ಬೆಂಗಳೂರು : ಆಜಾನ್ ಕೂಗುವ ಮೈಕ್‌ಗಳನ್ನು ಮಸೀದಿಗಳಿಂದ ತೆರವು ಮಾಡದಿರುವುದನ್ನು ಪ್ರತಿಭಟಿಸಿ ರಾಜ್ಯದೆಲ್ಲೆಡೆ ಶ್ರೀರಾಮ ಸೇನೆ ಮತ್ತು ಇತರ ಸಂಘಟನೆಗಳ ಕಾರ್ಯಕರ್ತರು ಸುಪ್ರಭಾತ ಮತ್ತು ಭಜನೆಯನ್ನು ಮೊಳಗಿಸಿದ್ದರು, ಈ ಮೂಲಕ ರಾಜ್ಯದಲ್ಲಿ ಆಜಾನ್-ಭಜನೆ ವಿವಾದ ತೀವ್ರ ಸ್ವರೂಪ ಪಡೆದಿತ್ತು. ಈ ಕುರಿತಂತೆ ಹಲವಾರು ನಾಯಕರು ಸಾಕಷ್ಟು ಹೇಳಿಕೆಯನ್ನು ನೀಡುವುದರ ಮೂಲಕ ಭಾರಿ ಚರ್ಚೆಗೆ ಒಳಗಾಗಿತ್ತು.
ಇದರ ಬೆನ್ನಲ್ಲೇ ಈಗ ಅಜಾನ್ ವಿರುದ್ಧ ಅಭಿಯಾನ ಮಾಡುವವರು ಭಯೋತ್ಪಾದಕರು ಎಂಬ ಹೇಳಿಕೆ ಮೂಲಕ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ. ರಾಜ್ಯ ಸರ್ಕಾರದ ವೈಫಲ್ಯಗಳನ್ನು ಮುಚ್ಚಿ ಹತ್ತಿಕ್ಕಲು ಆರೆಸ್ಸೆಸ್ ಏಜೆಂಟರು ಧಾರ್ಮಿಕ ವಿಚಾರಗಳನ್ನು ಮುಂದಿಟ್ಟುಕೊಂಡು ಶಾಂತಿ ಕದಡಲು ಹೊರಟಿದ್ದಾರೆ ಎಂದು ಹೇಳಿಕೆ ನೀಡಿದ್ದರು.
ಇದನ್ನೂ ಓದಿ : ಆಜಾನ್ V/s ಭಜನೆ: ಮುತಾಲಿಕ್ ಅಂತಹವರನ್ನು ಒದ್ದು ಒಳಗೆ ಹಾಕಬೇಕು ಎಂದ ಎಚ್.ಡಿ. ಕುಮಾರಸ್ವಾಮಿ
ಈ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರ್ಗಿ ಕಿಡಿಕಾರಿದ್ದಾರೆ.
ನಾನು ಹಿಂದೂ ಭಯೋತ್ಪಾದಕ. ಧ್ವನಿವರ್ಧಕದಲ್ಲಿ ಆದೇಶ ನೀಡಿದ ಸುಪ್ರೀಂ ಜಡ್ಜ್ ಕೂಡ ಇವರ ಪ್ರಕಾರ ಭಯೋತ್ಪಾದಕರೇನಾ??? ಎಂದು ಸಂಬರ್ಗಿ ಪ್ರಶ್ನಿಸಿ, ಕಾಂಗ್ರೆಸ್ ತುಷ್ಟೀಕರಣ ಮತ್ತು ಓಲೈಸುವ ರಾಜಕಾರಣಕ್ಕೆ ನನ್ನ ಧಿಕ್ಕಾರ ಎಂದು ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಘಟನೆಯ ಹಿನ್ನೆಲೆ
ʼಸುಪ್ರೀಂ ಕೋರ್ಟ್ ಆದೇಶದಂತೆ ಮಸೀದಿಗಳಲ್ಲಿನ ಆಜಾನ್ ಸದ್ದಿಗೆ ಕಡಿವಾಣ ಹಾಕಬೇಕು. ಮೈಕ್ ಗಳನ್ನು ತೆರವುಗೊಳಿಸಬೇಕು,ʼʼ ಎಂದು ಆಗ್ರಹಿಸಿ ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಅವರು ರಾಜ್ಯ ಸರಕಾರಕ್ಕೆ ಮೇ 9ರ ಗಡುವು ವಿಧಿಸಿದ್ದರು. ಆದರೆ ಸರಕಾರ ಇದುವರೆಗೂ ಮೈಕ್ ಗಳನ್ನು ತೆರವು ಮಾಡಿಲ್ಲ ಎಂದು ಆಪಾದಿಸಿ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ರಾಜ್ಯದ ಸಾವಿರಾರು ದೇವಾಲಯಗಳಲ್ಲಿ ಹನುಮಾನ್ ಚಾಲೀಸಾ ಹಾಗೂ ಭಕ್ತಿ ಗೀತೆಗಳನ್ನು ಮೊಳಗಿಸಲಾಗಿತ್ತು.