ಒಟ್ಟಾವ: ಕೆನಡಾದಲ್ಲಿ ಪ್ರತಿವರ್ಷ ನವೆಂಬರ್ ತಿಂಗಳನ್ನು ‘ರಾಷ್ಟ್ರೀಯ ಹಿಂದೂ ಪರಂಪರಾ ಮಾಸ’ವನ್ನಾಗಿ (Hindu Heritage Month) ಆಚರಿಸಲು ಕೆನಡಾ ಸಂಸತ್ ಸಮ್ಮತಿ ಸೂಚಿಸಿದೆ. ಕರ್ನಾಟಕ ಮೂಲದವರಾದ ಕೆನಡಾ ಸಂಸತ್ ಸದಸ್ಯ ಚಂದ್ರ ಆರ್ಯ ಅವರು ಮಂಡಿಸಿದ ಖಾಸಗಿ ನಿರ್ಣಯಕ್ಕೆ ಸಂಸತ್‌ನಲ್ಲಿ ಅಂಗೀಕಾರ ದೊರೆತಿದೆ.
ಈ ಕುರಿತು ಚಂದ್ರ ಆರ್ಯ ಅವರು ಟ್ವೀಟ್ ಮಾಡಿದ್ದು, “ದೇಶದಲ್ಲಿ ಪ್ರತಿವರ್ಷ ಹಿಂದೂ ಪರಂಪರಾ ಮಾಸವನ್ನಾಗಿ ಆಚರಿಸುವ ದಿಸೆಯಲ್ಲಿ ನಾನು ಮಂಡಿಸಿದ ಖಾಸಗಿ ವಿಧೇಯಕಕ್ಕೆ ಅವಿರೋಧವಾಗಿ ಅಂಗೀಕಾರ ದೊರೆತಿದೆ. ಇದರಿಂದ ಕೆನಡಾದಲ್ಲಿರುವ ಹಿಂದೂಗಳು ನಮ್ಮ ಧರ್ಮದ ಆಚರಣೆ, ಸಂಸ್ಕೃತಿಯನ್ನು ಎತ್ತಿಹಿಡಿಯಲು ಸಾಧ್ಯವಾಗಲಿದೆ” ಎಂದು ತಿಳಿಸಿದ್ದಾರೆ.
ಸಂಸತ್‌ನಲ್ಲಿ ನಿರ್ಣಯ ಮಂಡಿಸಿದ ಚಂದ್ರ ಆರ್ಯ, “ಹಿಂದೂ ಧರ್ಮವು ಪ್ರಾಚೀನ ಧರ್ಮವಾಗಿದೆ. ಇದು ಶ್ರೀಮಂತ ಪರಂಪರೆ, ಸಂಸ್ಕೃತಿಯನ್ನು ಹೊಂದಿದೆ. ೫ ಸಾವಿರ ವರ್ಷದಿಂದ ನಮ್ಮ ಧರ್ಮವು ಶ್ರೇಷ್ಠತೆಯನ್ನು ಮರೆದಿದೆ. ಕೆನಡಾದ ಸಾಂಸ್ಕೃತಿಕ ಹಾಗೂ ಸಾಮಾಜಿಕ ಸಿರಿವಂತಿಕೆಯಲ್ಲೂ ಹಿಂದೂಗಳ ಪಾತ್ರವಿದೆ. ವೈವಿಧ್ಯತೆಯಲ್ಲೂ ಏಕತೆ, ಸಾಮರಸ್ಯ ಮೆರೆಯುವ ಹಿಂದೂ ಪರಂಪರೆಯ ಆಚರಣೆಗಾಗಿ ನವೆಂಬರ್ ತಿಂಗಳನ್ನು ಹಿಂದೂ ಪರಂಪರಾ ಮಾಸವನ್ನಾಗಿ ಆಚರಿಸಬೇಕು” ಎಂದು ಹೇಳಿದರು. ಇದಕ್ಕೆ ಸಂಸತ್ ಅನುಮೋದಿಸಿದೆ. ಇದಕ್ಕೂ ಮೊದಲು, ಕೆನಡಾ ಸಂಸತ್‌ನಲ್ಲಿ ಕನ್ನಡದಲ್ಲಿಯೇ ಪ್ರಮಾಣವಚನ ಸ್ವೀಕರಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದರು.
ಇದನ್ನೂ ಓದಿ | ಕೆನಡಾ ಸಂಸತ್ತಲ್ಲಿ ಕನ್ನಡದ ಕಂಪು ಸೂಸಿದ ಚಂದ್ರ ಆರ್ಯ ಯಾರು?-ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ