ಬೆಂಗಳೂರು: ನರೇಂದ್ರ ಮೋದಿ, ಅಮಿತ್ ಶಾ ಅವರು ಇರುವುದೇ ಹಾಗೆ. ದೇಶದಲ್ಲಿ ಯಾವುದೇ ಭಾಗದಲ್ಲಿ ಚುನಾವಣೆ ನಡೆದರೂ ಅವರಿಗೆ ಹಬ್ಬ. ಎಲ್ಲಿಯೇ ಚುನಾವಣೆ (Karnataka Election) ನಡೆದರೂ ಮೋದಿ, ಅಮಿತ್ ಶಾ ಫೀಲ್ಡಿಗೆ ಇಳಿಯುತ್ತಾರೆ. ಅಬ್ಬರದ ಪ್ರಚಾರ, ರೋಡ್ ಶೋ ಮೂಲಕ ಮತಗಳನ್ನು ಸೆಳೆಯುತ್ತಾರೆ. ಆದರೆ, ಈ ಬಾರಿ ಕರ್ನಾಟಕದಲ್ಲಿ ಮೋದಿ, ಶಾ, ಯೋಗಿ ಜತೆಗೆ ಕೇಂದ್ರ ಸಂಪುಟದ ಸಚಿವರೇ ರಾಜ್ಯದಲ್ಲಿ ಬೀಡು ಬಿಟ್ಟಿದ್ದಾರೆ. ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಕೂಡ ಕರ್ನಾಟಕದಲ್ಲಿ ಪ್ರಚಾರ ಆರಂಭಿಸಿದ್ದಾರೆ.
ಒಂದು ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಕೇಂದ್ರ ಸರ್ಕಾರದ ಪ್ರಮುಖ ಸಚಿವರೇ ರಾಜ್ಯದಲ್ಲಿ ಬೀಡುಬಿಟ್ಟಿದ್ದರೂ, ಇವರು ಅಭ್ಯರ್ಥಿಗಳನ್ನು ಗೆಲ್ಲಿಸುವ ವರ್ಚಸ್ಸು ಹೊಂದಿದ್ದಾರಾ ಎಂಬ ಪ್ರಶ್ನೆ ಎದುರಾಗಿದೆ. ಮಂಡ್ಯದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರಚಾರ ಕೈಗೊಂಡಿದ್ದಾರೆ. ಉಡುಪಿ, ಮಂಗಳೂರು, ಕೊಡಗಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ. ಕೊಪ್ಪಳದಲ್ಲಿ ಬಿಜೆಪಿ ಅಭ್ಯರ್ಥಿ ಪರ ಸ್ಮೃತಿ ಇರಾನಿ ಮತಯಾಚಿಸುತ್ತಿದ್ದಾರೆ. ಗದಗದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಕೂಡ ಪ್ರಚಾರ ಕೈಗೊಳ್ಳುತ್ತಿದ್ದಾರೆ.
ಅಭ್ಯರ್ಥಿಗಳನ್ನು ಗೆಲ್ಲಿಸುವ ಚಾರ್ಮ್ ಇದೆಯಾ?
ರಾಜನಾಥ್ ಸಿಂಗ್, ಶಿವರಾಜ್ ಸಿಂಗ್ ಚೌಹಾಣ್, ಸ್ಮೃತಿ ಇರಾನಿ ಅವರು ಉನ್ನತ ಹುದ್ದೆಯಲ್ಲಿದ್ದರೂ, ಅವರು ವಾಚಾಳಿಗಳಲ್ಲ. ಅಬ್ಬರದ ಭಾಷಣ ಮಾಡಿ, ಜನರನ್ನು ಹಿಡಿದಿಡುವಂತಹ ವಾಕ್ಚಾತುರ್ಯವೂ ಇಲ್ಲ. ಹಾಗೆಯೇ, ಶಿವರಾಜ್ ಸಿಂಗ್ ಚೌಹಾಣ್ ಅವರಂತಹವರ ಬಗ್ಗೆ ಸ್ಥಳೀಯರಿಗೆ ಅಷ್ಟೇನೂ ಗೊತ್ತಿರುವುದಿಲ್ಲ. ಕೇಂದ್ರದ ನಾಯಕರಿಗೆ ವಿಧಾನಸಭೆ ಕ್ಷೇತ್ರಗಳ ಸಮಸ್ಯೆಗಳ ಬಗ್ಗೆ ಗೊತ್ತಿರುವುದಿಲ್ಲ. ಹೀಗಿರುವಾಗ, ಕೇಂದ್ರ ಸಂಪುಟ ಸಚಿವರನ್ನು, ಬೇರೆ ರಾಜ್ಯದ ಮುಖ್ಯಮಂತ್ರಿಯನ್ನು ಬಿಜೆಪಿಯು ಸ್ಟಾರ್ ಪ್ರಚಾರಕರನ್ನಾಗಿ ಮಾಡಿರುವುದು ಅಷ್ಟೇನೂ ಒಳಿತಲ್ಲ ಎಂಬ ಭಾವನೆ ಬಿಜೆಪಿಯ ಸ್ಥಳೀಯ ನಾಯಕರಲ್ಲಿ ಮೂಡಿದೆ ಎಂದು ತಿಳಿದುಬಂದಿದೆ.
ಮಡಿಕೇರಿಯಲ್ಲಿ ಅಮಿತ್ ಶಾ ರೋಡ್ ಶೋ
ಹಿಂದಿಯಲ್ಲೇ ಭಾಷಣ, ಗೊಂದಲದ ರಿಂಗಣ
ಕೇಂದ್ರ ನಾಯಕರಿಗೆ ಕನ್ನಡ ಬರುವುದಿಲ್ಲ. ಮಂಡ್ಯ, ಗದಗ, ಮೈಸೂರು, ಮಂಗಳೂರು ಸೇರಿ ಹಲವೆಡೆ ಜನರಿಗೆ ಬಿಡಿ, ಅಭ್ಯರ್ಥಿಗಳಿಗೇ ಹಿಂದಿ ಮಾತನಾಡಲು ಬರುವುದಿಲ್ಲ. ಹೀಗಿರುವಾಗ, ಕೇಂದ್ರದ ನಾಯಕರು ಬಂದು, ಹಿಂದಿಯಲ್ಲಿ ಭಾಷಣ ಮಾಡಿ ಹೋದರೆ, ಅವರ ಮಾತು, ಆಶಯಗಳು ಜನರಿಗೆ ತಲುಪುವುದು ಕಷ್ಟ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ.
ಕಲಘಟಗಿಯಲ್ಲಿ ನಡ್ಡಾ ಪ್ರಚಾರ
ಇದನ್ನೂ ಓದಿ: Modi in Karnataka : ನೀವು ಮತ ಹಾಕುವುದು ಸರ್ಕಾರ ರಚನೆಗಲ್ಲ, ರಾಜ್ಯವನ್ನು ದೇಶದಲ್ಲೇ ನಂ. 1 ಮಾಡಲು; ಮೋದಿ ಹೊಸ ವ್ಯಾಖ್ಯಾನ
ಟಿಕೆಟ್ ಹಂಚಿಕೆ, ಸಂಪುಟ ರಚನೆ, ವಿಸ್ತರಣೆ ಸೇರಿ ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದರೂ ರಾಜ್ಯ ಬಿಜೆಪಿ ನಾಯಕರು ಹೈಕಮಾಂಡ್ ನಾಯಕರ ಆಣತಿ, ಮರ್ಜಿಗೆ ಕಾಯಬೇಕು. ಈಗ ರಾಜ್ಯ ವಿಧಾನಸಭೆ ಚುನಾವಣೆಯ ಪ್ರಚಾರವೂ ಕೇಂದ್ರ ನಾಯಕರ ಮೂಗಿನ ನೇರಕ್ಕೇ ನಡೆಯುತ್ತಿರುವುದು ಸ್ಥಳೀಯ ನಾಯಕರಲ್ಲಿ ಅಸಮಾಧಾನ ಮೂಡಿಸಿದೆ ಎನ್ನಲಾಗಿದೆ. ಇದರಿಂದ ಸ್ಥಳೀಯ ವಿಷಯಗಳನ್ನು ಜನರಿಗೆ ಮನದಟ್ಟು ಮಾಡುವಲ್ಲಿಯೂ ಹಿನ್ನಡೆಯಾಗುತ್ತಿದೆ ಎಂಬ ಆಕ್ಷೇಪವಿದೆ. ಅಷ್ಟಕ್ಕೂ, ಕೇಂದ್ರ ಸಚಿವರು, ಬೇರೆ ರಾಜ್ಯದ ಮುಖ್ಯಮಂತ್ರಿಗಳು ರಾಜ್ಯದಲ್ಲಿ ಎಷ್ಟರಮಟ್ಟಿಗೆ ಪ್ರಭಾವ ಬೀರುತ್ತಾರೆ ಎಂಬುದಕ್ಕೆ ಚುನಾವಣೆ ಫಲಿತಾಂಶದವರೆಗೆ ಕಾಯಲೇಬೇಕಿದೆ.