Site icon Vistara News

Gururaj Gantihole : ಸಡನ್ನಾಗಿ ಉರುಳಿದ ಮರ; ಬೈಂದೂರು ಶಾಸಕ ಗುರುರಾಜ್‌ ಗಂಟಿಹೊಳೆ ಬಚಾವ್‌

Gururaj Gantihole

ಉಡುಪಿ: ಬರಿಗಾಲ ಕಾರ್ಯಕರ್ತ ಎಂದೇ ಹೆಸರಾದ ಬೈಂದೂರಿನ ಬಿಜೆಪಿ ಶಾಸಕ (Bynduru BJP MLA) ಗುರುರಾಜ ಗಂಟಿಹೊಳೆ (Gururaj Gantihole) ಅವರು ಅಪಾಯವೊಂದರಿಂದ ಬಚಾವ್‌ ಆಗಿದ್ದಾರೆ. ಮರವೊಂದನ್ನು ಒಮ್ಮಿಂದೊಮ್ಮೆಗೇ ಉರುಳಿಬಿದ್ದಿದ್ದು, ಅದು ಉರುಳುವ ಸದ್ದು ಕೇಳುತ್ತಲೇ ಅವರು ಹೋಗಿದ್ದರಿಂದ ಯಾವುದೇ ತೊಂದರೆ ಇಲ್ಲದೆ ಪಾರಾಗಿದ್ದಾರೆ.

ಈ ಘಟನೆ ನಡೆದಿರುವುದು ಕುಂದಾಪುರದ ಹಾಲಾಡಿ ರಸ್ತೆಯಲ್ಲಿ. ಕರಾವಳಿ ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು, ಅಲ್ಲಲ್ಲಿ ಗುಡ್ಡ ಜರಿಯುವುದು, ಮರ ಉರುಳುವ ಘಟನೆಗಳು ನಡೆಯುತ್ತಿವೆ. ಹಾಲಾಡಿ ರಸ್ತೆಯಲ್ಲಿ ಮಾರ್ಗದ ಬದಿಯ ಒಂದು ಮರ ಉರುಳಿ ಬಿದ್ದು ಸಂಚಾರಕ್ಕೆ ತೊಡಕು ಉಂಟಾಗಿತ್ತು. ಅದನ್ನು ತೆರವು ಮಾಡುವ ಕೆಲಸವನ್ನು ಸ್ಥಳೀಯರು ಮತ್ತು ಇತರರು ನಡೆಸುತ್ತಿದ್ದರು.

ಈ ವೇಳೆ ಶಾಸಕರಾಗಿರುವ ಗುರುರಾಜ್‌ ಶೆಟ್ಟಿ ಗಂಟಿಹೊಳೆ ಅವರು ಅದೇ ಮಾರ್ಗವಾಗಿ ಸಾಗುತ್ತಿದ್ದರು. ಬಿದ್ದಿರುವ ಮರ ಮತ್ತು ಅದನ್ನು ತೆರವು ಮಾಡುತ್ತಿರುವ ಕಾರ್ಯಾಚರಣೆಯನ್ನು ಗಮನಿಸಿದ ಶಾಸಕರು ತಾವು ಕೂಡಾ ನೆರವಿಗೆ ನಿಂತರು.

ಒಮ್ಮೆ ಸಾಮಾನ್ಯ ವ್ಯಕ್ತಿಯಂತೆ ಎಲ್ಲರೊಂದಿಗೆ ಸೇರಿ ಬಿದ್ದ ಮರವನ್ನು ತೆರವು ಮಾಡುವ ಕೆಲಸಕ್ಕೆ ಕೈಜೋಡಿಸಿದರು. ಎಲ್ಲರೂ ಇದೇ ಕೆಲಸದಲ್ಲಿ ಬ್ಯುಸಿ ಆಗಿದ್ದಾಗ ಅಲ್ಲಿ ಇನ್ನೊಂದು ಘಟನೆ ನಡೆಯಿತು. ಈ ಮರದ ಪಕ್ಕದಲ್ಲೇ ಇದ್ದ ಇನ್ನೊಂದು ಸಣ್ಣ ಮರವೂ ಒಮ್ಮೆಗೇ ಉರುಳಲು ಆರಂಭಿಸಿತು.

ಮರ ಉರುಳುವ ಸದ್ದನ್ನು ಗಮನಿಸಿದ ಶಾಸಕರು ಮತ್ತು ಸಂಗಡಿಗರು ಒಮ್ಮೆಗೇ ತಾವು ಇದ್ದಲ್ಲಿಂದ ದೂರ ಓಡಿದರು. ಅವರು ಅತ್ತ ಓಡುತ್ತಿದ್ದಂತೆಯೇ ಅವರು ನಿಂತಿದ್ದ ಜಾಗದಲ್ಲೇ ಮರ ಉರುಳಿಬಿತ್ತು. ಮರ ಉರುಳಿಬೀಳುವ ಸದ್ದು ಕೇಳಿಸಿಕೊಂಡು ದೂರ ಓಡಿದ್ದರಿಂದಾಗಿಯೇ ಶಾಸಕರು ಮತ್ತು ಸಂಗಡಿಗರು ಪಾರಾದರು.

ಕೆರೆಯಂತಾದ ರಸ್ತೆ; ಹೆಗಲ ಮೇಲೆ ಬೈಕ್‌ ಹೊತ್ತು ಸಾಗಿದ ಆಧುನಿಕ ಬಾಹುಬಲಿ

ರಾಯಚೂರು: ಮಳೆ ಬಂದರೂ ಕಷ್ಟ, ಬಾರದೆ ಇದ್ದರೂ ನಷ್ಟ ಎಂಬಂತೆ ಭಾಸವಾಗುತ್ತದೆ. ಗಂಟೆಯ ಮಳೆಗೆ ಕೆರೆಯಂತಾಗುವ ರಸ್ತೆಗಳಲ್ಲಿ ಏನಾದರೂ ವಾಹನ ಚಲಾಯಿಸಲು ಹೋದರೆ ಕೆಟ್ಟು ನಿಲ್ಲುವ ಆತಂಕ ಶುರುವಾಗುತ್ತದೆ. ಹೀಗಾಗಿ ಇಲ್ಲೊಬ್ಬ ಸವಾರ ಮೊಟಕಾಲಷ್ಟು ನಿಂತ ನೀರಲ್ಲಿ ಹೆಗಲ ಮೇಲೆ ಬೈಕ್ ಹೊತ್ತು ಸಾಗಿರುವ ವಿಡಿಯೋ ವೈರಲ್‌ (Video Viral) ಆಗಿದೆ.

ರಾಯಚೂರಿನ ಕರೇಕಲ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಳೆದೆರಡು ದಿನಗಳಿಂದ ಸುರಿದ ವ್ಯಾಪಕ ಮಳೆಗೆ ಕರೇಕಲ್‌ ಅಂಡರ್ ಪಾಸ್‌ನಲ್ಲಿ ನಾಲ್ಕೈದು ಅಡಿ ನೀರು ನಿಂತಿತ್ತು. ಡ್ರೈನೇಜ್‌ ಕಟ್ಟಿಕೊಂಡಿದ್ದರಿಂದ ಮಳೆ ನೀರು ಸರಾಗವಾಗಿ ಹರಿದು ಹೋಗದೆ ರಸ್ತೆ ತುಂಬೆಲ್ಲಾ ನಿಂತುಕೊಂಡಿತ್ತು. ಇದರಿಂದಾಗಿ ವಾಹನ ಸವಾರರು ಕಿರಿಕಿರಿ ಅನುಭವಿಸಬೇಕಾಯಿತು.

ನಿಂತ ನೀರಲ್ಲಿ ಬೈಕ್ ಸಾಗದ ಹಿನ್ನೆಲೆ ಸವಾರನೊಬ್ಬ ಹೆಗಲ ಮೇಲೆ ಎಚ್‌ಎಫ್‌ ಡಿಲಕ್ಸ್‌ ಬೈಕ್‌ಅನ್ನೇ ಹೊತ್ತು ಅಂಡರ್‌ಪಾಸ್‌ ದಾಟ್ಟಿದ್ದಾರೆ. ಬೈಕ್ ಹೊತ್ತು ಸಾಗುವ ವಿಡಿಯೊವನ್ನು ಸ್ಥಳೀಯರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿ ದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಇದು ವೈರಲ್‌ ಆಗುತ್ತಿದ್ದು, ಯಾರಪ್ಪ ಇದು ಆಧುನಿಕ ಬಾಹುಬಲಿ ಎಂದು ನೆಟ್ಟಿಗರು ಕಾಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ : Weather report : ಕರಾವಳಿಯಲ್ಲಿಂದು ಹೇಗಿರಲಿದೆ ಮುಂಗಾರು ಮಳೆ ದರ್ಬಾರ್‌

Exit mobile version