ಹೊಸಪೇಟೆ: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಭಾನುವಾರ ಕರ್ನಾಟಕದಲ್ಲಿ (Karnataka) ಸಾಲು ಸಾಲು ರ‍್ಯಾಲಿಗಳನ್ನು ಕೈಗೊಳ್ಳುತ್ತಿರುವ ನರೇಂದ್ರ ಮೋದಿ, ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ನಡೆದ ಸಮಾವೇಶದಲ್ಲೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಅದರಲ್ಲೂ, “ಒಬ್ಬ ಪುಕ್ಕಲ ನಾಯಕ ದೇಶವನ್ನು ಆಳಬಲ್ಲನೆ” ಎಂದು ಪ್ರಶ್ನಿಸುವ ಮೂಲಕ ರಾಹುಲ್ ಗಾಂಧಿ (Rahul Gandhi) ಅವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು.
“ದೇಶದಲ್ಲಿ ರಾಮಮಂದಿರ ನಿರ್ಮಾಣವಾದರೆ ದಂಗೆ ಸೃಷ್ಟಿಯಾಗುತ್ತದೆ. ಬೆಂಕಿ ಹೊತ್ತಿಕೊಳ್ಳುತ್ತದೆ ಎಂದು ಕಾಂಗ್ರೆಸ್ ನಾಯಕರು ಭಯ ಹುಟ್ಟಿಸುತ್ತಿದ್ದರು. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ 370ನೇ ವಿಧಿ ರದ್ದುಗೊಳಿಸಿದರೂ ಇದೇ ರೀತಿ ಆಗುತ್ತದೆ ಎಂದು ಸುಳ್ಳು ಹಬ್ಬಿಸಿದರು. ಆದರೆ, ಈಗ ರಾಮಮಂದಿರ ನಿರ್ಮಿಸಲಾಗಿದೆ. 370ನೇ ವಿಧಿಯನ್ನೂ ರದ್ದುಗೊಳಿಸಲಾಗಿದೆ. ಎಲ್ಲಾದರೂ ಗಲಾಟೆ ನಡೆಯಿತೇ? ಬೆಂಕಿ ಹೊತ್ತಿಕೊಂಡಿತೇ? ಅಷ್ಟಕ್ಕೂ, ಪುಕ್ಕಲ ನಾಯಕನೊಬ್ಬ ದೇಶದ ಪ್ರಧಾನಿಯಾಗಿ ಆಡಳಿತ ನಡೆಸಬಲ್ಲನೇ? ದೇಶ ಮುನ್ನಡೆಸಲು ಛಾತಿ ಇರುವ ನಾಯಕ ಬೇಕೇ ಹೊರತು, ಪುಕ್ಕಲ ನಾಯಕ” ಎಂದು ರಾಹುಲ್ ಗಾಂಧಿ ಪ್ರಸ್ತಾಪಿಸದೆ ಕುಟುಕಿದರು.
“ಮೇ 7ರಂದು ಮತದಾನ ನಡೆಯಲಿದೆ. ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಳ್ಳಲಾಗಿದೆ. ಬಿಜೆಪಿ ಗೆಲುವು ಸಾಧಿಸಿದರೆ ರೈತರು, ಬಡವರ ಪರವಾಗಿ ಕೆಲಸ ಮಾಡಲಾಗುತ್ತದೆ. ಹಾಗಾಗಿ, ಬಳ್ಳಾರಿಯಲ್ಲಿ ಬಿ.ಶ್ರೀರಾಮುಲು, ಕೊಪ್ಪಳದಲ್ಲಿ ಬಸವರಾಜ್ ಅವರನ್ನು ಗೆಲ್ಲಿಸಿ. ನೀವು ನೀಡುವ ಪ್ರತಿಯೊಂದು ಮತವೂ ಮೋದಿಯ ಕೈ ಬಲಪಡಿಸುತ್ತದೆ. ಇದು ದೇಶದಲ್ಲಿ ಉತ್ತಮ ಆಡಳಿತ ನೀಡಲು ಸಹಕಾರಿಯಾಗುತ್ತದೆ. ನೀವು ನೀಡುವ ಮತವು ವಿಕಸಿತ ಭಾರತ, ವಿಕಸಿತ ಕರ್ನಾಟಕದ ಗ್ಯಾರಂಟಿಯಾಗಿದೆ” ಎಂದು ತಿಳಿಸಿದರು.
ಕೆಫೆ ಬಾಂಬ್ ಸ್ಫೋಟದ ಕುರಿತೂ ಉಲ್ಲೇಖ
ಬೆಂಗಳೂರಿನಲ್ಲಿರುವ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ಕುರಿತು ನರೇಂದ್ರ ಮೋದಿ ಪ್ರಸ್ತಾಪಿಸಿದರು. ಕೆಫೆ ಬಾಂಬ್ ಸ್ಫೋಟದ ಬಳಿಕ ಕಾಂಗ್ರೆಸ್ ನಾಯಕರು ಮೃದುವಾಗಿ ಮಾತನಾಡಲು ಶುರು ಮಾಡಿದರು. ಇದು ಸಿಲಿಂಡರ್ ಸ್ಫೋಟ ಎಂದರು, ಔದ್ಯಮಿಕ ವೈಷಮ್ಯದಿಂದ ಹೀಗೆ ಮಾಡಿದರು ಎಂದರು. ಆದರೆ, ದೋಷಿಗಳನ್ನು ಪಶ್ಚಿಮ ಬಂಗಾಳದಲ್ಲಿ ಬಂಧಿಸಲಾಯಿತು. ಆಗ ಕಾಂಗ್ರೆಸ್ ನಾಯಕರು ಓಲೈಸುವುದನ್ನು ನಿಲ್ಲಿಸಿದರು” ಎಂದು ಗುಡುಗಿದರು.
“ಬಿಜೆಪಿ ನೇತೃತ್ವದ ಸರ್ಕಾರವು ದೇಶದಲ್ಲಿ ಬಾಂಬ್ ದಾಳಿಯನ್ನು ನಿಯಂತ್ರಿಸಿದೆ. ಮಂಗಳೂರು, ಅಯೋಧ್ಯೆ, ಮುಂಬೈ ಸೇರಿ ಯಾವುದೇ ನಗರಗಳಲ್ಲಿ ಬಾಂಬ್ ದಾಳಿಯನ್ನು ನಿಯಂತ್ರಿಸಿದೆ. ಬಾಂಬ್ ದಾಳಿಕೋರರನ್ನು ನಾವು ಮಟ್ಟಹಾಕಿದ್ದೇವೆ. ಒಂದು ಕಾಲದಲ್ಲಿ ಯೋಧರನ್ನು ಅಪಹರಿಸಿ, ಅವರ ರುಂಡ ಕತ್ತರಿಸಿ ಕಳುಹಿಸಲಾಗುತ್ತಿತ್ತು. ಆದರೆ, ಈಗ ಕೇಂದ್ರದಲ್ಲಿ ಮೋದಿ ಸರ್ಕಾರವಿದೆ. ಮನೆಯೊಳಗೆ ನುಗ್ಗಿ ಹೊಡೆಯುವ ಸಾಮರ್ಥ್ಯ ನಮ್ಮದಾಗಿದೆ” ಎಂದರು.
ಇದನ್ನೂ ಓದಿ: PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!