ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ( Panchamasali Reservation) ನೀಡುವ ಕುರಿತು ವರದಿಯನ್ನು ಗಡಿಬಿಡಿಯಲ್ಲಿ ನೀಡಲು ಸಾಧ್ಯವಿಲ್ಲ ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಪ್ರಶ್ನೆಗೆ ಉತ್ತರಿಸಿದ ಹೆಗ್ಡೆ, ಪಂಚಮಸಾಲಿ ಸಮುದಾಯ ಕುರಿತು ಈಗಾಗಲೇ ಮಧ್ಯತರ ವರದಿಯನ್ನು ಸಲ್ಲಿಸಲಾಗಿದ್ದು, ಪೂರ್ಣ ವರದಿ ಇನ್ನೂ ನೀಡಲಾಗಿಲ್ಲ. ಆಯೋಗದ ನಿಯಮಾನುಸಾರ ವಿವಿಧೆಡೆ ಭೇಟಿ ನೀಡಿ ಪ್ರವಾಸ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿಗಳ ಅಧ್ಯಯನ, ಪ್ರವಾಸ ಕೈಗೊಂಡು ಸಂಗ್ರಹಿಸಿ ಮಾಹಿತಿ ಹಾಗೂ ನಿಯಮಾನುಸಾರ ಪರಿಶೀಲನೆ ನಂತರ ಸಲ್ಲಿಸಬೇಕಾಗುತ್ತದೆ. ಗಡಿಬಿಡಿಯಲ್ಲಿ ವರದಿ ನೀಡಲು ಸಾಧ್ಯವಿಲ್ಲ ಎಂದು ಹೆಗ್ಡೆ ತಿಳಿಸಿದರು.
ವೀರಶೈವ ಪಂಚಮಸಾಲಿ ಸಮುದಾಯಗಳ ವಿವಿಧ ಸಂಘಸಂಸ್ಥೆಗಳು ನೀಡಿರುವ ಮನವಿಗಳ ಜತೆಗೆ ಬೇರೆ ಬೇರೆ ಹಿಂದುಳಿದ ವರ್ಗಗಳ ಸ್ಥಿತಿಗತಿ ಕುರಿತು ರಾಜ್ಯದ ಹಲವು ಜಿಲ್ಲೆಗಳಿಗೆ ಭೇಟಿ ನೀಡಿ ಅವರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ಅಧ್ಯಯನ ನಡೆಸಿ ಮಾಹಿತಿ ಸಂಗ್ರಹಿಸುವುದರ ಜೊತೆಗೆ ವಿವಿಧ ಸರ್ಕಾರಿ ಹಾಗೂ ವಿಶ್ವವಿದ್ಯಾಲಯಗಳಿಂದ ದ್ವಿತೀಯ ಮೂಲದ ಮಾಹಿತಿಯನ್ನು ಸಂಗ್ರಹಿಸಲಾಗಿದ್ದು ವರದಿ ತಯಾರಿಕೆಯ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು.
ಅದೇ ರೀತಿ ರಾಜ್ಯ ಒಕ್ಕಲಿಗರ ಕೇಂದ್ರ ಸಂಘ ಈಗಿರುವ ಮೀಸಲಾತಿಯನ್ನು ಹೆಚ್ಚಿಸುವಂತೆ ಆಯೋಗಕ್ಕೆ ಮನವಿ ಸಲ್ಲಿಸಿದ್ದು, ಸದರಿ ಮನವಿಗೆ ಸಂಬಂಧಿಸಿದ ಪ್ರಕ್ರಿಯೆ ಪರಿಶೀಲನಾ ಹಂತದಲ್ಲಿದೆ ಎಂದರು.
ಅನಾಥ ಮಕ್ಕಳಿಗೆ ಪ್ರವರ್ಗ-1ರಡಿ ಮೀಸಲಾತಿ: ಜಾತಿ ಗೊತ್ತಿಲ್ಲದ ಅನಾಥ ಮಕ್ಕಳಿಗೆ ಪ್ರವರ್ಗ-1ರಡಿ ಮೀಸಲಾತಿ ಕಲ್ಪಿಸಿಕೊಡಲು ನಿರ್ಧರಿಸಿ ವಿಶೇಷ ವರದಿಯನ್ನು ಸಿದ್ದಪಡಿಸಿ ಸರಕಾರಕ್ಕೆ ಸಲ್ಲಿಸಿದೆ ಎಂದು ಹೆಗ್ಡೆ ಹೇಳಿದರು. ತಂದೆ-ತಾಯಿ ಇಲ್ಲದ ಹಾಗೂ ಜಾತಿ ಗೊತ್ತಿರದ ಅನಾಥ ಮಕ್ಕಳಿಗೆ ಶೈಕ್ಷಣಿಕ ಹಾಗೂ ಔದ್ಯೋಗಿಕ ಮೀಸಲಾತಿ ಕಲ್ಪಿಸಿಕೊಡುವುದಕ್ಕೆ ಸರಕಾರಕ್ಕೆ ಶಿಫಾರಸ್ಸು ಮಾಡಿದೆ. ಅನಾಥ ಮಕ್ಕಳಿಗೆ ತೆಲಂಗಾಣ, ಮಹಾರಾಷ್ಟ್ರ ರಾಜ್ಯಗಳಲ್ಲಿ ಮೀಸಲಾತಿ ಕಲ್ಪಿಸಲಾಗಿರುವ ಮಾದರಿಯಲ್ಲಿಯೇ ನಮ್ಮ ರಾಜ್ಯದಲ್ಲಿಯೂ ಮೀಸಲಾತಿ ಒದಗಿಸುವ ದೃಷ್ಟಿಯಿಂದ ವಿವಿಧ ಜಿಲ್ಲೆಗಳಲ್ಲಿರುವ ಅನಾಥಾಲಯಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಾಗಿದ್ದು, ಈ ಎಲ್ಲಾ ಮಾಹಿತಿಯನ್ನಾದರಿಸಿ, ಜಾತಿ ತಿಳಿದಿರುವ ಮಕ್ಕಳಿಗೆ ಆಯಾ ಜಾತಿಯ ಪ್ರವರ್ಗದಡಿಯಲ್ಲಿ ಮತ್ತು ಜಾತಿ ಗೊತ್ತಿಲ್ಲದ ಅನಾಥ ಮಕ್ಕಳಿಗೆ ಪ್ರವರ್ಗ-1 ರಡಿಯಲ್ಲಿ ಮೀಸಲಾತಿ ಕಲ್ಪಿಸಿಕೊಡಬೇಕೆಂದು ಅಭಿಪ್ರಾಯಿಸಿ, ವಿಶೇಷ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ.
ಮೀಸಲಾತಿ ಕೋರಿ 133 ಮನವಿ ಸಲ್ಲಿಕೆ: ರಾಜ್ಯಾದ್ಯಂತ ಹಲವಾರು ಜಾತಿ ಜನಾಂಗ ಹಾಗೂ ಸಮುದಾಯಗಳಿಂದ, ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯ ವಿವಿಧ ಪ್ರವರ್ಗಗಳಿಗೆ ಸೇರ್ಪಡೆಗೊಳಿಸುವಂತೆ ಮನವಿಗಳು ಅಯೋಗಕ್ಕೆ ಸಲ್ಲಿಕೆಯಾಗಿದ್ದು, ಇದುವರೆಗೆ ಸುಮಾರು 133 ಮನವಿಗಳು ಸಲ್ಲಿಕೆಯಾಗಿವೆ. ಇವುಗಳ ಬಹಿರಂಗ ವಿಚಾರಣೆ ನಡೆಸಿ, ಮನವಿದಾರ ಜನಾಂಗದವರು ವಾಸವಾಗಿರುವ ಸ್ಥಳಗಳಿಗೆ ಪ್ರವಾಸ ಕೈಗೊಂಡು ಅವರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಮಾಹಿತಿ ಸಂಗ್ರಹಿಸಿ ಆದ್ಯತೆಯ ಮೇರೆಗೆ ಒಟ್ಟು 34 ವರದಿಗಳನ್ನು ತಯಾರಿಸಲಾಗಿದೆ ಎಂದು ವಿವರಿಸಿದರು.
ಇನ್ನುಳಿದ 42 ಮನವಿಗಳ ವರದಿ ಬಾಕಿ ಇದ್ದು, ಅವುಗಳ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಸುಮಾರು 57 ಮನವಿಗಳಿಗೆ ಸಂಬಂಧಿಸಿದಂತೆ ಈಗಾಗಲೇ ಹಿಂದಿನ ಆಯೋಗಗಳು ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಅಂತಹ ಮನವಿಗಳಿಗೆ ಹಿಂಬರಹವನ್ನು ನೀಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಮನವಿದಾರರು ಆಯೋಗಕ್ಕೆ ಸಲ್ಲಿಸಿದ ಮನವಿ ಮತ್ತು ದಾಖಲೆಗಳು ಹಾಗೂ ಆಯೋಗವು ಪ್ರವಾಸ ಕೈಗೊಂಡು ಸಂಗ್ರಹಿಸಿದ ಮಾಹಿತಿಯನ್ನಾಧರಿಸಿ ಕಾಡುಗೊಲ್ಲ, ಹಟ್ಟಿಗೊಲ್ಲ(ಅಡವಿಗೊಲ್ಲ), ಖಂಜಿರ್ ಭಾಟ್, ಕಂಜರ್, ಖಂಜಾರ್ ಭಾಟ್, ಚಪ್ಪರ್‌ಬಂದ್, ಕುಡುಬಿ, ಮುಖಾರಿ/ಮುವಾರಿ, ನಾಯಿಂದ, ಪೊಮ್ಮಲ, ಚೆನ್ನದಾಸರ, ಪರಿಯಾಳ, ರಾಮಕ್ಷತ್ರಿಯ, ಮಡಿಒಕ್ಕಲಿಗ, ಜೋಗಾರ್, ಚೌರಾಸಿಯಾ ಸಮುದಾಯಗಳ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದರು.
ಇದಲ್ಲದೆ ಲಿಂಗಾಯತ ಕುಡು ಒಕ್ಕಲಿಗ, ಆದಿಬಣಜಿಗ, ನೊಳಂಬ, ಮಲ್ಲವ ಮಲೇಗೌಡ, ಲಿಂಗಾಯತ ರಡ್ಡಿ, ಗೌಡ ಲಿಂಗಾಯತ, ಶಿವಸಿಂಪಿ, ಬಣಗಾರ, ಶಿವಾಚಾರ ನಗರ್ತ, 24 ಮನೆ ತೆಲುಗುಶೆಟ್ಟಿ, ಆರೇರ, ಕನ್ನಡ ವೈಶ್ಯ, ಗಾಣಿಗ ಸಮುದಾಯದ ಉಪಜಾತಿಗಳು ಹಾಗೂ ವಿವಿಧ ವೀರಶೈವ / ಲಿಂಗಾಯತ ಸಮುದಾಯದ ಬಗ್ಗೆ ವರದಿ ತಯಾರಿಸಿ, ಸರ್ಕಾರಕ್ಕೆ ಸಲ್ಲಿಸಲು ದ್ವಿತೀಯ ವರದಿಯನ್ನು ಸಿದ್ಧಪಡಿಸಿದ್ದು, ಮುದ್ರಣದ ಹಂತದಲ್ಲಿದೆ. ಅದನ್ನು ಸಹ ಸದ್ಯದಲ್ಲಿಯೇ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು.
ಪೋಷಕರ ಆದಾಯ ಮಾತ್ರ ಪರಿಗಣನೆ: ಉದ್ಯೋಗ ಮೀಸಲಾತಿಗಾಗಿ ಆದಾಯವನ್ನು ಪರಿಗಣಿಸುವಾಗ ಕೇವಲ ಪೋಷಕರ ಆದಾಯವನ್ನು ಮಾತ್ರ ಪರಿಗಣಿಸುವ ಮಾದರಿಯನ್ನು ಕರ್ನಾಟಕ ಸರ್ಕಾರವು ಅಳವಡಿಸಿಕೊಂಡು ಜಾರಿಗೆ ತರಲು ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ತೀರ್ಮಾನಿಸಲಾಗಿದೆ ಎಂದು ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಅವರು ತಿಳಿಸಿದರು.
ಹಿಂದುಳಿದ ವರ್ಗಗಳಿಗೆ ಜಾತಿ/ಆದಾಯ ಪ್ರಮಾಣ ಪತ್ರ ನೀಡುವಾಗ ಪ್ರಸ್ತುತ ಕರ್ನಾಟಕ ರಾಜ್ಯದ ಕೆನೆಪದರ ನೀತಿ ಅನ್ವಯ ಅಭ್ಯರ್ಥಿ ಮತ್ತು ತಂದೆ/ತಾಯಿ/ಗಂಡ/ಹೆಂಡತಿ ಇವರ ಒಟ್ಟು ಆದಾಯವನ್ನು ಪರಿಗಣಿಸಲಾಗುತ್ತಿದ್ದು, ಇದರಿಂದ ಔದ್ಯೋಗಿಕ ಮೀಸಲಾತಿಗಾಗಿ ಆದಾಯವನ್ನು ಪರಿಗಣಿಸುವಾಗ ಗೊಂದಲ ಉಂಟಾಗಿ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ಪಡೆಯಲು ತೊಂದರೆಯಾಗುತ್ತಿದ್ದು, ಈ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮತ್ತು ನ್ಯಾಯಾಲಯದ ಆದೇಶದ ಅನುಸಾರ ಉದ್ಯೋಗ ಮೀಸಲಾತಿಗಾಗಿ ಆದಾಯವನ್ನು ಪರಿಗಣಿಸುವಾಗ ಕೇವಲ ಪೋಷಕರ ಆದಾಯವನ್ನು ಮಾತ್ರ ಪರಿಗಣಿಸುವ ಮಾದರಿ ಅಳವಡಿಸಿಕೊಂಡು ಜಾರಿಗೆ ತರಲು ಸೂಕ್ತ ಕ್ರಮಕೈಗೊಳ್ಳಲು ತೀರ್ಮಾನ ಕೈಗೊಳ್ಳಲಾಗಿರುವುದನ್ನು ಅವರು ಇದೇ ಸಂದರ್ಭದಲ್ಲಿ ವಿವರಿಸಿದರು.
ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯಲ್ಲಿ ಇದುವರೆಗೂ ಸೇರ್ಪಡೆಗೊಳ್ಳದ ಹಾಗೂ ಕೆನೆಪದರ ವ್ಯಾಪ್ತಿಗೆ ಒಳಪಡುವ ಸಮುದಾಯಗಳು ಜಾತಿ ಪ್ರಮಾಣ ಪತ್ರ ಪಡೆಯಲು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಇತ್ತೀಚೆಗೆ ನಡೆದ ಸಮಾಜಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಿ ಈ ಸಮುದಾಯಗಳಿಗೆ ಶೈಕ್ಷಣಿಕ ಮತ್ತು ಉದ್ಯೋಗ ಮೀಸಲಾತಿ ಹೊರತುಪಡಿಸಿ ಉಳಿದ ಉದ್ದೇಶಗಳಿಗೆ ಮಾತ್ರ ಜಾತಿ ಪ್ರಮಾಣ ಪತ್ರ ನೀಡುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವ ಕುರಿತು ತೀರ್ಮಾನಿಸಲಾಗಿದೆ ಎಂದರು.
ಅಲೆಮಾರಿ/ಅರೆ ಅಲೆಮಾರಿ ನಮೂದಿಸಿ ಜಾತಿಪ್ರಮಾಣ ಪತ್ರ: ಈಗಾಗಲೇ ಹಿಂದುಳಿದ ವರ್ಗಗಳ ಮೀಸಲಾತಿ ಜಾತಿ ಪಟ್ಟಿಯಲ್ಲಿರುವ 46 ಅಲೆಮಾರಿ/ಅರೆಅಲೆಮಾರಿ ಜಾತಿಗಳಿಗೆ ಜಾತಿ ಪ್ರಮಾಣ ಪತ್ರ ನೀಡುವ ಸಂದರ್ಭದಲ್ಲಿ, ಆಯಾ ಜಾತಿಯ ಮುಂದೆ ಅಲೆಮಾರಿ/ಅರೆಅಲೆಮಾರಿ ಎಂದು ನಮೂದಿಸಿ ಜಾತಿ ಪ್ರಮಾಣ ಪತ್ರವನ್ನು ನೀಡುವ ಕುರಿತು ಶಿಫಾರಸ್ಸು ಮಾಡಲು ಆಯೋಗವು ತೀರ್ಮಾನಿಸಿದೆ ಎಂದು ಜಯಪ್ರಕಾಶ ಹೆಗ್ಡೆ ವಿವರಿಸಿದರು.
ಪರಿಷ್ಕೃತ ಹಿಂದುಳಿದ ಪ್ರವರ್ಗಗಳ ಮೀಸಲಾತಿ ಪಟ್ಟಿ ಮುದ್ರಿಸಿ ಎಲ್ಲ ಗ್ರಾಪಂಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ವಿತರಣೆ: ಪರಿಷ್ಕೃತ ಹಿಂದುಳಿದ ವರ್ಗಗಳ ಪ್ರವರ್ಗಗಳ ಮೀಸಲಾತಿ ಪಟ್ಟಿಯನ್ನು ಮುದ್ರಿಸಿ ಆಯೋಗದಿಂದಲೇ ರಾಜ್ಯದ ಎಲ್ಲ ಗ್ರಾಪಂಗಳಿಗೆ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ವಿತರಿಸಲು ತೀರ್ಮಾನಿಸಲಾಗಿದೆ.
ಈಗಾಗಲೇ ಕೆಲವು ಜಾತಿಗಳ ಹೆಸರು ಪರಿಶಿಷ್ಟ ಜಾತಿ/ಪಂಗಡ ಹಾಗೂ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯಲ್ಲಿಯೂ ಸಹ ಸೇರ್ಪಡೆಗೊಂಡಿದ್ದು, ಇದರಿಂದ ಜಾತಿ ಪ್ರಮಾಣ ಪತ್ರ ನೀಡುವಲ್ಲಿ ಅಧಿಕಾರಿಗಳು ಗೊಂದಲವುಂಟಾಗುತ್ತಿರುವುದು ಆಯೋಗದ ಗಮನಕ್ಕೆ ಬಂದಿರುತ್ತದೆ. ಇಂತಹ ಜಾತಿಗಳನ್ನು ಹಿಂದುಳಿದ ವರ್ಗಗಳ ಪಟ್ಟಿಯಿಂದ ತೆಗೆದುಹಾಕಿ ಹಾಗೂ ಕೆಲವು ಜಾತಿಗಳ ಹೆಸರುಗಳಲ್ಲಿನ ಅಗತ್ಯ ಕಾಗುಣಿತ ತಿದ್ದುಪಡಿ ಮಾಡಿ ಪರಿಷ್ಕೃತ ಮೀಸಲಾತಿ ಪಟ್ಟಿಯನ್ನು ಮುದ್ರಿಸಿ ವಿತರಿಸಲು ಉದ್ದೇಶಿಸಲಾಗಿದೆ ಎಂದರು.
ರಾಜ್ಯ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯಲ್ಲಿ ಈಗಾಗಲೇ ಸೇರ್ಪಡೆಗೊಂಡಿರುವ ಜಾತಿಗಳು, ಕರ್ನಾಟಕ ರಾಜ್ಯ ಕೇಂದ್ರ ಮೀಸಲಾತಿ ಪಟ್ಟಿಯಲ್ಲಿ ಸೇರ್ಪಡೆಗೊಳ್ಳದಿರುವ ಜಾತಿಗಳನ್ನು ಸಹ ಸೇರ್ಪಡೆಗೊಳಿಸುವ ಕ್ರಮ ಕೈಗೊಳ್ಳಲಾಗಿದೆ. ಜತೆಗೆ ಕೇಂದ್ರ ಮಿಸಲಾತಿ ಪಟ್ಟಿಯಲ್ಲಿರುವ ಜಾತಿಗಳ ಕಾಗುಣಿತ, ಒತ್ತಕ್ಷರಗಳನ್ನು ತಿದ್ದುಪಡಿ ಮಾಡುವಲ್ಲಿಯೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಹಿಂದುಳಿದ ವರ್ಗಗಳ ವಿವಿಧ ಜಾತಿ ಮತ್ತು ಉಪಜಾತಿಗಳಿಗೆ ಸೇರಿದ ಸರ್ಕಾರಿ ನೌಕರರು ಹಾಗೂ ವಿದ್ಯಾರ್ಥಿಗಳ ಮಾಹಿತಿ ಒದಗಿಸುವಂತೆ 8 ತಿಂಗಳ ಹಿಂದೆಯೇ ಕೇಳಿಕೊಳ್ಳಲಾಗಿದ್ದು, ಇದುವರೆಗೆ ಶೇ.50ರಷ್ಟು ಮಾಹಿತಿ ಮಾತ್ರ ಬಂದಿದೆ. ಇನ್ನುಳಿದ ಮಾಹಿತಿ ಬಂದಲ್ಲಿ ಯಾವ ಜಾತಿ ಯಾವ ಪ್ರಮಾಣದಲ್ಲಿ ಸರ್ಕಾರಿ ಸೌಲಭ್ಯ ಪಡೆದುಕೊಂಡಿದ್ದಾರೆ ಮತ್ತು ಶಿಕ್ಷಣ ಪಡೆದಿದ್ದಾರೆ ಎಂಬುದು ಗೊತ್ತಾಗಲಿದೆ ಎಂದರು.
ಈ ಸಂದರ್ಭದಲ್ಲಿ ಆಯೋಗದ ಸದಸ್ಯರಾದ ಹೆಚ್.ಎಸ್. ಕಲ್ಯಾಣಕುಮಾರ್, ಬಿ.ಎಸ್. ರಾಜಶೇಖರ್, ಕೆ.ಟಿ. ಸುವರ್ಣ, ಅರುಣಕುಮಾರ್, ಶಾರದಾ ನಾಯ್ಕ ಇದ್ದರು.