ಬೆಂಗಳೂರು: ಕಾವೇರಿ ವಿಚಾರದಲ್ಲಿ ಮುಂದಿನ ಕಾನೂನು ಹೋರಾಟ, ತಮಿಳುನಾಡಿಗೆ ನೀರು ಬಿಡುಗಡೆ ಮಾಡದಿರಲು ನಿರ್ಣಯ ಮಾಡಲು ವಿಶೇಷ ಅಧಿವೇಶನ ಕರೆಯುವುದು, ಬರ ಪರಿಹಾರ, ನೋಂದಾಯಿತ ವಾಹನಗಳ ಗುಜರಿ ನೀತಿ ಜಾರಿ (Vehicle Scrapping Policy) ಮಾಡುವುದು ಸೇರಿ ಹಲವು ಮಹತ್ವದ ವಿಷಯಗಳ ಬಗ್ಗೆ ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಯಿತು.
ಸುಮಾರು ಎರಡು ಗಂಟೆ ನಡೆದ ಸಭೆಯ ಬಳಿಕ ಮಾತನಾಡಿದ ಕಾನೂನು ಸಚಿವ ಎಚ್.ಕೆ. ಪಾಟೀಲ್ ಅವರು, ಬರ ಸ್ಥಿತಿಯಿಂದ 30,432 ಕೋಟಿ ರೂ. ನಷ್ಟ ಉಂಟಾಗಿದೆ. ಹೀಗಾಗಿ 4860 ಕೋಟಿ ರೂ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಬೇಡಿಕೆ ಇಡುತ್ತಿದ್ದೇವೆ. ಸುಮಾರು 39,039 ಲಕ್ಷ ಹೆಕ್ಟೇರ್ ಕೃಷಿ ಬೆಳೆ ನಷ್ಟವಾಗಿದ್ದು, ಇದಕ್ಕಾಗಿ ಎನ್‌ಡಿಆರ್‌ಎಫ್ ಮಾರ್ಗಸೂಚಿ ಪ್ರಕಾರ 3824 ಕೋಟಿ ರೂ. ಪರಿಹಾರ ಕೋರುತ್ತಿದ್ದೇವೆ ಎಂದು ತಿಳಿಸಿದರು.
ತೋಟಗಾರಿಕೆ ಬೆಳೆ ನಷ್ಟ 2655 ಕೋಟಿ ಆಗಿದ್ದು, ಇದಕ್ಕಾಗಿ 206 ಕೋಟಿ ಪರಿಹಾರ ಕೋರಿಕೆಗೆ ನಿರ್ಧಾರ ಮಾಡಿದ್ದೇವೆ. 195 ಪಶು ಶಿಬಿರಕ್ಕಾಗಿ 104 ಕೋಟಿ ರೂ. , 624 ಮೇವು ಬ್ಯಾಂಕ್ ಸ್ಥಾಪನೆಗೆ 1063 ಕೋಟಿ ರೂ. ಔಷಧಗಳಿಗೆ 25 ಕೋಟಿ, ಆಹಾರ, ಮೇವು ಬೀಜಕ್ಕೆ 50 ಕೋಟಿ ರೂ. ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ಗುಜರಿ ನೀತಿ ಜಾರಿ ಮಾಡಲು ನಿರ್ಧಾರ: ಡಿ.ಕೆ.ಶಿವಕುಮಾರ್
ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ, ನೋಂದಾಯಿತ ವಾಹನಗಳ ಗುಜರಿ ನೀತಿ-2022 (Vehicle Scrapping Policy-2022) ಜಾರಿ ಮಾಡಲು ಸಚಿವ ಸಂಪುಟದಲ್ಲಿ ನಿರ್ಧಾರ ಮಾಡಲಾಗಿದ್ದು, 15 ವರ್ಷಗಳ ಕಾಲ ಸಂಚರಿಸಿದ ವಾಹನಗಳನ್ನು ಸ್ಕ್ರ್ಯಾಪ್ ಮಾಡಲಾಗುತ್ತದೆ. 15,295 ವಾಹನಗಳನ್ನು ಸ್ಕ್ರ್ಯಾಪ್ ಮಾಡಬೇಕಿದ್ದು, 2023-24ರ ಮೊದಲ ಹಂತದಲ್ಲಿ 5000 ವಾಹನ ನಾಶ ಪಡಿಸುತ್ತೇವೆ. ಇದಕ್ಕೆ ಒಂದು ನೂರು ಕೋಟಿ ರೂಪಾಯಿ ಪ್ರೋತ್ಸಾಹ ಧನ ಕೇಂದ್ರದಿಂದ ಬರಲಿದೆ ಎಂದು ತಿಳಿಸಿದರು.
ಕಾವೇರಿ ನೀರು ಹಂಚಿಕೆ ವಿಚಾರವಾಗಿ ನ್ಯಾಯಾಲಯದ ಆದೇಶ ಪಾಲನೆ ಹಾಗೂ ರಾಜ್ಯದ ರೈತರ ಹಿತ ಕಾಯಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಮೇಕೆದಾಟು ಯೋಜನೆ ವಿಚಾರ ಸುಪ್ರೀಂ ಕೋರ್ಟ್ ವಿಚಾರಣೆ ವೇಳೆಗೆ ಪ್ರಸ್ತಾಪ ಆಗಿದೆ. ಈ ಯೋಜನೆ ಮುಂದುವರಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಕೇಂದ್ರ ಸರ್ಕಾರದ ಅನುಮತಿ ಪಡೆದು ಯೋಜನೆ ಆರಂಭಿಸಲು ಸರ್ಕಾರದ ಪ್ರಯತ್ನ ಮುಂದುವರಿಯಲಿದೆ. ಈ ಯೋಜನೆಯಿಂದ ಎರಡೂ ರಾಜ್ಯಗಳಿಗೆ ಉಪಯೋಗ ಆಗಲಿದೆ. ಇದಕ್ಕೆ ಬೇಕಾದ ಎಲ್ಲ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುತ್ತೇವೆ ಎಂದು ತಿಳಿಸಿದರು.
ಈಗಾಗಲೇ ಆಣೆಕಟ್ಟು ಕೆಳ ಹಂತದಲ್ಲಿ ನಮ್ಮ ನಿಯಂತ್ರಣ ಮೀರಿ 3500 ಕ್ಯೂಸೆಕ್ ನೀರು ಹರಿಯುತ್ತಿದೆ. ಉಳಿದ ನೀರನ್ನು ಹೊಂದಿಸಿ ಆದೇಶ ಪಾಲನೆ ಮಾಡುತ್ತೇವೆ. ಇದರ ಜತೆಗೆ ರಾಜ್ಯದ ಕುಡಿಯುವ ನೀರು ಅಗತ್ಯ ಹಾಗೂ ರೈತರ ಹಿತ ಕಾಯುವ ಕೆಲಸ ಮಾಡುತ್ತೇವೆ. ಇಂದು ಕಾವೇರಿ ವಿಚಾರವಾಗಿ ಅಡ್ವೊಕೇಟ್ ಜನರಲ್ ಅವರು ಸಂಪುಟ ಸದಸ್ಯರಿಗೆ ವಸ್ತುಸ್ಥಿತಿ ವಿವರಿಸಿದ್ದಾರೆ. ಇಂದು ಕಾವೇರಿ ಆಣೆಕಟ್ಟುಗಳ ಒಳಹರಿವು 7500 ರಿಂದ 8000 ಕ್ಯೂಸೆಕ್ ಇದೆ. 3500 ಕ್ಯೂಸೆಕ್ ನಷ್ಟು ನೀರು ಹೊರ ಹೋಗುತ್ತಿದೆ ಎಂದು ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.
ಕಾವೇರಿ ವಿವಾದ; ಮಧ್ಯಸ್ಥಿಕೆ ವಹಿಸಲು ಕೇಂದ್ರಕ್ಕೆ ಮನವಿ
ತಮಿಳುನಾಡು ಜತೆ ಮಾತುಕತೆ ಮಾಡುತ್ತೀರಾ ಎಂಬ ಪ್ರಶ್ನೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿ, ಈ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ವಿಶೇಷ ಅಧಿವೇಶನದ ಬಗ್ಗೆ ಚರ್ಚೆ ಮಾಡಲಿಲ್ಲವೇ ಎಂದು ಕೇಳಿದಾಗ, ನಮಗೆ ಈ ವಿಚಾರವಾಗಿ ಯಾವುದೇ ಪ್ರಸ್ತಾವನೆ ಬಂದಿಲ್ಲ. ಹೀಗಾಗಿ ಈ ಬಗ್ಗೆ ಚರ್ಚೆ ಮಾಡಿಲ್ಲ ಎಂದು ತಿಳಿಸಿದರು.
ಬಂದ್ ಹಾಗೂ ಬಿಜೆಪಿ ಹೋರಾಟದ ಬಗ್ಗೆ ಕೇಳಿದಾಗ, ಬಿಜೆಪಿ ಅವರ ರಾಜಕಾರಣ ಮಾಡುತ್ತಿದ್ದಾರೆ ಮಾಡಲಿ. ನಾವು ನಮ್ಮ ಕೆಲಸ ಮಾಡುತ್ತೇವೆ. ನ್ಯಾಯಾಲಯದ ಆದೇಶ ಪಾಲನೆ ಮಾಡುತ್ತಾ ರೈತರ ಹಿತ ಕಾಯಬಹುದೆ ಎಂದು ಕೇಳಿದಾಗ, ಖಂಡಿತವಾಗಿ ನಾವು ಆದೇಶ ಪಾಲನೆ ಹಾಗೂ ರೈತರ ಹಿತ ಕಾಯುತ್ತೇವೆ ಎಂದರು. ಬಿಜೆಪಿ ಜೆಡಿಎಸ್ ಮೈತ್ರಿ ಬಗ್ಗೆ ಕೇಳಿದಾಗ, ಒಳ್ಳೆಯದಾಗಲಿ ಎಂದು ತಿಳಿಸಿದರು.
ಕೇಂದ್ರ ಒಬಿಸಿ ಪಟ್ಟಿಗೆ ಕುಂಚಿಟಿಗ ಒಕ್ಕಲಿಗ ಸಮುದಾಯ
ಕುಂಚಿಟಿಗ ಒಕ್ಕಲಿಗ ಸಮುದಾಯವನ್ನು ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಗೆ ಸೇರಿಸಲು ಶಿಫಾರಸು ಮಾಡಲು ತೀರ್ಮಾನಿಸಲಾಗಿದೆ. ಕೊಡವ ಸಮಾಜದಲ್ಲಿ ಕೊಡವರು, ಕೊಡವ ಎಂಬ ಪದದ ವಿಚಾರವಾಗಿ ಇದ್ದ ಗೊಂದಲ ಬಗೆ ಹರಿಸಲು ತೀರ್ಮಾನಿಸಲಾಗಿದೆ. ಪೊಲೀಸ್ ಇಲಾಖೆಯಲ್ಲಿ 15 ವರ್ಷಗಳ ಹಳೆಯ ವಾಹನಗಳನ್ನು ಸ್ಕ್ರ್ಯಾಪ್ ಮಾಡಲು ಸರ್ಕಾರ ತೀರ್ಮಾನಿಸಿದೆ. ಖಾಸಗಿ ವಾಹನ ವಿಚಾರವಾಗಿ ಮುಂದೆ ತೀರ್ಮಾನ ಮಾಡುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮಾಹಿತಿ ನೀಡಿದರು.
ಐಪಿ ಸೆಟ್ ಸಕ್ರಮಕ್ಕೆ ಇಂದು ಕೊನೆ ದಿನ. ಅರ್ಜಿ ಹಾಕಿದವರನ್ನು ಸಕ್ರಮ ಎಂದು ಘೋಷಿಸುತ್ತೇವೆ. ಇನ್ನುಮುಂದೆ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆಯುವವರಿಗೆ ಅವಕಾಶ ಇಲ್ಲ ಎಂದು ತಿಳಿಸಿದರು.
ಇದನ್ನೂ ಓದಿ | Dakshin Bharat Utsav: ಪ್ರವಾಸೋದ್ಯಮ ಉತ್ತೇಜಿಸಲು ಖಾಸಗಿ ವಲಯಕ್ಕೆ 550 ಸ್ಮಾರಕ ದತ್ತು: ಸಚಿವ ಎಚ್.ಕೆ. ಪಾಟೀಲ್
ಸಚಿವ ಸಂಪುಟ ಸಭೆಯ ಮುಖ್ಯಾಂಶಗಳು
- ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿ ಕಲ್ಪಿಸಲು ಸಂಬಂಧ ರಚಿಸಲಾಗಿದ್ದ ನ್ಯಾ. ಭಕ್ತವತ್ಸಲ ಆಯೋಗದ ಎರಡನೇ ವರದಿ ಬಗ್ಗೆ ಸಂಪುಟದಲ್ಲಿ ಚರ್ಚೆ ನಡೆದು ಅಂಗೀಕರಿಸಲಾಗಿದೆ. ಈ ವರದಿಯನ್ನು ಆಧರಿಸಿ ಸುಪ್ರಿಂಕೋರ್ಟ್ಗೆ ಅಫಿಡೆವಿಟ್ ಸಲ್ಲಿಸಲಾಗುತ್ತದೆ. ಈ ಹಿಂದೆ ಯಾವ ಆಧಾರದಲ್ಲಿ ರಾಜಕೀಯ ಮೀಸಲು ನೀಡಲಾಗುತ್ತಿದೆ ಎಂದು ಮಹಾರಾಷ್ಟ್ರ ಪ್ರಕರಣದಲ್ಲಿ ಸುಪ್ರಿಂಕೋರ್ಟ್ ಪ್ರಶ್ನಿಸಿತ್ತಲ್ಲದೇ ಎಲ್ಲ ರಾಜ್ಯಗಳಿಗೂ ಅನ್ವಯಿಸಿತ್ತು. ಇದರಿಂದ ನಗರ, ಗ್ರಾಮೀಣ ಸ್ಥಳೀಯ ಸಂಸ್ಥೆ ಚುನಾವಣೆ ನೆನೆಗುದಿಗೆ ಬಿದ್ದಿತ್ತು. ಹೀಗಾಗಿ ಬಿಜೆಪಿ ಸರ್ಕಾರ ನ್ಯಾ. ಭಕ್ತವತ್ಸಲ ಸಮಿತಿ ರಚಿಸಿತ್ತು. ಈ ಸಮಿತಿ ಎರಡನೇ ಪೂರಕ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು.
- ನೀರಾವರಿ ಪಂಪ್ ಸೆಟ್ ಸೌರೀಕರಣ: ನೀರಾವರಿ ಪಂಪ್ ಸೆಟ್ಗಳಿಗೆ ಸ್ಟಾಂಡ್ ಅಲೋನ್, ಆಫ್ ಗ್ರಿಡ್ ಸೋಲಾರ್ ಪಂಪ್ ಸೆಟ್ ಒದಗಿಸಲು ಬೆಂಬಲ ಹಾಗೂ ನೀರಾವರಿ ಪಂಪ್ ಸೆಟ್ ಫೀಡರ್ಗಳ ಸೌರೀಕರಣಕ್ಕೆ ಕೈಗೆತ್ತಿಕೊಳ್ಳಲು ಸಂಪುಟ ಒಪ್ಪಿಗೆ ನೀಡಿದೆ. ಅದೇ ರೀತಿ ರಾಜ್ಯದಲ್ಲಿ ನೀರಾವರಿ ಪಂಪ್ಸೆಟ್ಗಳನ್ನು 2015ರಿಂದ ಸಕ್ರಮ ಗೊಳಿಸಿರುವ ಕ್ರಮಕ್ಕೆ ಘಟನೋತ್ತರ ಅನುಮೋದನೆ.
- ಏಳುಕಡೆ ಕೈಗಾರಿಕಾ ವಸಾಹತು: ಕೆಎಸ್ಎಸ್ಐಡಿಸಿ ವತಿಯಿಂದ ರಾಜ್ಯದ ಏಳು ಕೈಗಾರಿಕಾ ವಸಾಹತು ಸ್ಥಾಪನೆಗೆ ನಿರ್ಧರಿಸಲಾಗಿದೆ. ಚಿತ್ತಾಪುರ, ಕೋಡ್ಕಣಿ, ಕಣಗಾಲ, ಬದನಗುಪ್ಪೆ, ಇಂಡಿಯಲ್ಲಿ ವಸಾಹತು ಸ್ಥಾಪನೆಗೆ 166 ಕೋಟಿ ರೂ. ಹಾಗೂ ಹುಬ್ಬಳ್ಳಿ ಮತ್ತು ಶಹಪೂರದಲ್ಲಿ ಭೂ ಸ್ವಾಧೀನಕ್ಕೆ ಸಮ್ಮತಿ.
- ಪೊಲೀಸ್ ಇಲಾಖೆಗೆ 1682 ಹೊಸ ವಾಹನ: ಪೊಲೀಸ್ ಮೊಬಿಲಿಟಿ ಯೋಜನೆಯಡಿ ಪೊಲೀಸ್ ಇಲಾಖೆಯು 1682 ವಾಹನಗಳನ್ನು 83.38 ಕೋಟಿ ರೂ. ವೆಚ್ಚದಲ್ಲಿ ಖರೀದಿಸಲು ಅನುಮೋದನೆ.
- ಕೃಷಿ ನವೋದ್ಯಮ ಯೋಜನೆ ಜಾರಿ. ಕೃಷಿ ಪ್ರೋತ್ಸಾಹಿಸಲು ಕೃಷಿ ನವೋದ್ಯಮ ಯೋಜನೆ ಜಾರಿ ಮಾಡಲಾಗುತ್ತಿದೆ.
ಕೃಷಿ ಕ್ಷೇತ್ರದಲ್ಲಿ ಉದ್ಯಮಶೀಲತೆ ಹೆಚ್ಚಿಸಲು ಹಾಗೂ ಕೃಷಿ ಪದವೀಧರರು, ಆಸಕ್ತ ಪ್ರಗತಿಪರ ರೈತರು ಕೃಷಿಯಲ್ಲಿ ನವೋದ್ಯಮ ಆರಂಭಿಸಲು ಮತ್ತು ಕೃಷಿಯಲ್ಲಿ ನವೀನ ಪರಿಕಲ್ಪನೆಗಳ ವಾಣಿಜ್ಯೀಕರಣ ಉತ್ತೇಜಿಸಲು ಕೃಷಿ ನವೋದ್ಯಮ ಯೋಜನೆ ಜಾರಿಗೆ ಅನುಮೋದನೆ. - ಒಂದು ವರ್ಷದ ದಂಡ ವಿನಾಯಿತಿ: ರಾಜ್ಯದಲ್ಲಿ ನೋಂದಾಯಿತ ವಾಹನಗಳ ಸ್ಕ್ರ್ಯಾಪಿಂಗ್ ಪಾಲಿಸಿ 2022 ಜಾರಿಗೊಳಿಸಲು ನಿರ್ಧರಿಸಲಾಗಿದೆ. ಸರ್ಕಾರಿ ಇಲಾಖೆಗಳು, ನಿಗಮಗಳು, ಮಂಡಳಿಗಳಲ್ಲಿರುವ 15 ವರ್ಷ ಪೂರೈಸಿರುವ ವಾಹನಗಳನ್ನು ನಾಶ ಪಡಿಸಲು ಹಾಗೂ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ನಾಶ ಪಡಿಸಲು ಉದ್ದೇಶಿಸಿರುವ ವಾಹನಗಳ ಮೇಲೆ ಕೊನೆಯ ಒಂದು ವರ್ಷದಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿನ ಬಾಕಿ ದಂಡಗಳ ವಸೂಲಿಯಿಂದ ಒಂದು ವರ್ಷದವರೆಗೆ ಮಾತ್ರ ವಿನಾಯಿತಿ ನೀಡಲು ಅನುಮೋದನೆ.
- ಆಶಾಕಿರಣ ಯೋಜನೆಯಲ್ಲಿ ಕಣ್ಣಿನ ತಪಾಸಣೆ, ಕನ್ನಡಕ ವಿತರಣೆಗೆ ಚಿತ್ರದುರ್ಗ, ರಾಯಚೂರು, ಉತ್ತರ ಕನ್ನಡ, ಮಂಡ್ಯ ಜಿಲ್ಲೆಯಲ್ಲಿ ಜಾರಿಗೆ 29.14 ಕೋಟಿ ರೂ. ಯೋಜನೆಗೆ ಸಮ್ಮತಿ.
- ಮಂಗಳೂರು ಮೀನುಗಾರಿಕೆ ಬಂದರಿನ 3ನೇ ಹಂತದ ವಿಸ್ತರಣೆ ಕಾಮಗಾರಿ ಪೂರ್ಣಗೊಳಿಸಲು 49.50 ಕೋಟಿ ರೂ.ಪರಿಷ್ಕೃತ ಅಂದಾಜಿಗೆ ಅನುಮೋದನೆ.
- ಕೊಡಗರು ಎಂಬುದನ್ನು ಕೊಡವ ಎಂದು ಬದಲಾವಣೆ ಮಾಡಲು ನಿರ್ಣಯ.
- ಕೇಂದ್ರ ಹಿಂದುಳಿದ ವರ್ಗಗಳ (ಒಬಿಸಿ)ಪಟ್ಟಿಗೆ ಕುಂಚಿಟಿಗರ ಸಮುದಾಯ(ವರ್ಗ) ಸೇರ್ಪಡೆಗೆ ಶಿಫಾರಸು.
- ಕೆಪಿಎಸ್ಸಿ ಅಧ್ಯಕ್ಷ ಮತ್ತು ಸದಸ್ಯರಿಗೆ ನಿವೃತ್ತಿ ವೇತನಕ್ಕೆ ಕಾಯ್ದೆ ತಿದ್ದುಪಡಿ.
- ಕೆಪಿಎಸ್ಸಿ ವರದಿ ಮಂಡನೆ.
- ಕಾನೂನು ಮಾಪನ ಇಲಾಖೆಯ ನೇಮಕಾತಿ ನಿಯಮಗಳಿಗೆ ತಿದ್ದುಪಡಿ
- ಬೆಂಗಳೂರಿನ ಬಿಟಿಎಂ ಬಡಾವಣೆಯಲ್ಲಿ 2.17 ಎಕರೆಯಲ್ಲಿ ಪ್ರಯಾಣಿಕರ ತಂಗುದಾಣ ನಿರ್ಮಿಸಲು 67.62 ಕೋಟಿ ರೂ.ಮಂಜೂರು
- ರಾಷ್ಟ್ರೀಯ ವಿಧಿ ವಿಜ್ಞಾನಗಳ ವಿಶ್ವ ವಿದ್ಯಾಲಯ ಸ್ಥಾಪನೆಗೆ ಧಾರವಾಡದ ಕೃಷಿ ವಿಜ್ಞಾನಗಳ ವಿವಿ ಅಧೀನದಲ್ಲಿರುವ 45.19 ಎಕರೆ ಜಮೀನನ್ನು 30 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದಲ್ಲಿ ನೀಡಲು ಸಮ್ಮತಿ
- ಲೋಕಾಯುಕ್ತ ಸಂಸ್ಥೆಯಲ್ಲಿ ಅಪರ ನಿಬಂಧಕರು (ವಿಚಾರಣೆಗಳು) ಹುದ್ದೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಮೂವರು ನಿವೃತ್ತ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರುಗಳ ಸೇವೆ ಇನ್ನೊಂದು ವರ್ಷದ ಅವಧಿಗೆ ಮುಂದುವರಿಕೆ
- ರಾಯಚೂರು ಬಳಿಯ ಕಲ್ಮಲ ಜಂಕ್ಷನ್ನಿಂದ ಸಿಂಧನೂರು ಬಳಿಯ ಬಳ್ಳಾರಿ ಲಿಂಗಸಗೂರು ರಸ್ತೆ ವೃತ್ತದವವರೆಗೆ (78.45 ಕಿಮೀ) ರಸ್ತೆ ಅಭಿವೃದ್ಧಿಗೆ 1695.85 ಕೋಟಿ ರೂ. ಯೋಜನಾ ವೆಚ್ಚಕ್ಕೆ ಅನುಮತಿ. ಎಚ್ ಎಎಂ ಮಾದರಿಯಲ್ಲಿ ಕೈಗೊಳ್ಳವಲ್ಲಿ ಕೆ ಆರ್ ಡಿಸಿಎಲ್ ಗೆ ಅನುಮತಿ
- ಮೋಟಾರು ವಾಹನ ಕಾಯ್ದೆ 1988ರ ಕಲಂ 136ಎ ಮತ್ತು ಕೇಂದ್ರ ಮೋಟಾರು ವಾಹನ ನಿಯಮಾವಳಿಗಳ ನಿಯಮ 1989ರ ನಿಯಮ 167ಎ ಅಡಿಯಲ್ಲಿ ಎಲೆಕ್ಟ್ರಾನಿಕ್ ಮಾನಿಟರಿಂಗ್ ಮತ್ತು ಎನ್ ಫೋರ್ಸ್ ಮೆಂಟ್ ಆಫ್ ರೋಡ್ ಸೇಫ್ಟಿ ಯೋಜನೆಯನ್ನು 20 ಕೋಟಿ ರೂ.ವೆಚ್ಚದಲ್ಲಿ ಅನುಷ್ಠಾನ ಗೊಳಿಸಲು ಅನುಮೋದನೆ