Site icon Vistara News

BY Vijayendra : ರಾಜ್ಯ ಬಿಜೆಪಿಗೆ ಇನ್ನು ಬಿ ವೈ ವಿಜಯೇಂದ್ರ ಸಾರಥ್ಯ; ಆಯ್ಕೆಗೆ 10 ಕಾರಣಗಳು

BJP State President blessed by Amit Shah

ಬೆಂಗಳೂರು: ವಿಧಾನಸಭಾ ಚುನಾವಣೆಯ (Assembly Elections 2023) ಸೋಲಿನಿಂದ ಕಂಗೆಟ್ಟಿರುವ ಕರ್ನಾಟಕ ಬಿಜೆಪಿಗೆ (BJP Karnataka) ನವಚೈತನ್ಯವನ್ನು ನೀಡುವ ಭಾಗವಾಗಿ ಹೈಕಮಾಂಡ್‌ (BJP High command) ಯುವ ನಾಯಕ, ಲಿಂಗಾಯತ ಸಮುದಾಯದ ಪ್ರಭಾವಿ ಮುಖಂಡ ಬಿ.ವೈ. ವಿಜಯೇಂದ್ರ (BY Vijayendra) ಅವರನ್ನು ಸಾರಥಿಯಾಗಿ (BJP State President) ನೇಮಕ ಮಾಡಿದೆ. ಮುಂದಿನ ಲೋಕಸಭಾ ಚುನಾವಣೆಯ (Parliament Election 2024) ದೃಷ್ಟಿಯಿಂದಲೂ ಒಬ್ಬ ಪ್ರಬಲ ನಾಯಕ ರಾಜ್ಯಾಧ್ಯಕ್ಷರಾಗುವುದು ಬಿಜೆಪಿಗೆ ಅತ್ಯಂತ ಅವಶ್ಯವಿತ್ತು. ಇದೀಗ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ (BS Yediyurappa) ಅವರ ಪುತ್ರನ ಮೇಲೆ ನಂಬಿಕೆಯಿಟ್ಟು ಈ ಆಯ್ಕೆ ಮಾಡಲಾಗಿದೆ ಎಂದು ವಿಶ್ಲೇಷಿಸಲಾಗಿದೆ.

ಇದುವರೆಗೆ ನಳಿನ್‌ ಕುಮಾರ್‌ ಕಟೀಲ್‌ ಅವರು ನಿಭಾಯಿಸಿದ ಈ ಹುದ್ದೆಗೆ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಸಿ.ಟಿ. ರವಿ, ಮಾಜಿ ಸಚಿವ ವಿ. ಸೋಮಣ್ಣ ಸೇರಿದಂತೆ ಹಲವರು ಆಕಾಂಕ್ಷಿಗಳಾಗಿದ್ದರು. ಅಂತಿಮವಾಗಿ ಹೈಕಮಾಂಡ್‌ ಅಳೆದು ತೂಗಿ ವಿಜಯೇಂದ್ರ ಅವರನ್ನು ಈ ಹುದ್ದೆಗೆ ಏರಿಸಿದೆ. ಹಾಗಿದ್ದರೆ ವಿಜಯೇಂದ್ರ ಅವರನ್ನು ನೇಮಿಸುವುದಕ್ಕೆ ಕಾರಣವಾದ 10 ಅಂಶಗಳೇನು?

ವಿಜಯೇಂದ್ರ ಪಟ್ಟಾಭಿಷೇಕಕ್ಕೆ ಕಾರಣವಾದ 10 ಅಂಶಗಳು

1. ವಿಧಾನಸಭಾ ಚುನಾವಣೆಯ ಸೋಲಿನಿಂದ ಕಂಗೆಟ್ಟಿರುವ ಪಕ್ಷದಲ್ಲಿ ಹೊಸ ಸಂಚಲನ ಮೂಡಿಸಿ, ಸ್ಫೂರ್ತಿ ತುಂಬಿ ಮುಂದಿನ ಲೋಕಸಭಾ ಚುನಾವಣೆಗೆ ಸಜ್ಜುಗೊಳಿಸಬಲ್ಲ ಏಕೈಕ ನಾಯಕ ಬಿ.ವೈ ವಿಜಯೇಂದ್ರ ಎಂಬುದು ಹೈಕಮಾಂಡ್‌ಗೆ ಸ್ಪಷ್ಟವಾಗಿ ಗೊತ್ತಿದೆ. ಅವರನ್ನು ಹೊರತುಪಡಿಸಿ ಬೇರೆ ಯಾರನ್ನೇ ನೇಮಕ ಮಾಡಿದರೂ ಇಡೀ ರಾಜ್ಯಾದ್ಯಂತ ತಿರುಗಾಡಿ, ಎಲ್ಲರನ್ನೂ ಜತೆಯಾಗಿ ಕರೆದುಕೊಂಡು ಹೋಗುವುದು ಕಷ್ಟ.

BY Vijayendra

2. ಬಿ.ವೈ ವಿಜಯೇಂದ್ರ ಅವರು ತಮ್ಮ ಸಂಘಟನಾ ಶಕ್ತಿ, ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸುವ ತಾಕತ್ತನ್ನು ಹಲವು ಬಾರಿ ತೋರಿಸಿಕೊಟ್ಟಿದ್ದಾರೆ. ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿಯೂ ಅವರು ದುಡಿದಿದ್ದಾರೆ. ಅವರಿಗೆ ರಾಜ್ಯಾದ್ಯಂತ ಅಭಿಮಾನಿಗಳಿದ್ದಾರೆ. ಯಾವ ಹುದ್ದೆ ಇಲ್ಲದೆ ಇದ್ದಾಗಲೂ ಅವರ ಸೂಚನೆಯಂತೆ ಕೆಲಸ ಮಾಡುವ ಟೀಮ್‌ಗಳು ರಾಜ್ಯಾದ್ಯಂತ ಇವೆ.

3. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲು ಬಿ.ಎಸ್‌. ಯಡಿಯೂರಪ್ಪ ಅವರು ಪಕ್ಷದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದು ತುಂಬ ಮುಖ್ಯ. ಬಿ.ವೈ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾದರೆ ಬಿಎಸ್‌ವೈ ಅವರನ್ನು ನೇರವಾಗಿ ಬಳಸಿಕೊಳ್ಳಬಹುದು ಮತ್ತು ಅವರ ಅನುಭವವನ್ನು ಪೂರ್ಣವಾಗಿ ಬಳಸಿಕೊಳ್ಳಬಹುದು ಎಂಬ ಲೆಕ್ಕಾಚಾರ.

BY Vijayendra

4. ಬಿಜೆಪಿಯ ಗಟ್ಟಿ ಅಸ್ತಿವಾರವಾಗಿದ್ದ ಲಿಂಗಾಯತ ಸಮಾಜ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮೇಲೆ ಮುನಿಸಿಕೊಂಡಿತ್ತು. ಈ ಹಾನಿಯನ್ನು ಸರಿ ಮಾಡಿ ಮತ್ತೆ ಅವರನ್ನು ಸೆಳೆಯಲು ಲಿಂಗಾಯತ ಸಮಾಜದ ಪ್ರಭಾವಿ ನಾಯಕನಿಗೆ ಪಟ್ಟ ಕಟ್ಟಲಾಗಿದೆ.

5. ಲಿಂಗಾಯತ ಸಮಾಜ ಬಿಜೆಪಿಯಿಂದ ದೂರ ಸರಿಯಲು ಕಾರಣವಾಗಿದ್ದು, ಬಿಎಸ್‌ವೈ ಅವರನ್ನು ಕಡೆಗಣಿಸಲಾಗಿದೆ ಎಂಬ ಸಂದೇಶ. ಬಿಎಸ್‌ವೈ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಇಳಿಸಿದ್ದು, ಅವರು ಕಣ್ಣೀರು ಹಾಕಿದ್ದು ಬಿಜೆಪಿಗೆ ದೊಡ್ಡ ಹಿನ್ನಡೆಯಾಗಿತ್ತು. ಇದೀಗ ಬಿವೈ ವಿಜಯೇಂದ್ರ ಅವರಿಗೆ ನಾಯಕತ್ವ ನೀಡಿ ಸಮುದಾಯದಲ್ಲಿ ವಿಶ್ವಾಸ ಮೂಡಿಸುವುದು.

BY Vijayendra

6. ಬಿಜೆಪಿ ಕುಟುಂಬ ರಾಜಕಾರಣದ ಹೆಸರಿನಲ್ಲಿ ಒಂದು ಕುಟುಂಬದ ಇತರ ನಾಯಕರನ್ನು ಕಡೆಗಣಿಸುತ್ತಿದೆ ಎಂಬ ಆರೋಪವಿದೆ. ಹಿರಿಯ ನಾಯಕರ ಮಕ್ಕಳಿಗೆ ಬಿಜೆಪಿಯಲ್ಲಿ ಭವಿಷ್ಯವಿಲ್ಲ ಎಂಬಂತೆ ಹರಡಿರುವ ತಪ್ಪು ಅಭಿಪ್ರಾಯವನ್ನು ಸುಳ್ಳು ಮಾಡುವ ಉದ್ದೇಶವನ್ನು ಈ ನೇಮಕಾತಿ ಹೊಂದಿದೆ.

7. ರಾಜ್ಯದಲ್ಲಿ ಯುವ ನಾಯಕತ್ವಕ್ಕೆ ಮುಂದೆ ಅವಕಾಶ ನೀಡಲಾಗುತ್ತದೆ ಎಂಬ ಸಂದೇಶವನ್ನು ಸಾರುವ ಉದ್ದೇಶವನ್ನು ಇದು ಹೊಂದಿದೆ. ಪಕ್ಷದ ಸಂಘಟನೆ ಮತ್ತು ನಾಯಕತ್ವದ ವಿಷಯದಲ್ಲಿ ʼಗೆಲುವಿನ ಶಕ್ತಿʼಗೇ ಮಣೆ ಎಂಬ ಸಂದೇಶವನ್ನು ಎಲ್ಲ ನಾಯಕರಿಗೆ ನೀಡಲು.

8. ಬಿಜೆಪಿಗೆ ಈಗ ಯಾವುದೇ ಟೀಕೆಗಳಿಗೆ ಹೆದರದೆ, ಪಕ್ಷದ ಕೆಲಸವನ್ನು ನಿಷ್ಠೆಯಿಂದ ಮಾಡಿಕೊಂಡು ಹೋಗುವ ನಾಯಕತ್ವ ಬೇಕಾಗಿದೆ. ಅಂಥ ಗುಣವನ್ನು ಬಿವೈ ವಿಜಯೇಂದ್ರ ಪ್ರದರ್ಶಿಸಿದ್ದಾರೆ.

9. ಹಲವು ಬಾರಿ ಅವಕಾಶ ತಪ್ಪಿದರೂ ಪಕ್ಷಕ್ಕೆ ಕುಂದುಂಟಾಗದಂತೆ ನಡೆದುಕೊಂಡರೆ ಪಕ್ಷ ಸೂಕ್ತ ಕಾಲದಲ್ಲಿ ತಕ್ಕ ಗೌರವ ನೀಡುತ್ತದೆ ಎಂಬುದನ್ನು ಸಾರಲು ಬಿಜೆಪಿ ಮುಂದಾಗಿದೆ.

ಇದನ್ನೂ ಓದಿ: BY Vijayendra: ಚತುರ ಸಂಘಟಕ, ನಿಪುಣ ರಾಜಕೀಯ ತಂತ್ರಗಾರ ಬಿ ವೈ ವಿಜಯೇಂದ್ರ

10. ಇದೆಲ್ಲದಕ್ಕಿಂತಲೂ ಮುಖ್ಯವಾಗಿ ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಪಕ್ಷ ಸಂಘಟನೆಯ ಮೂಲಕ ಪ್ರತಿಪಕ್ಷಗಳನ್ನು ಬುಲ್ಡೋಜ್‌ ಮಾಡುವ ಪ್ರಯತ್ನದಲ್ಲಿರುವ ಕಾಂಗ್ರೆಸ್‌ ರಾಜ್ಯಾಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರನ್ನು ಎದುರಿಸಲು ಬಿಜೆಪಿಗೆ ಒಬ್ಬ ಪ್ರಬಲ ನಾಯಕ ಬೇಕಾಗಿದ್ದಾರೆ. ಇದನ್ನು ಬಿಜೆಪಿ ವಿಜಯೇಂದ್ರ ಅವರಲ್ಲಿ ಕಂಡಿದೆ.

Exit mobile version