Site icon Vistara News

ವಿಸ್ತಾರ ವಿಶ್ಲೇಷಣೆ | ಕಟೀಲ್‌ಗೆ ಶುಭಾಶಯಗಳ ಮಹಾಪೂರ: ಮುಂದುವರಿಕೆಗೋ ಬೀಳ್ಕೊಡುಗೆಗೋ?

Karnataka Election Let his scams be a problem for former CM Siddaramaiah Nalin Kumar Kateel tweeted

ಬೆಂಗಳೂರು: ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಮೂರು ವರ್ಷ ಪೂರೈಸಿರುವ ಸಂಸದ ನಳಿನ್‌ಕುಮಾರ್‌ ಕಟೀಲ್‌ ಅವರಿಗೆ ಭಾನುವಾರ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ವಿವಿಧ ಪತ್ರಿಕೆಗಳಲ್ಲಿ ಪೂರ್ಣಪುಟ ಜಾಹೀರಾತು ನೀಡುವುದರ ಜತೆಗೆ ಇಲ್ಲಿಯವರೆಗೆ ರಾಜ್ಯಾಧ್ಯಕ್ಷರ ವಿಚಾರದಲ್ಲಿ ಮಗುಮ್ಮಾಗಿದ್ದವರೂ ಬಿಚ್ಚುಮನಸ್ಸಿನಿಂದ ಶುಭಾಶಯ ಕೋರಿದ್ದಾರೆ.

ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ನಳಿನ್‌ಕುಮಾರ್‌ ಕಟೀಲ್‌ 2019ರಲ್ಲಿ ನೇಮಕವಾಗಿದ್ದರು. 2016ರಲ್ಲೇ ಅವರನ್ನು ನೇಮಕ ಮಾಡುವ ಮಾತುಗಳು ನಡೆದಿದ್ದವಾದರೂ ಬದಲಾದ ಸನ್ನಿವೇಶದಲ್ಲಿ ಬಿ.ಎಸ್‌. ಯಡಿಯೂರಪ್ಪ ಅವರು ಅಧ್ಯಕ್ಷರಾಗಿದ್ದರು.

ರಾಜ್ಯಾಧ್ಯಕ್ಷರಾದ ನಂತರದಲ್ಲಿ ಕಟೀಲ್‌ ಸಾಕಷ್ಟು ಸಂಘಟನಾತ್ಮಕ ಕಾರ್ಯ ನಡೆಸಿದ್ದಾರೆ. ಮೂವತ್ತಾರು ತಿಂಗಳ ಅವಧಿಯಲ್ಲಿ 21 ಬಾರಿ ರಾಜ್ಯ ಪ್ರವಾಸ ಮಾಡಿದ್ದಾರೆ. ಈ ಪೈಕಿ 13 ಪ್ರವಾಸಗಳನ್ನು ಸಂಘಟನಾತ್ಮಕವಾಗಿ ನಡೆಸಿದ್ದರೆ ನಾಲ್ಕು ಪ್ರವಾಸಗಳನ್ನು ವಿವಿಧ ಚುನಾವಣೆಗಳಿಗಾಗಿ, ಮೂರು ಬಾರಿ ಕೊರೊನಾ ಸಮಯದಲ್ಲಿ ಕಾರ್ಯಗಳಿಗಾಗಿ ಹಾಗೂ ಒಂದು ಬಾರಿ ಜಿಲ್ಲಾ ಕಚೇರಿ ತಪಾಸಣೆಗಾಗಿ ಮಾಡಿದ್ದಾರೆ. ಸಂಘಟನಾತ್ಮಕವಾದ 312 ಮಂಡಲಗಳಲ್ಲಿ ಬರೊಬ್ಬರಿ 302 ಮಂಡಲಗಳಿಗೆ ಭೇಟಿ ನೀಡಿದ್ದಾರೆ.

ಬಹುಶಃ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಇಲ್ಲಿವರೆಗೆ ಕಾರ್ಯನಿರ್ವಹಿಸಿದವರಲ್ಲಿ ಯಾರೂ ಈ ಮಟ್ಟಿಗಿನ ಪ್ರವಾಸವನ್ನು ನಡೆಸಿಯೇ ಇಲ್ಲ. ಒಬ್ಬ ವ್ಯಕ್ತಿ ಇಷ್ಟೊಂದು ಪ್ರವಾಸ ನಡೆಸಲು ಸಾಧ್ಯವೇ ಎಂದು ಸ್ವತಃ ಬಿಜೆಪಿ ಹಿರಿಯ ನಾಯಕರೇ ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ.

ಭಾನುವಾರ ದಿನಪೂರ್ತಿ ಕಟೀಲ್‌ ಅವರಿಗೆ ಶುಭಾಶಯ ಕೋರಿದವರಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಷ್ಟ್ರೀಯ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ, ರಾಜ್ಯ ಬಿಜೆಪಿ ಪ್ರಭಾರಿ ಅರುಣ್‌ ಸಿಂಗ್‌, ಎಸ್‌.ಟಿ. ಸೋಮಶೇಕರ್‌ ಸೇರಿ ಹಿರಿಯ ಸಚಿವರುಗಳು ಸೇರಿದ್ದಾರೆ.

ನಳಿನ್‌ ಕುಮಾರ್‌ ಕಟೀಲ್‌ ಅವರು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದು, ಮುಂದಿನ ಚುನಾವಣೆಗಳನ್ನೂ ಅವರ ನೇತೃತ್ವದಲ್ಲೇ ಎದುರಿಸುತ್ತೇವೆ ಎಂದು ಅರುಣ್‌ ಸಿಂಗ್‌ ಜಾಹೀರಾತಿನಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ ಅಚ್ಚರಿಯ ವಿಚಾರವೆಂದರೆ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಎಲ್ಲಿಯೂ ಈ ಕುರಿತು ಮಾತನಾಡಿಲ್ಲ. ಸಾಮಾಜಿಕ ಜಾಲತಾಣದ ಮೂಲಕ ರಾಜಕೀಯ ಸಂದೇಶಗಳನ್ನು ರವಾನಿಸುವಲ್ಲಿ ನಿಷ್ಣಾತರಾಗಿರುವ ಅವರು ಈ ಬಗ್ಗೆ ಯಾವುದೇ ಪೋಸ್ಟ್‌ ಮಾಡಿಲ್ಲ.

ಕಟೀಲ್‌ ಅವರೇ ಮುಂದುವರಿಯುತ್ತಾರೆ ಎಂದು ಅರುಣ್‌ ಸ್ಪಷ್ಟವಾಗಿ ಈ ಹಿಂದೆಯೂ ಅನೇಕ ಬಾರಿ ಹೇಳಿದ್ದಾರೆ. ಆದರೆ ಅರುಣ್‌ ಸಿಂಗ್‌ ಅವರ ಮಾತನ್ನೂ ಫೇಸ್‌ ವ್ಯಾಲ್ಯೂನಲ್ಲಿ (ಯಥಾವತ್ತಾಗಿ) ಸ್ವೀಕರಿಸಲು ಬಿಜೆಪಿ ನಾಯಕರ ಮನಸ್ಸು ಒಪ್ಪುತ್ತಿಲ್ಲ. ಈ ಹಿಂದೆ ಬಿ.ಎಸ್‌. ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ, ಯಾವುದೇ ಕಾರಣಕ್ಕೆ ಸಿಎಂ ಬದಲಾವಣೆ ಆಗುವುದಿಲ್ಲ ಎಂದು ಅನೇಕ ಬಾರಿ ಹೇಳಿದ್ದರು. ಹೀಗಾಗಿ ಅರುಣ್‌ ಸಿಂಗ್‌ ಅವರ ಮಾತನ್ನು ಹೇಗೆ ಸ್ವೀಕರಿಸುವುದು ಎಂದು ರಾಜ್ಯ ಬಿಜೆಪಿ ಮೋರ್ಚಾವೊಂದರ ಪದಾಧಿಕಾರಿಯೊಬ್ಬರು ಪ್ರಶ್ನಿಸಿದ್ದಾರೆ.

ಬೀಳ್ಕೊಡುಗೆ ಅದ್ಧೂರಿ?

ಪಕ್ಷದ ವತಿಯಿಂದ ಅದ್ಧೂರಿ ಜಾಹೀರಾತು ನೀಡಿ ಕಟೀಲ್‌ ಅವರನ್ನು ಹಾಡಿ ಹೊಗಳಿರುವುದು ಹಲವರಲ್ಲಿ ಸಂಶಯ ಮೂಡಿಸಿದೆ. ಇತ್ತೀಚಿನ ದಿನಗಳಲ್ಲಿ ಕಟೀಲ್‌ ಅವರ ಹಾವಭಾವ ನೋಡಿದ್ದ ಅನೇಕರು, ಬದಲಾವಣೆಗೆ ಮಾನಸಿಕವಾಗಿ ಸಿದ್ಧವಾಗಿದ್ದಾರೆ ಎಂದೇ ಭಾವಿಸಿದ್ದರು. ಸಾಮಾನ್ಯವಾಗಿ ಪಕ್ಷದ ಕಾರ್ಯಕ್ರಮಗಳ ಯೋಜನೆ ಮಾಡುತ್ತಿದ್ದ ಕಟೀಲ್‌, ಇತ್ತೀಚಿನ ದಿನಗಳಲ್ಲಿ ಹೊಸ ಯೋಜನೆ ರೂಪಿಸಿಲ್ಲ.

ಆದರೆ ಇದೀಗ ಜಾಹೀರಾತು ನೀಡಿರುವುದರಿಂದ, ಅವರನ್ನೇ ಮುಂದುವರಿಸಲು ವರಿಷ್ಠರು ತೀರ್ಮಾನಿಸಿದ್ದಾರೆ ಎಂದು ಕೆಲ ನಾಯಕರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಮತ್ತೆ ಕೆಲವರ ಅಭಿಪ್ರಾಯ ಬೇರೆಯೇ ಇದೆ. ಬೆಂಗಳೂರು ಬಿಜೆಪಿ ನಾಯಕರೊಬ್ಬರ ಪ್ರಕಾರ, ಕಟೀಲ್‌ ಅವರಿಗೆ ಈ ರೀತಿ ಬೀಳ್ಕೊಡುಗೆಯನ್ನೂ ನೀಡುತ್ತಿರಬಹುದು.

ಕಟೀಲ್‌ ಅವರು ಪಕ್ಷಕ್ಕಾಗಿ ಸಾಕಷ್ಟು ದುಡಿದಿದ್ದಾರೆ. ಆದರೆ ಅವರ ಅವಧಿಯ ಅಂತಿಮ ಘಟ್ಟದಲ್ಲಿ ಮಂಗಳೂರಿನಲ್ಲಿ ನಡೆದ ʼಕಾರು ಅಲುಗಾಡಿಸುವʼ ಘಟನೆಯಿಂದ ಬೇಸರಗೊಂಡಿದ್ದಾರೆ. ತಾವು ಬೆಳೆದುಬಂದ ಪ್ರದೇಶದಲ್ಲೇ ಕಾರ್ಯಕರ್ತರು ಹೀಗೆ ಮಾಡಿದರಲ್ಲ ಎಂಬ ನೋವಿದೆ. ಏಕಾಏಕಿ ರಾಜ್ಯಾಧ್ಯಕ್ಷ ಸ್ಥಾನದಿಂದ ಬದಲಾವಣೆ ಮಾಡಿಬಿಟ್ಟರೆ, ಈ ಸ್ಥಾನದಲ್ಲಿ ವಿಫಲ ಹೊಂದಿದ್ದರಿಂದ ಬದಲಾವಣೆ ಮಾಡಲಾಯಿತು ಎಂಬ ಸಂದೇಶ ಹೋಗುತ್ತದೆ.

ಪಕ್ಷದ ರಾಜ್ಯಾಧ್ಯಕ್ಷರು ವಿಫಲರಾದರು ಎನ್ನುವುದು ಪಕ್ಷಕ್ಕೆ ಒಂದು ಅವಮಾನವಾದರೆ, ಇನ್ನೂ ಸಾಕಷ್ಟು ವರ್ಷ ರಾಜಕಾರಣ ಮಾಡಬೇಕಿರುವ ಯುವಕರಾದ ಕಟೀಲ್‌ ಅವರ ಭವಿಷ್ಯಕ್ಕೂ ತೊಂದರೆ ಆಗುತ್ತದೆ. ಹಾಗಾಗಿ ಅವರ ಕಾಲದಲ್ಲಿ ಏನೆಲ್ಲ ಉತ್ತಮ ಕಾರ್ಯಗಳು ನಡೆದವು ಎಂಬುದನ್ನು ಬಿಂಬಿಸುವ ಪ್ರಯತ್ನ ನಡೆದಿದೆ. ಹೀಗಾಗಿ, ಬದಲಾವಣೆ ಮಾಡುವ ಹಾಗೂ ಮಾಡದಿರುವ ಎರಡೂ ಆಯ್ಕೆಗಳು ಮುಕ್ತವಾಗಿವೆ. ಈ ಹಿನ್ನೆಲೆಯಲ್ಲಿ, ಶುಭಾಶಯ ಕೋರಿದರು ಎಂದಾಕ್ಷಣ ಬದಲಾವಣೆ ಮಾಡುವುದೇ ಇಲ್ಲ ಎಂದು ಖಡಾಖಂಡಿತವಾಗಿ ಹೇಳಲು ಸಾಧ್ಯವಿಲ್ಲ ಎಂದು ನಾಯಕರು ಅಭಿಪ್ರಾಯಪಟ್ಟಿದ್ದಾರೆ.

ಸಿ.ಟಿ. ರವಿ, ಸುನೀಲ್‌ ಫುಲ್‌ ಆಕ್ಟಿವ್‌

ರಾಜ್ಯ ಬಿಜೆಪಿ ಅಧ್ಯಕ್ಷರ ಬದಲಾವಣೆ ಚರ್ಚೆಗಳು ಒಂದೆಡೆಯಾದರೆ ಮತ್ತೊಂದೆಡೆ ಬಿಜೆಪಿಯ ಸಂಘಟನೆಯಿಂದಲೇ ಬೆಳೆದುಬಂದ ಸಚಿವ ವಿ. ಸುನೀಲ್‌ಕುಮಾರ್‌ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೆಚ್ಚು ಸಕ್ರಿಯರಾಗಿದ್ದಾರೆ. ಮಂಗಳೂರಿನಲ್ಲಿ ಸೆ.2ರಂದು ಪ್ರಧಾನಿ ನರೇಂದ್ರ ಮೋದಿಯವರ ಬೃಹತ್‌ ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮದ ಕುರಿತು ಸುನೀಲ್‌ಕುಮಾರ್‌ ಹೆಚ್ಚು ಆಸ್ಥೆ ವಹಿಸಿ ಓಡಾಡುತ್ತಿದ್ದಾರೆ. ಕಾರ್ಯಕ್ರಮದ ಆಯೋಜನೆಯಿಂದ ಜನರನ್ನು ಕರೆತರುವವರೆಗಿನ ತಯಾರಿಯಲ್ಲಿ ನಿರತರಾಗಿದ್ದಾರೆ. ಇತ್ತ ಸಿ.ಟಿ. ರವಿ ಅವರು ಈ ಹಿಂದಿಗಿಂತಲೂ ಹೆಚ್ಚು ರಾಜ್ಯ ರಾಜಕಾರಣದತ್ತ ಗಮನ ನೀಡಿದ್ದಾರೆ. ತಮ್ಮನ್ನು ಹಿಂದುತ್ವದ ನಾಯಕ ಎಂದು ಬಿಂಬಿಸಿಕೊಳ್ಳುವುದರಲ್ಲಿ ಹಿಂದೆ ಬೀಳುತ್ತಿಲ್ಲ. ಜತೆಗೆ, ಸಮಯ ಬಂದಾಗ ಅನ್ಯ ಪಕ್ಷದ ಜತೆಗೆ ಮೈತ್ರಿ ಕುದುರಿಸುವ ಚಾಕಚಕ್ಯತೆಯೂ ತಮಗೆ ಇದೆ ಎನ್ನುವ ಸಂದೇಶಗಳನ್ನೂ ರವಾನೆ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ಕೆಲ ದಿನಗಳಲ್ಲಿ ಬಿಜೆಪಿ ವರಿಷ್ಠರ ನಿರ್ಧಾರ ಕುತೂಹಲ ಮೂಡಿಸಿದೆ.

ಇದನ್ನೂ ಓದಿ | Independence Day | ದೇಶವನ್ನು ಮತ್ತೊಮ್ಮೆ ಒಗ್ಗೂಡಿಸಿದ ತಿರಂಗಾ: ನಳಿನ್‌ ಕುಮಾರ್‌ ಕಟೀಲ್‌

Exit mobile version