Site icon Vistara News

ಹಿಂದು ಧ್ವಜ ಹಾರಿಸಿ ಕೆನಡಾ ಸಂಸತ್ತಲ್ಲಿ ದೀಪಾವಳಿ ಆಚರಿಸಿದ ಕನ್ನಡಿಗ ಚಂದ್ರ ಆರ್ಯ!

Chandra Arya

Canada MP Chandra Arya hosts Diwali celebration at Parliament Hill, raises Hindu flag

ಒಟ್ಟಾವ: ಕೆನಡಾದಲ್ಲಿ ಭಾರತ ವಿರೋಧಿ ಚಟುವಟಿಕೆಗಳು ಜಾಸ್ತಿಯಾಗಿವೆ. ಇಂತಹ ಚಟುವಟಿಕೆಗಳನ್ನು ನಿಯಂತ್ರಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಕ್ಕೆ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ ಅವರ ಅಹಂಕಾರಕ್ಕೆ ಪೆಟ್ಟು ಬಿದ್ದು, ಭಾರತದ ಜತೆಗೆ ರಾಜತಾಂತ್ರಿಕ ಬಿಕ್ಕಟ್ಟು (India Canada Row) ಸೃಷ್ಟಿಸಿದ್ದಾರೆ. ಇನ್ನು ಕೆನಡಾದಲ್ಲಿರುವ ಖಲಿಸ್ತಾನಿ ಉಗ್ರರು (Khalistani Terrorists) ಹಿಂದುಗಳಿಗೆ ಬೆದರಿಕೆ ಒಡ್ಡುತ್ತಿದ್ದಾರೆ. ಇದರ ಬೆನ್ನಲ್ಲೇ, ಕೆನಡಾ ಸಂಸತ್ತಿನಲ್ಲಿಯೇ ಸಂಸದ, ಕನ್ನಡಿಗ ಚಂದ್ರ ಆರ್ಯ (Chandra Arya) ಅವರು ದೀಪಾವಳಿ ಆಚರಿಸಿದ್ದಾರೆ. ಅಷ್ಟೇ ಅಲ್ಲ, ಓಂ ಎಂದು ಬರೆದಿರುವ ಹಿಂದು ಧ್ವಜವನ್ನು ಹಾರಿಸಿದ್ದಾರೆ.

ಪಾರ್ಲಿಮೆಂಟ್‌ ಹಾಲ್‌ನಲ್ಲಿ ಚಂದ್ರಶೇಖರ್‌ ಆರ್ಯ ಅವರು ದೀಪಾವಳಿ ಹಬ್ಬದ ಸಂಭ್ರಮಾಚರಣೆಯ ಕಾರ್ಯಕ್ರಮ ಆಯೋಜಿಸಿದ್ದಾರೆ. ಭಾರತ ಮೂಲದ ನೂರಾರು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಅಲ್ಲದೆ, ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ. ಇದಾದ ಬಳಿಕ ಆಚರಣೆ, ಧ್ವಜ ಹಾರಿಸಿದ ಫೋಟೊಗಳನ್ನು ಚಂದ್ರ ಆರ್ಯ ಅವರು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

“ಕೆನಡಾದ ಪಾರ್ಲಿಮೆಂಟ್‌ ಹಾಲ್‌ನಲ್ಲಿ ದೀಪಾವಳಿ ಹಬ್ಬದ ಆಚರಣೆ ಮಾಡಿರುವುದು ಖುಷಿಯಾಯಿತು. ಅಲ್ಲದೆ, ಇದೇ ಸಂದರ್ಭದಲ್ಲಿ ಹಿಂದುಗಳ ಪವಿತ್ರ ಚಿಹ್ನೆಯಾದ ಓಂ ಎಂದು ಮುದ್ರಿಸಿರುವ ಧ್ವಜವನ್ನು ಹಾರಿಸುವ ಸೌಭಾಗ್ಯ ನಮ್ಮದಾಯಿತು. ಒಟ್ಟಾವ, ಗ್ರೇಟರ್‌ ಟೊರೊಂಟೊ ಏರಿಯಾ, ಮಾಂಟ್ರೀಯಲ್‌ ಸೇರಿ ಹಲವೆಡೆಯಿಂದ ಹಿಂದು ಸಂಘಟನೆಗಳ ಸುಮಾರು 67 ಜನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು” ಎಂದು ಚಂದ್ರ ಆರ್ಯ ಅವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಏರ್‌ ಇಂಡಿಯಾ ವಿಮಾನಗಳಿಗೆ ಭದ್ರತೆ ಒದಗಿಸಿ; ಬೆದರಿಕೆ ಬೆನ್ನಲ್ಲೇ ಕೆನಡಾಗೆ ಭಾರತ ಆಗ್ರಹ

ನಿವೃತ್ತ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ಕೆ.ಗೋವಿಂದ ಅಯ್ಯರ್‌ ಎಂಬುವರ ಪುತ್ರನಾಗಿರುವ ಚಂದ್ರ ಆರ್ಯ, ಓದಿದ್ದೆಲ್ಲ ಭಾರತದಲ್ಲೇ. ಬೆಂಗಳೂರು ಯೂನಿವರ್ಸಿಟಿಯಲ್ಲಿ ಎಂಜಿನಿಯರಿಂಗ್‌ ಓದಿದ್ದಾರೆ. ಧಾರವಾಡದ ಕರ್ನಾಟಕ ಯೂನಿವರ್ಸಿಟಿಯಲ್ಲಿ ಎಂಬಿಎ ಪದವಿ ಪಡೆದಿದ್ದಾರೆ. ಕೆನಡಾಕ್ಕೆ ಹೋಗುವ ಮೊದಲು ದೆಹಲಿಯಲ್ಲಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO)ಯಲ್ಲಿ ಕೆಲಸ ಮಾಡುತ್ತಿದ್ದರು. ಕರ್ನಾಟಕ ಸ್ಟೇಟ್‌ ಫೈನಾನ್ಸ್‌ ಕಾರ್ಪೊರೇಷನ್‌ನಲ್ಲೂ ಕರ್ತವ್ಯ ನಿರ್ವಹಿಸಿದ್ದಾರೆ. ಬಳಿಕ ಕೆನಡಾಕ್ಕೆ ಹೋಗಿ ನೆಲೆಸಿದ್ದಾರೆ. ಸಂಸತ್ತಿನಲ್ಲಿ ಚಂದ್ರ ಆರ್ಯ ಅವರು ಕನ್ನಡದಲ್ಲಿಯೇ ಮಾತನಾಡಿದ್ದು ಹೆಚ್ಚು ಸುದ್ದಿಯಾಗಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version