ಬೆಳಗಾವಿ: ಪಂಚಮಸಾಲಿ ಸಮುದಾಯವನ್ನು 2ಎ ಮೀಸಲಾತಿ ಪಟ್ಟಿಗೆ ಸೇರಿಸಲು ಘೋಷಣೆ ಮಾಡುವ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯ ಸಚಿವ ಸಂಪುಟ ಸಭೆ ಯಾವುದೇ ನಿರ್ಧಾರ ಕೈಗೊಂಡಿಲ್ಲ.
ವಿಧಾನ ಮಂಡಲ ಅಧಿವೇಶನ ನಡೆಯುತ್ತಿರುವ ನಡುವೆಯೇ ಸುವರ್ಣ ವಿಧಾನಸೌಧದಲ್ಲಿ ಸಂಪುಟ ಸಭೆ ನಡೆಸಿದ ಸಿಎಂ ಬಸವರಾಜ ಬೊಮ್ಮಾಯಿ, ಕೆಲವೇ ನಿಮಿಷಗಳಲ್ಲಿ ಸಂಪುಟ ಸಭೆಯನ್ನು ಪೂರ್ಣಗೊಳಿಸಿದರು.
ಸಭೆಗೂ ಮುನ್ನವೇ, ಕೂಡಲಸಂಗಮ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪಾದಯಾತ್ರೆ ನಡೆಯುವ ಸ್ಥಳಕ್ಕೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರನ್ನು ಸಿಎಂ ಬೊಮ್ಮಾಯಿ ಕಳಿಸಿದರು. ಆದರೆ ಮೀಸಲಾತಿ ಘೋಷಣೆ ಆಗುವವರೆಗೂ ಪಾದಯಾತ್ರೆ ಸ್ಥಗಿತಗೊಳಿಸುವುದಿಲ್ಲ ಎಂದು ಸ್ವಾಮೀಜಿ ಹೇಳಿದ್ದಾರೆ.
ಸಚಿವ ಸಂಪುಟ ಸಭೆಗೂ ಮುನ್ನ ವಿಜಯಾನಂದ ಕಾಶಪ್ಪನವರ್, ವಿನಯ್ ಕುಲಕರ್ಣಿ, ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಇತರೆ ನಾಯಕರು ಸಿಎಂ ಬೊಮ್ಮಾಯಿ ಭೇಟಿಗೆ ಆಗಮಿಸಿದರು. ಈ ಸಮಯದಲ್ಲಿ ಸಂಪುಟ ಸಭೆ ಆರಂಭವಾದದ್ಧರಿಂದ ಸಿಎಂ ಕೊಠಡಿಯಲ್ಲಿ ಪಂಚಮಸಾಲಿ ಶಾಸಕರಿಗೆ ಹಾಗೂ ಭೇಟಿಗೆ ಆಗಮಿಸಿದವರಿಗೆ ಊಟದ ವ್ಯವಸ್ಥೆ ಮಾಡಲಾಯಿತು. ಸಂಪುಟ ಸಭೆಯಿಂದ ಹೊರಬಂದ ಸಚಿವ ಮುನೇನಕೂಪ್ಪ, ಶಾಸಕರನ್ನು ವಿಚಾರಿಸಿಕೊಂಡರು.
ಸಂಪುಟದಲ್ಲಿ ಕೆಲ ಹೊತ್ತು ಈ ಕುರಿತು ಚರ್ಚೆ ನಡೆದಿದೆ. ಕಾನೂನಾತ್ಮಕ ವಿಚಾರಗಳನ್ನು ಗಣನೆಗೆ ತೆಗೆದುಕೊಂಡು ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೇ ವಹಿಸಲು ಸಂಪುಟ ಸದಸ್ಯರು ತೀರ್ಮಾನಿಸಿದ್ದಾರೆ. ಮುಂದಿನ ಸಭೆಯಲ್ಲಿ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳೋಣ ಎಂಬ ತೀರ್ಮಾನಕ್ಕೆ ಬರಲಾಗಿದೆ.
ಸಂಪುಟ ಸಭೆಯ ನಂತರ ಪಂಚಮಸಾಲಿ ಶಾಸಕರನ್ನು ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ಮಾಡಿದರು. ಮಧ್ಯಂತರ ವರದಿಯನ್ನು ಪಡೆಯಲಾಗಿದೆ. ಕಾನೂನಾತ್ಮಕ ಸಮಸ್ಯೆಗಳನ್ನು ಚರ್ಚೆ ಮಾಡಿದ್ದೇವೆ. ಮುಂದಿನ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ. 10 ದಿನ ಸಮಯ ನೀಡಿ ಎಂದು ಕೇಳಿದ್ದಾರೆ.
ಇದಕ್ಕೆ ಪಂಚಮಸಾಲಿ ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇಲ್ಲಿಂದ ಸಭೆಗೆ ತೆರಳಿ ಅಲ್ಲಿಯೇ ನಿರ್ಧಾರ ತಿಳಿಸುತ್ತೇವೆ ಎಂದು ತಿಳಿಸಿದ್ದಾರೆ.
ಇದಕ್ಕೂ ಮುನ್ನ ಪ್ರತಿಕ್ರಿಯೆ ನೀಡಿದ್ದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ನಾವು ಎಲ್ಲ ಕಾಲದಲ್ಲೂ ಪಂಚಮಸಾಲಿ ಪರವಾಗಿದ್ದೇನೆ. ಮೀಸಲಾತಿ ನೀಡಬೇಕು ಎಂದು ನಾನೂ ಒತ್ತಾಯ ಮಾಡುತ್ತಿದ್ದೇನೆ. ಅಲ್ಲಿವರೆಗೆ ಶಾಂತರೀತಿಯಿಂದ ಇರಬೇಕು ಎಂದು ಕೋರುತ್ತಿದ್ದೇನೆ ಎಂದಿದ್ದಾರೆ.
ಇದನ್ನೂ ಓದಿ | ಪಂಚಮಸಾಲಿ ಮೀಸಲಾತಿ | ಮುಚ್ಚಿದ ಲಕೋಟೆಯಲ್ಲಿ ಮಧ್ಯಂತರ ವರದಿ; ಸೂಕ್ತ ಕಾನೂನಾತ್ಮಕ ಕ್ರಮ ಎಂದ ಸಿಎಂ