Site icon Vistara News

JDS National President: ದೇವೇಗೌಡರಿಗೆ ಗೇಟ್‌ ಪಾಸ್‌; ಜೆಡಿಎಸ್‌ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಸಿ.ಕೆ.ನಾಣು!

CK Nanu And HD Devegowda

ಬೆಂಗಳೂರು: ಬಿಜೆಪಿ ಜತೆ ಜೆಡಿಎಸ್‌ ಮೈತ್ರಿ ಘೋಷಿಸಿದ ಬಳಿಕ ದಳ ಇಬ್ಭಾಗವಾಗಿದೆ. ಸಿಎಂ ಇಬ್ರಾಹಿಂ ಸೇರಿ ಹಲವು ಅಲ್ಪಸಂಖ್ಯಾತ ಮುಖಂಡರು ದಳಪತಿಗಳ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು. ಆದರೆ, ಇದೀಗ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಎಚ್‌.ಡಿ. ದೇವೇಗೌಡರನ್ನು ನಿರಾಕರಿಸಿರುವ ಬಂಡಾಯ ನಾಯಕರು, ಪಕ್ಷದ ನೂತನ ರಾಷ್ಟ್ರೀಯ ಅಧ್ಯಕ್ಷರನ್ನಾಗಿ (JDS National President) ಸಿ.ಕೆ.ನಾಣು ಅವರನ್ನು ನೇಮಕ ಮಾಡಿದ್ದಾರೆ.

ನಗರದ ಖಾಸಗಿ ಹೋಟೆಲ್‌ನಲ್ಲಿ ಜೆಡಿಎಸ್ ಉಚ್ಚಾಟಿತ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ನೇತೃತ್ವದಲ್ಲಿ ಸೋಮವಾರ ನಡೆದ ಸರ್ವಸದಸ್ಯರ ಸಭೆಯಲ್ಲಿ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದ ಕೇರಳದ ಸಿ.ಕೆ. ನಾಣು ಅವರನ್ನು ನೂತನ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ನೂತನ ರಾಷ್ಟ್ರೀಯ ಅಧ್ಯಕ್ಷರ ಹೆಸರನ್ನು ತೆಲಂಗಾಣ ಜೆಡಿಎಸ್ ಅಧ್ಯಕ್ಷ ಸೂರಿ ಘೋಷಿಸಿದರು. ಈ ಮೂಲಕ ದೇವೇಗೌಡರಿಗೆ ಸಿ.ಎಂ. ಇಬ್ರಾಹಿಂ ಬಣ ಸೆಡ್ಡು ಹೊಡೆದಿದೆ.

ಇದನ್ನೂ ಓದಿ | Assembly Session : ಸಚಿವ ಜಮೀರ್‌ ಅಹಮದ್ ವಜಾಕ್ಕೆ ಬಿಜೆಪಿ ಪಟ್ಟು;‌ ಸದನದಲ್ಲಿ ಕೋಲಾಹಲ

ನೂತನ ರಾಷ್ಟ್ರೀಯ ಅಧ್ಯಕ್ಷರಿಗೆ ಶುಭಕೋರಿ ಮಾತನಾಡಿದ ಸಿ.ಎಂ. ಇಬ್ರಾಹಿಂ ಅವರು, ದೇವೇಗೌಡರಿಗೆ ಈಗ 92 ವರ್ಷ ವಯಸ್ಸಾಗಿದೆ. ಆದರೆ ಈಗ ಅವರು ತಮ್ಮ ಸಿದ್ಧಾಂತ ಕೈ ಬಿಟ್ಟಿದ್ದಾರೆ. ರಾಷ್ಟ್ರೀಯ ಅಧ್ಯಕ್ಷ ಸ್ಥಾನದಿಂದ ಬದಲಾವಣೆ ಮಾಡಲಾಗಿದೆ. ಇದು ನನ್ನ ನಿರ್ಧಾರ ಅಲ್ಲ, ಪಕ್ಷದ ಕೌನ್ಸಿಲ್ ನಿರ್ಧಾರ. ಜನವರಿಯಲ್ಲಿ ಹುಬ್ಬಳ್ಳಿಯಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಅಂದಿನ ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿಯವರಿಗೂ ಆಹ್ವಾನ ನೀಡಲಾಗುತ್ತದೆ. ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ನಾವು ಇಂಡಿಯಾ ಕೂಟದ ಜತೆ ಇರುತ್ತೇವೆ

ಐದು ಎಂಎಲ್ಎಗಳು ನಮ್ಮ ಜತೆಗೆ ಇದ್ದಾರೆ. ಈಗ ಅವರ ಹೆಸರು ಬಹಿರಂಗ ಮಾಡಲ್ಲ. ಐದು ಶಾಸಕರು 12 ಆಗಬೇಕು, ಅದಕ್ಕಾಗಿ ಕಾಯುತ್ತಿದ್ದೇನೆ. ಲಾಲು ಪ್ರಸಾದ್ ಯಾದವ್ ಮತ್ತು ನಿತೀಶ್ ಜೊತೆಗೆ ಚರ್ಚೆ ಮಾಡಿ‌, ಲೋಕಸಭಾ ಚುನಾವಣೆಯಲ್ಲಿ ಎಲ್ಲಿ ನಾವು ಸ್ಪರ್ಧೆ ಮಾಡಬೇಕು ಅಂತ ತೀರ್ಮಾನ ಮಾಡುತ್ತೇವೆ. ದೇಶದಲ್ಲಿ ಎನ್‌ಡಿಎ, ಇಂಡಿಯಾ ಒಕ್ಕೂಟ ಇದೆ. ನಾವು ಇಂಡಿಯಾ ಜತೆ ಇರಲಿದ್ದೇವೆ ಎಂದು ಘೋಷಣೆ ಇಬ್ರಾಹಿಂ ಮಾಡಿದರು.

ದೇವೇಗೌಡರು ಮಕ್ಕಳ ಹಿತಕ್ಕಾಗಿ ಪಕ್ಷ ಬಲಿ ಕೊಟ್ಟರು, ಸಿದ್ಧಾಂತವನ್ನು ಗಾಳಿಗೆ ತೂರಿದರು. ನಾವು ಮೂರು ಅವಕಾಶ ಕೊಟ್ಟೆವು, ಆದರೆ ನಮ್ಮ‌ ಮಾತು ಕೇಳಲಿಲ್ಲ. ಮೂರು ತಿಂಗಳಲ್ಲಿ ಲೋಕಸಭಾ ಚುನಾವಣೆ ಬರಲಿದೆ. ಲೋಕಸಭೆಯಲ್ಲಿ ಎಲ್ಲೆಲ್ಲಿ ಸ್ಪರ್ಧೆ ಮಾಡಬೇಕು ಎಂಬ ಕುರಿತು ನಿರ್ಧಾರ ಮಾಡಲಿದ್ದೇವೆ. ಸೀಟು ಹಂಚಿಕೆ ಕುರಿತು ರಾಹುಲ್ ಗಾಂಧಿ, ಲಾಲು, ನಿತೀಶ್, ಅಖಿಲೇಶ್ ಯಾದವ್ ಜತೆ ಚರ್ಚೆ ಮಾಡಲಿದ್ದೇವೆ. ರಾಜ್ಯದ ಜನತೆ ಮೇಲೆ‌ ವಿಶ್ವಾಸವಿದೆ. ತತ್ವ ಸಿದ್ಧಾಂತ, ನ್ಯಾಯದ ಪರ ಇರುವ ನಮ್ಮನ್ನು ಜನರು ಬೆಂಬಲಿಸುತ್ತಾರೆ ಎಂದರು.

ಜಯಪ್ರಕಾಶ್ ನಾರಾಯಣರ ಸಿದ್ಧಾಂತದ ಮೇಲೆ ಜನತಾ ಪಕ್ಷ ಕಟ್ಟಲಾಯಿತು. ಎಲ್ಲಾ ರಾಜ್ಯಗಳ ಅಧ್ಯಕ್ಷರ ನೇಮಕ ಅಧಿಕಾರ ನಾಣು ಅವರಿಗೆ ನೀಡಲಾಗಿದೆ. ಜನವರಿಯಲ್ಲಿ ಹುಬ್ಬಳ್ಳಿಯಲ್ಲಿ ಬೃಹತ್ ಸಮಾವೇಶ ಮಾಡಲಾಗುತ್ತದೆ. ಹಲವು ಹಿರಿಯರು ನಮಗೆ ಆದರ್ಶ. ಅದರ್ಶವಾದಿಗಳು ಸತ್ತರೂ ಅವರ ಅದರ್ಶ ಶಾಶ್ವತವಾಗಿ ಇರುತ್ತದೆ. ಕೆಲವರು ಬದುಕಿದ್ದರೂ ಅದರ್ಶ ಬಿಟ್ಟು ಸತ್ತಂತೆ ಇರುತ್ತಾರೆ ಎಂದು ಕಿಡಿಕಾರಿದರು.

ಇದನ್ನೂ ಓದಿ | ವಿಧಾನಸೌಧ ರೌಂಡ್ಸ್‌: ಸುವರ್ಣಸೌಧದಲ್ಲಿ ಸಾವರ್ಕರ್‌ ಫೋಟೊ; ಮೆಚ್ಚುಗೆ ಗಳಿಸಿದ ಖಾದರ್‌ ನಡೆ

ನಮಗೇ ಪಕ್ಷದ ಚಿಹ್ನೆ ಸಿಗಬೇಕು

ನಾನು ಹುಟ್ಟಿದ್ದು ಸಿದ್ಧಾಂತಕ್ಕಾಗಿ, ವಾಜಪೇಯಿಯವರು ಮಂತ್ರಿಯಾಗಲು ಕರೆದರು ನಾನು ಹೋಗಲಿಲ್ಲ. ಗವರ್ನರ್ ಆಗಲು ಕರೆದರು ನಾನು ಹೋಗಲಿಲ್ಲ. ದೇವೇಗೌಡರ ಕುಟುಂಬ ಜೇನು ಗೂಡಿಗೆ ಕೈ ಹಾಕಿದೆ. ಕುಟುಂಬದ ಹಿತಕ್ಕೆ ಪಕ್ಷ ಬಲಿ ಮಾಡಿದೆ. ಹೀಗಾಗಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಿಂದ ದೇವೇಗೌಡರನ್ನು ಕೆಳಗಿಳಿಸಲಾಗಿದೆ. ದೇವೇಗೌಡರ ಜಾಗಕ್ಕೆ ಸಿ.ಕೆ. ನಾಣು ಅವರನ್ನು ಆಯ್ಕೆ ಮಾಡಲಾಗಿದೆ. ಇದೇ ನಿಜವಾದ ಜನತಾದಳ ಪಕ್ಷ. ನಮ್ಮದು ಸಿದ್ಧಾಂತ ಹೊಂದಿರುವ ಜೆಡಿಎಸ್ ಪಕ್ಷ. ನಮಗೇ ಜೆಡಿಎಸ್ ಪಕ್ಷದ ಚಿಹ್ನೆ ಕೊಡಬೇಕು. ಇಂದಿನ ಬೆಳವಣಿಗಳ ಬಗ್ಗೆ ಚುನಾವಣೆ ಆಯೋಗಕ್ಕೂ ತಿಳಿಸುತ್ತೇವೆ ಎಂದರು.

Exit mobile version