ಬೆಂಗಳೂರು: ಬಿ.ವೈ. ವಿಜಯೇಂದ್ರ (BY Vijayendra) ಅವರು ಬುಧವಾರ (ನ. 15) ಕರ್ನಾಟಕ ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ (BJP State President) ಪದಗ್ರಹಣ ಮಾಡಲಿದ್ದಾರೆ. ಈ ಮೂಲಕ ಇವರು ರಾಜ್ಯ ಬಿಜೆಪಿಗೆ 11ನೇ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಲಿದ್ದಾರೆ. ಅವಧಿಯಾಗಿ 14ನೇ ರಾಜ್ಯಾಧ್ಯಕ್ಷರಾಗುತ್ತಿದ್ದಾರೆ.
ಎ.ಕೆ ಸುಬ್ಬಯ್ಯ ಅವರು 1980ರಲ್ಲಿ ಮೊದಲ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದರು. ಬಳಿಕ ಬಿ.ಬಿ ಶಿವಪ್ಪ (BB Shivappa), ಬಿ.ಎಸ್. ಯಡಿಯೂರಪ್ಪ (BS Yediyurappa), ಕೆ.ಎಸ್. ಈಶ್ವರಪ್ಪ (KS Eshwarappa) ಸೇರಿದಂತೆ ಹಲವರು ರಾಜ್ಯಾಧ್ಯಕ್ಷರಾಗಿ ಬಿಜೆಪಿಗೆ ದುಡಿದಿದ್ದಾರೆ. 1988ರಲ್ಲಿ ಮೊದಲ ಬಾರಿಗೆ ಬಿ.ಎಸ್. ಯಡಿಯೂರಪ್ಪ ರಾಜ್ಯಾಧ್ಯಕ್ಷರಾಗಿದ್ದರು. ಅವರು ಒಟ್ಟು ಮೂರು ಬಾರಿ ರಾಜ್ಯಾಧ್ಯಕ್ಷರಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದರು. ಹೀಗಾಗಿ ರಾಜ್ಯ ಬಿಜೆಪಿಯಲ್ಲಿ ಅತಿ ಹೆಚ್ಚು ಬಾರಿ ರಾಜ್ಯಾಧ್ಯಕ್ಷರಾಗಿರುವ ಖ್ಯಾತಿಯನ್ನು ಸಹ ಅವರು ಹೊಂದಿದ್ದಾರೆ.
ಇದನ್ನೂ ಓದಿ: HD Kumaraswamy : ವಿದ್ಯುತ್ ಕಳ್ಳತನ ಒಪ್ಪಿಕೊಂಡ ಕುಮಾರಸ್ವಾಮಿಗೆ ಅಭಿನಂದನೆ: ಡಿ.ಕೆ. ಶಿವಕುಮಾರ್
ಈಗ ಅವರ ಪುತ್ರ ಬಿ.ವೈ ವಿಜಯೇಂದ್ರ ಅವರನ್ನು ಮೊದಲ ಬಾರಿಗೆ ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಬುಧವಾರ ಅಧಿಕೃತವಾಗಿ ವಿಜಯೇಂದ್ರ ಅಧಿಕಾರ ಸ್ವೀಕರಿಸಲಿದ್ದಾರೆ. ಅಧಿಕಾರ ಸ್ವೀಕಾರ ಸಮಾರಂಭ ಇರುವ ಹಿನ್ನೆಲೆಯಲ್ಲಿ ಬಿಜೆಪಿ ಕಚೇರಿಯಲ್ಲಿ ಸಿದ್ಧತೆ ನಡೆಸಲಾಗಿದೆ.
ಈ ವರೆಗೆ ಬಿಜೆಪಿಯಲ್ಲಿ ಯಾರು ಯಾರು ರಾಜ್ಯಾಧ್ಯಕ್ಷರಾಗಿದ್ದಾರೆ? ಅವರು ಎಷ್ಟು ಅವಧಿವರೆಗೆ ಬಿಜೆಪಿಯನ್ನು ಮುನ್ನಡೆಸಿದ್ದಾರೆ ಎಂಬ ಬಗ್ಗೆ ವಿವರಗಳು ಇಲ್ಲಿವೆ.
ಕ್ರಮ ಸಂಖ್ಯೆ | ಹೆಸರು | ಅವಧಿ |
1 | ಎ.ಕೆ. ಸುಬ್ಬಯ್ಯ | 1980 | 1983 | 3 ವರ್ಷ |
2 | ಬಿ.ಬಿ. ಶಿವಪ್ಪ | 1983 | 1988 | 5 |
3 | ಬಿ.ಎಸ್. ಯಡಿಯೂರಪ್ಪ | 1988 | 1991 | 3 |
4 | ಕೆ.ಎಸ್. ಈಶ್ವರಪ್ಪ | 1993 | 1998 | 5 |
5 | ಬಿ.ಎಸ್. ಯಡಿಯೂರಪ್ಪ | 1998 | 1999 | 1 |
6 | ಬಸವರಾಜ ಪಾಟೀಲ್ ಸೇಡಂ | 2000 | 2003 | 3 |
7 | ಅನಂತ್ ಕುಮಾರ್ | 2003 | 2004 | 1 |
8 | ಜಗದೀಶ್ ಶೆಟ್ಟರ್ | 2004 | 2006 | 2 |
9 | ಡಿ.ವಿ. ಸದಾನಂದ ಗೌಡ | 2006 | 2010 | 4 |
10 | ಕೆ.ಎಸ್. ಈಶ್ವರಪ್ಪ | 2010 (ಜ.28) | 2013 (ಮಾ.21) | 3 ವರ್ಷ 52 ದಿನ |
11 | ಪ್ರಲ್ಹಾದ್ ಜೋಶಿ | 2013 (ಮಾ.21) | 2016 (ಏ. 8) | 3 ವರ್ಷ 18 ದಿನ |
12 | ಬಿ.ಎಸ್. ಯಡಿಯೂರಪ್ಪ | 2016 (ಏ. 8) | 2019 (ಆ. 20) | 3 ವರ್ಷ 134 ದಿನ |
13 | ನಳಿನ್ ಕುಮಾರ್ ಕಟೀಲ್ | 2019 (ಆ. 20) | 2023 (ನ. 15) | 4 ವರ್ಷ 82 ದಿನ |
14 | ಬಿ.ವೈ. ವಿಜಯೇಂದ್ರ | 2023 (ನ. 15) | ಹಾಲಿ |
ಇದನ್ನೂ ಓದಿ: HD Kumaraswamy : ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವಂತೆ ಕುಮಾರಸ್ವಾಮಿಗೆ ಕಾಂಗ್ರೆಸ್ ಸಲಹೆ!
ನ. 15ರ ಬೆಳಗ್ಗೆ 11 ಗಂಟೆಗೆ ಪದಗ್ರಹಣ ಸಮಾರಂಭ
ಮಾವಿನ ತೋರಣ, ಚಪ್ಪರ ಹಾಕಿ ಕಚೇರಿಗೆ ಕೇಸರಿ ಬಣ್ಣದ ಬಟ್ಟೆಗಳಿಂದ ಅಲಂಕಾರ ಮಾಡಲಾಗಿದೆ. ಬಿಜೆಪಿ ರಾಜ್ಯ ಕಚೇರಿಯ ಇಡೀ ರಸ್ತೆಗೆ ಬಿಜೆಪಿ ಬಂಟಿಂಗ್ಸ್, ಫ್ಲಾಗ್ ಕಟ್ಟಿ ಸಿಂಗಾರ ಮಾಡಲಾಗಿದೆ. ಬೆಳಗ್ಗೆ 11 ಗಂಟೆಗೆ ಅಧಿಕಾರ ಸ್ವೀಕಾರ ಮಾಡಲಿರುವ ಬಿ.ವೈ. ವಿಜಯೇಂದ್ರ ಬಳಿಕ ಸುದ್ದಿಗೋಷ್ಠಿ ನಡೆಸಲಿದ್ದಾರೆ.