Site icon Vistara News

ಉಡುಪಿ ಜಿಲ್ಲೆ ಕ್ಷೇತ್ರ ಸಮೀಕ್ಷೆ: ಪ್ರಯೋಗದ ಕಣವಾಗಿರುವ ಕೃಷ್ಣನೂರಿನಲ್ಲಿ ಯಾರಿಗೆ ಗೆಲುವಿನ ಸುಯೋಗ?

Can Congress Stop BJP's Victory In Udupi In All Constituencies

Can Congress Stop BJP's Victory In Udupi In All Constituencies

| ಅಶ್ವತ್ಥ್ ಆಚಾರ್ಯ, ವಿಸ್ತಾರ ನ್ಯೂಸ್, ಉಡುಪಿ

ಕೃಷ್ಣನ ಊರು ಎಂದೆ ಪ್ರಖ್ಯಾತವಾಗಿರುವ ಉಡುಪಿ ಜಿಲ್ಲೆಯಲ್ಲಿ ಈ ಬಾರಿ ಹಾಲಿ ಇಂಧನ ಸಚಿವ ಸುನೀಲ್ ಕುಮಾರ್ ಹೊರತುಪಡಿಸಿ, ಬಿಜೆಪಿ ನಾಲ್ಕು ಕ್ಷೇತ್ರಗಳಲ್ಲಿ ಹೊಸಬರನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್ ಕೂಡ ಈ ಬಾರಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮತ್ತು ಮಾಜಿ ಶಾಸಕ ಗೋಪಾಲ ಪೂಜಾರಿ ಹೊರತುಪಡಿಸಿ ಉಳಿದ ಮೂರು ಕಡೆ ಹೊಸಬರಿಗೆ ಮಣೆ ಹಾಕಿದೆ. ಹೀಗಾಗಿ ಜಿಲ್ಲೆಯಲ್ಲಿ ಎರಡು ಪಕ್ಷಗಳು ಈ ಬಾರಿ ಬದಲಾವಣೆ ಎಕ್ಸ್ಪೆರಿಮೆಂಟ್ ಮಾಡಿದೆ. ಬಿಜೆಪಿಯ ಗೆಲ್ಲುವ ಕುದುರೆ ಕುಂದಾಪುರ ಕ್ಷೇತ್ರದ ಹಾಲಾಡಿ ಶ್ರೀನಿವಾಸ ಶೆಟ್ಟಿ ಸ್ಪರ್ಧೆಯಿಂದ ಹಿಂದೆ ಸರಿದಿರುವುದು ಜಿಲ್ಲಾ ಬಿಜೆಪಿಯ ರಾಜಕೀಯ ಜಾತಿವಾರು ಲೆಕ್ಕಾಚಾರ ತಲೆಕೆಳಗೆ ಮಾಡಿತ್ತು. ಅಲ್ಲದೆ ಹಾಲಿ ಶಾಸಕರಾದ ಬೈಂದೂರು ಸುಕುಮಾರ ಶೆಟ್ಟಿ, ಉಡುಪಿ ರಘುಪತಿ ಭಟ್, ಕಾಪು ಲಾಲಾಜಿ ಮೆಂಡನ್ ಅವರ ಬದಲಿಗೆ ಪಕ್ಷದಲ್ಲಿ ಕೆಲಸ ಮಾಡಿದ ಹೊಸ ಮುಖಗಳಿಗೆ ಟಿಕೆಟ್ ನೀಡಿದ್ದು, ರಾಜಕೀಯ ಪಂಡಿತರ ಲೆಕ್ಕಾಚಾರ ಬುಡಮೇಲು ಮಾಡಿದೆ. ಎರಡೂ ಪಕ್ಷಗಳ ಒಟ್ಟು ಏಳು ಮಂದಿ ಅಭ್ಯರ್ಥಿಗಳು ಹೊಸಬರಾಗಿರುವುದರಿಂದ, ಈ ಬಾರಿಯ ಜಿದ್ದಾಜಿದ್ದಿ ಸಾಕಷ್ಟು ಕೂತುಹಲ ಮೂಡಿಸಿದೆ.

ಉಡುಪಿ ಜಿಲ್ಲೆ ಸಂಕ್ಷಿಪ್ತ ಮಾಹಿತಿ
-ಒಟ್ಟು ಕ್ಷೇತ್ರ: 5
-ಕ್ಷೇತ್ರಗಳು: ಕುಂದಾಪುರ, ಕಾರ್ಕಳ, ಕಾಪು, ಉಡುಪಿ ಮತ್ತು ಬೈಂದೂರು
– ಬಿಜೆಪಿ- 5
– ಕಾಂಗ್ರೆಸ್-‌ ೦

ಉಡುಪಿ: ಜಿದ್ದಾಜಿದ್ದಿನ ಕ್ಷೇತ್ರದಲ್ಲಿ ಯಾರು ಮೊಗ’ವೀರ’

ಉಡುಪಿ ವಿಧಾನಸಭೆ ಕ್ಷೇತ್ರವನ್ನು ಪರಿಗಣಿಸಿದರೆ ಚುನಾವಣಾ ದಿನಾಂಕ ಘೋಷಣೆಯಾಗುವ ಮೊದಲಿನಿಂದಲೂ ಬಿಜೆಪಿ ಹಾಲಿ ಶಾಸಕ ರಘುಪತಿ ಭಟ್ ಅವರಿಗೆ ಟಿಕೆಟ್ ನೀಡುತ್ತದೆ ಎನ್ನುವ ನಿರೀಕ್ಷೆಯಿತ್ತು. ಆದರೆ ಕೊನೆಯ ಕ್ಷಣದಲ್ಲಿ ರಘುಪತಿ ಭಟ್ ಬದಲಿಗೆ ಕಾರ್ಯಕರ್ತ, ಮೊಗವೀರ ಸಮುದಾಯದ ಯಶ್ ಪಾಲ್ ಸುವರ್ಣ ಅವರಿಗೆ ಟಿಕೆಟ್ ನೀಡುವ ಮೂಲಕ ಆಕಾಂಕ್ಷಿಗಳ ಜತೆಗೆ ಮತದಾರರನ್ನು ಕೂಡ ಆಶ್ಚರ್ಯಕ್ಕೀಡಾಗುವಂತೆ ಮಾಡಿತ್ತು. ಪ್ರಾರಂಭದಲ್ಲಿ ರಘುಪತಿ ಭಟ್, ಪಕ್ಷದ ಈ ಅಚಾನಕ್ ನಿರ್ಧಾರದಿಂದ ಬೇಸರಗೊಂಡರು ಕೂಡ ಸದ್ಯ ಅಭ್ಯರ್ಥಿಯ ಜತೆ ಕಣದಲ್ಲಿ ತಮ್ಮದೇ ಚುನಾವಣೆ ಎನ್ನುವಂತೆ ಪ್ರಚಾರದಲ್ಲಿ ನಿರತರಾಗಿದ್ದಾರೆ.

ಕಾಂಗ್ರೆಸ್ ಪಾಳಯದಲ್ಲಿ ಗಮನಿಸುವುದಾದರೆ ಕಳೆದ ಬಾರಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರ್ಪಡೆಯಾದ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿಯೇ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿತ್ತು. ಇಂತಹ ಸಂದರ್ಭದಲ್ಲಿ ಒಂದಿಷ್ಟು ಆಕಾಂಕ್ಷಿಗಳು ಪಟ್ಟಿಯಲ್ಲಿದ್ದರೂ ಕೊನೆಯ ಕ್ಷಣದಲ್ಲಿ ಮೊಗವೀರ ಸಮುದಾಯದ ಉದ್ಯಮಿ ಪ್ರಸಾದ್ ರಾಜ್ ಕಾಂಚನ್ ಅವರಿಗೆ ಟಿಕೆಟ್‌ ನೀಡಿದೆ. ಇಲ್ಲೂ ಒಂದಿಷ್ಟು ಗೊಂದಲ, ಬಂಡಾಯದಂತಹ ಬೆಳವಣಿಗೆಗಳಾದರೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಅದು ಶಮನವಾಗಿದೆ. ಹೀಗಾಗಿ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಮೊಗವೀರ ವರ್ಸಸ್ ಮೊಗವೀರ ಸ್ಪರ್ಧೆ ಏರ್ಟಟ್ಟಿದ್ದು ಹೆಚ್ಚಾಗಿ ಜನರ ಮಧ್ಯೆ ಇರುವ ಯಶ್ ಪಾಲ್ ಸುವರ್ಣ ಅವರಿಗೆ ಕ್ಷೇತ್ರದಲ್ಲಿ ಹಿಡಿತ ಹೆಚ್ಚಿದೆ ಎಂದರೆ ತಪ್ಪಾಗಲಾರದು. ಹೀಗಾಗಿ ಬಿಜೆಪಿಯ ಪ್ರಭಾವ, ಹಿಜಾಬ್ ಪ್ರಕರಣದ ಕುರಿತದಾದ ಎರಡೂ ಪಕ್ಷಗಳ ನಿಲುವು, ರಾಜ್ಯ ಮತ್ತು ರಾಷ್ಟ್ರ ನಾಯಕರ ಹೇಳಿಕೆಗಳು ಮತ್ತು ಅಭಿವೃದ್ಧಿ ವಿಚಾರ ನೋಡಿಕೊಂಡು ಮತದಾರರು ಆರ್ಶೀವಾದ ಮಾಡಲಿದ್ದಾರೆ.

ಕಳೆದ ಚುನಾವಣೆ ಫಲಿತಾಂಶ
– ರಘುಪತಿ ಭಟ್- ಬಿಜೆಪಿ- 84,946
– ಪ್ರಮೋದ್ ಮಧ್ವರಾಜ್-ಕಾಂಗ್ರೆಸ್- 72,902
– ಗೆಲುವಿನ ಅಂತರ- 12,044

ಕಾಪು: ಹಳೇ ಬೇರು, ಹೊಸ ಚಿಗುರಿನ ಮಧ್ಯೆ ಸೆಣಸಾಟ

ಕಾಪು ವಿಧಾನಸಭಾ ಕ್ಷೇತ್ರ ಮೂಲತಃ ಕಾಂಗ್ರೆಸ್ ಮತ್ತು ಜೆಡಿಎಸ್ ಭದ್ರಕೋಟೆ. ಕಳೆದ ನಾಲ್ಕು ಅವಧಿಯ ವಿಧಾನಸಭಾ ಚುನಾಣೆಯನ್ನು ಗಮನಿಸಿದರೆ ಇಲ್ಲಿ ಕಾಂಗ್ರೆಸ್ ಪಾರುಪತ್ಯ ಕಾಣಬಹುದು. ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಅವರಿಗೆ ಬಿಜೆಪಿಯ ಹಾಲಿ ಶಾಸಕ ಲಾಲಾಜಿ ಮೆಂಡನ್ ಕಳೆದ ಎರಡು ಅವಧಿಯಲ್ಲಿ ಸಾಂಪ್ರದಾಯಿಕ ಎದುರಾಳಿ. ಸಾಂಪ್ರದಾಯಿಕ ಎದುರಾಳಿಗಳು ಎದುರಾದ ಎರಡು ಬಾರಿಯೂ ಸಮಬಲ ಸಾಧಿಸಿರುವುದು ವಿಶೇಷ. ಇನ್ನು ಈ ಬಾರಿ ಕಾಂಗ್ರೆಸ್ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಅವರನ್ನು ಕಣಕ್ಕಿಳಿಸಿದರೆ, ಬಿಜೆಪಿಯು ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ ಅವರನ್ನು ಕಣಕ್ಕಿಳಿಸಿದೆ. ಹೀಗಾಗಿ ಈ ಬಾರಿ ಅನುಭವಿ ಸೊರಕೆ ಎದುರು, ಹೊಸ‌ ಅಭ್ಯರ್ಥಿ ಸತ್ವ ಪರೀಕ್ಷೆ ನಡೆಯಲಿದೆ. ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಎಲ್ಲ ಸಮುದಾಯದವರ ಜತೆಗೆ ಚೆನ್ನಾಗಿರುವುದು ಕಾಂಗ್ರೆಸ್‌ಗೆ ಸವಾಲಾಗಿದೆ. ಇನ್ನು ಕ್ಷೇತ್ರದಲ್ಲಿರುವ ಮೊಗವೀರ ವೋಟುಗಳು ಅಭ್ಯರ್ಥಿಗಳ ಹಣೆಬರಹ ಬದಲಾಯಿಸಲಿದೆ ಎನ್ನಬಹುದು.

ಕಳೆದ ಚುನಾವಣೆ ಫಲಿತಾಂಶ
– ಲಾಲಾಜಿ ಆರ್ ಮೆಂಡನ್- ಬಿಜೆಪಿ- 75,893
– ವಿನಯ್ ಕುಮಾರ್ ಸೊರಕೆ- ಕಾಂಗ್ರೆಸ್- 63,976
– ಗೆಲುವಿನ ಅಂತರ: 11,917

ಕಾರ್ಕಳ: ಹಿಂದುತ್ವ VS ಹಿಂದುತ್ವ VS ಕಾಂಗ್ರೆಸ್‌= ?

ಕಾರ್ಕಳ ವಿಧಾನಸಭಾ ಕ್ಷೇತ್ರ ಇಂದಿರಾ ಗಾಂಧಿಯವರಿಂದ ಹಿಡಿದು ನರೇಂದ್ರ ಮೋದಿಯವರೆಗೂ ಅತಿರಥ ಮಹಾರಥರು ಚುನಾವಣಾ ಪ್ರಚಾರ ನಡೆಸಿದ ಕ್ಷೇತ್ರ. ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಕಾರ್ಕಳದಲ್ಲಿ ಇಂದು ಬಿಜೆಪಿ ಧ್ವಜ ಹಾರಾಡುತ್ತಿದೆ. ಮಾಜಿ ಸಿಎಂ ವೀರಪ್ಪ ಮೊಯಿಲಿಯವರ ಹುಟ್ಟೂರು ಎನ್ನುವ ಕಾರಣಕ್ಕೆ ಇಲ್ಲಿ ಇಂದಿಗೂ ಕಾಂಗ್ರೆಸ್ ಮೇಲೆ ಹಿಡಿತವಿರಿಸಿಕೊಂಡಿದ್ದಾರೆ. ಹೀಗಾಗಿ ಅಭ್ಯರ್ಥಿ ಆಯ್ಕೆ ವಿಚಾರ ಹೈಕಮಾಂಡ್‌ಗಿಂತ ಹೆಚ್ಚಾಗಿ ವೀರಪ್ಪ ಮೊಯಿಲಿ ಪ್ರಭಾವ ಇರುತ್ತದೆ ಎನ್ನುವ ಮಾತಿದೆ. 1972ರಿಂದ ಸತತವಾಗಿ 6 ಬಾರಿ ಮೊಯಿಲಿ ಇಲ್ಲಿಂದಲೇ ಆರಿಸಿ ಬಂದಿರುವುದು ವಿಶೇಷಗಳಲ್ಲಿ ಒಂದು. ಮೊಯಿಲಿ ನಂತರ ಕಾಂಗ್ರೆಸ್‌ನ ದಿವಂಗತ ಗೋಪಾಲ ಭಂಡಾರಿ ಇಲ್ಲಿ ಎರಡು ಬಾರಿ ಆಯ್ಕೆಯಾಗಿದ್ದರು.‌

ಸದ್ಯ ಕಾರ್ಕಳದಲ್ಲಿ ಕಮಲ‌ದ ಶಕೆ ಆರಂಭಿಸಿದ ಕೀರ್ತಿ ಹಾಲಿ ಇಂಧನ ಸಚಿವ ಸುನೀಲ್ ಕುಮಾರ್ ಅವರಿಗೆ ಸಲ್ಲುತ್ತದೆ. ಸದ್ಯ ಕಾರ್ಕಳ ಎಂದರೆ ಸುನೀಲ್ ಕುಮಾರ್ ಎನ್ನುವ ಮಟ್ಟಿಗೆ ಹೆಸರಿದೆ. ಆದರೆ, ಪಕ್ಷದ ಕಾರ್ಯಕರ್ತರ ಜತೆಗೆ ಸಣ್ಣಪುಟ್ಟ ಮನಸ್ತಾಪಗಳು ಸುನೀಲ್ ಅವರಿಗೆ ತಮ್ಮ ಗುರುಗಳಾದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಎದುರಾಳಿಯಾಗುವಂತೆ ಮಾಡಿದೆ. ಪ್ರಮೋದ್ ಮುತಾಲಿಕ್ ಇಲ್ಲಿ ಪಕ್ಷೇತರರಾಗಿ ಸ್ಪರ್ಧಿಸುತ್ತಿರುವುದು ಸ್ವಲ್ಪ ಮಟ್ಟಿಗೆ ಬಿಜೆಪಿ ವೋಟು ಒಡೆಯಲು ಕಾರಣವಾಗಿದೆ. ಇನ್ನು ಕಾಂಗ್ರೆಸ್‌ನಿಂದ ಈ ಬಾರಿ ಮುನಿಯಾಲು ಉದಯ ಕುಮಾರ್ ನಿಂತಿರುವುದು ಬಿಜೆಪಿ ಪಾಲಿಗೆ ಸಂಕಷ್ಟ ತಂದಿದೆ ಎನ್ನಬಹುದು. ಆದರೂ, ಕಾರ್ಕಳದ ಅಭಿವೃದ್ಧಿ ಮತ್ತು ಹಿಂದುತ್ವದ ಗಾಳಿ ಸುನಿಲ್ ಕುಮಾರ್ ಅವರನ್ನು ದಡ ಸೇರಿಸಬಹುದು.

ಕಳೆದ ಚುನಾವಣೆ ಫಲಿತಾಂಶ
– ಸುನೀಲ್ ಕುಮಾರ್- ಬಿಜೆಪಿ- 91,245
– ಎಚ್. ಗೋಪಾಲ ಭಂಡಾರಿ- ಕಾಂಗ್ರೆಸ್- 48,679
– ಗೆಲುವಿನ ಅಂತರ- 42,566

ಕುಂದಾಪುರ: ಹೊಸಬರ ನಡುವಿನ ಸೆಣಸಾಟದಲ್ಲಿ ಯಾರಿಗೆ ಮೇಲುಗೈ?

ಉಡುಪಿ ಜಿಲ್ಲೆಯ ಮಟ್ಟಿಗೆ ಕುಂದಾಪುರ ವಿಧಾನಸಭಾ ಕ್ಷೇತ್ರ ಎಂದರೆ ಅದು ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಕ್ಷೇತ್ರ. ಯಾಕೆಂದರೆ ಕಳೆದ ಐದು ಚುನಾವಣೆಗಳಲ್ಲಿ ನಾಲ್ಕು ಬಾರಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಬಿಜೆಪಿಯಿಂದ ಸ್ಪರ್ಧಿಸಿ ದಾಖಲೆಯ ಗೆಲುವು ಪಡೆದಿದ್ದಾರೆ. ಇನ್ನು ಸಚಿವ ಸ್ಥಾನದ ಆಸೆ ತೋರಿಸಿ ಕೊನೆಯ ಕ್ಷಣದಲ್ಲಿ ಕೈಕೊಟ್ಟ ಹಿನ್ನೆಲೆಯಲ್ಲಿ 2013 ರಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿ ದಾಖಲೆ ಗೆಲುವು ಕಂಡವರು ಹಾಲಾಡಿ ಶ್ರೀನಿವಾಸ್ ಶೆಟ್ಟಿ. ಹಾಗಾಗಿ ಕುಂದಾಪುರ ಕ್ಷೇತ್ರದಲ್ಲಿ ಹಾಲಾಡಿಯವರೇ ಅಂತಿಮ ಮತ್ತು ನಿರ್ಣಾಯಕ. ಇನ್ನು ಈ ಬಾರಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಸ್ಪರ್ಧೆಯಿಂದ ಹಿಂದೆ ಸರಿದಿರುವ ಹಿನ್ನೆಲೆಯಲ್ಲಿ ಅವರ ಆಪ್ತರಾದ ಕಿರಣ್ ಕೊಡ್ಗಿ ಅವರಿಗೆ ಬಿಜೆಪಿ ಕುಂದಾಪುರದ ಟಿಕೆಟ್ ನೀಡಿದೆ. ಹಾಲಾಡಿ ಕರಾವಳಿಯಲ್ಲಿ ಅತ್ಯಂತ ಪ್ರಭಾವ ಬೀರುವ ಬಂಟ ಸಮುದಾಯಕ್ಕೆ ಸೇರಿದವರು. ಆದರೆ, ಕಿರಣ್ ಕೊಡ್ಗಿ ಅವರು ಬ್ರಾಹ್ಮಣ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಆದರೆ ಕಿರಣ್ ಕೊಡ್ಗಿ ಅವರಿಗೆ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಕೃಪಾಕಟಾಕ್ಷ ಇರುವ ಹಿನ್ನೆಲೆಯಲ್ಲಿ ಬಿಜೆಪಿ ಆಶಾವಾದಿಯಾಗಿದೆ.

ಕಾಂಗ್ರೆಸ್‌ನಿಂದ ಈ ಬಾರಿ ಉದ್ಯಮಿ ಮೊಳಹಳ್ಳಿ ದಿನೇಶ್ ಹೆಗ್ಡೆ ಅವರನ್ನು ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಣಕ್ಕಿಳಿಸಿದೆ. ಹೊಸಬರಾಗಿರುವ ಮೊಳಹಳ್ಳಿಯವರಿಗೆ ಕ್ಷೇತ್ರದಲ್ಲಿ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಇನ್ನೂ ಚುನಾವಣೆ ಘೋಷಣೆಯಾಗುವ ಮೂರು ತಿಂಗಳು ಮೊದಲೇ ಮೊಳಹಳ್ಳಿ ದಿನೇಶ್ ಹೆಗ್ಡೆ ಅವರು ಫೀಲ್ಡ್‌ಗೆ ಇಳಿದಿರುವುದರಿಂದ ಸಾಕಷ್ಟು ಬಾರಿ ಕ್ಷೇತ್ರವನ್ನು ಸಂಚರಿಸಿರುವ ಅನುಭವವಿದೆ. ಹೀಗಾಗಿ ಮೊದಲ ಬಾರಿಗೆ ಎನ್ನುವಂತೆ ಕುಂದಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಪರ ಅಲೆ ಕಾಣುತ್ತಿದೆ. ಇನ್ನು ಬಿಜೆಪಿ ಅಭ್ಯರ್ಥಿ ಕಿರಣ್ ಕೊಡ್ಗಿ ಅವರು ಕಾರ್ಯಕರ್ತರ ನಾಯಕ ಎಂದು ಹೆಸರಾದವರು. ಅಲ್ಲದೆ ಹಾಲಾಡಿಯವರ ಪ್ರತಿ ಚುನಾವಣೆಯಲ್ಲಿ ಅವರೊಂದಿಗೆ ಇದ್ದು ಕಾರ್ಯಕರ್ತರನ್ನ ನಿಭಾಯಿಸಿದ, ನಿರ್ವಹಿಸಿದ ಅನುಭವವಿದೆ. ಹಾಗಾಗಿ ಇಬ್ಬರೂ ನಾಯಕರ ನಡುವೆ ತುರುಸಿನ ಪೈಪೋಟಿ ಇದೆ.

ಕಳೆದ ಚುನಾವಣೆ ಫಲಿತಾಂಶ
– ಹಾಲಾಡಿ ಶ್ರೀನಿವಾಸ ಶೆಟ್ಟಿ- ಬಿಜೆಪಿ- 1,03,434
– ರಾಕೇಶ್ ಮಲ್ಲಿ- ಕಾಂಗ್ರೆಸ್- 47,029
– ಗೆಲುವಿನ ಅಂತರ- 56,405

ಬೈಂದೂರು: ಗೆಲುವಿನ ಗಂಟೆ ಬಾರಿಸುವರೇ ಗಂಟಿಹೊಳೆ?

ಬೈಂದೂರು ವಿಧಾನಸಭಾ ಕ್ಷೇತ್ರ ಮೊದಲು ಜಾತಿವಾರು ಲೆಕ್ಕಾಚಾರದಲ್ಲಿ ಬ್ರಾಹ್ಮಣರು ಮತ್ತು ಬಂಟರಿಗೆ ಕಾಯ್ದಿರಿಸಿದ ಕ್ಷೇತ್ರವೆಂದು ಗುರುತಿಸಿಕೊಂಡಿತ್ತು. ಆದರೆ 1994ರ ಬಳಿಕ ಕ್ಷೇತ್ರದಲ್ಲಿ ಧನವಂತರಿಗೆ ಟಿಕೆಟ್ ನೀಡುವ ಪರಿಪಾಠ ಪ್ರಾರಂಭವಾಗಿ, ಬೈಂದೂರು ಎಂದರೆ ಉದ್ಯಮಿಗಳಿಗೆ ಅವಕಾಶ ನೀಡುವ ಕ್ಷೇತ್ರ ಎನ್ನುವ ಮಾತಿದೆ. ಇನ್ನು ಬೈಂದೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಈ ಬಾರಿ ಅನುಭವಿ, ಮಾಜಿ ಶಾಸಕ ಗೋಪಾಲ ಪೂಜಾರಿ ಅವರನ್ನು ಮತ್ತೆ ಕಣಕ್ಕೆ ಇಳಿಸಿದೆ. ಗೋಪಾಲ ಪೂಜಾರಿಯವರು ಕ್ಷೇತ್ರದ ಹಿಂದುಳಿದ ಸಮುದಾಯಗಳಲ್ಲಿ ಒಂದಾದ ಬಿಲ್ಲವ ಸಮುದಾಯಕ್ಕೆ ಸೇರಿದವರು. ಹೀಗಾಗಿ ಬಿಲ್ಲವರ ಮತಗಳನ್ನು ಕಾಂಗ್ರೆಸ್ ನಂಬಿಕೊಂಡಿದೆ. ಅವರ ರಾಜಕೀಯ ಅನುಭವವೂ ಕಾಂಗ್ರೆಸ್ ಗೆ ಪ್ಲಸ್ ಪಾಯಿಂಟ್ ಆಗಿದೆ.

ಬಿಜೆಪಿಯಲ್ಲಿ ಈ ಬಾರಿ ಹೊಸ ಬೆಳವಣಿಗೆಯಾಗಿದ್ದು, ಹಾಲಿ ಶಾಸಕ ಸುಕುಮಾರ ಶೆಟ್ಟಿ ಅವರಿಗೆ ಟಿಕೆಟ್ ನೀಡದೆ ಸಾಮಾನ್ಯ ಕಾರ್ಯಕರ್ತರಾದ, ಬರಿಗಾಲ ಸೇವಕ, ಪದವೀಧರ ಗುರುರಾಜ ಶೆಟ್ಟಿ ಗಂಟಿಹೊಳೆ ಅವರಿಗೆ ಟಿಕೆಟ್ ನೀಡಿದೆ. ಸಂಘದ ಶಾಖೆಯಲ್ಲಿ ಪಳಗಿದ ಗುರುರಾಜ ಗಂಟಿಹೊಳೆ ಅವರಿಗೆ ಕ್ಷೇತ್ರದಲ್ಲಿ ದೊಡ್ಡ ಯುವ ಅಭಿಮಾನಿ ಬಳಗವಿದೆ. ಅಲ್ಲದೆ ಬಂಟ ಸಮುದಾಯಕ್ಕೆ ಸೇರಿದ ಗುರುರಾಜ ಗಂಟಿಹೊಳೆಯವರಿಗೆ ಬಂಟ ಸಮುದಾಯ ಕೈ ಹಿಡಿಯುವ ಸಾಧ್ಯತೆ ಇದೆ. ಸರಳ ಜೀವನಕ್ಕೆ ಹೆಸರುವಾಸಿಯಾಗಿರುವ ಗುರುರಾಜ ಗಂಟಿಹೊಳೆಯವರ ನಡೆಯು ಗ್ರಾಮೀಣ ಜನರ ಮನಸ್ಸನ್ನು ಸೆಳೆಯುತ್ತಿದೆ. ಇಂಥ ಆದರ್ಶ, ಪ್ರಾಮಾಣಿಕ ವ್ಯಕ್ತಿ ಗೆಲ್ಲಬೇಕು ಎಂಬ ಮಾತು ಕ್ಷೇತ್ರಾದ್ಯಂತ ಕೇಳಿ ಬರುತ್ತಿದೆ. ಬಿಜೆಪಿ ಮತ್ತು ಸಂಘ ಪರಿವಾರದ ಹಿರಿಯರೂ ಗಂಟಿಹೊಳೆ ಪರವಾಗಿ ಚುರುಕಿನಿಂದ ಪ್ರಚಾರ ಮಾಡುತ್ತಿದ್ದಾರೆ.

ಇದನ್ನೂ ಓದಿ: ದಕ್ಷಿಣ ಕನ್ನಡ ಜಿಲ್ಲೆ ಕ್ಷೇತ್ರ ಸಮೀಕ್ಷೆ: ಬದಲಾದ ಹವಾ, ಕಾಂಗ್ರೆಸ್‌ಗೆ ಲಾಭ? ಬಜರಂಗದಳ ಎಫೆಕ್ಟ್‌ ಸಸ್ಪೆನ್ಸ್‌

ಆದರೂ, ಹಾಲಿ ಶಾಸಕ ಸುಕುಮಾರ ಶೆಟ್ಟಿಯವರ ಬೇಸರ, ಟಿಕೆಟ್ ಆಕಾಂಕ್ಷಿಗಳಾಗಿದ್ದ ಕೆಲವರು ಕಾಂಗ್ರೆಸ್ ಪಾಳಯ ಸೇರಿರುವುದು ಬಿಜೆಪಿಗೆ ಬೈಂದೂರಿನಲ್ಲಿ ಸ್ವಲ್ಪ ಮಟ್ಟಿಗೆ ಹಿನ್ನಡೆಯಾಗಿದೆ. ಆದರೆ ಕ್ಷೇತ್ರದಲ್ಲಿ ಸದ್ಯದ ಟ್ರೆಂಡ್ ಪ್ರಕಾರ ಗುರುರಾಜ ಗಂಟಿಹೊಳೆ ಪರ ಒಲವು ಕಾಣಿಸುತ್ತಿದೆ.

ಕಳೆದ ಚುನಾವಣೆ ಫಲಿತಾಂಶ
– ಸುಕುಮಾರ ಶೆಟ್ಟಿ- ಬಿಜೆಪಿ- 96,029
– ಕೆ.ಗೋಪಾಲ ಪೂಜಾರಿ- ಕಾಂಗ್ರೆಸ್- 71,636
– ಗೆಲುವಿನ ಅಂತರ- 24,393

Exit mobile version