ವಿಜಯಪುರ: ಕೆನಡಾ ದೇಶದ ಸಾರಾ ಎಂಬ ಯುವತಿ ಕರ್ನಾಟಕದ ವಿಜಯಪುರ ಜಿಲ್ಲೆಯ ರವಿಕುಮಾರ್ ಚಿಮ್ಮಲಗಿ ಎಂಬಾತನನ್ನು ವರಿಸಿದ್ದಾರೆ. ಇವರು ಹಿಂದು ಸಂಪ್ರದಾಯದಂತೆ ವಿವಾಹವಾಗುವ ಮೂಲಕ ಗಮನ ಸೆಳೆದಿದ್ದಾರೆ.
ವಿಜಯಪುರದ ವಿಶ್ವನಾಥ ಚಿಮ್ಮಲಗಿ, ಶೋಭಾ ದಂಪತಿಯ ಪುತ್ರ ರವಿಕುಮಾರ್ ಕಳೆದ ಹಲವು ವರ್ಷಗಳಿಂದ ಕೆನಡಾದಲ್ಲಿದ್ದು, ಸಾಫ್ಟ್‌ವೇರ್ ಸಂಸ್ಥೆಯೊಂದರಲ್ಲಿ ಉದ್ಯೋಗ ಮಾಡುತ್ತಿದ್ದರು. ಅದೇ ಸಂಸ್ಥೆಯಲ್ಲಿ ಸಾರಾ ಎಂಬ ಯುವತಿ ಕೂಡ ಉದ್ಯೋಗ ಮಾಡುತ್ತಿದ್ದರು.
ಸಹೋದ್ಯೋಗಿಗಳಾಗಿದ್ದ ಸಾರಾ ಮತ್ತು ರವಿಕುಮಾರ್ ನಡುವೆ ಸ್ನೇಹವಾಗಿ ಬಳಿಕ ಪ್ರೀತಿಗೆ ತಿರುಗಿದೆ. ಒಬ್ಬರೊನ್ನಬ್ಬರು ಪ್ರೀತಿಸುತ್ತಿದ್ದ ಕಾರಣ ಇಬ್ಬರೂ ವಿವಾಹವಾಗುವ ನಿರ್ಧಾರಕ್ಕೆ ಬಂದರು. ಇದರ ಜೊತೆಗೆ ಸಾರಾಗೆ ಸಹ ಹಿಂದು ಸಂಪ್ರದಾಯದ ಮೇಲೆ ವಿಶೇಷ ಆಸಕ್ತಿ ಇತ್ತು. ಈ ಹಿನ್ನೆಲೆಯಲ್ಲಿ ಸಾರಾ ಪೋಷಕರಾದ ರೋಜ್‌ಮೇರಿ ಪ್ಲಾಟ್, ಹ್ಯಾರಿ ಪೋಲಾರ್ಡ್ ಅವರ ಬಳಿ ವಿಷಯ ಪ್ರಸ್ತಾಪಿಸಲಾಗಿದೆ. ಅವರಿಂದ ಒಪ್ಪಿಗೆ ಪಡೆದ ಬಳಿಕ ರವಿಕುಮಾರ್ ತನ್ನ ಮನೆಯವರ ಬಳಿಯೂ ಪ್ರಸ್ತಾಪಿಸಿದ್ದಾರೆ. ಎರಡೂ ಕುಟುಂಬದವರ ಪರಸ್ಪರ ಒಪ್ಪಿಗೆ ಮೇರೆಗೆ ಹಿಂದು ಸಂಪ್ರದಾಯದಂತೆ ಮದುವೆ ಮಾಡುವ ತೀರ್ಮಾನಕ್ಕೆ ಬರಲಾಯಿತು.
ಗುಮ್ಮಟನಗರದಲ್ಲಿ ಇವರಿಬ್ಬರ ಮದುವೆ ಅದ್ಧೂರಿಯಾಗಿ ನಡದಿದ್ದು, ಮದುವೆ ದಿನ ಸೀರೆ ಧರಿಸಿದ್ದ ಸಾರಾ ಅಪ್ಪಟ ಭಾರತೀಯ ನಾರಿಯಂತೆ ಕಂಡಿದ್ದಾರೆ. ಸಪ್ತಪದಿ ತುಳಿಯುವ ಮೂಲಕ ನವಜೀವನಕ್ಕೆ ಕಾಲಿಟ್ಟಿದ್ದಾರೆ.
ಇದನ್ನೂ ಓದಿ: ಥೈಲ್ಯಾಂಡ್‌ನಲ್ಲಿ ಬಂಗಾರದ ಪದಕ ಗೆದ್ದ ವಿಜಯಪುರದ ಕುಸ್ತಿಪಟು