ಮಂಡ್ಯ: ಆತ್ಮಹತ್ಯೆಗೆ ಯತ್ನಿಸಿದ ಕೆಎಸ್‌ಆರ್‌ಟಿಸಿ ಚಾಲಕ (Bus Driver) ಜಗದೀಶ್ ಅವರಿಗೆ ಚಿಕಿತ್ಸೆ ಕೊಡಿಸಲು ಆಸ್ಪತ್ರೆಗೆ ಕರೆದೊಯ್ಯುವಾಗ ಆಂಬುಲೆನ್ಸ್ ಅನ್ನು ಮಾಜಿ ಶಾಸಕ ಸುರೇಶ್ ಗೌಡ ತಡೆದಿದ್ದರೇ ಎಂಬ ಚರ್ಚೆ ಇದೀಗ ಮಂಡ್ಯದಲ್ಲಿ ಜೋರಾಗಿ ನಡೆಯುತ್ತಿದೆ.
ಆಂಬುಲೆನ್ಸ್ ಅನ್ನು ನಾಗಮಂಗಲ ಮಾಜಿ ಶಾಸಕ ಸುರೇಶ್ ಗೌಡ ತಡೆದಿದ್ದರು ಎಂದು ಸಚಿವ ಚೆಲುವರಾಯಸ್ವಾಮಿ ಆರೋಪಿಸಿದ್ದಾರೆ. ಜಗದೀಶ್ ಅವರನ್ನು ಬಿಜಿಎಸ್ ಆಸ್ಪತ್ರೆಯಿಂದ ಹೆಚ್ಚುವರಿ ಚಿಕಿತ್ಸೆಗೆ ಮೈಸೂರಿನ ಕೊಲಂಬಿಯಾ ಆಸ್ಪತ್ರೆಗೆ ಕರೆದೊಯ್ಯುವ ಸಿಸಿ ಕ್ಯಾಮರಾ ವಿಡಿಯೊ ಲಭ್ಯವಾಗಿದೆ.
ಬಿಜಿಎಸ್ ಆಸ್ಪತ್ರೆಯ ಆಂಬುಲೆನ್ಸ್‌ನಲ್ಲಿ ಜಗದೀಶ್ ಅವರನ್ನು ಕರೆದೊಯ್ಯಲಾಗುತ್ತಿದೆ. ಕುಟುಂಬಸ್ಥರು ಕರೆದುಕೊಂಡು ಹೋಗುವ ವೇಳೆ ನಾಗಮಂಗಲ ಪಟ್ಟಣದ ಟಿ.ಬಿ. ಬಡಾವಣೆ ಸರ್ಕಲ್ ಬಳಿ ಕೆಲವು ಕ್ಷಣ ಆಂಬುಲೆನ್ಸ್ ಅನ್ನು ಮಾಜಿ ಶಾಸಕ ಸುರೇಶ್ ಗೌಡ ಹಾಗೂ ಅವರ ಬೆಂಬಲಿಗರು ನಿಲ್ಲಿಸಿದ್ದಾರೆ. ಆಂಬುಲೆನ್ಸ್ ಅನ್ನು ತಡೆದಿದ್ದಾರೆ ಎಂಬ ಚೆಲುವರಾಯಸ್ವಾಮಿ ಆರೋಪದಿಂದಾಗಿ ಈಗಾಗಲೆ ರಾಜಕೀಯವಾಗಿರುವ ವಿಚಾರ ಮತ್ತಷ್ಟು ಬಿಸಿ ಪಡೆದುಕೊಂಡಿದೆ.
ಈ ಬಗ್ಗೆ ಮಾತನಾಡಿರುವ ಮಾಜಿ ಶಾಸಕ ಸುರೇಶ್ ಗೌಡ, ಜುಲೈ 6 ರಂದು ಮಧ್ಯರಾತ್ರಿ 1 ಗಂಟೆ 6 ನಿಮಿಷದಲ್ಲಿ ಕೆಲವು ಸಕೆಂಡ್ ವಾಹನ ನಿಲ್ಲಿಸಿ ಡ್ರೈವರ್ ಮುಖ ನೋಡಿದ್ದು ನಿಜ ಎಂದು ಒಪ್ಪಿಕೊಂಡಿದ್ದಾರೆ. ಆತ ನಮ್ಮಪಕ್ಷದ ಪರವಾಗಿ ಕಳೆದ 20 ವರ್ಷಗಳಿಂದ ಕೆಲಸ ಮಾಡಿದ್ದಾನೆ. ಆತನ ಚಿಕಿತ್ಸೆಗೆ ನಾನು ಅಡ್ಡಿ ಪಡಿಸುತ್ತೀನ? ಇದನ್ನೆ ಸಚಿವ ಚೆಲುವರಾಯಸ್ವಾಮಿ ಅವರು ವಾಹನ ತಡೆದೆ ಎಂದು ಸುಳ್ಳು ಪ್ರಚಾರ ಮಾಡುತಿದ್ದಾರೆ ಎಂದು ಸುರೇಶ್ ಗೌಡ ಹೇಳಿದ್ದಾರೆ.
ಚೆಲುವರಾಯಸ್ವಾಮಿ ಮಹಾನ್‌ಸುಳ್ಳುಗಾರ ಎಂದಿರುವ ಸುರೇಶ್ ಗೌಡ, ತಾನು ವರ್ಗಾವಣೆಗೆ ಶಿಫಾರಸನ್ನೇ ಮಾಡಿಲ್ಲ ಎಂದೂ ಹೇಳುತ್ತಿದ್ದಾರೆ. ನಾವು ಎಲ್ಲಿಯೂ ಆಂಬುಲೆನ್ಸ್ ತಡೆಯಲು ಹೋಗಿಲ್ಲ ಎಂದಿದ್ದಾರೆ.
ಪ್ರಕರಣದ ಹಿನ್ನೆಲೆ
ಜಗದೀಶ್ ಅವರನ್ನು ನಾಗಮಂಗಲದ ಶಾಸಕರು ಮತ್ತು ಕೃಷಿ ಸಚಿವರಾಗಿರುವ ಚಲುವರಾಯ ಸ್ವಾಮಿ (Chaluvaraya swamy) ಅವರ ಸೂಚನೆಯಂತೆ ವರ್ಗಾವಣೆ ಮಾಡಲಾಗಿದೆ ಎಂದು ಸ್ವತಃ ಜಗದೀಶ್ ಅವರೇ ಹೇಳಿದ್ದರು.
ಈ ವರ್ಗಾವಣೆಯಿಂದ ನೊಂದ ಜಗದೀಶ್ ಅವರು ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಅದಕ್ಕಿಂತ ಮೊದಲು ಬರೆದಿಟ್ಟ ನೋಟ್‌ನಲ್ಲಿ ಏನೇನಾಯಿತು ಎನ್ನುವ ಎಲ್ಲ ವಿಚಾರಗಳನ್ನು ಬರೆದಿದ್ದಾರೆ. ಕೃಷಿ ಸಚಿವರ ಸೂಚನೆ ಮೇರೆಗೆ ಈ ವರ್ಗಾವಣೆ ನಡೆದಿದೆ ಎಂದು ನಿಯಂತ್ರಣಾಧಿಕಾರಿಗಳು ಹೇಳಿದ್ದಾರೆ ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ. ಕೃಷಿ ಸಚಿವರು ಯಾಕೆ ದ್ವೇಷ ಸಾಧಿಸುತ್ತಿದ್ದಾರೆ ಎಂದು ತಿಳಿಯದೆ ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಅವರು ನೋಟ್‌ನಲ್ಲಿ ಬರೆದಿದ್ದಾರೆ.
ಇದನ್ನೂ ಓದಿ: Assembly Session: ಡ್ರೈವರ್ ಆತ್ಮಹತ್ಯೆ ಯತ್ನ ವಿಷಯದಲ್ಲಿ ರಾಜಕೀಯ ಹಗ್ಗಜಗ್ಗಾಟ: ಸರ್ಕಾರದ ವಿರುದ್ಧ ಮುಗಿಬಿದ್ದ BJP-JDS
ನೋಟ್‌ನಲ್ಲಿ ಬರೆದಿಟ್ಟಂತೆಯೇ ಜಗದೀಶ್ ಅವರು ಆತ್ಮಹತ್ಯೆಗೆ ಪ್ರಯತ್ನ ನಡೆಸಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೊದಲು ನಾಗಮಂಗಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜಗದೀಶ್ ಅವರನ್ನು ಈಗ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ.
ಜಗದೀಶ್ ಅವರ ವರ್ಗಾವಣೆ, ಅವರು ಬರೆದಿಟ್ಟ ನೋಟ್ ರಾಜಕೀಯವಾಗಿ ಭಾರಿ ಸದ್ದು ಮಾಡಿದೆ. ರಾಜ್ಯದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ ಎಂಬ ಆರೋಪವನ್ನು ಜೆಡಿಎಸ್ ನಾಯಕ ಎಚ್.ಡಿ ಕುಮಾರಸ್ವಾಮಿ ಮತ್ತು ಬಿಜೆಪಿ ಮಾಡುತ್ತಿದೆ. ಅದರ ನಡುವೆಯೇ ಈ ಪ್ರಕರಣ ಕುಮಾರಸ್ವಾಮಿ ಅವರ ಕೈಗೆ ಸಿಕ್ಕಿದೆ. ಹೀಗಾಗಿ ಇದು ದೊಡ್ಡ ಮಟ್ಟದ ರಾಜಕೀಯ ತಿರುವನ್ನೂ ಪಡೆದಿದೆ.