ಕಲಬುರಗಿ: ಕೆಇಎ ನೇಮಕಾತಿ ಪರೀಕ್ಷೆಯಲ್ಲಿ (KEA Exam Scam) ಬ್ಲೂಟೂತ್ ಬಳಸಿ ಸಿಕ್ಕಿಬಿದ್ದಿರುವ ಅಭ್ಯರ್ಥಿಯೊಬ್ಬ, ಖಾಸಗಿ ಕಂಪನಿಯಲ್ಲಿ 80 ಸಾವಿರ ರೂ. ಸಂಬಳ ಬಿಟ್ಟು, ಸರ್ಕಾರಿ ನೌಕರಿಗೆ ಆಸೆಗೆ ಬಿದ್ದು ಜೈಲು ಪಾಲಾಗಿದ್ದಾನೆ. ಮೆಕಾನಿಕಲ್ ಎಂಜಿನಿಯರಿಂಗ್ ಓದಿದ್ದ ಯುವಕ, ಉತ್ತಮ ಸಂಬಳ ಸಿಗುತ್ತಿದ್ದರೂ ಸರ್ಕಾರಿ ನೌಕರಿ ಪಡೆಯಬೇಕೆಂದು ಅಡ್ಡ ದಾರಿ ಹಿಡಿದಿದ್ದರಿಂದ ಜೈಲು ವಾಸ ಅನುಭವಿಸುವಂತಾಗಿದೆ.
ಬೀದರ್‌ನ ಆಕಾಶ ಮಂಠಾಳೆ ಬಂಧಿತ ಆರೋಪಿ. ಈತ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ 80 ಸಾವಿರ ರೂ. ಸಂಬಳ ಪಡೆಯುತ್ತಿದ್ದ. ಆದರೂ ಸರ್ಕಾರಿ ನೌಕರಿ ಬಯಸಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಮುಂದಾಗಿದ್ದ. ಹೇಗಾದರೂ ಮಾಡಿ ನೌಕರಿ ಪಡೆಯಬೇಕು ಎನ್ನುವ ದುರಾಸೆಯಿಂದ ಪರೀಕ್ಷಾ ಅಕ್ರಮಕ್ಕಿಳಿದ. ಆರ್.ಡಿ ಪಾಟೀಲ್ ಜತೆ 25 ಲಕ್ಷ ರೂ. ಡೀಲ್ ಮಾಡಿಕೊಂಡು 8 ಲಕ್ಷ ಅಡ್ವಾನ್ಸ್ ಸಹ ಕೊಟ್ಟಿದ್ದ. ಆದರೆ ಪರೀಕ್ಷೆ ಕೇಂದ್ರದೊಳಗೆ ಹೋಗುವ ಮುನ್ನವೇ ಪೊಲೀಸರ ಕೈಗೆ ಸಿಕ್ಕು ಬಿದ್ದಿದ್ದಾನೆ.
ಇದನ್ನೂ ಓದಿ | KEA Exam Scam: ಪರೀಕ್ಷಾ ಅಕ್ರಮ ಸಂಬಂಧ 5 ಕೇಸ್ ದಾಖಲು; ಪಿಎಸ್ಐ ನೇಮಕಾತಿ ಹಗರಣದ ಕಿಂಗ್‌ಪಿನ್ ಹೆಸರು ಥಳುಕು!
ಅಕ್ರಮಕ್ಕೆ ಸಹಕರಿಸಿದ ಯುವತಿ ಅರೆಸ್ಟ್
ಕೆಇಎ ಪರೀಕ್ಷಾ ಅಕ್ರಮ ಪ್ರಕರಣದಲ್ಲಿ ಲಕ್ಷ್ಮೀಪುತ್ರ ಎಂಬಾತನಿಗೆ ಸಹಕರಿಸಿದ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ. ಸೊನ್ನ ಗ್ರಾಮದ ನಿವಾಸಿ, ಲಕ್ಷ್ಮಿ ಪುತ್ರನ ಚಿಕ್ಕಪ್ಪನ ಮಗಳಾದ ಶೈಲಶ್ರಿ ತಳವಾರ ಬಂಧಿತ ಯುವತಿ. ಚಿಕ್ಕಬಳ್ಳಾಪುರದಲ್ಲಿ ನರ್ಸಿಂಗ್ ಮಾಡುತ್ತಿದ್ದ ಶೈಲಶ್ರೀ, ಕಾರಿನಲ್ಲಿ ಕುಳಿತು ಸಹೋದರನಿಗೆ ಉತ್ತರ ಹೇಳುತ್ತಿದ್ದಳು. ಹೀಗಾಗಿ ಆಕೆಯನ್ನು ಪೊಲೀಸರು ಬಂಧಿಸಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದಾರೆ.
ಪರೀಕ್ಷಾ ಅಕ್ರಮದಕ್ಕೆ ಸಂಬಂಧಿಸಿ ಯಾದಗಿರಿಯಲ್ಲಿ 5 ಪ್ರಕರಣ, ಅಫಜಲಪುರದಲ್ಲಿ 1 ಹಾಗೂ ಕಲಬುರಗಿಯಲ್ಲಿ 2 ಕೇಸ್ ದಾಖಲಾಗಿದ್ದು, ಒಟ್ಟು 22 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಯಾದಗಿಯಲ್ಲಿ 5 ಪ್ರತ್ಯೇಕ FIR
ಎಫ್‌ಡಿಎ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿ ಯಾದಗಿರಿ ನಗರ ಪೋಲಿಸ್ ಠಾಣೆಯಲ್ಲಿ 9 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. 5 ಪರೀಕ್ಷಾ ಕೇಂದ್ರಗಳಲ್ಲಿ ಬ್ಲೂಟೂತ್ ಮೂಲಕ ಅಕ್ರಮ ಎಸಗಿದ್ದವರ ವಿಚಾರಣೆ ಮಾಡಲಾಗುತ್ತಿದೆ.
ಇದನ್ನೂ ಓದಿ | KEA Exam Scam : ಕೆಇಎ ಪರೀಕ್ಷೆಗೆ ಟೈಟ್ ಸೆಕ್ಯುರಿಟಿ; ಅಂಗಿಯ ಉದ್ದ ತೋಳನ್ನು ಕಟ್ ಮಾಡಿ ಪರೀಕ್ಷೆ ಬರೆದ ಅಭ್ಯರ್ಥಿ!
ಯಾದಗಿರಿಯ ನ್ಯೂ ಕನ್ನಡ ಪಿಯು ಕಾಲೇಜಿನಲ್ಲಿ ಅಫಜಲಪುರದ ಸೊನ್ನಾದ ಸಿದ್ರಾಮ ಅಲಿಯಾಸ್ ಪುಟ್ಟಪ್ಪ , ಕಲಬುರಗಿಯ ಚಿಂಚೋಳಿ ಸಾಗರ್, ಕಲಬುರಗಿ ಹಿರೇ ರಾಜಾಪುರದ ನಿರಂಜನ, ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಅಫಜಲಪುರದ ಸೊನ್ನಾದ ಬಾಬುರಾವ್, ಸಂತೋಷ, ಸಭಾ ಪಬ್ಲಿಕ್ ಕಾಲೇಜಿನಲ್ಲಿ ಜೇರಟಗಿ ಜೇವರ್ಗಿಯ ಹಸನಸಾಬ, ಅಫಜಲಪುರದ ರಾಕೇಶ್, ಎಲ್‌ಕೆಇಟಿ ಕಾಲೇಜಿನಲ್ಲಿ ಅಫಜಲಪುರ ತಾಲೂಕು ಬಾದನಳ್ಳಿಯ ಬಾಬುರಾವ್ ಜಮಾದಾರ, ಮಹಾತ್ಮಗಾಂಧಿ ಪದವಿ ಪೂರ್ವ ಕಾಲೇಜಿನಲ್ಲಿ ವಿಜಯಪುರ ಜಿಲ್ಲೆ ಅಲಮೇಲದ ಪ್ರವೀಣ್ ಬ್ಲೂಟೂತ್ ಬಳಸಿ ಸಿಕ್ಕಿಬಿದ್ದಿದ್ದರು.