Site icon Vistara News

BY Vijayendra : ಮೋದಿಗಾಗಿ 28ಕ್ಕೆ 28 ಸೀಟು ಗೆಲ್ಲಿಸುವುದೇ ನನ್ನ ಗುರಿ; ವಿಜಯೇಂದ್ರ ಘೋಷಣೆ

BY Vijayendra state BJP Chief

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರಾಗಿ (BJP State President) ಅಧಿಕಾರ ಸ್ವೀಕರಿಸಿದ ಬಿ.ವೈ ವಿಜಯೇಂದ್ರ (BY Vijayendra) ಅವರು ತಮ್ಮ ಮೊದಲ ಭಾಷಣದಲ್ಲೇ ವಿಧಾನಸಭಾ ಚುನಾವಣೆಯ ಸೋಲಿನಿಂದ ಕಂಗೆಟ್ಟಿದ್ದ ಬಿಜೆಪಿ ಕಾರ್ಯಕರ್ತರಲ್ಲಿ ಭರವಸೆಯನ್ನು ತುಂಬಿದ್ದಾರೆ ಮತ್ತು ಕಾಂಗ್ರೆಸ್‌ ಪಾಲಿಗೆ ಎಚ್ಚರಿಕೆಯ ಕರೆಗಂಟೆ ಬಾರಿಸಿದ್ದಾರೆ. ಅದರ ಜತೆಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ (Parliament Elections 2024) ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗಾಗಿ ರಾಜ್ಯದ 28ರಲ್ಲಿ 28 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವಂತೆ ಮಾಡುವುದೇ ನನ್ನ ಗುರಿ ಎಂದು ಘೋಷಿಸಿದರು.

ರಾಜ್ಯ ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ಪದಗ್ರಹಣ ಮಾಡಿದ ಬೆನ್ನಿಗೇ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇನ್ನು ಮುಂದೆ ಬಿಜೆಪಿ ಕಾರ್ಯಕರ್ತರು ತಲೆ ಎತ್ತಿ, ಹೆಮ್ಮೆಯಿಂದ ತಿರುಗಾಡುವಂತೆ ಮಾಡುತ್ತೇನೆ. ಸುಳ್ಳು ಆಪಾದನೆಗಳ ಮೂಲಕ ಬಿಜೆಪಿ ಸರ್ಕಾರವನ್ನು ಉರುಳಿಸಿದ ಕಾಂಗ್ರೆಸ್‌ಗೆ ಪಾಠ ಕಲಿಸುವಂತೆ ಮಾಡುತ್ತೇನೆ ಎಂದು ಹೇಳಿದರು.

ದೀಪಾವಳಿ ಶುಭ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು, ರಾಷ್ಟ್ರೀಯ ಅಧ್ಯಕ್ಷರಾಗಿರುವ ಜೆ.ಪಿ. ನಡ್ಡಾ, ಕೇಂದ್ರ ಗೃಹ ಸಚಿವರಾದ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಗಳಾದ ಬಿ.ಎಲ್‌. ಸಂತೋಷ್ ಅವರ ಆಶಿರ್ವಾದದಿಂದ ಅಧ್ಯಕ್ಷರ ಜವಾಬ್ದಾರಿಯನ್ನು ನಾನು ಹೊತ್ತುಕೊಂಡಿದ್ದೇನೆ ಎಂದು ಮಾತು ಆರಂಭಿಸಿದ ಬಿವೈ ವಿಜಯೇಂದ್ರ ಅವರು ಬಿ.ಎಸ್‌. ಯಡಿಯೂರಪ್ಪ ಅವರು ಪಕ್ಷಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿದರು.

ತಮಗೆ ಅವಕಾಶ ಒದಗಿಸಿದ ಕೇಂದ್ರ ನಾಯಕತ್ವ, ಪಕ್ಷದ ಮುಖಂಡರು ಮತ್ತು ಸಂಘಟನೆಯ ನಾಯಕರಿಗೆ ಕೃತಜ್ಞತೆ ಸಲ್ಲಿಸಿದ ಅವರು, ನನ್ನ ಹೆಸರು ಘೋಷಣೆ ಮಾಡಿದ ಕ್ಷಣದಿಂದ ಎಲ್ಲ ಹಿರಿಯರನ್ನು ಮಾತನಾಡಿಸಿದ್ದೇನೆ. ಎಲ್ಲ ಹಿರಿಯರು ನೀನು ಮುನ್ನುಗ್ಗು ಎಂದು ಧೈರ್ಯ ತುಂಬಿದ್ದಾರೆ ಎಂದು ಹೇಳಿದರು.

ಎಲ್ಲ 28 ಕ್ಷೇತ್ರಗಳನ್ನು ಗೆಲ್ಲುವುದೇ ನನ್ನ ಗುರಿ

ಕಳೆದ ಲೋಕಸಭಾ ಚುನಾವಣೆಯ ವೇಳೆ ಬಿ.ಎಸ್‌. ಯಡಿಯೂರಪ್ಪ ಅವರು 20ಕ್ಕೂ ಅಧಿಕ ಸ್ಥಾನ ಗೆಲ್ತೀವಿ ಅಂದಾಗ ಹಲವರು ಹಾಸ್ಯ ಮಾಡಿದ್ದರು. ಆದರೆ, ಅಂದು 25 ಸ್ಥಾನ ಗೆದ್ದೆವು. ಈ ಬಾರಿಯ ಚುನಾವಣೆಯಲ್ಲಿ 28ಕ್ಕೆ 28 ಸ್ಥಾನಗಳನ್ನು ಗೆಲ್ಲುವುದು ನಮ್ಮ ಗುರಿ. ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿ ಆಗಬೇಕು. ಅದಕ್ಕಾಗಿ ನಾವು ರಾಜ್ಯದಿಂದ ಕೊಡುಗೆಯನ್ನು ಕೊಡಬೇಕು. ದಕ್ಷಿಣ ಭಾರತದಲ್ಲಿ ಬಿಜೆಪಿಯ ಹೆಬ್ಬಾಗಿಲು ಎಂಬ ಕೀರ್ತಿಯನ್ನು ಉಳಿಸಿಕೊಳ್ಳಬೇಕು. ಅದನ್ನು ಸಾಧಿಸಿಯೇ ಸಿದ್ಧ ಎಂದು ಘೋಷಿಸಿದರು ವಿಜಯೇಂದ್ರ.

ನಡ್ಡಾಜೀ ಅವರು ನನ್ನ ಹೆಸರು ಪ್ರಕಟಿಸಿದ ಬಳಿಕ ಎಲ್ಲ ಹಿರಿಯ ನಾಯಕರ ಜೊತೆ ಮಾತನಾಡಿದ್ದೇನೆ. ಪಕ್ಷದ ಎಲ್ಲ ಹಿರಿಯರು ನನಗೆ ಬೆನ್ನು ತಟ್ಟಿದ್ದಾರೆ. 28ರಲ್ಲಿ 28 ಕ್ಷೇತ್ರ ಗೆಲ್ಲುವ ಮೂಲಕ ದೇಶದ ಭವಿಷ್ಯ ನಿರ್ಮಿಸುವ ನಿಸ್ವಾರ್ಥ ಕೆಲಸಗಾರ, ದೇಶ ಮೊದಲೆಂಬ ವಿಚಾರ ಮನದಲ್ಲಿ ಇಟ್ಟುಕೊಂಡು ಕೈಂಕರ್ಯನಿರತ ಪ್ರಧಾನಿಯವರ ಕೈಯನ್ನು ಬಲಪಡಿಸಲಿದ್ದೇವೆ ಎಂದು ತಿಳಿಸಿದರು.

ಕಾರ್ಯಕರ್ತರು ತಲೆ ತಗ್ಗಿಸುವ ಕೆಲಸ ಮಾಡಲ್ಲ, ಬೆಂಬಲವಾಗಿ ನಿಲ್ಲುತ್ತೇನೆ

ರಾಜ್ಯದಲ್ಲಿ ಸಾಕಷ್ಟು ಹಿರಿಯರು ಪಕ್ಷದಲ್ಲಿದ್ದಾರೆ. ಅವರನ್ನು ಬಿಟ್ಟು ನನಗೆ ಅವಕಾಶ ಕೊಟ್ಟಿದ್ದಾರೆ ಎಂದರೆ ಆ ಸ್ಥಾನದ ಮಹತ್ವ ನನಗೆ ಖಂಡಿತವಾಗಿಯೂ ಗೊತ್ತಿದೆ. . ಪಕ್ಷದ ಹಿರಿಯರ ಮಾರ್ಗದರ್ಶನ ಪಡೆದು ಪಕ್ಷವನ್ನು ಸಂಘಟನೆ ಮಾಡುತ್ತೇನೆ. ಈ ವೇದಿಕೆಯ ಮೂಲಕ ಒಂದು ಭರವಸೆಯನ್ನು ಕೊಡುತ್ತೇನೆ. ಹಿರಿಯ ನಾಯಕರು ಮತ್ತು ಕಾರ್ಯಕರ್ತರು ತಲೆ ತಗ್ಗಿಸುವ ರೀತಿ ನಡೆದುಕೊಳ್ಳುವುದಿಲ್ಲ. ಅವರಿಗೆ ಎಲ್ಲ ಪರಿಸ್ಥಿತಿಗಳಲ್ಲೂ ಬೆಂಬಲವಾಗಿ ನಿಲ್ಲುತ್ತೇನೆ. ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಆಪರೇಷನ್‌ ಕಮಲ ಮಾಡಲ್ಲ ಎಂದ ವಿಜಯೇಂದ್ರ

ರಾಜ್ಯದಲ್ಲಿ ಹೊಸ ಸರಕಾರ ಬಂದಿದೆ. ಶೇ 40 ಸರಕಾರ ಎಂದು ಟೀಕಿಸಿದ್ದರು. ಮತದಾರರೂ ಅದನ್ನು ನಂಬಿದರು. ಹೊಸ ಕಾಂಗ್ರೆಸ್ ಸರಕಾರ ಬಂದು 6 ತಿಂಗಳಾಗಿದೆ. ಹಗಲುದರೋಡೆ, ಭ್ರಷ್ಟಾಚಾರ ಮೇರೆ ಮೀರಿದೆ. ಶೇ 40 ಕಮಿಷನ್, ಭ್ರಷ್ಟಾಚಾರದ ಅನುಷ್ಠಾನ ಕಾಂಗ್ರೆಸ್ ಸರಕಾರದಿಂದ ಆಗುತ್ತಿದೆ ಎಂದು ವಿಜಯೇಂದ್ರ ಗೇಲಿ ಮಾಡಿದರು.

ನಾವೇನೂ ಆಪರೇಷನ್ ಕಮಲ ಮಾಡುವುದಿಲ್ಲ. ಆಡಳಿತ ಪಕ್ಷದ ಶಾಸಕರೇ ರಸ್ತೆಯಲ್ಲಿ ಓಡಾಡದಂತಾಗಿದೆ. ಒಂದು ರೂಪಾಯಿ ಅನುದಾನ ಸಿಗುತ್ತಿಲ್ಲ. ಈ ದುಷ್ಟ ಸರಕಾರಕ್ಕೆ ಆ ಪಕ್ಷದ ಶಾಸಕರೇ ಪಾಠ ಕಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬರಗಾಲದ ಪರಿಸ್ಥಿತಿಯಲ್ಲೂ ಉಸ್ತುವಾರಿ ಸಚಿವರು ಪ್ರವಾಸ ಮಾಡುತ್ತಿಲ್ಲ. ರೈತರ ಸಮಸ್ಯೆಗೆ ಸ್ಪಂದಿಸುವುದನ್ನು ಮರೆತು, ಅಧಿಕಾರದ ದರ್ಪ, ಉದ್ಧಟತನದಿಂದ ವರ್ತಿಸುತ್ತಿದ್ದಾರೆ. ಭ್ರಷ್ಟ ಕಾಂಗ್ರೆಸ್ ಸರಕಾರಕ್ಕೆ ತಕ್ಕ ಉತ್ತರವನ್ನು ಲೋಕಸಭಾ ಚುನಾವಣೆಯಲ್ಲಿ ನೀಡೋಣ ಎಂದು ಬಿಜೆಪಿಯ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.

ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಯೂ ಗೆಲ್ಲೋಣ

ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಯನ್ನೂ ಮರೆಯದಿರೋಣ ಎಂದು ಕಿವಿಮಾತು ಹೇಳಿದ ಅವರು, ಅವನ್ನೂ ಗಂಭೀರವಾಗಿ ಪರಿಗಣಿಸಬೇಕು ಎಂದು ಸಲಹೆ ನೀಡಿದರು. ಚುನಾವಣೆ ಗೆದ್ದ ಬಳಿಕ ನಾನು ಯಾವುದೇ ಸಮುದಾಯಕ್ಕೆ ಸೇರಿದವನಲ್ಲ. 28ಕ್ಕೆ 28 ಕ್ಷೇತ್ರ ಗೆಲ್ಲುವ ಜೊತೆಜೊತೆಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕೂಡ ರಾಜ್ಯವನ್ನು ಬಿಜೆಪಿ ಭದ್ರಕೋಟೆಯಾಗಿ ಮಾಡಲು ಶ್ರಮಿಸುತ್ತೇನೆ ಎಂದು ವಿಜಯೇಂದ್ರ ಹೇಳಿದರು.

ಇದನ್ನೂ ಓದಿ: BY Vijayendra : ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗಿ ಬಿವೈ ವಿಜಯೇಂದ್ರ ಅಧಿಕಾರ ಸ್ವೀಕಾರ, ಎಲ್ಲೆಡೆ ಜಯಘೋಷ

ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ನಿರ್ಗಮಿತ ಅಧ್ಯಕ್ಷ ಮತ್ತು ಸಂಸದ ನಳಿನ್‍ಕುಮಾರ್ ಕಟೀಲ್, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಜಿ.ವಿ, ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಡಿ.ವಿ.ಸದಾನಂದಗೌಡ, ಮಾಜಿ ಡಿಸಿಎಂಗಳಾದ ಕೆ.ಎಸ್.ಈಶ್ವರಪ್ಪ, ಗೋವಿಂದ ಕಾರಜೋಳ, ಡಾ.ಅಶ್ವತ್ಥನಾರಾಯಣ್, ಹಿರಿಯ ನಾಯಕ ರಾಮಚಂದ್ರ ಗೌಡ, ಮಾಜಿ ಸಚಿವರು, ಮಾಜಿ ಹಾಲಿ ಶಾಸಕರು, ಜಿಲ್ಲಾಧ್ಯಕ್ಷರು, ಸಂಸದರು, ಪಕ್ಷದ ರಾಜ್ಯ-ಜಿಲ್ಲಾ ಪ್ರಮುಖರು, ಪದಾಧಿಕಾರಿಗಳು ಭಾಗವಹಿಸಿದ್ದರು. ಬಳಿಕ ಎಲ್ಲ ಪ್ರಮುಖರು ವಿಜಯೇಂದ್ರ ಅವರನ್ನು ಅಭಿನಂದಿಸಿದರು.

Exit mobile version