ಬೆಂಗಳೂರು: ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ (BJP State President) ಅಧಿಕಾರ ಸ್ವೀಕರಿಸಲು ಸಜ್ಜಾಗಿರುವ ಬಿ.ವೈ ವಿಜಯೇಂದ್ರ (BY Vijayendra) ಅವರು ಗುರುಹಿರಿಯರ ಆಶೀರ್ವಾದ, ಮನೆ ಮಂದಿಯ ಪ್ರೀತಿಯ ಹರಕೆಗಳನ್ನು ಹೊತ್ತು ಮುನ್ನಡೆದಿದ್ದಾರೆ. ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸುವ ಮುನ್ನ ಅವರು ಡಾಲರ್ಸ್ ಕಾಲನಿಯಲ್ಲಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ಅವರ ಧವಳಗಿರಿ ನಿವಾಸಕ್ಕೆ ಭೇಟಿ ನೀಡಿ ಅಲ್ಲಿ ತಂದೆಯವರ ಕಾಲಿಗೆರಗಿ ಆಶೀರ್ವಾದ ಕೋರಿದರು.
ಒಂದು ಕಾಲದಲ್ಲಿ ಬಿಜೆಪಿಯನ್ನು ಅತ್ಯಂತ ತಳಮಟ್ಟದಿಂದ ಕಟ್ಟಿದ ಯಡಿಯೂರಪ್ಪ ಅವರು ಇದೀಗ ಬಿವೈ ವಿಜಯೇಂದ್ರ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮುನ್ನಡೆಸುವುದನ್ನು ಕಾತರದಿಂದ ನಿರೀಕ್ಷಿಸುತ್ತಿದ್ದಾರೆ. ಬುಧವಾರ ಬೆಳಗ್ಗೆ ಪತ್ನಿ ಸಮೇತರಾಗಿ ಬಂದು ಕಾಲಿಗೆರಗಿದ ಬಿವೈ ವಿಜಯೇಂದ್ರ ಅವರನ್ನು ಬಿಎಸ್‌ವೈ ಪ್ರೀತಿಯಿಂದ ಹರಸಿದರು.
ಧವಳಗಿರಿ ನಿವಾಸಕ್ಕೆ ವಿಜಯೇಂದ್ರ ಅವರ ಮೂವರು ಸೋದರಿಯರಾದ ಪದ್ಮಾವತಿ, ಅರುಣಾದೇವಿ, ಉಮಾದೇವಿ ಅವರು ಆಗಮಿಸಿದ್ದು, ಅವರು ತಮ್ಮ ಪ್ರೀತಿಯ ತಮ್ಮನಿಗೆ ಆರತಿ ಬೆಳಗಿ ಶುಭ ಕೋರಿದರು.
ತಂದೆ ಮತ್ತು ಸೋದರಿಯರ ಪ್ರೀತಿ ಆಶೀರ್ವಾದ ಪಡೆಯುವ ಜತೆಗೆ ವಿಜಯೇಂದ್ರ ಅವರು ಮನೆ ದೇವರಿಗೂ ನಮಸ್ಕರಿಸಿ ಪ್ರಾರ್ಥನೆ ಸಲ್ಲಿಸಿದರು.
ಇತ್ತ ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ವಿಜಯೇಂದ್ರ ಅವರನ್ನು ಸ್ವಾಗತಿಸಲು 108 ಪೂರ್ಣ ಕುಂಭ ಕಲಶಗಳನ್ನು ಹೊತ್ತ ಮಹಿಳೆಯರು ಸಜ್ಜಾಗಿದ್ದಾರೆ. ಬಿಜೆಪಿ ರಾಜ್ಯ ಘಟಕದ ಹಾಲಿ ಅಧ್ಯಕ್ಷರಾಗಿರುವ ನಳಿನ್ ಕುಮಾರ್ ಕಟೀಲ್ ಅವರು ಅಧಿಕಾರವನ್ನು ವಿಜಯೇಂದ್ರ ಅವರಿಗೆ ಹಸ್ತಾಂತರ ಮಾಡಲಿದ್ದಾರೆ.
ಕಾಂಗ್ರೆಸನ್ನು ಮಕಾಡೆ ಮಲಗಿಸ್ತೀವಿ ಎಂದ ಪ್ರಭು ಚೌಹಾಣ್
ಇತ್ತ ಧವಳಗಿರಿ ನಿವಾಸದಲ್ಲಿ ಮಾತನಾಡಿದ ಮಾಜಿ ಸಚಿವ ಪ್ರಭು ಚೌಹಾಣ್ ಅವರು, ʻʻಇಂದು ಐತಿಹಾಸಿಕ ದಿನ ಇದೆ. ವಿಜಯೇಂದ್ರ ಅವರು ರಾಜ್ಯಾಧ್ಯಕ್ಷ ಆಗ್ತಿದ್ದಾರೆ. ರಾಜ್ಯದಲ್ಲಿ ಪೂರ್ಣ ಉತ್ಸಾಹ ಬಂದಿದೆ. ನಮಗೆ ಖುಷಿ ಇದೆ. ಅವರಿಗೆ ಶುಭಕೋರಲು ಬಂದಿದ್ದೇನೆ. ಯಾವುದೇ ಅಸಮಾಧಾನ ಇಲ್ಲ. ಮೋದಿ, ನಡ್ಡಾ, ಅಮಿತ್ ಶಾ ಎಲ್ಲರೂ ಸೇರಿ ಅಧ್ಯಕ್ಷ ಮಾಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮಕಾಡೆ ಮಲಗಿಸ್ತೀವಿʼʼ ಎಂದರು.
ಇದನ್ನೂ ಓದಿ : BJP State President: ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ನಾಳೆ ಪದಗ್ರಹಣ; ಈ ಹಿಂದಿನ ಅಧ್ಯಕ್ಷರು ಯಾರ‍್ಯಾರು?
ಉತ್ಸಾಹ ದುಪ್ಪಟ್ಟು ಆಗಿದೆ ಎಂದ ಪ್ರೀತಂ ಗೌಡ
ʻʻಯುವ ನಾಯಕನಿಗೆ ವರಿಷ್ಠರು ಅವಕಾಶ ನೀಡಿದ್ದಾರೆ. ಇದು ನಮ್ಮ ಕಾರ್ಯಕರ್ತರ ಹುಮ್ಮಸ್ಸು ದುಪ್ಪಟ್ಟು ಮಾಡಿದೆ. ಹಾಸನದಲ್ಲಿ ಬಿಜೆಪಿ ಗೆಲ್ಲುತ್ತದೆ. ಹಾಸನ ಕ್ಷೇತ್ರವನ್ನು ಬಿಜೆಪಿಗೆ ಕೊಡಿ ಎಂದು ಕೇಳ್ತೀವಿ. ಬಿಜೆಪಿ ಇಂದ ಯಾರೇ ಅಭ್ಯರ್ಥಿ ಆದ್ರು ಗೆಲ್ತಾರೆ. ಹಿರಿಯರ ಮಾರ್ಗದರ್ಶನದಲ್ಲಿ ವಿಜಯೇಂದ್ರ ಪಕ್ಷ ಸಂಘಟನೆ ಮಾಡ್ತಾರೆʼʼ ಎಂದು ಹಾಸನದ ಮಾಜಿ ಶಾಸಕ ಪ್ರೀತಮ್ ಗೌಡ ಹೇಳಿದರು. ʻʻಹಿರಿಯರ ಅಸಮಾಧಾನ ಇರುವುದು ನಿಜ.. ಅದನ್ನು ಸಮಾಧಾನ ಮಾಡ್ತೀವಿʼʼ ಎಂದು ಪ್ರೀತಂ ಹೇಳಿದರು.