Site icon Vistara News

BY Vijayendra: ಬಿ.ಎಸ್.‌ ಯಡಿಯೂರಪ್ಪ ಮಾದರಿಯಲ್ಲಿ ಸಮಾಜದ ಕಣ್ಣಿನಂತೆ ಕೆಲಸ ‌ಮಾಡುತ್ತೇನೆ: ವಿಜಯೇಂದ್ರ

BY Vijayendra at Veerashaiva Lingayat conference

ದಾವಣಗೆರೆ: ಮಾಜಿ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ (BS Yediyurappa) ಅವರ ಮಾದರಿಯಲ್ಲಿ ಸಮಾಜದ ಕಣ್ಣಿನಂತೆ ಕೆಲಸ ‌ಮಾಡುತ್ತೇನೆ. ಯಡಿಯೂರಪ್ಪ ಅವರು ನಾಲ್ಕು ಭಾರಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ‌. ಎಲ್ಲ ಸಮುದಾಯದವರನ್ನು ಜತೆಗೆ ತೆಗೆದುಕೊಂಡು ಹೋಗಿರುವ ಕೀರ್ತಿ ಅವರಿಗೆ ಸಲ್ಲುತ್ತದೆ. ಯಡಿಯೂರಪ್ಪ ಅವರ ರಾಜಕೀಯ ಜೀವನ ಮುಗಿಯಿತು ಎಂದು ಎಲ್ಲರೂ ಭಾವಿಸಿದ್ದರು. ಅವರನ್ನು ರಾಜಕೀಯದಿಂದ ಮುಗಿಸುವ ಷಡ್ಯಂತ್ರ ನಡೆಯಿತು. ಆದರೆ, ಅವರು ಬೆನ್ನು ತೋರಿಸಿ ಓಡಿಹೋಗಿಲ್ಲ. ಧೈರ್ಯವಾಗಿ ‌ಎದುರಿಸಿದರು. ಹಾಗೆಯೇ ನಾನು ಕೆಲಸ ಮಾಡುತ್ತೇನೆ. ಸಮಾಜದ ಕಣ್ಣಾಗಿ, ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಹೇಳಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 24ನೇ ಅಧಿವೇಶನದಲ್ಲಿ ಮಹಿಳಾ ಮತ್ತು ಯುವ ಅಧಿವೇಶನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿ.ವೈ. ವಿಜಯೇಂದ್ರ, ಎಲ್ಲ ಸಮಾಜದ ಏಳ್ಗೆಗಾಗಿ ಬಿ.ಎಸ್.‌ ಯಡಿಯೂರಪ್ಪ ಅವರು ಶ್ರಮಿಸಿದ್ದಾರೆ. ಹೀಗಾಗಿ ‌ಈಗ ಯಾವುದೇ ಹುದ್ದೆ ಇಲ್ಲದೆ ಹೋದರೂ ಜನ ತಮ್ಮ ಮನಸ್ಸಿನಲ್ಲಿ ಮನೆ ಕಟ್ಟಿ ಕೊಟ್ಟಿದ್ದಾರೆ. ಆರ್ಥಿಕವಾಗಿ ಏನೇ ಟೀಕೆ ಬಂದರೂ ಮಠಗಳಿಗೆ ಅನುದಾನ ನೀಡಿದ್ದಾರೆ ಎಂದು ಹೇಳಿದರು.

BY Vijayendra at Veerashaiva Lingayat conference and meets Shamanur Shivashankarappa

ಇದನ್ನೂ ಓದಿ: Caste Census: ಜಾತಿ ಗಣತಿ ಬಗ್ಗೆ ಅನುಮಾನವಿದೆ; ಸರ್ಕಾರ ಹಠಕ್ಕೆ ಬೀಳಬಾರದು: ಶಾಮನೂರು ಎಚ್ಚರಿಕೆ

ಈ ವೇದಿಕೆಯ ಮೇಲಿರುವವರ ಮುಂದೆ ನಾನು ಹೇಳುತ್ತೇನೆ‌‌. ಯಾವ ರೀತಿ ನನ್ನ ತಂದೆಯವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಿದ್ದಾರೋ ಅದೇ ರೀತಿ‌ ನೀವೆಲ್ಲ ಹೆಮ್ಮೆ ಪಡುವಂತೆ ಕೆಲಸ ಮಾಡುತ್ತೇನೆ. ಸಮಾಜದ ಕಣ್ಣಾಗಿ, ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುತ್ತೇನೆ. ಬಿ.ವೈ. ವಿಜಯೇಂದ್ರ ಬಗ್ಗೆ ಸಮಾಜದವರು, ನೀವೆಲ್ಲರೂ ಹೆಮ್ಮೆಪಡುವ ಕೆಲಸ ‌ಮಾಡುತ್ತೇನೆ. ಸಮಾಜದ ಶಕ್ತಿಯಾಗಿ ಕೆಲಸ ಮಾಡುತ್ತೇನೆ ಎಂದು ಬಿ.ವೈ. ವಿಜಯೇಂದ್ರ ಹೇಳಿದರು.

ತರುಣನಂತೆ ಕೆಲಸ ಮಾಡುತ್ತಿರುವ ಶಾಮನೂರು

ಶಾಮನೂರು ಶಿವಶಂಕರಪ್ಪ ಅವರು 18 ವರ್ಷದ ತರುಣನಂತೆ ಸಮಾಜದ ಕಾರ್ಯವನ್ನು ಮಾಡುತ್ತಿದ್ದಾರೆ. ಕೆಲವರು ವೀರಶೈವ ಲಿಂಗಾಯತ ಸಮಾಜವನ್ನು ಒಡೆದು ಆಳಲು ಹೊರಟರು. ಪ್ರತ್ಯೇಕ ಧರ್ಮ ಅಂತ ಒಡೆಯಲು ಹೊರಟಾಗ ಶಾಮನೂರು ಶಿವಶಂಕರಪ್ಪ ಅವರು ಅದರ ವಿರುದ್ಧವಾಗಿ ನಿಂತರು. ತಮಗೆ ರಾಜಕಾರಣ ಮುಖ್ಯ ಅಲ್ಲ. ಸಮಾಜದ ಏಳಿಗೆ ಮುಖ್ಯ ಎಂದು ಧ್ವನಿ ಎತ್ತಿದರು ಎಂದು ಬಿ.ವೈ. ವಿಜಯೇಂದ್ರ ಹೇಳಿದರು.

ಇದನ್ನೂ ಓದಿ: ಯಾವುದೇ ಧರ್ಮದ ಅತಿ ಓಲೈಕೆ ಬೇಡ; ಲಿಂಗಾಯತ ಅಧಿಕಾರಿಗಳಿಗೆ ಸ್ಥಾನ ನೀಡಿ: ಸಚಿವರಿಗೆ ಬಿಎಸ್‌ವೈ ತಾಕೀತು

ಇಂದು ವೀರಶೈವ ಲಿಂಗಾಯತ ‌ಸಮಾಜವು ಕವಲುದಾರಿಯಲ್ಲಿ ಹೋಗುತ್ತಿದೆ. ನಾವು ಇದರ ವಿರುದ್ಧ ಧ್ವನಿ ಎತ್ತಬೇಕು. ಎತ್ತದಿದ್ದಲ್ಲಿ ಈ ಸಮಾಜ ಇತಿಹಾಸದ ಪುಟದಲ್ಲಿ ಸೇರುತ್ತದೆ ಎಂದು ಬಿ.ವೈ. ವಿಜಯೇಂದ್ರ ಎಚ್ಚರಿಸಿದರು.

Exit mobile version