ಆನೇಕಲ್: ಜಮ್ಮು ಕಾಶ್ಮೀರದ ರಜೌರಿಯಲ್ಲಿ ಪಾಕ್ ಮೂಲದ ಭಯೋತ್ಪಾದಕರ ಜೊತೆಗೆ ಗುಂಡಿನ ಕಾಳಗದಲ್ಲಿ (Rajouri Encounter) ಮೃತಪಟ್ಟ ಕರ್ನಾಟಕದ ವೀರ ಯೋಧ ಪ್ರಾಂಜಲ್ (Captain Pranjal) ಅವರ ಪಾರ್ಥಿವ ಶರೀರ ನಿನ್ನೆ ನಡುರಾತ್ರಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಅಲ್ಲಿಂದ ಮನೆಗೆ ತರಲಾಗಿದೆ.
ಹುತಾತ್ಮ ಯೋಧ ಕ್ಯಾಪ್ಟನ್ ಪ್ರಾಂಜಲ್‌ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah), ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸೇರಿದಂತೆ ಹಲವಾರು ಪ್ರಮುಖರು ಶ್ರದ್ಧಾಂಜಲಿ ಸಲ್ಲಿಸಿದರು. ನಂತರ ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಜಿಗಣಿ ಸಮೀಪದ ನಿಸರ್ಗ ಬಡಾವಣೆಯಲ್ಲಿರುವ ಪ್ರಾಂಜಲ್ ಮನೆಗೆ ಪಾರ್ಥಿವ ಶರೀರವನ್ನು ತರಲಾಗಿದೆ.
ಜಿಗಣಿಯ ನಂದನವನ ಬಡಾವಣೆಯ ಸ್ವಗೃಹದ ಮುಂಭಾಗ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 7 ಗಂಟೆಯವರೆಗೆ ಪ್ರಾಂಜಲ್ ನಿವಾಸದಲ್ಲಿ ಮೃತದೇಹದ ವಿಧಿವಿಧಾನಗಳು ನಡೆದಿದ್ದು, 7 ಗಂಟೆಯಿಂದ 10 ಗಂಟೆವರೆಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಗಿದೆ. ವಿಶಾಲ ಪೆಂಡಾಲ್ ಹಾಕಿ ಬ್ಯಾರಿಕೇಡ್‌ಗಳನ್ನು ಇಟ್ಟು ಸ್ಥಳದಲ್ಲಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ವಿಐಪಿಗಳಿಗೆ ಪ್ರತ್ಯೇಕ ದಾರಿ, ಸಾರ್ವಜನಿಕರಿಗೆ ಪ್ರತ್ಯಕ ದರ್ಶನಕ್ಕೆ ಪೊಲೀಸರು ವ್ಯವಸ್ಥೆ ಕಲ್ಪಿಸಿದ್ದಾರೆ.
ವೀರ ಯೋಧ ಪ್ರಾಂಜಲ್ ಅಂತಿಮ ದರ್ಶನಕ್ಕೆ ಜನರು ನೂರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಮುಂಜಾನೆಯೇ ಜನ ಸಾಲುಗಟ್ಟಿದ್ದರು. ಪ್ರಾಂಜಲ್ ತಂದೆ ಉದ್ಯೋಗಿಯಾಗಿದ್ದ ಎಂಆರ್‌ಪಿಎಲ್ ಕಾರ್ಖಾನೆ ಉದ್ಯೋಗಿಗಳು ಕೂಡ ಸರತಿ ಸಾಲಿನಲ್ಲಿ ನಿಂತಿದ್ದಾರೆ.
ಕ್ಯಾಂಡಲ್ ಬೆಳಗಿ ಶ್ರದ್ಧಾಂಜಲಿ
ಜಿಗಣಿಯ ನಿಸರ್ಗ ಬಡಾವಣೆ ನಿವಾಸಿಗಳು ನಿನ್ನೆ ರಾತ್ರಿ ಕ್ಯಾಂಡಲ್ ಬೆಳಗುವ ಮೂಲಕ ಹುತಾತ್ಮ ಯೋಧನಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಐನೂರಕ್ಕೂ ಅಧಿಕ ಮಂದಿಯಿಂದ ಕ್ಯಾಂಡಲ್ ಬೆಳಗಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ʼಅಮರ್ ರಹೇ ಅಮರ್ ರಹೇ ಕ್ಯಾಪ್ಟನ್ ಪ್ರಾಂಜಲ್ʼ ಎಂದು ಜಯಘೋಷ ಮೊಳಗಿಸಿ, ದೇಶಭಕ್ತಿ ಹಾಡುಗಳನ್ನು ಹಾಡುವ ಮೂಲಕ ವೀರ ಯೋಧನಿಗೆ ಜನ ನಮನ ಸಲ್ಲಿಸಿದರು.
ಇದನ್ನೂ ಓದಿ: Rajouri Encounter : ಹುತಾತ್ಮ ಕ್ಯಾಪ್ಟನ್ ಪ್ರಾಂಜಲ್ ಪಾರ್ಥಿವ ಶರೀರ ಸ್ವಗೃಹಕ್ಕೆ ಆಗಮನ