ಬೆಂಗಳೂರು: ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನಲ್ಲಿರುವ ಸುಪ್ರಸಿದ್ಧ ಕುರುಡುಮಲೆ ಗಣೇಶ ದೇವಸ್ಥಾನಕ್ಕೆ (Kurudumale Ganesha Temple) ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ದಂಪತಿ ಸಮೇತ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಅಲ್ಲದೆ, ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಸಲ್ಲಿಸಿದರು. ಯಾವುದೇ ಕಾರ್ಯ ಆರಂಭ ಮಾಡುವ ಮುನ್ನ ಕುರುಡುಮಲೆ ವಿನಾಯಕನಿಗೆ ಪೂಜೆ ಸಲ್ಲಿಸುವ ವಾಡಿಕೆಯನ್ನು ಹಲವರು ಇಟ್ಟುಕೊಂಡಿದ್ದಾರೆ. ರಾಜ್ಯ ಹಾಗೂ ರಾಷ್ಟ್ರ ಮಟ್ಟದ ರಾಜಕಾರಿಣಿಗಳು ನಂಬಿಕೆ ಹೊಂದಿರುವ ದೇವಸ್ಥಾನ ಇದಾಗಿದ್ದು, ತಂದೆ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (Former CM BS Yediyurappa) ಅವರ ಸೂಚನೆ ಮೇರೆಗೆ ವಿಜಯೇಂದ್ರ ಭೇಟಿ ನೀಡಿದ್ದಾರೆ.
ಬಿ.ವೈ. ವಿಜಯೇಂದ್ರ ಅವರು ಕೋಲಾರಕ್ಕೆ ಆಗಮಿಸುತ್ತಿದ್ದಂತೆ ಅವರಿಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಪಕ್ಷದ ಕಾರ್ಯಕರ್ತರು ಮುಖಂಡರು ಸೇರಿ ಹೂವಿನ ಮಳೆಯನ್ನೇ ಸುರಿಸಿದ್ದಾರೆ. ಬೃಹತ್ ಹಾರಗಳನ್ನು ಹಾಕಲಾಗಿದೆ. ರಸ್ತೆಯುದ್ದಕ್ಕೂ ಅವರ ಕಾರಿನ ಮೇಲೆ ಹೂವನ್ನು ಎರಚಲಾಗಿದೆ. ಅಲ್ಲದೆ, ವಿಜಯೇಂದ್ರ ಅವರನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಸೇರಿದ್ದಾರೆ. ಜತೆಗೆ ಹಲವರು ಸೆಲ್ಫಿಯನ್ನೂ ಪಡೆದುಕೊಂಡಿದ್ದಾರೆ. ಪತ್ನಿ ಪ್ರೇಮಾ ವಿಜಯೇಂದ್ರ, ಸಂಸದ ಮುನಿಸ್ವಾಮಿ, ಪಿ.ಸಿ ಮೋಹನ್, ಮಾಜಿ ಶಾಸಕರು ಸೇರಿದಂತೆ ಸ್ಥಳೀಯ ಮುಖಂಡರು ಜತೆಗಿದ್ದರು.
ಮೋದಿ ಪ್ರಧಾನಿಯಾಗಲಿ ಎಂದು ಪ್ರಾರ್ಥಿಸಿದ್ದೇನೆ: ಬಿ.ವೈ. ವಿಜಯೇಂದ್ರ
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜಯ ಗಳಿಸಬೇಕು. ರಾಜ್ಯದಲ್ಲೂ ಬಿಜೆಪಿ ಹೆಚ್ಚಿನ ಕ್ಷೇತ್ರಗಳನ್ನು ಗೆಲ್ಲಬೇಕು. ಮೂರನೇ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿಯಾಗಬೇಕು ಎಂದು ಪ್ರಾರ್ಥನೆ ಮಾಡಿದ್ದೇನೆ. ಪಕ್ಷದಲ್ಲಿ ಹಿರಿಯರಿದ್ದರೂ ನನಗೆ ಜವಾಬ್ದಾರಿ ಕೊಟ್ಟಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟನೆ ಮಾಡುತ್ತೇನೆ. ವಿಜಯೇಂದ್ರ ಅವರನ್ನು ಆಯ್ಕೆ ಮಾಡಿರುವುದು ನಮ್ಮ ರಾಷ್ಟ್ರೀಯ ನಾಯಕರ ತೀರ್ಮಾನವಾಗಿದೆ. ಶುಕ್ರವಾರ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ಆ ಸಭೆಯಲ್ಲಿ ಎಲ್ಲ ಶಾಸಕರು ಭಾಗವಹಿಸುತ್ತಾರೆ. ಶಾಸಕಾಂಗ ಪಕ್ಷದ ಸಭೆಗೆ ನಮ್ಮ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾ ಬರಲಿದ್ದಾರೆ ಎಂದು ಬಿ.ವೈ. ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.
ಬಿಜೆಪಿ – ಜೆಡಿಎಸ್ ದೋಸ್ತಿ ಬಗ್ಗೆ ವಿಜಯೇಂದ್ರ ಮಾತು
ನನ್ನ ಮೇಲೆ ಬಹಳ ನಿರೀಕ್ಷೆ ಇದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯಬೇಕು. ಕಾರ್ಯಕರ್ತರು ವಿಜಯೇಂದ್ರನನ್ನು ಮೆಚ್ಚಬೇಕು. ಆ ರೀತಿ ಕೆಲಸ ಮಾಡಿ ತೋರಿಸುತ್ತೇನೆ. ಕಾರ್ಯಕರ್ತರೇ ಶಕ್ತಿ ಎಲ್ಲರನ್ನೂ ಸಮಾನವಾಗಿ ತೆಗೆದುಕೊಂಡು ಹೋಗುತ್ತೇನೆ. ನಾನು ಅಧ್ಯಕ್ಷಗಿರಿಯನ್ನು ನಿರೀಕ್ಷೆ ಮಾಡಿರಲಿಲ್ಲ. ಬಹಳಷ್ಟು ಜನ ಆಕಾಂಕ್ಷಿಗಳಾಗಿದ್ದರು. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾ ಅವರು ನನ್ನ ಹೆಸರನ್ನು ಅಂತಿಮ ಮಾಡಿದ್ದಾರೆ. ನನಗೆ ನಿಜಕ್ಕೂ ಅಚ್ಚರಿಯಾಯಿತು ಎಂದು ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.
ಬಿಜೆಪಿಯಲ್ಲಿ ಅಸಮಾಧಾನದ ಬಗ್ಗೆ ವಿಜಯೇಂದ್ರ ಮಾತು
ತಂದೆಯವರ ಕಣ್ಣಲ್ಲಿ ಆನಂದಭಾಷ್ಪ ಬಂತು. ವರಿಷ್ಠರ ನಿರೀಕ್ಷೆಯನ್ನು ಹುಸಿ ಮಾಡಬಾರದು ಎಂದು ಹೇಳಿದ್ದಾರೆ. ಅವರ ವಿಶ್ವಾಸಕ್ಕೆ ಧಕ್ಕೆ ಆಗದಂತೆ ನಡೆದುಕೊಳ್ಳಬೇಕು ಎಂದಿದ್ದಾರೆ. ಧೈರ್ಯದಿಂದ ಮುನ್ನುಗ್ಗಿ ಕೆಲಸ ಮಾಡು ಎಂದು ತಂದೆಯವರು ಆಶೀರ್ವಾದ ಮಾಡಿದ್ದಾರೆ ಎಂದು ಬಿ.ವೈ. ವಿಜಯೇಂದ್ರ ತಿಳಿಸಿದರು. ಪೂಜೆಯ ನಂತರ ವಿಜಯೇಂದ್ರ ದೇವಾಲಯದ ಆವರಣದಲ್ಲಿ ಮುಳಬಾಗಿಲು ದೋಸೆಯನ್ನು ಸವಿದಿದ್ದಾರೆ.
ಕುರುಮಲೆ ಗಣಶನಿಗೆ ವಿಶೇಷ ಪೂಜೆ ಸಲ್ಲಿಸಿದ ವಿಜಯೇಂದ್ರ ದಂಪತಿ
ಕಾರ್ಯಕರ್ತನ ಮನೆಗೆ ಭೇಟಿ
ಇದೇ ವೇಲೆ ಬಿ.ವೈ. ವಿಜಯೇಂದ್ರ ಅವರು, ಬೂತ್ ಮಟ್ಟದ ಕಾರ್ಯಕರ್ತ ಮೂರ್ತಿ ಎಂಬುವವರ ಮನೆಗೆ ಭೇಟಿ ನೀಡಿದ್ದಾರೆ. ಆ ವೇಳೆ ಸಣ್ಣ ಪ್ರಮಾಣದ ಮಳೆಯಾಗಿದೆ. ಇದು ಶುಭ ಸೂಚನೆ ಎಂದು ಕಾರ್ಯಕರ್ತರು ಅಭಿಪ್ರಾಯಪಟ್ಟಿದ್ದಾರೆ. ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಮತ್ತಷ್ಟು ಬಲಿಷ್ಠಗೊಳ್ಳಲಿದೆ ಎಂದು ಹೇಳಿದ್ದಾರೆ.