದರು. ಆಸ್ಪತ್ರೆಗೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಅಧಿಕಾರಿಗಳು ಭೇಟಿ ನೀಡಿ ಸಾಂತ್ವನ ಹೇಳಿದರು.

ಇದನ್ನೂ ಓದಿ | DK Shivakumar | ಯಾವ ಕಾರಣಕ್ಕೂ ಕ್ಷಮೆ ಕೇಳುವುದಿಲ್ಲ: ಭಯೋತ್ಪಾದಕ ಹೇಳಿಕೆಗೆ ಡಿಕೆಶಿ ಸಮರ್ಥನೆ

Exit mobile version