ಬೆಂಗಳೂರು: ರಾಜ್ಯದ ನೂತನ ಬಿಜೆಪಿ ರಾಜ್ಯಾಧ್ಯಕ್ಷರಾಗಿ (BJP State President) ಬಿ.ವೈ. ವಿಜಯೇಂದ್ರ (BY Vijayendra) ಅವರು ಬುಧವಾರ ಬೆಳಗ್ಗೆ ಅಧಿಕಾರ ಸ್ವೀಕರಿಸಿದರು. ಈ ಮೂಲಕ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡ ಭಾರತೀಯ ಜನತಾ ಪಕ್ಷಕ್ಕೆ ರಣೋತ್ಸಾಹ ತುಂಬಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ಮಹತ್ವದ ಟಾಸ್ಕ್‌ಗೆ ಅವರೀಗ ಹೆಗಲು ಕೊಟ್ಟಿದ್ದಾರೆ.
ರಾಜ್ಯ ಬಿಜೆಪಿಯ 11ನೇ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಅವರು ಈಗ ಅಧ್ಯಕ್ಷರಾಗಿರುವ ನಳಿನ್ ಕುಮಾರ್ ಕಟೀಲ್ (Nalin Kumar Kateel) ಅವರಿಂದ ಅಧಿಕಾರ ಸ್ವೀಕರಿಸಿದರು. ನಳಿನ್ ಕುಮಾರ್ ಕಟೀಲ್ ಅವರು ನೂತನ ಸಾರಥಿಯನ್ನು ಅಧ್ಯಕ್ಷರ ಪಟ್ಟಕ್ಕೇರಿಸಿ ಶುಭ ಕೋರಿದರು.
ಬುಧವಾರ ಬೆಳಗ್ಗಿನಿಂದಲೇ ಬಿಜೆಪಿಯ ಪ್ರಧಾನ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಹೋಮ ಹವನಾದಿಗಳು ನಡೆದವು. ಒಳಗೆ ದೇವರ ಪೂಜೆ ನಡೆಯುತ್ತಿದ್ದರೆ ಹೊರಗಡೆ ಬೆಳಗ್ಗಿನಿಂದಲೇ ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿತ್ತು. 108 ಪೂರ್ಣ ಕುಂಭಗಳನ್ನು ಹೊತ್ತ ಮಹಿಳೆಯರು, ನಾನಾ ರೀತಿಯ ಸ್ವಾಗತಗಳು ಅಲ್ಲಿ ಮೇಳೈಸಿದ್ದವು.
ಬೆಳಗ್ಗೆ ತಮ್ಮ ಮನೆಯಿಂದ ಪತ್ನಿ ಸಮೇತರಾಗಿ ಧವಳಗಿರಿಗೆ ಭೇಟಿ ನೀಡಿದ ಬಿ.ವೈ ವಿಜಯೇಂದ್ರ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಂದ ಆಶೀರ್ವಾದ ಪಡೆದರು. ಅಲ್ಲಿಂದ ಬಿಜೆಪಿ ಪ್ರಧಾನ ಕಚೇರಿಗೆ ಆಗಮಿಸಿದ ವಿಜಯೇಂದ್ರ ಅವರು ಹೋಮದ ಪೂರ್ಣಾಹುತಿಯಲ್ಲಿ ಪಾಲ್ಗೊಂಡರು.
ಬಳಿಕ ಅಧಿಕಾರದ ಹಸ್ತಾಂತರ ಕಾರ್ಯಕ್ರಮ ನಡೆಯಿತು. ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ನೂರಾರು ನಾಯಕರು, ಸಾವಿರಾರು ಕಾರ್ಯಕರ್ತರ ಜಯಘೋಷದ ನಡುವೆ ಬಿವೈ ವಿಜಯೇಂದ್ರ ಅವರು ಬಿಜೆಪಿಯ 11ನೇ ರಾಜ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.
ಇದನ್ನೂ ಓದಿ : BY Vijayendra : ರಾಜ್ಯ ಬಿಜೆಪಿಗೆ ಇನ್ನು ಬಿ ವೈ ವಿಜಯೇಂದ್ರ ಸಾರಥ್ಯ; ಆಯ್ಕೆಗೆ 10 ಕಾರಣಗಳು
ಬಿಜೆಪಿಯ ಈ ಹಿಂದಿನ ರಾಜ್ಯಾದ್ಯಕ್ಷರು ಯಾರು?
ಎ.ಕೆ ಸುಬ್ಬಯ್ಯ ಅವರು 1980ರಲ್ಲಿ ಮೊದಲ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದರು. ಬಳಿಕ ಬಿ.ಬಿ ಶಿವಪ್ಪ (BB Shivappa), ಬಿ.ಎಸ್. ಯಡಿಯೂರಪ್ಪ (BS Yediyurappa), ಕೆ.ಎಸ್. ಈಶ್ವರಪ್ಪ (KS Eshwarappa) ಸೇರಿದಂತೆ ಹಲವರು ರಾಜ್ಯಾಧ್ಯಕ್ಷರಾಗಿ ಬಿಜೆಪಿಗೆ ದುಡಿದಿದ್ದಾರೆ. 1988ರಲ್ಲಿ ಮೊದಲ ಬಾರಿಗೆ ಬಿ.ಎಸ್. ಯಡಿಯೂರಪ್ಪ ರಾಜ್ಯಾಧ್ಯಕ್ಷರಾಗಿದ್ದರು. ಈ ವರೆಗೆ ಬಿಜೆಪಿಯಲ್ಲಿ ಯಾರು ಯಾರು ರಾಜ್ಯಾಧ್ಯಕ್ಷರಾಗಿದ್ದಾರೆ? ಅವರು ಎಷ್ಟು ಅವಧಿವರೆಗೆ ಬಿಜೆಪಿಯನ್ನು ಮುನ್ನಡೆಸಿದ್ದಾರೆ ಎಂಬ ಬಗ್ಗೆ ವಿವರಗಳು ಇಲ್ಲಿವೆ.
ಕ್ರಮ ಸಂಖ್ಯೆ | ಹೆಸರು | ಅವಧಿ |
1 | ಎ.ಕೆ. ಸುಬ್ಬಯ್ಯ | 1980 | 1983 | 3 ವರ್ಷ |
2 | ಬಿ.ಬಿ. ಶಿವಪ್ಪ | 1983 | 1988 | 5 |
3 | ಬಿ.ಎಸ್. ಯಡಿಯೂರಪ್ಪ | 1988 | 1991 | 3 |
4 | ಕೆ.ಎಸ್. ಈಶ್ವರಪ್ಪ | 1993 | 1998 | 5 |
5 | ಬಿ.ಎಸ್. ಯಡಿಯೂರಪ್ಪ | 1998 | 1999 | 1 |
6 | ಬಸವರಾಜ ಪಾಟೀಲ್ ಸೇಡಂ | 2000 | 2003 | 3 |
7 | ಅನಂತ್ ಕುಮಾರ್ | 2003 | 2004 | 1 |
8 | ಜಗದೀಶ್ ಶೆಟ್ಟರ್ | 2004 | 2006 | 2 |
9 | ಡಿ.ವಿ. ಸದಾನಂದ ಗೌಡ | 2006 | 2010 | 4 |
10 | ಕೆ.ಎಸ್. ಈಶ್ವರಪ್ಪ | 2010 (ಜ.28) | 2013 (ಮಾ.21) | 3 ವರ್ಷ 52 ದಿನ |
11 | ಪ್ರಲ್ಹಾದ್ ಜೋಶಿ | 2013 (ಮಾ.21) | 2016 (ಏ. 8) | 3 ವರ್ಷ 18 ದಿನ |
12 | ಬಿ.ಎಸ್. ಯಡಿಯೂರಪ್ಪ | 2016 (ಏ. 8) | 2019 (ಆ. 20) | 3 ವರ್ಷ 134 ದಿನ |
13 | ನಳಿನ್ ಕುಮಾರ್ ಕಟೀಲ್ | 2019 (ಆ. 20) | 2023 (ನ. 15) | 4 ವರ್ಷ 82 ದಿನ |
14 | ಬಿ.ವೈ. ವಿಜಯೇಂದ್ರ | 2023 (ನ. 15) | ಹಾಲಿ |