ನವದೆಹಲಿ: ದೇಶದ 16 ರಾಜ್ಯಗಳಿಗೆ ಬಂಡವಾಳ ಹೂಡಿಕೆಗೆ ವಿಶೇಷ ನೆರವನ್ನು (Capital Investment Fund) ನೀಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ್ದು, ಇದರಲ್ಲಿ ಕರ್ನಾಟಕಕ್ಕೆ 3,647 ಕೋಟಿ ರೂ. ದೊರಕಲಿದೆ. 2023-24 ಹಣಕಾಸು ವರ್ಷದ ವಿಶೇಷ ಯೋಜನೆ ಅಡಿಯಲ್ಲಿ ಬಂಡವಾಳ ಹೂಡಿಕೆಗಾಗಿ 16 ರಾಜ್ಯಗಳಿಗೆ 56,415 ಕೋಟಿ ರೂ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಸಮ್ಮತಿಸಿದೆ.
2022-23ರ ಬಜೆಟ್‌ನಲ್ಲಿ ಈ ಕುರಿತು ಘೋಷಣೆ ಮಾಡಲಾಗಿತ್ತು. ಆರೋಗ್ಯ, ಶಿಕ್ಷಣ, ನೀರಾವರಿ, ನೀರು ಸರಬರಾಜು, ವಿದ್ಯುತ್, ರಸ್ತೆಗಳು, ಸೇತುವೆಗಳು ಮತ್ತು ರೈಲ್ವೆ ಸೇರಿದಂತೆ ವಿವಿಧ ವಲಯಗಳಲ್ಲಿ ಬಂಡವಾಳ ಹೂಡಿಕೆ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಈ ವಲಯಗಳಲ್ಲಿನ ಯೋಜನೆಗಳ ವೇಗವನ್ನು ಹೆಚ್ಚಿಸಲು ಹಾಗೂ ಜಲ ಜೀವನ್ ಮಿಷನ್ ಮತ್ತು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ರಾಜ್ಯದ ಪಾಲನ್ನು ಪೂರೈಸಲು ಈ ಯೋಜನೆಯಡಿಯಲ್ಲಿ ರಾಜ್ಯಗಳಿಗೆ ಹಣವನ್ನು ಒದಗಿಸಲಾಗಿದೆ.
2023-24 ರ ಕೇಂದ್ರ ಬಜೆಟ್‌ನಲ್ಲಿ ಬಂಡವಾಳ ಹೂಡಿಕೆಗಾಗಿ ರಾಜ್ಯಗಳಿಗೆ ವಿಶೇಷ ನೆರವು 2023-24 ಯೋಜನೆಯನ್ನು ಘೋಷಿಸಲಾಗಿತ್ತು. 50 ವರ್ಷದವರೆಗಿನ ಬಡ್ಡಿರಹಿತ ಸಾಲದ ಯೋಜನೆ ಇದಾಗಿದ್ದು, ಒಟ್ಟು 1.3 ಲಕ್ಷ ಕೋಟಿ ರೂ. ಹಣವನ್ನು 15ನೇ ಹಣಕಾಸು ಆಯೋಗದ ಶಿಫಾರಸಿನ ಆಧಾರದಲ್ಲಿ ಆಯಾ ರಾಜ್ಯದ ತೆರಿಗೆ ಪಾಲಿಗೆ ಅನುಗುಣವಾಗಿ ಹಂಚಿಕೆ ಮಾಡಲಾಗಿದೆ. ಉಳಿದ 30 ಸಾವಿರ ಕೋಟಿ ರೂ.ಗಿಂತಲೂ ಹೆಚ್ಚಿನ ಹಣವನ್ನು ವಿವಿಧ ಸುಧಾರಣೆಗೆ ಅನುಗುಣವಾಗಿ ಹಂಚಿಕೆ ಮಾಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ದೇಶದ 16 ರಾಜ್ಯಗಳಿಗೆ ಕೇಂದ್ರದಿಂದ ಬಿಡುಗಡೆ ಆದ ಮೊತ್ತ:
- ಕರ್ನಾಟಕ : 3,647 ಕೋಟಿ ರೂ.
- ಅರುಣಾಚಲ ಪ್ರದೇಶ : 1,255 ಕೋಟಿ ರೂ.
- ಬಿಹಾರ : 9,640 ಕೋಟಿ ರೂ.
- ಛತ್ತೀಸ್‌ಗಢ: 3,195 ಕೋಟಿ ರೂ.
- ಗೋವಾ : 386 ಕೋಟಿ ರೂ.
- ಗುಜರಾತ್: 3,478 ಕೋಟಿ ರೂ.
- ಹರಿಯಾಣ: 1,093 ಕೋಟಿ ರೂ.
- ಹಿಮಾಚಲ ಪ್ರದೇಶ: 826 ಕೋಟಿ ರೂ.
- ಮಧ್ಯಪ್ರದೇಶ: 7,850 ಕೋಟಿ ರೂ.
- ಮಿಜೋರಾಂ: 399 ಕೋಟಿ ರೂ.
- ಒಡಿಶಾ: 4,528 ಕೋಟಿ ರೂ.
- ರಾಜಸ್ಥಾನ: 6,026 ಕೋಟಿ ರೂ.
- ಸಿಕ್ಕಿಂ: 388 ಕೋಟಿ ರೂ.
- ತಮಿಳುನಾಡು: 4,079 ಕೋಟಿ ರೂ.
- ತೆಲಂಗಾಣ: 2,102 ಕೋಟಿ ರೂ.
- ಪಶ್ಚಿಮ ಬಂಗಾಳ: 7,523 ಕೋಟಿ
ಇದನ್ನೂ ಓದಿ: Congress Protest: ಅನ್ನಭಾಗ್ಯ ಯೋಜನೆಗೆ ಅಕ್ಕಿ ಪೂರೈಸಲು ಆಗ್ರಹ; ಕೇಂದ್ರದ ವಿರುದ್ಧ ಹಲವೆಡೆ ಕಾಂಗ್ರೆಸ್ ಪ್ರತಿಭಟನೆ