ದಾವಣಗೆರೆ: ಚುನಾವಣಾ ನೀತಿ ಸಂಹಿತೆ (Karnataka Election) ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಮೆರವಣಿಗೆ, ಬೃಹತ್ ಸಮಾವೇಶದಂತಹ ಸಾಂಪ್ರದಾಯಿಕ ಪ್ರಚಾರ ವಿಧಾನಕ್ಕೆ ಬದಲಾಗಿ ತಂತ್ರಜ್ಞಾನದ ಮೊರೆ ಹೋಗಿವೆ. ಈ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣ ಸೇರಿ ವಿವಿಧ ಮಾಧ್ಯಮಗಳನ್ನು ಬಳಸಿಕೊಂಡು ಹೈಟೆಕ್ ಪ್ರಚಾರ ನಡೆಸುತ್ತಿರುವುದು ಎಲ್ಲೆಡೆ ಕಂಡುಬರುತ್ತಿದೆ. ಈ ನಡುವೆ ನಗರದಲ್ಲಿ ಬಿಜೆಪಿ ಪರ ಪ್ರಚಾರ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಟೆಲಿಕಾಲಿಂಗ್ ಸೆಂಟರ್ ಮೇಲೆ ಫ್ಲೈಯಿಂಗ್ ಸ್ಕ್ವಾಡ್ ದಾಳಿ ನಡೆಸಿ 59 ಕಂಪ್ಯೂಟರ್ ಜಪ್ತಿ ಮಾಡಿ, ಕಚೇರಿ ಬಾಗಿಲು ಮುಚ್ಚಿಸಿದೆ.
ನಗರದ ಚೇತನಾ ಕಾಂಪ್ಲೆಕ್ಸ್ ಎದುರಿನ ಕಟ್ಟಡದಲ್ಲಿರುವ ಕಚೇರಿಯಲ್ಲಿ ಜನರಿಗೆ ಕರೆ ಮಾಡಿ, ಬಿಜೆಪಿ ಸರ್ಕಾರದ ಸಾಧನೆಗಳನ್ನು ತಿಳಿಸಿ, ಪಕ್ಷದ ಪರ ಪ್ರಚಾರ ಮಾಡಲಾಗುತ್ತಿತ್ತು ಎನ್ನಲಾಗಿದೆ. ಹೀಗಾಗಿ ಫ್ಲೈಯಿಂಗ್ ಸ್ಕ್ವಾಡ್ ದಾಳಿ ನಡೆಸಿ ಟೆಲಿಕಾಲಿಂಗ್ ಸೆಂಟರ್‌ನ ಬಾಗಿಲು ಮುಚ್ಚಿಸಿದೆ.
ಪರವಾನಗಿ ಇಲ್ಲದೆ ನಡೆಸುತ್ತಿದ್ದ ಟೆಲಿಕಾಲಿಂಗ್ ಸೆಂಟರ್‌ನಲ್ಲಿ 60ಕ್ಕೂ ಹೆಚ್ಚು ಯುವಕ, ಯುವತಿಯರು ಕೆಲಸ ಮಾಡುತ್ತಿದ್ದರು. ಕಾಂಗ್ರೆಸ್ ಮುಖಂಡರ ದೂರಿನ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿಗಳು ದಾಳಿ ನಡೆಸಿ, ಕಂಪ್ಯೂಟರ್‌ಗಳನ್ನು ವಶಕ್ಕೆ ಪಡೆದು, ಕಚೇರಿಯನ್ನು ಸೀಜ್ ಮಾಡಿದ್ದಾರೆ.
ಎರಡು ರೆಸಾರ್ಟ್‌ಗಳ ಮೇಲೆ ದಾಳಿ
ಬೆಂಗಳೂರು: ಯಶವಂತಪುರ ವಿಧಾನಸಭಾ ಕ್ಷೇತ್ರದ ಎರಡು ರೆಸಾರ್ಟ್‌ಗಳ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಬಿಜೆಪಿ ಪಕ್ಷದ ಕಾರ್ಯಕರ್ತರು ಸಭೆ ಸೇರಿದ್ದ ಹಿನ್ನೆಲೆಯಲ್ಲಿ ಕನಕಪುರ ರಸ್ತೆಯ ವಾಜರಹಳ್ಳಿ ಹಾಲಿಡೇ ವಿಲೇಜ್ ಮತ್ತು ಬಿಂದ್ರಾ ರೆಸಾರ್ಟ್ ಮೇಲೆ ದಾಳಿ ನಡೆಸಲಾಗಿದೆ.
ಇದನ್ನೂ ಓದಿ | Karnataka Election 2023: ಜಗದೀಶ್ ಶೆಟ್ಟರ್ ಕಾಂಗ್ರೆಸ್‌ಗಾ? ಜೆಡಿಎಸ್‌ಗಾ?: ಎಚ್‌ಡಿಕೆ, ಶಾಮನೂರು ಹೇಳಿದ್ದೇನು?
ಮಲ್ಲೇಶ್ವರದಲ್ಲಿ 50 ಸೀರೆ, 50 ಪಂಚೆ ಜಪ್ತಿ
ಬೆಂಗಳೂರು: ನಗರದ ಮಲ್ಲೇಶ್ವರ ವ್ಯಾಪ್ತಿಯಲ್ಲಿ ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಸಾವಿರಾರು ರೂಪಾಯಿ ಮೌಲ್ಯದ 50 ಸೀರೆ, 50 ಪಂಚೆಗಳು ಹಾಗೂ ಕಾರನ್ನು ವಶಕ್ಕೆ ಪಡೆದಿದೆ. ಮಲ್ಲೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಉಡುಪಿ ಕಾಂಗ್ರೆಸ್ ಭವನದ ಬಳಿ ಬ್ಯಾನರ್, ಬಂಟಿಂಗ್ಸ್ ತೆರವು
ಉಡುಪಿ: ವಿಧಾನಸಭಾ ಚುನಾವಣಾ ನೀತಿ ಸಹಿತೆ ಉಲ್ಲಂಘನೆ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಭವನಕ್ಕೆ ಫ್ಲೈಯಿಂಗ್ ಸ್ಕ್ಯಾಡ್ ದಾಳಿ ಮಾಡಿ, ಅನುಮತಿ ಇಲ್ಲದೆ ಹಾಕಿರುವ ಬ್ಯಾನರ್ ಮತ್ತು ಬಂಟಿಂಗ್ಸ್ ಅನ್ನು ತೆರವು ಮಾಡಿದೆ. ಮತ್ತೊಮ್ಮೆ ನೀತಿ ಸಂಹಿತೆ ಉಲ್ಲಂಘಿಸದಂತೆ ಫ್ಲೈಯಿಂಗ್ ಸ್ಕ್ಯಾಡ್ ಎಚ್ಚರಿಕೆ ನೀಡಿದೆ.
ಡಿಸಿಸಿ ಬ್ಯಾಂಕ್‌ನ 40 ಲಕ್ಷ ರೂಪಾಯಿ ಜಪ್ತಿ
ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲೂಕಿನ ಚೌಳ ಹಿರಿಯೂರು ಚೆಕ್ ಪೋಸ್ಟ್‌ನಲ್ಲಿ ಸೂಕ್ತ ದಾಖಲೆ ಇಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ ಡಿಸಿಸಿ ಬ್ಯಾಂಕ್‌ನ 40 ಲಕ್ಷ ರೂ.ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದೇ ವೇಳೆ ಡಿಸಿಸಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯ ಕಾರನ್ನು ಕೂಡ ವಶಕ್ಕೆ ಪಡೆಯಲಾಗಿದೆ.
ಬೀದರ್‌ನಲ್ಲಿ 3.20 ಲಕ್ಷ ರೂ. ಮೌಲ್ಯದ ಮದ್ಯ ವಶ
ಬೀದರ್: ತಾಲೂಕಿನ ಕಮಠಾಣ ಗ್ರಾಮದ ಬಳಿ ಅಕ್ರಮವಾಗಿ ಸಾಗಿಸುತ್ತಿದ್ದ 3.20 ಲಕ್ಷ ರೂಪಾಯಿ ಮೌಲ್ಯದ 270 ಲೀಟರ್ ಮದ್ಯವನ್ನು ಅಬಕಾರಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಒರಿಜಿನಲ್ ಚಾಯ್ಸ್, ಓಟಿ ವಿಸ್ಕಿ ಬ್ರ್ಯಾಂಡ್‌ನ ಪ್ಯಾಕೆಟ್‌ಗಳನ್ನು ಜಪ್ತಿಯಾಗಿವೆ. ಮದ್ಯ ಸಾಗಾಟ ಮಾಡುತ್ತಿ ವ್ಯಕ್ತಿಯನ್ನು ಬಂಧಿಸಲಾಗಿದೆ.
ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ಐಟಿ ದಾಳಿ
ಶಿವಮೊಗ್ಗ: ತೀರ್ಥಹಳ್ಳಿ ಪಟ್ಟಣದ ಮೂರು ಸಹಕಾರ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಅಕ್ರಮ ಹಣದ ವಹಿವಾಟು ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಚುನಾವಣೆಗೆ ಸ್ಪರ್ಧಿಸಿರುವ ಪ್ರಮುಖ ರಾಜಕಾರಣಿಯೊಬ್ಬರ ಬೆಂಬಲಿಗರು, ಕಾರ್ಯಕರ್ತರು ಇರುವ ಸಹಕಾರ ಸಂಸ್ಥೆಗಳಲ್ಲಿ ಅನುಮಾನಾಸ್ಪದ ವಹಿವಾಟು ಪತ್ತೆಯಾಗಿದ್ದರಿಂದ ಪರಿಶೀಲನೆ ನಡೆಸಲಾಗಿದೆ. ಸಂಸ್ಥೆಗಳ ಲೆಕ್ಕ ಪತ್ರ, ನಗದು ವಹಿವಾಟಿನ ವಿವರವನ್ನು ಅಧಿಕಾರಿಗಳ ತಂಡ ಪರಿಶೀಲನೆ ನಡೆಸುತ್ತಿದೆ. ಇದೇ ವೇಳೆ ವಕೀಲರೊಬ್ಬರ ಕಚೇರಿ ಮೇಲೂ ದಾಳಿ ನಡೆಸಿದ್ದು, ದಾಖಲೆಯಿಲ್ಲದ 2 ಲಕ್ಷ ರೂ.ಗಳನ್ನು ವಶಕ್ಕೆ ಪಡೆಯಲಾಗಿದೆ.
ಕಾಫಿನಾಡಿನಲ್ಲಿ ಚುನಾವಣಾ ಅಧಿಕಾರಿಗಳ ಭರ್ಜರಿ ಬೇಟೆ
ಚಿಕ್ಕಮಗಳೂರು: ಜಿಲ್ಲೆಯ ವಿವಿಧೆಡೆ ಚೆಕ್‌ಪೋಸ್ಟ್‌ಗಳಲ್ಲಿ ಸೂಕ್ತ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ನಗದುನ ಸೇರಿ 20 ಲಕ್ಷ ರೂಪಾಯಿ ಮೌಲ್ಯದ ವಿವಿಧ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಕಡೂರು ಚೆಕ್‌ಪೋಸ್ಟ್‌ನಲ್ಲಿ 6.85 ಲಕ್ಷ ರೂಪಾಯಿ, ತರೀಕೆರೆ ಚೆಕ್‌ಪೋಸ್ಟ್‌ನಲ್ಲಿ 3.4 ಲಕ್ಷ ರೂಪಾಯಿ, ಲಕ್ಕವಳ್ಳಿ ಎಂ.ಎನ್.ಕ್ಯಾಂಪ್‌ನಲ್ಲಿ 1 ಲಕ್ಷ ರೂಪಾಯಿ ಹಾಗೂ ಚಿಕ್ಕಮಗಳೂರಿನಲ್ಲಿ ಕೋರಿಯರ್ ಸಾಗಿಸುತ್ತಿದ್ದ 7.5 ಲಕ್ಷ ರೂ. ಮೌಲ್ಯದ 760 ಜೀನ್ಸ್‌ಪ್ಯಾಂಟ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಬೀರೂರಿನಲ್ಲಿ ದಾಖಲೆ ಇಲ್ಲದ 68,500 ರೂಪಾಯಿ ಮೌಲ್ಯದ 47 ಕುಕ್ಕರ್, 77 ಸೀರೆಗಳನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ | Basavaraj Bommai: ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಸೇರಿ ವಿವಿಧ ದೇವಾಲಯಗಳಿಗೆ ಸಿಎಂ ಬೊಮ್ಮಾಯಿ ಭೇಟಿ, ವಿಶೇಷ ಪೂಜೆ
ಬೆಳಗಾವಿಯಲ್ಲಿ 9 ಲಕ್ಷ ರೂಪಾಯಿ ಜಪ್ತಿ
ಬೆಳಗಾವಿ: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಒಟ್ಟು 9 ಲಕ್ಷ ರೂ.ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಕುಡಚಿ ಚೆಕ್‌ಪೋಸ್ಟ್‌ನಲ್ಲಿ ಮಿರಾಜ್‌ನಿಂದ ಮೂಡಲಗಿಗೆ ಕಾರಿನಲ್ಲಿ ಸಾಗಿಸುತ್ತಿದ್ದ 8 ಲಕ್ಷ ರೂಪಾಯಿ ಹಾಗೂ ಚಿಕ್ಕಲಾಗುಡ್ಡ ಚೆಕ್‌ಪೋಸ್ಟ್‌ನಲ್ಲಿ ಮಹಾರಾಷ್ಟ್ರದಿಂದ ಕರ್ನಾಟಕದತ್ತ ಕಾರಿನಲ್ಲಿ ಸಾಗಿಸುತ್ತಿದ್ದ 1 ಲಕ್ಷ ರೂಪಾಯಿಯನ್ನು ಜಪ್ತಿ ಮಾಡಿ, ಕಾರು ಚಾಲಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕುಡಚಿ ಹಾಗೂ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.