Site icon Vistara News

Education Policy : ರಾಜ್ಯದಲ್ಲಿ NEP ರದ್ದು; ಹೊಸ ರಾಜ್ಯ ಶಿಕ್ಷಣ ನೀತಿ CBSE, ICSEಗೆ ಅನ್ವಯ ಆಗುತ್ತಾ?

CBSE and ICSE and NEP status in karnataka and background photo have books

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (National Education Policy – NEP) ಅಧಿಕೃತವಾಗಿ ರದ್ದು ಮಾಡುವ ತೀರ್ಮಾನವನ್ನು ರಾಜ್ಯ ಸರ್ಕಾರ ಸೋಮವಾರ (ಆಗಸ್ಟ್‌ 21) ಪ್ರಕಟಿಸಿದೆ. ಅಲ್ಲದೆ, ನೂತನ ರಾಜ್ಯ ಶಿಕ್ಷಣ ನೀತಿಯನ್ನು (State Education Policy -SEP) ಕರ್ನಾಟಕದಲ್ಲಿ ಅಳವಡಿಸುವುದಾಗಿಯೂ ಘೋಷಣೆ ಮಾಡಿದೆ. ಆದರೆ, ರಾಜ್ಯ ಶಿಕ್ಷಣ ನೀತಿಯು ಸಿಬಿಎಸ್‌ಇ, ಐಸಿಎಸ್‌ಇ ಬೋರ್ಡ್‌ಗೆ (CBSE, ICSE Board)ಅನ್ವಯ ಆಗುವುದಿಲ್ಲ. ಅದು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವುದರಿಂದ ಅದರಲ್ಲಿ ಯಾವುದೇ ಹಸ್ತಕ್ಷೇಪ ಮಾಡಲು ರಾಜ್ಯಕ್ಕೆ ಅಧಿಕಾರ ಇಲ್ಲ. ಇದರ ಜತೆಗೆ ಕೇಂದ್ರೀಯ ವಿವಿಗಳು, ಖಾಸಗಿ ವಿವಿಗಳಿಗೂ ಈ ನೀತಿ ಅನ್ವಯ ಆಗುವುದಿಲ್ಲ. ಹಾಗಾಗಿ ನೂತನ ಶೈಕ್ಷಣಿಕ ನೀತಿ (Education Policy) ಬಗ್ಗೆ ಎಲ್ಲರೂ ಭಯ ಬೀಳಬೇಕಿಲ್ಲ.

ಈ ಬಗ್ಗೆ ರಾಜ್ಯ ಸರ್ಕಾರ ಸಹ ಸ್ಪಷ್ಟವಾಗಿ ಹೇಳಿದೆ. ಉನ್ನತ ಶಿಕ್ಷಣ ಸಚಿವ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ನಮ್ಮ ರಾಜ್ಯದಲ್ಲಿ ಎನ್ಇಪಿ ಅನ್ನು ಅಳವಡಿಕೆ ಮಾಡುವುದಿಲ್ಲ. ಈಗ ಇರುವ ವ್ಯವಸ್ಥೆಯನ್ನು ರದ್ದು ಮಾಡುತ್ತಿದ್ದೇವೆ. ಇದರಿಂದ ಅನುಕೂಲಕ್ಕಿಂತ ತೊಂದರೆಯೇ ಹೆಚ್ಚಾಗಿದೆ. ಹಾಗಾಗಿ ಈಗಾಗಲೇ ರಾಜ್ಯ ಶಿಕ್ಷಣ ನೀತಿ ಅಳವಡಿಕೆಗೆ ಸಮಿತಿ ರಚನೆಗೆ ಸೂಚನೆ ನೀಡಲಾಗಿದ್ದು, ಇನ್ನೊಂದು ವಾರದಲ್ಲಿ ರಚನೆಯಾಗಲಿದೆ. ಆದರೆ, ರಾಜ್ಯ ಶಿಕ್ಷಣ ನೀತಿಯು ಸಿಬಿಎಸ್‌ಇ, ಐಸಿಎಸ್‌ಇ ಬೋರ್ಡ್‌ಗೆ ಅನ್ವಯ ಆಗುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ:BJP Politics : ಮೈಚಳಿ ಬಿಡಿ, ಸರ್ಕಾರಕ್ಕೆ ಬಿಸಿ ಮುಟ್ಟಿಸಲು 224 ಕ್ಷೇತ್ರದಲ್ಲಿ ಪ್ರತಿಭಟಿಸಿ; ಕೋರ್‌ ಕಮಿಟಿಯಲ್ಲಿ ಬಿಎಸ್‌ವೈ ಗುಡುಗು

ಕೇಂದ್ರೀಯ ವಿವಿಗಳು, ಖಾಸಗಿ ವಿವಿಗಳಿಗೂ ಅನ್ವಯಿಸಲ್ಲ

ಈಗ ನೂತನವಾಗಿ ಜಾರಿಗೆ ತರಲು ಹೊರಟಿರುವ ರಾಜ್ಯ ಶಿಕ್ಷಣ ನೀತಿಯು (SEP) ರಾಜ್ಯ ಪಠ್ಯಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಬೇರೆ ಯಾವುದಕ್ಕೂ ಅನ್ವಯ ಆಗುವುದಿಲ್ಲ. ಕೇಂದ್ರೀಯ ವಿವಿಗಳು, ಖಾಸಗಿ ವಿವಿಗಳಿಗೆ ಇದು ಅನ್ವಯ ಆಗುವುದಿಲ್ಲ. ರಾಜ್ಯ ಸರ್ಕಾರದ ಪರದಿ ಒಳಗೆ ಬರುವ ಎಲ್ಲ ವಿವಿಗಳಿಗೆ ಮಾತ್ರವೇ ರಾಜ್ಯ ಶಿಕ್ಷಣ ನೀತಿ ಅನ್ವಯ ಆಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಹೇಳಿದ್ದಾರೆ.

ಸಿದ್ಧತೆ ಮಾಡದೇ ಎನ್‌ಇಪಿ ಜಾರಿ; ರದ್ದು ಮಾಡಲು ಕಾರಣಗಳಿವು

ಎನ್‌ಇಪಿಯನ್ನು ಆತುರವಾಗಿ ಜಾರಿ ಮಾಡಲಾಗಿದೆ. ಸರಿಯಾದ ಸಿದ್ಧತೆಯನ್ನೇ ಮಾಡಿಕೊಳ್ಳಲಾಗಿಲ್ಲ. ಇದಕ್ಕೆ ಹಣ ಮೀಸಲು ಇಟ್ಟಿಲ್ಲ. ಅತಿಥಿ ಉಪನ್ಯಾಸಕರ ಸೇವೆಯ ಜತೆಯಲ್ಲಿ ನಮ್ಮ ಕಾಲೇಜುಗಳು ನಡೆಯುತ್ತಿವೆ. ಇದೆಲ್ಲವನ್ನೂ ಗಮನಹರಿಸಿ ರದ್ದು ಮಾಡಿದ್ದೇವೆ. ಬಿಜೆಪಿ ಸಿದ್ಧಾಂತ‌ವನ್ನು ಪಠ್ಯ‌ದಲ್ಲಿ ಸೇರ್ಪಡೆ ಮಾಡುವ ಕೆಲಸವನ್ನು ಮಾಡಲಾಗುತ್ತಿದೆ. ಇತಿಹಾಸವನ್ನು ತಿರುಚುವ ಕೆಲಸವನ್ನು ಮಾಡಲಾಗುತ್ತಿದೆ. ಇದನ್ನು ಸರಿ ಮಾಡಬೇಕು. ಇದಕ್ಕಾಗಿ ರಾಜ್ಯ ಶಿಕ್ಷಣ ನೀತಿಯನ್ನು ಜಾರಿ ಮಾಡುತ್ತಿದ್ದೇವೆ ಎಂದು ಸಚಿವ ಡಾ. ಎಂ.ಸಿ. ಸುಧಾಕರ್ ತಿಳಿಸಿದ್ದಾರೆ.

ಈಗಾಗಲೇ ಎನ್‌ಇಪಿ ಅಡಿ ಓದುತ್ತಿದ್ದವರ ಭವಿಷ್ಯ?

ಎನ್‌ಇಪಿ ಅಡಿಯಲ್ಲಿ ಈಗಾಗಲೇ ದಾಖಲಾಗಿರುವ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆ ಇಲ್ಲ. ಇವರಿಗೆ ಅನುಕೂಲ ಆಗುವ ರೀತಿಯಲ್ಲಿ ಕ್ರಮ ತೆಗೆದುಕೊಳ್ಳುತೇವೆ. ತಜ್ಞರ ವರದಿ ಪಡೆದು ಮುಂದಿನ ತೀರ್ಮಾನವನ್ನು ಮಾಡುತ್ತೇವೆ ಎಂದು ಸಚಿವ ಡಾ. ಎಂ.ಸಿ. ಸುಧಾಕರ್ ಸ್ಪಷ್ಟನೆ ನೀಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಅಸಮಾಧಾನ

ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದಲ್ಲಿ ವಿಶ್ವವಿದ್ಯಾಲಯಗಳ ಕುಲಪತಿಗಳೊಂದಿಗೆ ಸಭೆ ನಡೆದಿದ್ದು, ಡಿಸಿಎಂ ಡಿ.ಕೆ.ಶಿವಕುಮಾರ್, ಉನ್ನತ ಶಿಕ್ಷಣ ಸಚಿವ ಡಾ. ಎಂ. ಸಿ. ಸುಧಾಕರ್, ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸಾಹಿತಿ ಬರಗೂರು ರಾಮಚಂದ್ರಪ್ಪ ಹಾಗೂ ವಿವಿಗಳ ಕುಲಪತಿಗಳು ಭಾಗಿಯಾಗಿದ್ದರು. ಈ ವೇಳೆ ರಾಷ್ಟ್ರೀಯ ಶಿಕ್ಷಣ ನೀತಿ ವಿರುದ್ಧ ಸಿಎಂ ಅಸಮಾಧಾನವನ್ನು ಹೊರಹಾಕಿದ್ದಾರೆ.

ಇದು ಕೇಂದ್ರ ಸರ್ಕಾರದ ಹುನ್ನಾರ

ರಾಜ್ಯ ಸರ್ಕಾರಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಲಾಗಿದೆ. ಶಿಕ್ಷಣ ನೀತಿಯನ್ನು ಕೇಂದ್ರ ಹೇರಲಾಗದು. ಹೇರಲು ಹೊರಟಿರುವುದು ಒಂದು ಹುನ್ನಾರ. ಬಹು ಸಂಸ್ಕೃತಿ, ಬಹುತ್ವ ಇರುವ ದೇಶದಲ್ಲಿ ಏಕರೂಪದ ಶಿಕ್ಷಣ ವ್ಯವಸ್ಥೆ ಮಾಡಲಾಗದು. ಆದ್ದರಿಂದ ಹಳೆ ಶಿಕ್ಷಣ ಪದ್ಧತಿ ಮುಂದುವರೆಸಿ, ಹೊಸ ಶಿಕ್ಷಣ ನೀತಿ ರೂಪಿಸಲು ಒಂದು ಸಮಿತಿ ರಚಿಸಲಾಗುವುದು. ಈ ಶಿಕ್ಷಣ ನೀತಿ ಜಾರಿಗೊಳಿಸಲು ಅಗತ್ಯ ಮೂಲಸೌಲಭ್ಯಗಳು ಶಿಕ್ಷಣ ಸಂಸ್ಥೆಗಳಲ್ಲಿ ಇಲ್ಲ. ಇದರಿಂದ ಅನಗತ್ಯ ಗೊಂದಲಗಳು ಸೃಷ್ಟಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: Education Policy : ರಾಜ್ಯದಲ್ಲಿ NEP ಇನ್ನಿಲ್ಲ, SEP ಜಾರಿ ಎಂದ ಸರ್ಕಾರ; ಸಿಡಿದೆದ್ದ ಬಿಜೆಪಿಯಿಂದ ಪ್ರತಿತಂತ್ರ

ಎಲ್ಲೆಲ್ಲಿ ಜಾರಿಯಾಗಿಲ್ಲ ಎಂಬ ಮಾಹಿತಿ ಚರ್ಚೆ

ಬಿಜೆಪಿ ಆಳ್ವಿಕೆಯ ಇತರ ರಾಜ್ಯಗಳೂ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಲು ಹಿಂದೇಟಾಕುತ್ತಿವೆ. ಕೇರಳ, ತಮಿಳು ನಾಡು ರಾಜ್ಯಗಳು ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸುವುದಿಲ್ಲ ಎಂದು ಕೇಂದ್ರಕ್ಕೆ ಸ್ಪಷ್ಟಪಡಿಸಿವೆ ಎಂದು ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಬಡವರು, ಪರಿಶಿಷ್ಟ ಜಾತಿ, ಪಂಗಡದವರು, ಹಿಂದುಳಿದವರು, ಗ್ರಾಮೀಣ ಪ್ರದೇಶದವರಿಗೆ ತೊಂದರೆಯಾಗುತ್ತದೆ. ಉನ್ನತ ಶಿಕ್ಷಣದಲ್ಲಿ ಪ್ರತಿ ವರ್ಷ ಪ್ರಮಾಣ ಪತ್ರ ನೀಡಿದರೂ, ಒಂದು ವರ್ಷ, ಎರಡು ವರ್ಷ ಓದಿದವರಿಗೆ ಎಷ್ಟು ಉದ್ಯೋಗಾವಕಾಶ ದೊರೆಯಲು ಸಾಧ್ಯ? ಉದ್ಯೋಗವಕಾಶ ದೊರೆತು ಹೋದ ಬಡವರ ಮಕ್ಕಳು ಮತ್ತೆ ಓದಲು ಎಷ್ಟು ಅವಕಾಶ ದೊರೆಯುವುದು? ಎಂಬ ಅನುಮಾನವನ್ನು ಸಭೆಯಲ್ಲಿ ವ್ಯಕ್ತಪಡಿಸಲಾಗಿದೆ. ಈ ಎಲ್ಲ ದೃಷ್ಟಿಯಿಂದ ಎನ್ಇಪಿಯನ್ನು ರದ್ದು ಮಾಡುವ ತೀರ್ಮಾನಕ್ಕೆ ಬರಲಾಗಿದೆ.

Exit mobile version