Site icon Vistara News

Bus Problem | ರಸ್ತೆ ಹದಗೆಟ್ಟಿದ್ದಕ್ಕೆ ಮುಖ್ಯಮಂತ್ರಿ ಕ್ಷೇತ್ರದಲ್ಲಿಯೇ ಸಂಚಾರ ನಿಲ್ಲಿಸಿದ ಸಾರಿಗೆ ಬಸ್‌ಗಳು!

ಸಿಎಂ ಬೊಮ್ಮಾಯಿ

ಹಾವೇರಿ: ಕೋಟ್ಯಂತರ ರೂಪಾಯಿ ಖರ್ಚು ಮಾಡಿದರೂ ರಸ್ತೆಗಳು ಮಾತ್ರ ದುರಸ್ತಿಯಾಗುತ್ತಿಲ್ಲ. ಉತ್ತಮ ರಸ್ತೆಗಳು ಇಲ್ಲವೆಂಬ ಕೂಗುಗಳು ಕೇಳಿಬರುತ್ತಿರುವ ಮಧ್ಯದಲ್ಲೇ, ರಸ್ತೆಗಳು ಅತಿಯಾಗಿ ಹದಗೆಟ್ಟಿವೆ (Bus Problem) ಎಂಬ ಕಾರಣ ನೀಡಿ, ಮುಖ್ಯಮಂತ್ರಿಯವರ ಕ್ಷೇತ್ರದಲ್ಲಿ ಸಾರಿಗೆ ಇಲಾಖೆ ಬಸ್‌ ಸಂಚಾರವನ್ನೇ ಸ್ಥಗಿತಗೊಳಿಸಿದೆ.

ಸವಣೂರು ತಾಲೂಕಿನ ಗ್ರಾಮೀಣ ಭಾಗದಲ್ಲಿ ಬಸ್ ಸಂಚಾರ ಸ್ಥಗಿತಗೊಂಡಿದೆ. ಹದಗೆಟ್ಟ ರಸ್ತೆ ಹಿನ್ನೆಲೆ ಬಸ್ ಸಂಚಾರ ಬಂದ್ ಮಾಡುತ್ತಿರುವುದಾಗಿ ಸಾರಿಗೆ ಇಲಾಖೆ ಕಾರಣ ನೀಡಿದೆ. ಸವಣೂರು ಗ್ರಾಮೀಣ ಭಾಗದ ರಸ್ತೆಗಳು ಬಹಳವೇ ಹದಗೆಟ್ಟಿದ್ದು, ಎಲ್ಲೆಂದರಲ್ಲಿ ಗುಂಡಿಗಳೇ ಇವೆ.

ಗೋನಾಳ, ಇಚ್ಚಂಗಿ, ಹೊಸರಿತ್ತಿ, ಕಲಕೋಟಿ, ಹತ್ತಿಮತ್ತೂರು, ಕಾರಡಗಿ ಸೇರಿದಂತೆ ಹಲವು ಮಾರ್ಗದಲ್ಲಿ ಬಸ್ ಸಂಚಾರ ಬಂದ್ ಮಾಡಲಾಗಿದೆ. ಇದು ಸಿಎಂ ಬೊಮ್ಮಾಯಿ ಅವರ ಕ್ಷೇತ್ರವಾಗಿದ್ದರೂ ಸಹ ರಸ್ತೆಗಳು ತೀವ್ರವಾಗಿ ಹದಗೆಟ್ಟಿವೆ ಎನ್ನಲಾಗಿದೆ.

ಇಲ್ಲಿ ಗ್ರಾಮೀಣ ಭಾಗಕ್ಕೆ ಹೋಗುವ ಬಸ್‌ಗಳು ಮರಳಿ ಬರುತ್ತಿಲ್ಲ. ರಸ್ತೆ ಮಧ್ಯವೇ ಕೆಟ್ಟು ನಿಲ್ಲುತ್ತಿವೆ. ರಸ್ತೆ ಗುಂಡಿಗಳಿಂದ ಬಸ್‌ಗಳು ದುರಸ್ತಿಗೆ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಸವಣೂರು ಬಸ್ ನಿಲ್ದಾಣದಲ್ಲಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ಡಿಪೋ ಮ್ಯಾನೇಜರ್ ಆದೇಶದ ಪ್ರತಿಯನ್ನು ಅಂಟಿಸಿದ್ದಾರೆ.

ಗ್ರಾಮೀಣ ಜನರ ಪರದಾಟ
ಈಗ ಏಕಾಏಕಿ ಬಸ್‌ ಸಂಚಾರವನ್ನು ಸ್ಥಗಿತಗೊಳಿಸಲಾಗಿರುವುದರಿಂದ ಗ್ರಾಮೀಣ ಭಾಗದ ನಾಗರಿಕರು ತೀವ್ರವಾಗಿ ಪರದಾಡುವಂತಾಗಿದೆ. ಅಲ್ಲದೆ, ಈ ಭಾಗದ ವಿದ್ಯಾರ್ಥಿಗಳು ಸಹ ತೊಂದರೆ ಅನುಭವಿಸುವಂತಾಗಿದೆ. ಹೀಗಾಗಿ ಗ್ರಾಮೀಣ ಜನರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಕೆಲವರು ಖಾಸಗಿ ವಾಹನಗಳಿಗೆ ಮೊರೆ ಹೋಗುತ್ತಿದ್ದಾರೆ.

ಸಿಬ್ಬಂದಿ ಹೈರಾಣ
ಈ ದಿನಗಳಲ್ಲಿ ವಿಪರೀತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರಸ್ತೆಗಳು ಹಾಳಾಗುವುದಲ್ಲದೆ, ಗುಂಡಿಗಳೂ ಕಾಣುತ್ತಿಲ್ಲ. ಈ ಮಧ್ಯೆ ರಸ್ತೆ ಮಧ್ಯೆವೇ ಹಲವಾರು ಬಸ್‌ಗಳು ಕೆಟ್ಟು ನಿಲ್ಲುತ್ತಿವೆ. ಅವುಗಳನ್ನು ದುರಸ್ತಿ ಮಾಡುವುದೇ ಸಿಬ್ಬಂದಿಗೆ ಕೆಲಸವಾಗಿದೆ. ಒಂದು ವೇಳೆ ಈ ರಸ್ತೆಗಳಲ್ಲಿ ಅವಘಡ ಸಂಭವಿಸಿದರೆ ಎಂಬ ಮುಂಜಾಗ್ರತೆ ದೃಷ್ಟಿಯಿಂದ ಸಂಚಾರ ಸ್ಥಗಿತಗೊಳಿಸಿರುವುದಾಗಿ ಸವಣೂರು ಡಿಪೋ ಮ್ಯಾನೇಜರ್ ಶೇಖರ ನಾಯಕ ಹೇಳಿದ್ದಾರೆ.

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಕ್ಷೇತ್ರದಲ್ಲೇ ರಸ್ತೆಗಳು ಹದಗೆಟ್ಟಿದ್ದು, ಸಾರಿಗೆ ಇಲಾಖೆ ಹೊರಡಿಸಿರುವ ಈ ಆದೇಶವು ಸರ್ಕಾರವನ್ನು ಮುಜುಗರಕ್ಕಿಡು ಮಾಡಿದೆ.

Exit mobile version