ಕಾರವಾರ: ಪ್ರವಾಸಕ್ಕೆಂದು ಗೋವಾಕ್ಕೆ ತೆರಳುತ್ತಿದ್ದ ಕಾರೊಂದು ರಸ್ತೆ ಪಕ್ಕ ನಡೆದು ಹೋಗುತ್ತಿದ್ದವ ಮೇಲೆ ಹರಿದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟು, ಒಬ್ಬ ಗಂಭೀರ ಗಾಯಗೊಂಡ ಘಟನೆ (Car Accident) ಜೋಯಿಡಾ ತಾಲೂಕಿನ ರಾಮನಗರದಲ್ಲಿ ನಡೆದಿದೆ.
ಹುಬ್ಬಳ್ಳಿ-ಗೋವಾ ಮಾರ್ಗದ ಸೀತಾವಾಡ ಎಂಬಲ್ಲಿ ಈ ದುರಂತ ಸಂಭವಿಸಿದ್ದು, ಮೃತರನ್ನು ಖಾನಾಪುರದ ಘಾರ್ಲಿ ಮೂಲದ ಪಾರ್ವತಿ ಗಾವಡಾ, ದುರ್ಗೆ ಕೋಲ್ಸೇಕರ, ತುಳಸಿ ಗಾವಡಾ ಎಂದು ಗುರುತಿಸಲಾಗಿದೆ. ಶುಕ್ರವಾರ ಸಂಜೆ ತಮಿಳುನಾಡಿನಿಂದ ಗೋವಾಕ್ಕೆ ಪ್ರವಾಸಕ್ಕೆಂದು ತೆರಳುತ್ತಿದ್ದ ತಮಿಳುನಾಡು ನೋಂದಣಿಯ ಕಾರು ಚಾಲಕನ ನಿರ್ಲಕ್ಷ್ಯದ ಚಾಲನೆಯಿಂದಾಗಿ ರಸ್ತೆ ಪಕ್ಕ ನಡೆದು ಹೋಗುತ್ತಿದ್ದವರ ಮೇಲೆ ಹರಿದಿದೆ.
ಪರಿಣಾಮ ಸ್ಥಳದಲ್ಲೇ ಮೂವರು ಮಹಿಳೆಯರು ಮೃತಪಟ್ಟಿದ್ದು, ರಾಮನಗರ ಮೂಲದ ವಿಪಿನ್ ತಾಳ್ವೆ ಎಂಬುವವರು ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುವನ್ನು ರಾಮನಗರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಿ ಚಿಕಿತ್ಸೆ ನೀಡಲಾಗಿದೆ.
ಸ್ಥಳಕ್ಕೆ ರಾಮನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪಘಾತ ಮಾಡಿದ ವಾಹನದಲ್ಲಿದ್ದ ತಮಿಳುನಾಡು ಮೂಲದ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಚಾಲಕನ ನಿರ್ಲಕ್ಷ್ಯದಿಂದಲೇ ಅಪಘಾತ ಸಂಭವಿಸಿದೆ ಎನ್ನಲಾಗಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ರಾಮನಗರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ | Road Accident: ಕಾರು-ಬೈಕ್ ನಡುವೆ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು