ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆ ಮತ್ತು ಆಕಾಂಕ್ಷಿಗಳ ತೀವ್ರ ಒತ್ತಡದ ಹಿನ್ನೆಲೆಯಲ್ಲಿ ರಾಜ್ಯ ಸಚಿವ ಸಂಪುಟವನ್ನು ವಿಸ್ತರಣೆ ಮಾಡಲು ಸಿಎಂ ಬಸವರಾಜ ಬೊಮ್ಮಾಯಿ ಅವರು ನಿರ್ಧರಿಸಿದ್ದಾರೆ. ನವರಾತ್ರಿ ಕಳೆದ ಕೂಡಲೇ ಸಂಪುಟ ವಿಸ್ತರಣೆ ನಡೆಯಲಿದೆ ಎಂದು ಸ್ವತಃ ಬೊಮ್ಮಾಯಿ ಅವರೇ ಪ್ರಮುಖ ಆಕಾಂಕ್ಷಿಗಳಿಗೆ ತಿಳಿಸಿದ್ದಾರೆ.
ತಮ್ಮನ್ನು ಭೇಟಿ ಮಾಡಿದ ಸಚಿವ ಸ್ಥಾನಾಕಾಂಕ್ಷಿಗಳಾದ ರಮೇಶ್ ಜಾರಕಿಹೊಳಿ, ಸಿ.ಪಿ ಯೋಗಿಶ್ವರ್ ಅವರ ಬಳಿ ಬೊಮ್ಮಾಯಿ ಅವರು ಈ ವಿಚಾರ ತಿಳಿಸಿದ್ದಾರೆ ಎನ್ನಲಾಗಿದೆ.
ʻʻವಿಸ್ತರಣೆಗೆ ನನ್ನ ತಕರಾರು ಇಲ್ಲ, ಆದರೆ ಹೈಕಮಾಂಡ್ ಆದೇಶಕ್ಕೆ ಕಾಯುತ್ತಿದ್ದೇನೆ. ಈ ವಾರದ ಅಂತ್ಯದಲ್ಲಿ ದೆಹಲಿಗೆ ಹೋಗುವ ಪ್ಲ್ಯಾನ್ ಮಾಡುತ್ತೇನೆ. ವರಿಷ್ಠರು ಭೇಟಿಗೆ ಸಮಯ ಕೊಟ್ಟರೆ ಭೇಟಿ ಮಾಡಿ ದಿನಾಂಕ ಅಂತಿಮ ಮಾಡುತ್ತೇನೆ. ಖಾಲಿ ಇರುವ ಏಳು ಸ್ಥಾನ ತುಂಬುವ ಬಗ್ಗೆ ಯೋಚನೆಯಿದೆʼʼ ಎಂದು ಬೊಮ್ಮಾಯಿ ಅವರು ಹೇಳಿದ್ದಾರೆ ಎನ್ನಲಾಗಿದೆ.
ಏಳು ಸ್ಥಾನಕ್ಕೆ ೨೦ಕ್ಕೂ ಹೆಚ್ಚು ಆಕಾಂಕ್ಷಿಗಳು
ನವರಾತ್ರಿ ಬಳಿಕ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ ಸಿಗುವ ಸಾಧ್ಯತೆ ಇದೆಯಾದರೂ ಯಾರಿಗೆ ಸ್ಥಾನ ನೀಡಬೇಕು ಎನ್ನುವುದು ಮುಖ್ಯಮಂತ್ರಿಗಳ ಮುಂದಿರುವ ದೊಡ್ಡ ಸವಾಲು. ಯಾಕೆಂದರೆ ಖಾಲಿ ಇರುವ ಏಳು ಸ್ಥಾನಗಳಿಗೆ ಇಪ್ಪತ್ತಕ್ಕೂ ಅಧಿಕ ಆಕಾಂಕ್ಷಿಗಳಿದ್ದಾರೆ. ಎಲ್ಲರೂ ಸಂಪುಟ ಪ್ರವೇಶಕ್ಕೆ ಒತ್ತಡ ಹೇರುತ್ತಿದ್ದಾರೆ.
ಮುಂದಿನ ಚುನಾವಣೆಗೆ ಮುನ್ನ ನಡೆಯುವ ಕೊನೆಯ ಸಂಪುಟ ವಿಸ್ತರಣೆ ಇದಾಗಿರುವ ಸಾಧ್ಯತೆ ಇದೆ. ಹಾಗಾಗಿ ಇದ್ದಷ್ಟು ದಿನ ಮಂತ್ರಿ ಆಗೋಣ ಅನ್ನುವ ಒತ್ತಡ ಜೋರಾಗಿದೆ. ಈ ನಡುವೆ ಯಾರಿಗೆ ಸಚಿವ ಸ್ಥಾನ ಕೊಟ್ಟರೂ ಸ್ಥಾನ ತಪ್ಪಿದವರಿಂದ ಅಸಮಾಧಾನ ಬಹಿರಂಗವಾಗುವ ಆತಂಕ ಎದುರಾಗಿದೆ. ಹೀಗಾಗಿ, ಸಿಎಂ ಅವರು ತುಂಬಾ ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕಾಗುತ್ತದೆ.
ಯಾರಿಗೆ ಸಚಿವ ಸ್ಥಾನ ಕೊಟ್ಟರೂ ಅವಕಾಶ ತಪ್ಪಿದ್ದವರಿಂದ ಅಸಮಾಧಾನ ಬಹಿರಂಗವಾಗುವ ಆತಂಕ ಎದುರಾಗಿದೆ. ಅಸಮಾಧಾನಿತ ಶಾಸಕರ ಹೇಳಿಕೆಗಳನ್ನು ಕಾಂಗ್ರೆಸ್ ಚುನಾವಣಾ ಸಮಯದಲ್ಲಿ ಬಳಸಿಕೊಳ್ಳುವ ಅಪಾಯವಿದೆ. ಹೀಗಾಗಿ ಎಚ್ಚರಿಕೆಯ ಹೆಜ್ಜೆ ಹಾಕಲು ಮುಂದಾಗಿದ್ದಾರೆ ಸಿಎಂ ಬಸವರಾಜ ಬೊಮ್ಮಾಯಿ. ಹಲವರು ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ಲಾಬಿ ಮಾಡುತ್ತಿರುವುದರಿಂದ ಒಂದು ಮಾನದಂಡವನ್ನು ರೂಪಿಸಿಕೊಂಡು ಸಿಎಂ ಮುಂದಡಿ ಇಡುವ ಸಾಧ್ಯತೆ ಇದೆ. ಜಿಲ್ಲೆ ಮತ್ತು ಜಾತಿ ಪ್ರಾತಿನಿಧ್ಯ ಕೊಡುವ ಬಗ್ಗೆ ಸಿಎಂ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
………
ಆಕಾಂಕ್ಷಿಗಳ ಪಟ್ಟಿ – ಯಾವ ವಿಚಾರದಲ್ಲಿ ಲಾಬಿ?
ರಮೇಶ್ ಜಾರಕಿಹೊಳಿ ( ಸಮ್ಮಿಶ್ರ ಸರ್ಕಾರ ಪತನ ಖೋಟಾ)
ಕೆ.ಎಸ್ ಈಶ್ವರಪ್ಪ (ಮೂಲ ಬಿಜೆಪಿ – ಕುರುಬ)
ಆರ್. ಶಂಕರ್ (ಸಮ್ಮಿಶ್ರ ಸರ್ಕಾರ ಪತನ)
ಲಕ್ಷ್ಮಣ ಸವದಿ (ಬೆಳಗಾವಿ ಜಿಲ್ಲೆಯ ಮೂಲ ಬಿಜೆಪಿ ಖೋಟಾ)
ಬಸವನಗೌಡ ಪಾಟೀಲ್ ಯತ್ನಾಳ್ (ಬಿಜಾಪುರ ಜಿಲ್ಲೆಯ ಮೂಲ ಬಿಜೆಪಿ ಖೋಟಾ)
ಸಿ.ಪಿ. ಯೋಗಿಶ್ವರ್ (ಸಮ್ಮಿಶ್ರ ಸರ್ಕಾರ ಪತನ )
ರೇಣುಕಾಚಾರ್ಯ (ಮೂಲ ಬಿಜೆಪಿ ಜಿಲ್ಲಾ ಪ್ರಾತಿನಿಧ್ಯ)
ರಾಜುಗೌಡ (ಯಾದಗಿರಿ ಜಿಲ್ಲೆಯ ಪ್ರಾತಿನಿಧ್ಯ)
ರಾಮದಾಸ (ಮೈಸೂರು ಜಿಲ್ಲೆಯ ಪ್ರಾತಿನಿಧ್ಯ)
ಪೂರ್ಣಿಮಾ ಶ್ರೀನಿವಾಸ ( ಒಬಿಸಿ ಮತ್ತು ಮಹಿಳಾ ಖೋಟಾ)
ಪಿ.ರಾಜೀವ್ ( ಎಸ್ಸಿ ಖೋಟಾ)
ಕುಮಾರ ಬಂಗಾರಪ್ಪ ( ಒಬಿಸಿ)
ಚಂದ್ರಪ್ಪ (ಚಿತ್ರದುರ್ಗ ಜಿಲ್ಲೆ ಹಾಗೂ ಎಸ್ಸಿ ಖೋಟಾ)
ಪ್ರೀತಂ ಗೌಡ (ಹಾಸನ ಜಿಲ್ಲಾ ಖೋಟಾ)
ಅಪ್ಪಚ್ಚು ರಂಜನ್ (ಕೊಡಗು ಜಿಲ್ಲೆಯ ಖೋಟಾ)
ಬೋಪಯ್ಯ (ಕೊಡಗು ಜಿಲ್ಲೆಯ ಖೋಟಾ)ನಾಗೇಶ್ (ಸಮ್ಮಿಶ್ರ ಸರ್ಕಾರ ಪತನದ ಖೋಟಾ)