ಬೆಂಗಳೂರು: ಹುಬ್ಬಳ್ಳಿಯಲ್ಲಿ ಕರಸೇವಕನ ಬಂಧನ (Arrest of kara sevak) ವಿಚಾರವನ್ನು ಖಂಡಿಸಿ ಬುಧವಾರ (ಜ. 3) ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಬೃಹತ್ ಪ್ರತಿಭಟನೆ (BJP Protest) ನಡೆದಿದ್ದು, ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಲಾಗಿದೆ. ರಾಜ್ಯ ಸರ್ಕಾರಕ್ಕೆ ಇನ್ನು 48 ಗಂಟೆ ಗಡುವು ನೀಡುತ್ತಿದ್ದೇವೆ. ಅಷ್ಟರಲ್ಲಿ ಈಗಾಗಲೇ ಬಂಧಿಸಿರುವ ಶ್ರೀಕಾಂತ್ ಪೂಜಾರಿ ಅವರನ್ನು ಬಿಡುಗಡೆ ಮಾಡಿ ಮನೆಗೆ ಕಳಿಸಬೇಕು. ಇಲ್ಲದಿದ್ದರೆ ಯುವ ಮೋರ್ಚಾ ಕಾರ್ಯಕರ್ತರೊಂದಿಗೆ ಹುಬ್ಬಳ್ಳಿ ಪೊಲೀಸ್ ಠಾಣೆ ಮುತ್ತಿಗೆ ಹಾಕುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಖಡಕ್ ಎಚ್ಚರಿಕೆಯನ್ನು ಕೊಟ್ಟಿದ್ದಾರೆ.
ಪ್ರತಿಭಟನೆ ವೇಳೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ರಾಜ್ಯ ಸರ್ಕಾರ ಎಚ್ಚರಿಕೆಯಿಂದ ವರ್ತಿಸಬೇಕು.ರಾಜ್ಯಾದ್ಯಂತ ಸಾಂಕೇತಿಕ ಹೋರಾಟ ಮಾಡುತ್ತಿದ್ದೇವೆ. ಶ್ರೀಕಾಂತ್ ಪೂಜಾರಿ ಬಿಡುಗಡೆ ಮಾಡುವವರೆಗೂ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.
ಕಳೆದ ಕೆಲವು ದಿನಗಳಿಂದ ಕರ್ನಾಟಕ ರಾಜ್ಯದಲ್ಲಷ್ಟೇ ಅಲ್ಲದೆ, ದೇಶದಲ್ಲೇ ಅಯೋಧ್ಯೆಯಲ್ಲಿ ರಾಮನ ಪ್ರತಿಷ್ಠಾಪನೆ ವಿಷಯವಾಗಿ ಉತ್ಸಾಹ ಕಂಡುಬರುತ್ತಿದೆ. ನೂರಾರು ವರ್ಷಗಳಿಂದ ಅಯೋಧ್ಯೆಯಲ್ಲಿ ಹಿಂದುಗಳ ಆರಾಧ್ಯದೈವ ಶ್ರೀರಾಮಚಂದ್ರನ ದೇವಸ್ಥಾನ ಆಗಬೇಕು ಅಂತ ಹೋರಾಟ ಮಾಡುತ್ತಾ ಬರಲಾಗಿತ್ತು. ಈ ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮನ ಪ್ರಾಣ ಪ್ರತಿಷ್ಠಾಪನೆ ಆಗುತ್ತಿದೆ. ಈ ಶುಭ ಸಂದರ್ಭದಲ್ಲಿ ನಾವಿದ್ದೇವೆ. ಒಂದು ಕಡೆ ರಾಮಭಕ್ತರಿಂದ ಪವಿತ್ರ ಮಂತ್ರಾಕ್ಷತೆ ತಲುಪಿಸುವ ಕೆಲ ಆಗುತ್ತಿದೆ. ಜನ ರಾಮಮಂದಿರದ ಕನಸು ಕಾಣುತ್ತಿದ್ದಾರೆ. ದೇಶದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ.ಕೋಟ್ಯಂತರ ಹಿಂದುಗಳ ಭುಜದ ಮೇಲೆ ಶ್ರೀರಾಮಚಂದ್ರ ಕಾಣುತ್ತಿದ್ದಾರೆ. ಆದರೆ, ರಾಮಭಕ್ತರ ತಡೆಯುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಬಿ,ವೈ. ವಿಜಯೇಂದ್ರ ಆಕ್ರೋಶವನ್ನು ವ್ಯಕ್ತಪಡಿಸಿದರು.
ಇದನ್ನೂ ಓದಿ | CM Siddaramaiah: ಸಿದ್ದರಾಮಯ್ಯ ಎಂದಾದರೂ ರಾಮನಿಗೆ ಸಮನಾಗಲು ಸಾಧ್ಯವೇ?; ಬಿಜೆಪಿ ವಾಗ್ದಾಳಿ
ಮಾಜಿ ಸಚಿವ ಆಂಜನೇಯ ಅವರ ಹೇಳಿಕೆ ನೋಡಿದರೆ ದೇವರೇ ಕಾಪಾಡಬೇಕು. ಮೂವತ್ತು ವರ್ಷಗಳ ಹಿಂದಿನ ಕೇಸ್ ಅನ್ನು ಹಾಕಿ ಕಾಂಗ್ರೆಸ್ ಸರ್ಕಾರ ದುಸ್ಸಾಹಸ ಮಾಡಿದೆ. ರಾಜ್ಯದಲ್ಲಿ ಹಿಂದು ಕಾರ್ಯಕರ್ತರ ಹಕ್ಕನ್ನ ಕೀಳುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್‌ನವರಿಗೆ ತಕ್ಕ ಪಾಠ ಕಲಿಸಬೇಕಿದೆ. ಸಿದ್ದರಾಮಯ್ಯ ಅವರು ಮರೆತಿದ್ದಾರೆ ಅನ್ನಿಸುತ್ತಿದೆ. ತಾಯಿಯ ಎದೆ ಹಾಲು ಕುಡಿದವರು ಇದ್ದರೆ ಶ್ರೀನಗರದ ಲಾಲ್ ಚೌಕ್‌ನಲ್ಲಿ ತ್ರಿವರ್ಣ ಧ್ವಜ ಹಾರಿಸಿ ಅಂತ ಕರೆ ನೀಡಲಾಗಿತ್ತು. ಅಂದು ಕರ್ನಾಟಕದಿಂದ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಸಾವಿರಾರು ಜನ ಹೋಗಿದ್ದರು. ಮುರಳಿ ಮನೋಹರ್ ಜೋಶಿ ನೇತೃತ್ವದಲ್ಲಿ ಹೋಗಿ ತ್ರಿವರ್ಣ ಧ್ವಜ ಹಾರಿಸಲಾಗಿತ್ತು ಎಂದು ಬಿ.ವೈ. ವಿಜಯೇಂದ್ರ ತಿಳಿಸಿದರು.
ರಾಜ್ಯದಲ್ಲಿ ಜನಪರ ಸರ್ಕಾರವೋ? ಮೊಗಲರ, ತಾಲೀಬಾನ್ ಸರ್ಕಾರವೋ ಅಂತ ಜನ ಪ್ರಶ್ನೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದು ವಿರೋಧಿ ನೀತಿ ಅನುಸುತ್ತಿದೆ. ನಿಮಗೆ ತಕ್ಕ ಪಾಠ ಕಲಿಸಬೇಕಿದೆ. ಪಿಎಫ್‌ಐ ವಿರುದ್ಧದ ಕೇಸ್ ವಾಪಸ್ ಪಡೆದವರು ನೀವೇ ಅಲ್ಲವೇ? ಡಿಜೆ, ಕೆಜಿಹಳ್ಳಿ ಕೇಸ್ ಅನ್ನು ಸಹ ವಾಪಸ್ ಪಡೆದಿದ್ದೀರಿ. ಮುಸ್ಲಿಂ ವಿರುದ್ಧದ ಕೇಸ್ ವಾಪಸ್ ಪಡೆದಿದ್ದೀರಿ. ಈ ಮೂಲಕ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುತ್ತಿದ್ದೀರಿ. ರಾಜ್ಯದಲ್ಲಿ ರೈತರು ಹೋರಾಟ ಮಾಡಿದರೆ ಅವರ ವಿರುದ್ಧ ಕೇಸ್ ಹಾಕುತ್ತಿದ್ದೀರಿ. ಹಿಂದು ವಿರೋಧಿ ಕಾಂಗ್ರೆಸ್ ಹಾಗೂ ಸಿಎಂ ಸಿದ್ದರಾಮಯ್ಯ ಅವರಿಗೆ ಜನ ತಕ್ಕಪಾಠ ಕಲಿಸಬೇಕಿದೆ ಎಂದು ಬಿ.ವೈ. ವಿಜಯೇಂದ್ರ ಕರೆ ನೀಡಿದರು.
ರಾಜ್ಯಪಾಲರ ಭೇಟಿ ಮಾಡಿದ ಬಿಜೆಪಿ
ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್ ಅವರನ್ನು ಭೇಟಿ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದ ನಿಯೋಗವು ಮನವಿ ಸಲ್ಲಿಸಿದೆ. ಅಲ್ಲದೆ, ರಾಜ್ಯದಲ್ಲಿ ಕರಸೇವಕರ ಬಂಧನ ಮಾಡಿರುವ ಸರ್ಕಾರದ ಕ್ರಮ ಖಂಡನೀಯ. ಹಾಗಾಗಿ ಬಂಧನಕ್ಕೊಳಗಾದ ಕರ ಸೇವಕರೊಬ್ಬರನ್ನು ಇನ್ನು 24 ಗಂಟೆ ಒಳಗೆ ಬಿಡುಗಡೆ ಮಾಡುವಂತೆ ಸೂಚನೆ ಕೊಡಿ ಎಂದು ಮನವಿ ಮಾಡಲಾಗಿದೆ.
ಸಂಸದ ಪಿ.ಸಿ ಮೋಹನ್, ಶಾಸಕರಾದ ಗೋಪಾಲಯ್ಯ, ವಿ. ಸುನಿಲ್ ಕುಮಾರ್, ಚನ್ನಬಸಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಪ್ರೀತಮ್ ಗೌಡ, ನಂದೀಶ್ ರೆಡ್ಡಿ, ಜಿಲ್ಲಾಧ್ಯಕ್ಷ ಎನ್.ಆರ್ ರಮೇಶ್ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
ವಿಜಯೇಂದ್ರ ನೇತೃತ್ವದಲ್ಲಿ ಹುಬ್ಬಳ್ಳಿ ಟೌನ್ ಠಾಣೆಗೆ ಜ. 9ರಂದು ಮುತ್ತಿಗೆ
ಬೆಂಗಳೂರು: ಕರಸೇವಕ ಶ್ರೀಕಾಂತ ಪೂಜಾರಿಯವರನ್ನು ಬಿಡುಗಡೆ ಮಾಡದಿದ್ದಲ್ಲಿ ಜ. 9ರಂದು ಹುಬ್ಬಳ್ಳಿ ಟೌನ್ ಪೊಲೀಸ್ ಠಾಣೆಗೆ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರ ನೇತೃತ್ವದಲ್ಲಿ ಮುತ್ತಿಗೆ ಹಾಕಲಾಗುವುದು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಶಾಸಕ ಪಿ.ರಾಜೀವ್ ಅವರು ತಿಳಿಸಿದ್ದಾರೆ.
ವಿಧಾನಸಭೆಯ ಬಿಜೆಪಿ ಉಪ ನಾಯಕ ಅರವಿಂದ ಬೆಲ್ಲದ್ ಮತ್ತು ಶಾಸಕ ಮಹೇಶ್ ಟೆಂಗಿನಕಾಯಿ ಅವರು ಭಾಗವಹಿಸಲಿದ್ದು, ಸಾವಿರಾರು ಜನರು ಠಾಣೆಗೆ ಮುತ್ತಿಗೆ ಹಾಕಲಿದ್ದಾರೆ. ಕೂಡಲೇ ಶ್ರೀಕಾಂತ ಪೂಜಾರಿಯವರನ್ನು ಬಿಡುಗಡೆ ಮಾಡಲು ಒತ್ತಾಯಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ರಾಜಕೀಯ ಪ್ರೇರಿತವಾಗಿ ಕರಸೇವಕರನ್ನು ಬಂಧಿಸಿದ ಪೊಲೀಸ್ ಅಧಿಕಾರಿಯನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಇದನ್ನೂ ಓದಿ | BY Vijayendra: ರೈತ, ರಾಮ, ಹಿಂದು ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಪಾಠ ಕಲಿಸಿ: ವಿಜಯೇಂದ್ರ ಕರೆ