Site icon Vistara News

Cancer Treatment | ಅಮ್ಮನಿಗೆ ಕ್ಯಾನ್ಸರ್‌ ಆಗಿದ್ದನ್ನು ನೆನಪು ಮಾಡಿಕೊಂಡು ಭರವಸೆಯ ಮಾತಾಡಿದ ಬೊಮ್ಮಾಯಿ

Cancer treatment

ಹುಬ್ಬಳ್ಳಿ: ದೈಹಿಕವಾದ ಸವಾಲನ್ನು ಮಾನಸಿಕ ಒತ್ತಡಕ್ಕೆ ಸಿಲುಕಿಸುವ ಸ್ಥಿತಿ ಕ್ಯಾನ್ಸರ್. ಕ್ಯಾನ್ಸರ್ ಆಗಿದೆ ಎಂದ ಕೂಡಲೇ ಮಾನಸಿಕ ಒತ್ತಡಕ್ಕೆ ಸಿಲುಕಿ ಪ್ರತಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಉತ್ತಮ ಜೀವನಶೈಲಿ, ಆಧ್ಯಾತ್ಮಿಕ ಶಕ್ತಿ, ಮಾನಸಿಕ ಸದೃಢತೆಯಿದ್ದವರು ಕ್ಯಾನ್ಸರನ್ನು ಪ್ರತಿರೋಧಿಸಬಹುದು (Cancer Treatment) ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಅವರು ಬುಧವಾರ ಕರ್ನಾಟಕ ಕ್ಯಾನ್ಸರ್ ಥೆರಪಿ ಮತ್ತು ಸಂಶೋಧನಾ ಸಂಸ್ಥೆಯ ವತಿಯಿಂದ ನವನಗರದ ಆಸ್ಪತ್ರೆಯ ಆವರಣದಲ್ಲಿ ಆಯೋಜಿಸಿರುವ “ಪದ್ಮಶ್ರೀ ಡಾ. ಆರ್.ಬಿ. ಪಾಟೀಲ ಅವರ ಕಂಚಿನ ಪುತ್ಥಳಿ ಅನಾವರಣ” ಹಾಗೂ ನವೀಕರಣಗೊಂಡ ಭಾನಜಿ ಡಿ. ಖಿಮಜಿ ಒಪಿಡಿ ಉದ್ಘಾಟಿಸಿ ಮಾತನಾಡಿದರು.

ತಮ್ಮ ತಾಯಿಗೆ ಕ್ಯಾನ್ಸರ್ ಆಗಿದ್ದನ್ನು ಸ್ಮರಿಸಿದ ಮುಖ್ಯಮಂತ್ರಿಗಳು ಕ್ಯಾನ್ಸರ್ ರೋಗಿ ಹಾಗೂ ಅವರ ಕುಟುಂಬಕ್ಕೆ ಇದರಿಂದ ಬಹಳ ಒತ್ತಡ ಉಂಟಾಗುತ್ತದೆ. ಚಿಕಿತ್ಸೆ ನೀಡಬೇಕೋ ಬೇಡವೋ ಎನ್ನುವುದು ಪ್ರಶ್ನೆ ಹಾಗೂ ಸವಾಲು ಎದುರಾಗುತ್ತದೆ ಎಂದು ನೆನಪು ಮಾಡಿಕೊಂಡರು.

ʻʻಅನೇಕರು ಕ್ಯಾನ್ಸರ್ ನೊಂದಿಗೆ ಬದುಕುತ್ತಾರೆ. ಭಯಪಡಬೇಕಿಲ್ಲ. ಹತಾಶರಾಗಬೇಕಿಲ್ಲ. ಕ್ಯಾನ್ಸರ್ ವಲಯದಲ್ಲಿ ಆರ್.ಅಂಡ್ ಡಿ ಮೂಲಕ ಅನೇಕ ಉಪಕರಣಗಳು ಹಾಗೂ ಚಿಕಿತ್ಸಾ ವಿಧಾನಗಳು ಬಂದಿವೆ. ನ್ಯೂಕ್ಲಿಯರ್ ವಿಜ್ಞಾನವನ್ನೂ ಕ್ಯಾನ್ಸರ್ ಚಿಕಿತ್ಸೆಗೆ ಬಳಸಲಾಗುತ್ತದೆʼʼ ಎಂದು ಹೇಳಿದ ಅವರು, ಅದೆಲ್ಲಕ್ಕಿಂತಲೂ ಹೆಚ್ಚಾಗಿ ಈ ರೋಗದ ಚಿಕಿತ್ಸೆಗೆ ವೈದ್ಯರು ಬಹಳ ಸಮಾಧಾನ, ಮಾನವೀಯತೆ, ಕರುಣೆ ಹಾಗೂ ವಾತ್ಸಲ್ಯದಿಂದ ವರ್ತಿಸಬೇಕು. ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಐದು ಕೋಟಿ ರೂ. ಅನುದಾನ ಘೋಷಣೆ
ಹುಬ್ಬಳ್ಳಿ ಕ್ಯಾನ್ಸರ್ ಥೆರಪಿ ಮತ್ತು ಸಂಶೋಧನಾ ಸಂಸ್ಥೆಗೆ ಸಿ.ಎಸ್.ಆರ್ ಮೂಲಕ 5 ಕೋಟಿ ರೂ. ಒದಗಿಸುವುದಾಗಿ ಸಿಎಂ ಬೊಮ್ಮಾಯಿ ಈ ಸಂದರ್ಭದಲ್ಲಿ ಘೋಷಿಸಿದರು. ʻʻಉತ್ತರ ಕರ್ನಾಟಕದ ಸೇವೆ ನೀಡುವ ಸಂಸ್ಥೆಯಾಗಿ ಕ್ಯಾನ್ಸರ್ ಸಂಸ್ಥೆಯನ್ನು ಬೆಳೆಸಬೇಕಿದೆ. ವಿಜ್ಞಾನ ಪ್ರಯೋಗಾಲಯ ಹಾಗೂ ಆಯುರ್ವೇದ ಚಿಕಿತ್ಸೆ ಮೂಲಕ ನೋವಿಲ್ಲದೆ ಚಿಕಿತ್ಸೆ ನೀಡಲು ಪ್ರಯೋಗ ಮಾಡುವ ಕನಸು ಡಾ. ಆರ್.ಬಿ.ಪಾಟೀಲರದ್ದು. ಸಂಸ್ಥೆ ಬೆಳೆಯಬೇಕು. ಅದಕ್ಕೆ ಸ್ವಯಂಪ್ರೇರಿತವಾಗಿ ಜನ ಮುಂದಾಗಬೇಕು. ಆಯುಷ್ಮಾನ್ ಕಾರ್ಡುಗಳನ್ನು ಹೊಂದಿದವರಿಗೆ ಪಿ.ಹೆಚ್.ಸಿ ಕೇಂದ್ರಗಳಿಂದ ಶಿಫಾರಸು ಮಾಡುವಾಗ ಈ ಸಂಸ್ಥೆಯನ್ನು ಸರ್ಕಾದಿಂದ ಬೆಂಬಲಿತ ಸಂಸ್ಥೆಯಾಗಿ ಪರಿಗಣಿಸಲು ಆದೇಶ ಹೊರಡಿಸಲಾಗುವುದು. ಭರತ್ ಹಾಗೂ ದಾಮ್ಜಿ ಅವರು ಹೆಚ್ಚಿನ ನೆರವು ನೀಡಬೇಕುʼʼ ಎಂದರು. ಹುಬ್ಬಳ್ಳಿಯಲ್ಲಿ ಒಂದು ಒಳ್ಳೆಯ ಸಂಸ್ಥೆಯಾದರೆ 2-3 ಜಿಲ್ಲೆಗಳಿಗೆ ಪ್ರಯೋಜನವಾಗಲಿದೆ ಎಂದರು.

ಜೀವನಶೈಲಿ ಬದಲಾವಣೆ
ಉತ್ತರ ಕರ್ನಾಟಕದ ಜೀವನಶೈಲಿಯಲ್ಲಿ ಜನ ಹೆಚ್ಚು ತಂಬಾಕು ಸೇವನೆ, ಧೂಮಪಾನ ಮಾಡುತ್ತಾರೆ. ಇಂಥ ಜೀವನಶೈಲಿಯಿಂದ ಬಾಯಿಗೆ ಸಂಬಂಧಿಸಿದ ಕ್ಯಾನ್ಸರ್ ಬರುವುದು ಹೆಚ್ಚು. ಕರ್ನಾಟಕ ಕ್ಯಾನ್ಸರ್ ಸಂಸ್ಥೆ ಪೂರ್ಣಪ್ರಮಾಣದ ಸಂಶೋಧನಾ ಕೇಂದ್ರವಾಗಿ ಪರಿವರ್ತನೆಯಾಗಬೇಕು. ಇದಕ್ಕೆ ಸರ್ಕಾರ ಬೆಂಬಲ ನೀಡುತ್ತದೆ. ಸಮಾಜವೂ ಬೆಂಬಲ ನೀಡಬೇಕಾಗುತ್ತದೆ ಎಂದರು. ಡಾ: ಆರ್.ಬಿ.ಪಾಟೀಲರು ಪ್ರಾರಂಭ ಮಾಡಿದಾಗ ಅವರ ಅನುಭವದಿಂದ ಪ್ರಾರಂಭಿಸಿದರು. ಜನರಿಗೆ ಅವರ ಮೇಲೆ ವಿಶ್ವಾಸಾರ್ಹತೆ ಇತ್ತು ಎಂದರು.

ಹುಬ್ಬಳ್ಳಿ ಧಾರವಾಡ ಮಹಾಪೌರರಾದ ಈರೇಶ ಅಂಚಟಗೇರಿ, ಶಾಸಕರಾದ ಅರವಿಂದ ಬೆಲ್ಲದ್, ಪ್ರಸಾದ್ ಅಬ್ಬಯ್ಯ, ಕರ್ನಾಟಕ ಕ್ಯಾನ್ಸರ್ ಆಸ್ಪತ್ರೆ ಅಧ್ಯಕ್ಷ ಡಾ: ಬಿ.ಆರ್.ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ | Chhavi Mittal | ಬ್ರೆಸ್ಟ್‌ ಕ್ಯಾನ್ಸರ್‌ ವಿರುದ್ಧ ಹೋರಾಡಿ ಗೆದ್ದ ಛವಿ ಮಿತ್ತಲ್: ಗಾಯದ ಗುರುತಿರುವ ಪೋಸ್ಟ್‌ ಹಂಚಿಕೊಂಡ ನಟಿ

Exit mobile version