Site icon Vistara News

BY Vijayendra : ಅಮಿತ್‌ ಶಾ- ವಿಜಯೇಂದ್ರ ಭೇಟಿ ವೇಳೆ ವಿಪಕ್ಷ ನಾಯಕ, ರಾಜ್ಯಾಧ್ಯಕ್ಷ ಬದಲಾವಣೆ ಚರ್ಚೆ?

BY Vijayendra Meets Amit Shah

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್‌ ಶಾ (Home Minister Amit Shah) ಅವರ ಜತೆಗಿನ ಮಾತುಕತೆಯ ವೇಳೆ ರಾಜ್ಯ ವಿಧಾನಸಭೆಯ (Karnataka Assembly) ವಿಪಕ್ಷ ನಾಯಕ (Opposition Leader) ಇಲ್ಲವೇ ಬಿಜೆಪಿ ರಾಜ್ಯಾಧ್ಯಕ್ಷರ (BJP State president) ಬದಲಾವಣೆಯ ವಿಚಾರ ಚರ್ಚೆಯಾಗಿಲ್ಲ ಎಂದು ಶಿಕಾರಿಪುರ ಶಾಸಕ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಹೇಳಿದ್ದಾರೆ.

ಕಳೆದ ಎರಡು ದಿನಗಳಿಂದ ದಿಲ್ಲಿಯಲ್ಲಿದ್ದ ವಿಜಯೇಂದ್ರ ಅವರು ಗುರುವಾರ ಅಮಿತ್‌ ಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಈ ಭೇಟಿಯ ವೇಳೆ ರಾಜ್ಯದಲ್ಲಿ ಪಕ್ಷದ ಬಲವರ್ಧನೆ, ಕಾಂಗ್ರೆಸ್‌ನ ಜನವಿರೋಧಿ ನಿಲುವುಗಳನ್ನು ಬಯಲಿಗೆಳೆಯುವಲ್ಲಿ ಮಾರ್ಗದರ್ಶನ ಮಾಡಿದರು ಎಂದು ಟ್ವೀಟ್‌ ಮಾಡಿದ್ದರು.

ಗುರುವಾರವೇ ದಿಲ್ಲಿಯಿಂದ ಮರಳಿ ಬಂದಿರುವ ವಿಜಯೇಂದ್ರ ಅವರು ಶುಕ್ರವಾರ ಬೆಳಗ್ಗೆ ಬೆಂಗಳೂರಿನ ಡಾಲರ್ಸ್‌ ಕಾಲೊನಿಯ ನಿವಾಸದಲ್ಲಿ ಮಾಧ್ಯಮಗಳ ಜತೆ ಮಾತನಾಡಿದರು. ʻʻಮೊದಲ ಬಾರಿ ಶಾಸಕನಾಗಿ ಆಯ್ಕೆಯಾದ ಮೇಲೆ ರಾಷ್ಟ್ರೀಯ ಅಧ್ಯಕ್ಷ ಗೃಹಸಚಿವ ಅಮಿತ್ ಶಾ ಮತ್ತು ಜೆ.ಪಿ.ನಡ್ಡಾ ಅವರನ್ನ ಭೇಟಿ ಮಾಡಿ ಆಶೀರ್ವಾದ ಪಡೆದಿದ್ದೇನೆ. ಮುಂದಿನ ದಿಗಳಲ್ಲಿ ಪಕ್ಷದ ಉಪಾಧ್ಯಕ್ಷನಾಗಿ, ಶಾಸಕನಾಗಿ ಮುಂದಿನ ದಿನಗಳಲ್ಲಿ ನಮ್ಮನ್ನು ನಾವು ಯಾವ ರೀತಿ ತೊಡಗಿಸಿಕೊಳ್ಳಬೇಕು. ರಾಜ್ಯದಲ್ಲಿ ಯಾವ ರೀತಿ ಲೋಕಸಭಾ ಚುನಾವಣೆ ಎದುರಿಸಬೇಕು ಎಂಬ ನಿಟ್ಟಿನಲ್ಲಿ ಚರ್ಚೆ ಮಾಡಿದ್ದೇವೆ. ಇದರಲ್ಲಿ ಬಹಳ ಅರ್ಥ ಕಲ್ಪಿಸುವ ಅವಶ್ಯಕತೆ ಇಲ್ಲʼʼ ಎಂದು ಹೇಳಿದರು.

ಲೋಕಸಭೆ ಚುನಾವಣೆಯಲ್ಲಿ ಹೊಸಬರು ಹೇಗೆ ಕೆಲಸ ನಿರ್ವಹಿಸಬೇಕು ಅಂತ ಚರ್ಚಿಸಲಾಗಿದೆ. ಆದರೆ, ರಾಜ್ಯದ ರಾಜಕಾರಣದ ಯಾವ ವಿಷಯವೂ ಇಲ್ಲಿ ಚರ್ಚೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಆಯ್ಕೆ ವಿಚಾರವಾಗಲಿ, ರಾಜ್ಯ ಬಿಜೆಪಿಗೆ ಈಗ ಇರುವ ಅಧ್ಯಕ್ಷರನ್ನು ಬದಲಾಯಿಸಿ ಹೊಸಬರ ಆಯ್ಕೆ ಮಾಡುವ ವಿಚಾರವಾಗಲೀ ಯಾವುದರ ಬಗ್ಗೆಯೂ ನಮ್ಮ ನಡುವೆ ಚರ್ಚೆ ನಡೆದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಬಹುಕಾಲದ ಬಳಿಕ ಬಿ.ಎಸ್‌. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಕಾಲಿಗೆ ಬಿದ್ದು ಆಶೀರ್ವಾದ ಕೇಳಿದ್ದು, ಅದರ ಬೆನ್ನಿಗೇ ಅಮಿತ್‌ ಶಾ ಅವರು ವಿಜಯೇಂದ್ರ ಅವರನ್ನು ಕರೆಸಿಕೊಂಡು ಮಾತುಕತೆ ನಡೆಸಿದ್ದು ಒಂದಕ್ಕೊಂದು ಸಂಬಂಧವಿರುವಂತೆ ರಾಜಕೀಯ ಚರ್ಚೆ ನಡೆದಿತ್ತು.

ಸಿ.ಟಿ. ರವಿ ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿ ನೇಮಕ ಮಾಡುವ ಚಿಂತನೆ ಹೈಕಮಾಂಡ್‌ ಮಟ್ಟದಲ್ಲಿದೆ. ಸಿ.ಟಿ. ರವಿ ಮತ್ತು ಬಿಎಸ್‌ವೈ ಕುಟುಂಬದ ನಡುವೆ ಇತ್ತೀಚೆಗೆ ಸಂಬಂಧ ಹಳಸಿದೆ ಎಂಬ ಸುದ್ದಿಗಳಿರುವುದರಿಂದ ಅವರ ಆಶೀರ್ವಾದ ಪಡೆಯುವಂತೆ ಅಮಿತ್‌ ಶಾ ಸಿ.ಟಿ. ರವಿ ಅವರಿಗೆ ಸೂಚಿಸಿದ್ದರು ಮತ್ತು ವಿಜಯೇಂದ್ರ ಅವರನ್ನು ಕರೆದು ಸರಿದೂಗಿಸಿಕೊಂಡು ಹೋಗುವಂತೆ ಸಲಹೆ ನೀಡಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಒಂದು ಹಂತದಲ್ಲಿ ಬಿ.ವೈ. ವಿಜಯೇಂದ್ರ ಅವರನ್ನೇ ವಿರೋಧ ಪಕ್ಷದ ನಾಯಕರನ್ನಾಗಿ ಮಾಡಲೂಬಹುದು ಎಂಬ ಮಾತೂ ಇತ್ತು. ಆದರೆ, ಇದ್ಯಾವುದರ ಸುಳಿವನ್ನೂ ಬಿ.ವೈ ವಿಜಯೇಂದ್ರ ಬಿಟ್ಟುಕೊಟ್ಟಿಲ್ಲ. ಈ ಬಗ್ಗೆ ಚರ್ಚೆಯೇ ಆಗಿಲ್ಲ ಎಂದು ಒಂದು ಮಾತಿನಲ್ಲಿ ತಳ್ಳಿ ಹಾಕಿದ್ದಾರೆ.

ಸ್ವತಂತ್ರ ಸ್ಪರ್ಧೆ ಜೆಡಿಎಸ್‌ ತೀರ್ಮಾನಕ್ಕೆ ಬಿಟ್ಟದ್ದು

ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳು ಜತೆಯಾಗಿ ಹೊಂದಾಣಿಕೆಯಿಂದ ಸಾಗಲಿವೆ ಎಂಬ ಊಹಾಪೋಹಗಳ ನಡುವೆಯೇ ಪಕ್ಷ ಸ್ವತಂತ್ರವಾಗಿಯೇ ಸ್ಪರ್ಧೆ ಮಾಡಲಿದೆ ಎಂದು ಮಾಜಿ ಪ್ರಧಾನಿ, ಪಕ್ಷದ ವರಿಷ್ಠ ನಾಯಕ ಎಚ್‌.ಡಿ. ದೇವೇಗೌಡರು ಹೇಳಿರುವುದು ಕುತೂಹಲ ಮೂಡಿಸಿದೆ.

ಈ ವಿದ್ಯಮಾನದ ಬಗ್ಗೆ ಗಮನ ಸೆಳೆದಾಗ, ʻʻಜೆಡಿಎಸ್ ಒಂದು ಪ್ರಾದೇಶಿಕ ಪಕ್ಷ. ಅವರ ಮುಂದಿನ ರಾಜಕೀಯ ಹೆಜ್ಜೆ ಹೇಗಿರಬೇಕು..? ಯಾವ ದಿಕ್ಕಿನಲ್ಲಿ ಸಾಗಬೇಕು ಎನ್ನುವುದು ಅವರ ತೀರ್ಮಾನ. ಆದರ ಬಗ್ಗೆ ನಾನು ಹೆಚ್ಚು ಹೇಳಲ್ಲ ಎಂದು ವಿಜಯೇಂದ್ರ ಪ್ರತಿಕ್ರಿಯಿಸಿದರು.

ಇದನ್ನೂ ಓದಿ : HD Kumaraswamy : ಬಿಜೆಪಿ ಲೆಟರ್‌ಹೆಡ್‌ನಲ್ಲಿ ರಾಜ್ಯಪಾಲರಿಗೆ ದೂರು; ಮೊದಲ ಸಹಿಯೇ ಕುಮಾರಸ್ವಾಮಿ, ಸೇರೇಬಿಟ್ರಾ ಹಾಗಿದ್ರೆ?

Exit mobile version