Site icon Vistara News

Karnataka Election 2023: ಅಭ್ಯರ್ಥಿ ಯಾರೆಂದು ಯೋಚಿಸದೆ ಬಿಜೆಪಿ ಗೆಲುವಿಗೆ ಒಗ್ಗಟ್ಟಾಗಿ ಶ್ರಮಿಸಿ: ಬಿ.ವೈ. ವಿಜಯೇಂದ್ರ ಕರೆ

BY Vijayendra urges party workers to work unitedly for BJP's victory without thinking about the candidate

#image_title

ತುಮಕೂರು: ಕುಟುಂಬದ ಬಗ್ಗೆ ಯೋಚನೆ ಮಾಡದೇ ಯಾವ ರೀತಿ ಯೋಧ ಗಡಿ ಕಾಯುತ್ತಾನೋ ಅದೇ ರೀತಿ ನಮ್ಮ ಕಾರ್ಯಕರ್ತರು ಕೂಡ ಬಿಜೆಪಿಯನ್ನು ಅಧಿಕಾರಕ್ಕೆ (Karnataka Election 2023) ತರುವ ಸಲುವಾಗಿ ಒಗ್ಗಟ್ಟಾಗಿ ಶ್ರಮಿಸಬೇಕು. ಗುಬ್ಬಿ ಕ್ಷೇತ್ರದಲ್ಲಿ ಕೂಡ ಬಿಜೆಪಿ ಗೆಲ್ಲಬೇಕು, ಯಾರು ಅಭ್ಯರ್ಥಿಗಳು ಎಂದು ಯೋಚನೆ ಮಾಡುವುದು ಬೇಡ, ಕಾರ್ಯಕರ್ತರೆಲ್ಲರೂ ಒಂದಾಗಿ ಕೆಲಸ ಮಾಡಬೇಕು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಕರೆ ನೀಡಿದರು.

ಗುಬ್ಬಿಯಲ್ಲಿ ಮಂಗಳವಾರ ಆಯೋಜಿಸಿದ್ದ ಬಿಜೆಪಿ ಒಬಿಸಿ ಮೋರ್ಚಾ ಸಮಾವೇಶದಲ್ಲಿ ಮಾತನಾಡಿದ ಅವರು, ಕೇವಲ ನಗರಗಳಿಗೆ ಸೀಮಿತವಾಗಿದ್ದ ಬಿಜೆಪಿ ಪಕ್ಷವನ್ನು ಗ್ರಾಮೀಣ ಭಾಗಕ್ಕೂ ಮುಟ್ಟಿಸಿದ ಕೀರ್ತಿ ಯಡಿಯೂರಪ್ಪ ಅವರದ್ದಾಗಿದೆ. ಇವತ್ತು ಯಡಿಯೂರಪ್ಪ ಮುಖ್ಯಮಂತ್ರಿ ಅಲ್ಲ, ಪಕ್ಷದ ಅಧ್ಯಕ್ಷರೂ ಅಲ್ಲ. ಆದರೆ, ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಾಗ ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಹೋರಾಟ ಮಾಡುವುದಾಗಿ ಘೋಷಿಸಿದರು. ಈಗ ಮತ್ತೊಮ್ಮೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ವಾತಾವರಣ ಇದೆ. ಹೀಗಾಗಿ ಯಾರೂ ಮೈಮರೆಯದೇ ಪಕ್ಷವನ್ನು ಅಧಿಕಾರಕ್ಕೆ ತರುವವರೆಗೆ ಹೋರಾಟ ನಿಲ್ಲಿಸಬಾರದು ಎಂದು ಕರೆ ನೀಡಿದರು.

ರಾಜ್ಯದಲ್ಲಿ ಈ ಹಿಂದೆ ಯಾವತ್ತೂ ಬಿಜೆಪಿ ಗೆದ್ದಿರದ ಮತ್ತು ಮುಂದಿನ ಬಾರಿ ಗೆಲ್ಲಬಹುದಾದ ಕ್ಷೇತ್ರಗಳನ್ನು ಪಟ್ಟಿ ಮಾಡಿದ್ದೆವು. ಗೆಲ್ಲಬಹುದಾದ ಕ್ಷೇತ್ರಗಳ ಪಟ್ಟಿಯಲ್ಲಿ ಗುಬ್ಬಿ ಕ್ಷೇತ್ರದ ಹೆಸರನ್ನು ಮೊದಲು ಬರೆದಿದ್ದೇವೆ. ಗುಬ್ಬಿ ಮತದಾರರು ಕೂಡ ಮೊದಲ ಬಾರಿ ಬಿಜೆಪಿ ಬಾವುಟವನ್ನು ಹಾರಿಸಲು ಸಜ್ಜಾಗಿದ್ದಾರೆ. ಆದರೆ, ವೇದಿಕೆ ಮೇಲೆ ಕುಳಿತಿರುವ ನಮ್ಮ ಮುಖಂಡರು, ನೀವು ಮೊದಲು ಒಂದಾಗಬೇಕು. ಜೈಕಾರ ಹಾಕಿಸಿಕೊಳ್ಳುವುದಕ್ಕೂ ಮುನ್ನಾ ಬಿಜೆಪಿಗೆ ಜಯವಾಗಲಿ ಎಂಬ ಜೈಕಾರ ಹಾಕಬೇಕು. ಆಗ ಖಂಡಿತವಾಗಿಯೂ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದರು.

ಇದನ್ನೂ ಓದಿ | Veerashaiva Lingayath: ಕಾಂಗ್ರೆಸ್‌ನಲ್ಲಿ 50-55 ವೀರಶೈವ ಲಿಂಗಾಯತರಿಗೆ ಟಿಕೆಟ್‌: ಶ್ಯಾಮನೂರು ಶಿವಶಂಕರಪ್ಪ

ಕಾಂಗ್ರೆಸ್‌ನವರು ಬಿಜೆಪಿಯನ್ನು ಹಿಟ್ಲರ್ ಪಕ್ಷ ಎಂದು ಟೀಕೆ ಮಾಡುತ್ತಾರೆ. ಆದರೆ, ಅವರು 70 ವರ್ಷ ಆಡಳಿತ ನಡೆಸಿದರೂ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿದ್ದ ಹಿಂಸಾಚಾರವನ್ನು ತಡೆಯಲು ಆಗಲಿಲ್ಲ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿಯನ್ನು ಕಿತ್ತೊಗೆಯುವ ಮೂಲಕ ತಕ್ಕ ಪಾಠ ಕಲಿಸಿದ್ದಾರೆ. ನಿಮಗೆ ಯಾಕೆ ಈ ಕೆಲಸ ಮಾಡಲು ಸಾಧ್ಯವಾಗಲಿಲ್ಲ ಎಂದು ಕಿಡಿಕಾರಿದರು.

ಮೋದಿ ಸರ್ಕಾರ ಅಧಿಕಾರಕ್ಕೆ ಬಂದು ಎಂಟೂವರೇ ವರ್ಷ ಕಳೆದಿದೆ. ಒಂದೇ ಒಂದು ರಜೆ ತೆಗೆದುಕೊಳ್ಳದೇ ಮೋದಿ ಅವರು ಕೆಲಸ ಮಾಡುತ್ತಿದ್ದಾರೆ. ವಿಶ್ವದ ಅಗ್ರಗಣ್ಯ ದೇಶಗಳನ್ನು ಬದಿಗೊತ್ತಿ ನಮ್ಮ ದೇಶ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ರಾಹುಲ್ ಗಾಂಧಿಯವರು ಜಮ್ಮುವಿನಲ್ಲಿರುವ ಲಾಲ್ ಚೌಕ್‌ನಲ್ಲಿ ಭಾರತದ ಧ್ವಜ ಹಾರಿಸಿದರು. ಅದು ಸಾಧ್ಯವಾಗಿದ್ದು ಪ್ರಧಾನಿ ಮೋದಿಯವರು ತೆಗೆದುಕೊಂಡ ಕ್ರಮಗಳಿಂದ ಎಂದು ವಾಗ್ದಾಳಿ ನಡೆಸಿದರು.

ಕರ್ನಾಟಕದಲ್ಲಿ ಕಾಂಗ್ರೆಸ್ ಸ್ವಲ್ಪ ಉಸಿರಾಡುತ್ತಿದೆ. ಆದರೆ, ಆರುವ ದೀಪ ಜೋರಾಗಿ ಉರಿಯುತ್ತದೆ ಎನ್ನುವ ಸ್ಥಿತಿಯಲ್ಲಿ ಕಾಂಗ್ರೆಸ್ ಇದ್ದು, ಜೆಡಿಎಸ್‌ನವವರು ರಾಜ್ಯದಲ್ಲಿ ಹೇಗಾದರೂ ಅತಂತ್ರ ಸ್ಥಿತಿ ಎದುರಾಗಲಿ ಎಂದು ಕಾಯುತ್ತಿದ್ದಾರೆ. ಹೀಗಾಗಿ ಫ್ಲೆಕ್ಸ್‌ಗಳಲ್ಲಿ ಕುಮಾರಸ್ವಾಮಿ ಅವರು ಕೈ ಕಟ್ಟಿ ಗಂಭೀರವಾಗಿ ನೋಡುತ್ತಿದ್ದಾರೆ, ಅದು ರಾಜ್ಯದ ಅಭಿವೃದ್ಧಿಗಾಗಿ ಅಲ್ಲ ಎಂದು ವ್ಯಂಗ್ಯವಾಡಿದ ಅವರು, ಕಾಂಗ್ರೆಸ್‌ನವರಿಗೆ ಜಾಸ್ತಿ ಸೀಟ್ ಬರುತ್ತೋ, ಬಿಜೆಪಿಗೆ ಜಾಸ್ತಿ ಸೀಟ್ ಬರುತ್ತೋ, ನಾವು ಯಾರ ಜತೆ ಹೋಗಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಯೋಚನೆ ಮಾಡುತ್ತಿದ್ದಾರೆ ಎಂದು ಹೇಳಿದರು.

ಸಂಸದ ಜಿ.ಎಸ್.ಬಸವರಾಜ್‌ ಮಾತನಾಡಿ, ನಾನು 40 ವರ್ಷದಿಂದ ಸಂಸತ್‌ಗೆ ಆಯ್ಕೆಯಾಗಿದ್ದೇನೆ. ಈ ರಾಹುಲ್ ಗಾಂಧಿ ಪಾರ್ಲಿಮೆಂಟ್ ನಡೆಯಲು ಬಿಡಲ್ಲ. ಆತನ ಹಗರಣಗಳು ಎಷ್ಟಿವೆ ಎಂದು ನಿಮಗೆ ಗೊತ್ತಿಲ್ಲ, ಆತ ಎಂದೂ ಅರ್ಧ ಗಂಟೆ ಪಾರ್ಲಿಮೆಂಟ್‌ನಲ್ಲಿ ಕುಳಿತಿಲ್ಲ. ಪಾರ್ಲಿಮೆಂಟ್‌ನಲ್ಲಿ ಹೇಗೆ ನಡೆದುಕೊಳ್ಳಬೇಕೆಂದು ಅವನಿಗೆ ಗೊತ್ತಿಲ್ಲ. ಮನಮೋಹನ್ ಸಿಂಗ್ ತಂದ ಬಿಲ್ ಅನ್ನು ಹರಿದು ಹಾಕಿದ ರಾಹುಲ್‌ ಗಾಂಧಿ ಮಾನ, ಮಾರ್ಯಾದೆ ಇಲ್ಲದ ವ್ಯಕ್ತಿಯಾಗಿದ್ದು, ಅಂತಹವರಿಗೆ ಏನಾದರೂ ಈ ದೇಶದ ಪಟ್ಟ ಕೊಟ್ಟರೆ ಅಧೋಗತಿಯೇ ಎಂದು ಏಕಚವನದಲ್ಲಿಯೇ ಟೀಕಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಕೈಯಲ್ಲಿ ದೇಶ ಇರುವುದರಿಂದ ಸುಭದ್ರವಾಗಿದೆ. ಪ್ರಧಾನಿ ಏನೂ ತಪ್ಪು ಮಾಡದೆಯೇ ವಿರೋಧ ಪಕ್ಷದವರು ಸುಮ್ಮನೆ ವಾಗ್ದಾಳಿ ಮಾಡುತ್ತಾರೆ. ಇವರಿಗೆ ಜನತೆ ಬುದ್ಧಿ ಕಲಿಸುತ್ತಾರೆ ಎಂದ ಅವರು, ಕರ್ನಾಟಕದಲ್ಲಿ ಸಿದ್ದರಾಮಯ್ಯ, ಡಿಕೆಶಿ ಒಂದು ಸುಳ್ಳನ್ನು ನೂರು ಬಾರಿ ಹೇಳಿ ಸತ್ಯ ಮಾಡಲು ಹೊರಟಿದ್ದಾರೆ. ಬೆಳಗ್ಗೆ ಎದ್ದರೆ ಮೋದಿಯನ್ನು ಬಯ್ಯುವುದೇ ಇವರ ಕೆಲಸ, ನೀವು 70 ವರ್ಷದಲ್ಲಿ ಮಾಡದೆ ಇದ್ದದ್ದನ್ನು ಪ್ರಧಾನಿ ಕೇವಲ 8 ವರ್ಷದಲ್ಲಿ ಮಾಡಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ | Bengaluru Developement: ಬೆಂಗಳೂರಿಗೆ ಪ್ರತ್ಯೇಕ ಆರೋಗ್ಯ ವ್ಯವಸ್ಥೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ

ಬಳಿಕ ಗುಬ್ಬಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾದ ಬೆಟ್ಟಸ್ವಾಮಿ, ದಿಲೀಪ್ ಕುಮಾರ್, ಚಂದ್ರಶೇಖರ್ ಬಾಬು ಶಕ್ತಿ ಪ್ರದರ್ಶನ ಮಾಡಿದರು. ಸಂಸದರಾದ ಪಿ.ಸಿ.ಮೋಹನ್, ವಿಧಾನ ಪರಿಷತ್ ಸದಸ್ಯ ನೆ.ಲ. ನರೇಂದ್ರ ಬಾಬು, ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿಶಂಕರ್, ಮಾಜಿ ಸಚಿವ ಸೊಗಡು ಶಿವಣ್ಣ, ಮಾಜಿ ಶಾಸಕ ಎಂ.ಡಿ. ಲಕ್ಷ್ಮೀನಾರಾಯಣ್, ಮರಿಸ್ವಾಮಿ, ಜಿಲ್ಲೆಯ ಪ್ರಮುಖ ನಾಯಕರು ಹಾಗೂ ಸಾವಿರಾರು ಕಾರ್ಯಕರ್ತರು ಭಾಗಿಯಾಗಿದ್ದರು.

Exit mobile version