ಬಾಗಲಕೋಟೆ, ಕರ್ನಾಟಕ: ಕೆಲವು ದಿನಗಳ ಹಿಂದೆಯಷ್ಟೇ ಸಿ.ಟಿ.ರವಿ (C T Ravi) ರಾಜ್ಯದ ಮುಖ್ಯಮಂತ್ರಿ ಯಾಕಾಗಬಾರದು ಎಂದು ಕೇಳಿದ್ದ ಬಿಜೆಪಿಯ ಹಿರಿಯ ನಾಯಕ ಕೆ ಎಸ್ ಈಶ್ವರಪ್ಪ(K S Eshwarappa), ಸಿ.ಟಿ. ರವಿ ಅವರಂಥ ಯುವಕರು, ರಾಷ್ಟ್ರೀಯವಾದಿಗಳು ಮುಖ್ಯಮಂತ್ರಿಯಾಗಬೇಕು ಎಂದು ಬಾಗಲಕೋಟೆಯಲ್ಲಿ ಪುನರುಚ್ಚರಿಸಿದ್ದಾರೆ (Karnataka Election 2023).
ಒಕ್ಕಲಿಗರು ನನ್ನ ಬೆನ್ನ ಹಿಂದೆ ನಿಲ್ಲಬೇಕು. ನಾನು ಮುಖ್ಯಮಂತ್ರಿಯಾಗುತ್ತೇನೆ ಎಂದು ಡಿ.ಕೆ.ಶಿವಕುಮಾರ್ (D K Shivakumar) ಅವರು ಹೇಳುತ್ತಾರೆ. ಸಿದ್ದರಾಮಯ್ಯ (Siddaramaiah) ಅವರು ಎಲ್ಲ ಕುರುಬರು ನನ್ನ ಹಿಂದೆ ಬನ್ನಿ, ನಾನು ಸಿಎಂ ಆಗುತ್ತೇನೆ ಎನ್ನುತ್ತಾರೆ. ಈ ರೀತಿಯ ಜಾತಿವಾದಿಗಳು ಮುಖ್ಯಮಂತ್ರಿಯಾಗಬೇಕೋ, ರಾಷ್ಟ್ರೀಯವಾದಿ ಸಿ.ಟಿ. ರವಿಯಂಥವರು ಮುಖ್ಯಮಂತ್ರಿಯಾಗಬೇಕೋ ಎಂದು ಈಶ್ವರಪ್ಪ ಪ್ರಶ್ನಿಸಿದ್ದಾರೆ.
ಸಿ ಟಿ ರವಿ ಅವರು ಎಂದೂ ಜಾತಿವಾದ ಬಗ್ಗೆ ಪ್ರಸ್ತಾಪ ಮಾಡಿಲ್ಲ. ರಾಷ್ಟ್ರೀಯವಾದಿ, ಹಿಂದುತ್ವವಾದಿ ಹೋರಾಟ ಮಾಡಿದ್ದಾರೆ. ಅವರ ಜಿಲ್ಲೆಯಲ್ಲೇ ದತ್ತಮಾಲಾ ಹೋರಾಟ ಮಾಡಿ, ಸುಪ್ರೀಂ ಕೋರ್ಟ್‌ನಲ್ಲೂ ಯಶಸ್ವಿಯಾಗಿ ಬಂದರು. ಅವರು ತಮ್ಮನ್ನು ತಾವು ಹಿಂದುತ್ವದ ನಾಯಕ ಎಂದು ತೋರಿಸಿಕೊಟ್ಟಿದ್ದಾರೆ. ಆ ನಿಟ್ಟಿನಲ್ಲಿ ಆ ಭಾಗದ ಎಲ್ಲರ ಅಭಿಪ್ರಾಯ ಸಿ ಟಿ ರವಿಯಂಥ ಯುವಕ ಮುಖ್ಯಮಂತ್ರಿಯಾದರೆ ಒಳ್ಳೆಯದು ಅಂತಿದೆ. ನನಗೂ ಹಾಗೆ ಅನಿಸ್ತು. ಅದಕ್ಕೆ ಸಿ ಟಿ ರವಿ ಮುಖ್ಯಮಂತ್ರಿ ಆದರೆ ಒಳ್ಳೆಯದು ಅನಿಸ್ತು. ಅದಕ್ಕೆ ಹೇಳಿದ್ದೇನೆ ಎಂದು ಈಶ್ವರಪ್ಪ ತಮ್ಮ ಮಾತನ್ನು ಸಮರ್ಥಿಸಿಕೊಂಡರು.
ಅಂತಿಮವಾಗಿ ಮುಖ್ಯಮಂತ್ರಿಯು ಯಾರು ಆಗಬೇಕು ಎಂಬುದನ್ನು ಕೇಂದ್ರ ನಾಯಕರು ಮತ್ತು ಶಾಸಕರು ತೀರ್ಮಾನ ಮಾಡುತ್ತಾರೆ ಎಂದು ಈಶ್ವರಪ್ಪ ಹೇಳಿದರು. ಚುನಾವಣೆ ಮುಗಿಯುವ ಮುನ್ನವೇ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಲ್ಲಿ ಮುಖ್ಯಮಂತ್ರಿಗಳ ಹುದ್ದೆಯ ಆಕಾಂಕ್ಷಿಗಳ ಬಗ್ಗೆ ಆಗಾಗ ಚರ್ಚೆಯಾಗುತ್ತಲೇ ಇರುತ್ತದೆ.
Karnataka Election 2023: ಲಿಂಗಾಯತ, ಬಸವಣ್ಣನ ಜಪ ಏಕೆ, ಈಶ್ವರಪ್ಪ ಪ್ರಶ್ನೆ
ಚರ್ಚಿಸಬೇಕಾದ ವಿಷಯಗಳು ಸಾಕಷ್ಟಿವೆ. ಆದರೆ, ರಾಷ್ಟ್ರೀಯ ಪಕ್ಷಗಳು ಕೇವಲ ಲಿಂಗಾಯ, ಬಸವಣ್ಣನ ಜಪ ಮಾಡುತ್ತಿವೆ. ಅದು ಪ್ರೀತಿಯೋ ಅಥವಾ ವಿಲನ್ ಮಾಡೋಕೊ ಗೊತ್ತಿಲ್ಲ ಎಂದು ಈಶ್ವರಪ್ಪ ಹೇಳಿದರು.
ಆದರೆ, ಲಿಂಗಾಯತರನ್ನು ಒಡೆದು ಛಿದ್ರ ಮಾಡಿದ ಕಾಂಗ್ರೆಸ್‌ಗೆ ಬುದ್ದಿ ಕಲಿಸಬೇಕಾದರೆ ಲಿಂಗಾಯತ ವಿಷಯದ ಬಗ್ಗೆ ಮಾತನಾಡಲೇಬೇಕಾಗುತ್ತದೆ. ರಾಜ್ಯದಲ್ಲಿ ವೀರಶೈವ – ಲಿಂಗಾಯತ ಅನ್ನೋ ಚರ್ಚೆ ಇತ್ತಾ? ಬಸವಣ್ಣನವರು ಅಂದ್ರೆ ಕೇವಲ ಲಿಂಗಾಯತರಲ್ಲ. ಅವರು ಇಡೀ ಮಾನವ ಧರ್ಮಕ್ಕೆ ನಾಯಕ. ಅಂತಹ ಬಸವಣ್ಣನವರ ಹೆಸರಿಗೂ ಕಳಂಕ ತಂದುಬಿಟ್ರು. ಅದನ್ನ ರಾಜ್ಯದ ಜನರಿಗೆ ತಿಳಿಸುವ ನಿಟ್ಟಿನಲ್ಲಿ ಬಿಜೆಪಿ ಯಶಸ್ವಿಯಾಗಿದೆ ಎಂದು ಹೇಳಿದರು.
ಇದನ್ನೂ ಓದಿ: Karnataka Elections 2023 : ಕೆ.ಎಸ್. ಈಶ್ವರಪ್ಪಗೆ ಕರೆ ಮಾಡಿ ಕುಶಲೋಪರಿ ವಿಚಾರಿಸಿದ ನರೇಂದ್ರ ಮೋದಿ, ಕುಟುಂಬ ಫುಲ್ ಖುಷ್
ಸಿದ್ದರಾಮಯ್ಯ ಅವರು ಲಿಂಗಾಯತ ಸಿಎಂ ಭ್ರಷ್ಟ ಎಂದು ಹೇಳಿದ್ದೀರಿ. ಆ ನಂತರ ನಾನು ಲಿಂಗಾಯತರಿಗೆ ಹೇಳಿಲ್ಲ, ಬೊಮ್ಮಾಯಿಗೆ ಮಾತ್ರ ಹೇಳಿದ್ದೇನೆ ಎಂದಿದ್ದೀರಿ. ಬೊಮ್ಮಾಯಿಗೆ ಮಾತ್ರವೇ ಹೇಳುವುದಾಗಿದ್ದರೆ ಬೊಮ್ಮಾಯಿ ಭ್ರಷ್ಟ ಎಂದು ಹೇಳಬೇಕಾಗಿತ್ತು ಎಂದು ಸಿದ್ದರಾಮಯ್ಯ ವಿರುದ್ಧ ಈಶ್ವರಪ್ಪ ಟೀಕೆ ಮಾಡಿದರು.