ನವ ದೆಹಲಿ: ರಾಜ್ಯ ಸಚಿವ ಸಂಪುಟಕ್ಕೆ (Cabinet Expansion) ಸೇರಲಿರುವ ಶಾಸಕರ ಪಟ್ಟಿ ಫೈನಲ್ ಮಾಡಲು ಕಾಂಗ್ರೆಸ್ ಹೈಕಮಾಂಡ್ (Congress High command) ಸಫಲವಾಗಿಲ್ಲ. ಆದರೆ, ಹೊಸ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ದಿನಾಂಕ ಮಾತ್ರ ಆಗಲೇ ಫಿಕ್ಸಾಗಿದೆ. ಮೇ 27ರ ಶನಿವಾರ ಬೆಳಗ್ಗೆ 11.45ಕ್ಕೆ ಹೊಸ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಅಂದು 22ರಿಂದ 24 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಸಿಎಂ ಆಗಿ ಸಿದ್ದರಾಮಯ್ಯ (Siddaramaiah) ಮತ್ತು ಡಿಸಿಎಂ ಆಗಿ ಡಿ.ಕೆ ಶಿವಕುಮಾರ್ (DK Shivakumar) ಅವರು ಮೇ 20ರಂದು ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ, ಅಂದೇ ಎಲ್ಲ ಸಚಿವರ ಪ್ರಮಾಣವಚನವೂ ಆಗಬೇಕು ಎಂದು ನಿರ್ಧರಿಸಲಾಗಿತ್ತು. ಆದರೆ, ಸಚಿವರ ಪಟ್ಟಿಯನ್ನು ನಿರ್ಧಾರ ಮಾಡಲಾಗದೆ ಕೇವಲ ಎಂಟು ಮಂದಿ ಸಚಿವರು ಮಾತ್ರ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಾಗಿತ್ತು. ಅದರ ನಡುವೆ ವಿಧಾನಸಭಾ ಅಧಿವೇಶನ ನಡೆದುದರಿಂದ ಸಂಪುಟ ವಿಸ್ತರಣೆಯ ಚರ್ಚೆಗೆ ಹಿನ್ನಡೆಯಾಗಿತ್ತು.
ಬುಧವಾರ ಸಂಜೆ ಅಧಿವೇಶನ ಮುಗಿಸಿ ಸಿಎಂ ಸಿದ್ದರಾಮಯ್ಯ (Siddaramaiah) ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಅವರು ದಿಲ್ಲಿಗೆ ಹೋಗಿದ್ದರು. ಅವರನ್ನು ಅನುಸರಿಸಿ ಸುಮಾರು 35ಕ್ಕೂ ಹೆಚ್ಚು ಸಚಿವ ಸ್ಥಾನಾಕಾಂಕ್ಷಿ ಶಾಸಕರು ಕೂಡಾ ದಿಲ್ಲಿಯಲ್ಲಿದ್ದಾರೆ. ಬುಧವಾರ ರಾತ್ರಿಯೇ ಒಂದು ಸುತ್ತಿನ ಸಭೆ ನಡೆಯಲಿದೆ ಎಂದು ಹೇಳಲಾಗಿದ್ದರೂ ಅದು ಗುರುವಾರಕ್ಕೆ ಮುಂದೂಡಲ್ಪಟ್ಟಿತ್ತು. ಗುರುವಾರ ಬೆಳಗ್ಗೆ ಮೊದಲ ಹಂತದ ಮಾತುಕತೆ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರ ಮನೆಯಲ್ಲಿ ಸಭೆ ನಡೆಯುವುದು ಎಂದು ತೀರ್ಮಾನವಾಗಿತ್ತು. ಆದರೆ ಬಳಿಕ ಅದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮನೆಗೆ ಶಿಫ್ಟ್ ಆಯಿತು.
ಅಲ್ಲಿ ಒಂದಷ್ಟು ಚರ್ಚೆ ನಡೆದು ಬಳಿಕ ಕೆ.ಸಿ. ವೇಣುಗೋಪಾಲ್ ಮತ್ತು ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ಜತೆ ಚರ್ಚೆ ನಡೆಸಿ ಅದರ ವಿವರವನ್ನು ಹೈಕಮಾಂಡ್‌ಗೆ ನೀಡಿದರು. ಶುಕ್ರವಾರ ಮತ್ತೊಂದು ಸುತ್ತಿನ ಮಾತುಕತೆ ನಡೆದು ಪಟ್ಟಿ ಫೈನಲ್ ಆಗಲಿದೆ ಎನ್ನಲಾಗಿದೆ. ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ರಾತ್ರಿಯೇ ಬೆಂಗಳೂರಿಗೆ ತೆರಳಲಿದ್ದು ಶುಕ್ರವಾರ ಮರಳಿ ದಿಲ್ಲಿಗೆ ಬರಲಿದ್ದಾರೆ.
ಹಿರಿಯರ ಸೇರ್ಪಡೆ ವಿಚಾರದಲ್ಲಿ ಮೂಡುತ್ತಿಲ್ಲ ಒಮ್ಮತ
ಸಂಪುಟಕ್ಕೆ 22ರಿಂದ 24 ಮಂದಿ ಸೇರ್ಪಡೆಯಾಗುವುದು ಖಚಿತವಾಗಿದೆ. ಆದರೆ, ಈಗ ಫೈನಲ್ ಆಗಿರುವುದು 18 ಮಂದಿಯ ಹೆಸರು ಮಾತ್ರ. ಉಳಿದ ನಾಲ್ವರ ವಿಚಾರದಲ್ಲಿ ಇನ್ನೂ ಗೊಂದಲ, ಚರ್ಚೆ ಮುಂದುವರಿದಿದೆ.
ಸಂಪುಟಕ್ಕೆ ಹಿರಿಯರ ಸೇರ್ಪಡೆ ವಿಚಾರದಲ್ಲಿ ಇನ್ನೂ ಅಭಿಪ್ರಾಯಬೇದ ಮುಂದುವರಿದಿದೆ ಎನ್ನಲಾಗಿದೆ. ಆರ್ ವಿ ದೇಶಪಾಂಡೆ ಸೇರಿ ಹಲವು ಹಿರಿಯರ ಸೇರ್ಪಡೆಗೆ ಡಿಕೆ ಶಿವಕುಮಾರ್ ವಿರೋಧ ವ್ಯಕ್ತಪಡಿಸುತ್ತಿದ್ದರೆ, ಮಧು ಬಂಗಾರಪ್ಪ ಮತ್ತು ಬಿಕೆ ಹರಿಪ್ರಸಾದ್ ಅವರನ್ನು ಕ್ಯಾಬಿನೆಟ್ ಗೆ ಸೇರಿಸಿಕೊಳ್ಳಲು ಡಿಕೆಶಿ ಪಟ್ಟು ಹಿಡಿದಿದ್ದಾರೆ. ಆದರೆ, ಒಂದೇ ಸಮುದಾಯದ ಇಬ್ಬರು ನಾಯಕರನ್ನು ಸೇರಿಸಿಕೊಳ್ಳುವುದು ಬೇಡ ಎನ್ನುವುದು ಸಿದ್ದರಾಮಯ್ಯ ವಾದ ಎನ್ನಲಾಗಿದೆ.
ಸಂಭವನೀಯ ಸಚಿವರು ಯಾರು?
ಈಶ್ವರ ಖಂಡ್ರೆ, ಲಕ್ಷ್ಮಿ ಹೆಬ್ಬಾಳಕರ್, ಶಿವಾನಂದ ಪಾಟೀಲ್, ಶರಣಬಸಪ್ಪ ದರ್ಶನಾಪುರ, ಬಸವರಾಜ ರಾಯರೆಡ್ಡಿ, ಡಾ. ಮಹಾದೇವಪ್ಪ, ಪಿರಿಯಾಪಟ್ಟಣ ವೆಂಕಟೇಶ್, ಎಸ್.ಎಸ್. ಮಲ್ಲಿಕಾರ್ಜುನ, ಬೈರತಿ ಸುರೇಶ್, ಕೃಷ್ಣ ಬೈರೇಗೌಡ, ರಹೀಂ ಖಾನ್. ಅಜಯ್ ಸಿಂಗ್. ಪುಟ್ಟರಂಗ ಶೆಟ್ಟಿ, ನರೇಂದ್ರ ಸ್ವಾಮಿ, ಚಿಂತಾಮಣಿ ಸುಧಾಕರ್, ಹಿರಿಯೂರು ಸುಧಾಕರ್, ಎಚ್.ಕೆ. ಪಾಟೀಲ್, ಚೆಲುವರಾಯಸ್ವಾಮಿ
ಇದನ್ನೂ ಓದಿ: Cabinet Expansion : ಸಂಪುಟ ಬಿಕ್ಕಟ್ಟು ವಿಸ್ತರಣೆ; 18 ಸಚಿವರ ಪಟ್ಟಿ ಬಹುತೇಕ ಫೈನಲ್, ಯಾರ‍್ಯಾರಿದ್ದಾರೆ?