Site icon Vistara News

BY Vijayendra : ಜನರೇಷನ್ ಚೇಂಜ್ ಪ್ರಕೃತಿ ನಿಯಮ; ವಿಜಯೇಂದ್ರಗೆ ಹಿರಿಯರು ಸಾಥ್‌ ನೀಡಲಿ ಎಂದ ಎಸ್.ಎಂ. ಕೃಷ್ಣ

BY vijayendra meets SM Krishna

ಬೆಂಗಳೂರು: ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ (BJP State President) ನೇಮಕಗೊಂಡಿರುವ ಬಿ.ವೈ. ವಿಜಯೇಂದ್ರ (BY Vijayendra) ಅವರು ಹಿರಿಯ ನಾಯಕರ ಮನೆಗೆ ಭೇಟಿ ನೀಡುತ್ತಿದ್ದಾರೆ. ಇದರ ಭಾಗವಾಗಿ ಹಿರಿಯ ರಾಜಕಾರಣಿ, ಮಾಜಿ ಸಿಎಂ ಎಸ್.ಎಂ. ಕೃಷ್ಣ (Former CM SM Krishna) ಅವರ ನಿವಾಸಕ್ಕೆ ತೆರಳಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡಿದ್ದಾರೆ. ಇದೇ ವೇಳೆ ಬಿಜೆಪಿ ನೂತನ ರಾಜ್ಯಾಧ್ಯಕ್ಷರನ್ನು ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರು ಅಭಿನಂದಿಸಿದರು.

ಬಳಿಕ ಮಾತನಾಡಿದ ಎಸ್.ಎಂ. ಕೃಷ್ಣ, ನೂತನವಾಗಿ ಭಾರತೀಯ ಜನತಾ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ವಿಜಯೇಂದ್ರ ಅವರನ್ನು ಅಭಿನಂದಿಸುತ್ತೇನೆ. ಕಳೆದ ಹತ್ತಾರು ವರ್ಷಗಳಿಂದ ಬಿಜೆಪಿಯನ್ನು ಭದ್ರವಾದ ಬುನಾದಿ ಮೇಲೆ ಕಟ್ಟುವಲ್ಲಿ ಬಿ.ಎಸ್. ಯಡಿಯೂರಪ್ಪ ಸಾಕ್ಷಿ ಆಗಿದ್ದಾರೆ. ಯಡಿಯೂರಪ್ಪ ಅವರ ಹಾದಿಯಲ್ಲಿ ವಿಜಯೇಂದ್ರ ಅವರು ನಡೆಯಲಿ. ಮುಂದೆ ಬರುತ್ತಿರುವ ಲೋಕಸಭಾ ಚುನಾವಣೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗೆಲ್ಲುವ ಜವಾಬ್ದಾರಿ ಇದೆ. ಅಂತಹ ಜವಾಬ್ದಾರಿಯು ಈಗ ಈ ಯುವ ನಾಯಕನ ಮೇಲೆ ಇದೆ. ಈಗ ವಿಜಯೇಂದ್ರ ಅವರನ್ನು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಗುರುತಿಸಿ ಜವಾಬ್ದಾರಿಯನ್ನು ನೀಡಿದ್ದಾರೆ ಎಂದು ಹೇಳಿದರು.

ಬಿಜೆಪಿ ವರಿಷ್ಠರು ಕಿರಿಯರನ್ನು ಗುರುತಿಸಿ ರಾಜ್ಯಾಧ್ಯಕ್ಷ ಹುದ್ದೆಯ ಅವಕಾಶವನ್ನು ನೀಡಿದ್ದಾರೆ. ಯುವ ಪ್ರತಿಭೆಗಳು ಹೊರಹೊಮ್ಮಬೇಕು. ಹಿರಿಯರು ಅವರಿಗೆ ಸಂಪೂರ್ಣ ಸಹಕಾರ ಕೊಡಬೇಕು. ಹೆಗಲಿಗೆ ಹೆಗಲು ಕೊಟ್ಟು ಸಹಕಾರ ಕೊಡಬೇಕು. ಜನರೇಷನ್ ಚೇಂಜ್ ಪ್ರಕೃತಿ ನಿಯಮವಾಗಿದೆ. ಹಿರಿಯರಾದ ನಾವು ಸಮನ್ವಯ ಸಾಧಿಸಿಕೊಂಡು ಹೋಗಬೇಕು. ಕಿರಿಯರಿಗೆ ಅವಕಾಶ ಸಿಕ್ಕಾಗ ಅವರ ಜತೆ ನಿಲ್ಲಬೇಕು ಎಂದು ಎಸ್‌.ಎಂ. ಕೃಷ್ಣ ಅವರು ಪಕ್ಷದ ಹಿರಿಯರಿಗೆ ಸಲಹೆ ನೀಡಿದರು.

ವಿಜೇಯೇಂದ್ರಗೆ ಎಚ್‌ಡಿಡಿ, ಎಸ್ಎಂಕೆ ಪಾಠ!

ಮಾಜಿ ಸಿಎಂ ಬಿ.ಎಸ್.‌ ಯಡಿಯೂರಪ್ಪ ಅವರ ಹೋರಾಟ ಮತ್ತು ಸಂಘಟನೆಯ ಹಾದಿಯನ್ನು ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಸಿಎಂ ಎಸ್.ಎಂ. ಕೃಷ್ಣ ನೆನಪು ಮಾಡಿದ್ದಾರೆ. ಅದೇ ಹಾದಿಯಲ್ಲಿ ನಡೆಯುವಂತೆ ಇಬ್ಬರೂ ನಾಯಕರು ವಿಜಯೇಂದ್ರ ಅವರಿಗೆ ಮಾರ್ಗದರ್ಶನ ನೀಡಿದ್ದಾರೆ. ರಾಜಕೀಯ ಪಟ್ಟುಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಮುಂದೆ ಲೋಕಸಭಾ ಚುನಾವಣೆ ಬರುತ್ತಿರುವುದರಿಂದ ಪಕ್ಷ ಸಂಘಟನೆಗೆ ಒತ್ತು ನೀಡಬೇಕು. ಇದಕ್ಕೆ ಹಿರಿಯರನ್ನು ಬಳಸಿಕೊಳ್ಳಬೇಕು ಎಂದು ಎಸ್‌ಎಂಕೆ ಹೇಳಿದರೆ, ಮೈತ್ರಿ ಪಕ್ಷದ ಜತೆ ಹೊಂದಾಣಿಕೆ ಮಾಡಿಕೊಂಡು ಹೆಜ್ಜೆ ಇಡಬೇಕು ಎಂದು ಎಚ್‌ಡಿಡಿ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: BY Vijayendra : ತಂದೆಯ ದಾರಿಯಲ್ಲಿ ಹೋಗು, ಯಶಸ್ಸು ಸಿಗುತ್ತದೆ; ವಿಜಯೇಂದ್ರಗೆ ಎಚ್‌.ಡಿ. ದೇವೇಗೌಡ ಕಿವಿಮಾತು

BY vijayendra meets SM Krishna and giving sweets to Pourakarmika

ಒಳ್ಳೆಯದಾಗಲಿ ಎಂದು ಹಾರೈಸಿದ ಪೌರ ಕಾರ್ಮಿಕರು

ಬಿ.ವೈ. ವಿಜೇಯೇಂದ್ರ ಅವರು ಎಸ್‌.ಎಂ. ಕೃಷ್ಣ ಅವರ ನಿವಾಸಕ್ಕೆ ಆಗಮಿಸುತ್ತಿದ್ದಂತೆ ಹೊರಗಡೆ ಪೌರ ಕಾರ್ಮಿಕರು ಎದುರಾಗಿ ಶುಭಾಶಯಗಳನ್ನು ಹೇಳಿದರು. ನೂತನ ಜವಾಬ್ದಾರಿಯಿಂದ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು. ಈ ವೇಳೆ ಪೌರ ಕಾರ್ಮಿಕರಿಗೆ ವಿಜಯೇಂದ್ರ ಸಿಹಿ ಹಂಚಿದರು. ಎಸ್‌ಎಂಕೆ ಮನೆಯಿಂದ ನಿರ್ಗಮಿಸುವ ವೇಳೆ ವಿಜಯೇಂದ್ರ ಅವರು ಪೌರ ಕಾರ್ಮಿಕರಿಗೆ ಹಬ್ಬದ ಪ್ರಯುಕ್ತ ಹಣ ನೀಡಿ ಅಲ್ಲಿಂದ ನಿರ್ಗಮಿಸಿದರು.

Exit mobile version