ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ಕ್ಯಾಬ್ ಚಾಲಕನೊಬ್ಬ (Cab Driver) ಮಹಿಳೆಯೊಂದಿಗೆ ಅನುಚಿತವಾಗಿ (Assaulted Case) ವರ್ತಿಸಿದ್ದಾನೆ. ಮಹಿಳೆಯೊಬ್ಬರು ಕ್ಯಾಬ್ ಬುಕ್ ಮಾಡಿ, ರೈಡ್ ಕ್ಯಾನ್ಸಲ್ ಮಾಡಿದ್ದಾರೆ. ಇದರಿಂದ ಸಿಟ್ಟಾದ ಆ ಕ್ಯಾಬ್ ಚಾಲಕ ಮಹಿಳೆಯ ವಾಟ್ಸ್‌ಆ್ಯಪ್ ನಂಬರ್‌ಗೆ ನಗ್ನ ಚಿತ್ರಗಳು, ವಿಡಿಯೊ ಜತೆಗೆ ನಿಂದಿಸಿ ಸಂದೇಶಗಳನ್ನು ಕಳಿಸಿ ಮುಜುಗರವನ್ನುಂಟು ಮಾಡಿದ್ದಾರೆ.
ಇದೀಗ ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಚಾಲಕನ ಕಿರುಕುಳದ ವಿರುದ್ಧ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಪತ್ತೆಗೆ ಮುಂದಾಗಿದ್ದಾರೆ. ಅಂದಹಾಗೇ ಮಹಿಳೆ ತಮ್ಮ 6 ವರ್ಷದ ಮಗಳನ್ನು ಶಾಲೆಯಿಂದ ಮನೆಗೆ ಕರೆತರಲು ಹೋಗಿದ್ದರು. 9 ತಿಂಗಳ ಮತ್ತೊಂದು ಮಗುವು ಜತೆಯಲ್ಲೇ ಇತ್ತು.
ಆ ದಿನ ಬಿಸಿಲು ಹೆಚ್ಚಾಗಿ ಇದ್ದ ಕಾರಣಕ್ಕೆ ಆಟೋ ಅಥವಾ ಕ್ಯಾಬ್ ಬುಕ್ ಮಾಡುವಂತೆ ಮಗಳು ಬೆನ್ನಬಿದ್ದಿದ್ದಳು. ಇತ್ತ ಇಬ್ಬರು ಮಕ್ಕಳನ್ನು ಕರೆದುಕೊಂಡು ಹೋಗಲು ಅಸಾಧ್ಯವೆಂದು ತಿಳಿದು ಮಹಿಳೆ ಕೆಲಹೊತ್ತು ಆಟೋಗಾಗಿ ಕಾದಿದ್ದಾರೆ. ಆದರೆ ಆಟೋ ಸಿಗದೆ ಇದ್ದಾಗ ಕ್ಯಾಬ್ ಬುಕ್ ಮಾಡಿದ್ದಾರೆ. ಆದರೆ ಕ್ಯಾಬ್ ಬುಕ್ ಮಾಡಿ ತುಂಬಾ ಸಮಯ ಕಳೆದರೂ ಚಾಲಕ ಸರಿಯಾದ ಸಮಯಕ್ಕೆ ಬಾರದೆ ಇದ್ದಾಗ ರೈಡ್ ಕ್ಯಾನ್ಸ್‌ಲ್ ಮಾಡಿದ್ದಾರೆ.
ಮತ್ತೊಂದು ಆಟೋ ಹಿಡಿದು ಮನೆಗೆ ತೆರಳುವಾಗ ಮಹಿಳೆಗೆ ಕ್ಯಾಬ್ ಚಾಲಕನಿಂದ ಕರೆ ಬಂದಿದೆ. ಈ ವೇಳೆ ಇಬ್ಬರ ನಡುವೆಯೂ ಜಟಾಪಟಿ ಶುರುವಾಗಿದೆ. ಬಳಿಕ ಮಹಿಳೆ ಕ್ಷಮೆಯಾಚಿದ್ದಾಳೆ. ಇಷ್ಟಕ್ಕೆ ಸುಮ್ಮನಾಗದ ಚಾಲಕ ಪದೇಪದೆ ಮಹಿಳೆಗೆ ಕರೆ ಮಾಡಿದ್ದಾನೆ. ಸಾಲದು ಎಂಬಂತೆ ವಾಟ್ಸ್‌ಆ್ಯಪ್ ನಂಬರ್‌ಗೆ ನಗ್ನ ಚಿತ್ರ, ವಿಡಿಯೊ ಕಳಿಸಿ ಕಿರುಕುಳ ನೀಡಿದ್ದಾನೆ ಎಂದು ದೂರಿನಲ್ಲಿ ಮಹಿಳೆ ಉಲ್ಲೇಖಿಸಿದ್ದಾರೆ. ಸದ್ಯ ಪೊಲೀಸರು ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ