ಬೆಂಗಳೂರು: ಕಾರು ಅಪಘಾತ ಪ್ರಕರಣದಲ್ಲಿ ನಟ ನಾಗಭೂಷಣ್ ವಿರುದ್ಧ ತನಿಖೆ ಪೂರ್ಣಗೊಳಿಸಿರುವ ಕುಮಾರ ಸ್ವಾಮಿ ಲೇಔಟ್ ಸಂಚಾರ ಪೊಲೀಸರು, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಅಪಘಾತಕ್ಕೆ ನಟನ (Actor Nagabhushana) ಅತಿ ವೇಗ ಹಾಗೂ ಅಜಾಗರೂಕತೆಯ ಕಾರು ಚಾಲನೆಯೇ ಕಾರಣ ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಸೆಪ್ಟೆಂಬರ್ 30ರಂದು ರಾತ್ರಿ ನಟ ನಾಗಭೂಷಣ ಅವರಿದ್ದ ಕಾರು ಡಿಕ್ಕಿಯಾಗಿ ಮಹಿಳೆ ಮೃತಪಟ್ಟು, ಆಕೆಯ ಪತಿಗೆ ಗಂಭೀರ ಗಾಯಗಳಾಗಿದ್ದವು. ಪ್ರಕರಣಕ್ಕೆ ನಟನ ವೇಗದ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣ ಎಂಬ ಅಂಶ ತನಿಖೆಯಲ್ಲಿ ತಿಳಿದುಬಂದಿದೆ.
ಮೃತ ಮಹಿಳೆ ಪತಿ ಕೃಷ್ಣಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಘಟನೆ ಬಗ್ಗೆ 60ಕ್ಕೂ ಹೆಚ್ಚು ಸಾಕ್ಷ್ಯಗಳ ಸಂಗ್ರಹ ಮಾಡಿದ ಪೊಲೀಸರು, ಸುಮಾರು 80ಕ್ಕೂ ಹೆಚ್ಚು ಪುಟಗಳ ಚಾರ್ಜ್ ಶೀಟ್ ಫೈಲ್ ಮಾಡಿದ್ದಾರೆ.
ಅಪಘಾತದ ಬಗ್ಗೆ ಗಾಯಾಲು ಕೃಷ್ಣ ಮತ್ತು ಅಪಘಾತ ಮಾಡಿದ್ದ ನಟ ನಾಗಭೂಷಣ್ ಅವರ ಹೇಳಿಕೆಯನ್ನು ಪೊಲೀಸರು ದಾಖಲು ಮಾಡಿಕೊಂಡಿದ್ದರು. ವಸಂತಪುರ ರಸ್ತೆಯಲ್ಲಿ ಹೋಗುತ್ತಿದ್ದಾಗ ಫುಟ್ ಪಾತ್ ಮೇಲೆ ಹೋಗುತ್ತಿದ್ದ ದಂಪತಿ ದಿಢೀರನೆ ಫುಟ್‌ಪಾತ್ ನಿಂದ ರಸ್ತೆಗೆ ಇಳಿದರು. ಈ ವೇಳೆ ಗಲಿಬಿಲಿಯಿಂದ ಕಾರು ನಿಯಂತ್ರಣ ತಪ್ಪಿ ದಂಪತಿಗೆ ಡಿಕ್ಕಿಯಾಗಿದೆ ಎಂದು ನಟ ಹೇಳಿದ್ದಾರೆ. ಆದರೆ, ಗಾಯಾಳು ಕೃಷ್ಣಾ ಅವರು, ವೇಗವಾಗಿ ಬಂದ ಕಾರ್ ಫುಟ್ ಪಾತ್ ಮೇಲೆ ಹೋಗುತಿದ್ದ ನಾನು ಮತ್ತ ನನ್ನ ಪತ್ನಿ ಪ್ರೇಮಗೆ ಡಿಕ್ಕಿ ಯಾಗಿತ್ತು ಎಂದು ಹೇಳಿಕೆ ನೀಡಿದ್ದಾರೆ.
ಇನ್ನು ಘಟನೆಗೆ ಸಂಬಂಧಿಸಿದಂತೆ ಆರ್‌ಟಿಒ ಅಧಿಕಾರಿಗಳು ಕಾರನ್ನು ಪರಿಶೀಲನೆ ನಡೆಸಿದ್ದಾರೆ. ಕಾರಿನಲ್ಲಿ ಯಾವ ಲೋಪವಾಗಿಲ್ಲಾ.. ಬದಲಾಗಿ ಅಜಾಗರೂಕತೆ ಮತ್ತು ಅತಿವೇಗದ ಚಾಲನೆಯಿಂದ ಅಪಘಾತವಾಗಿದೆ ಎಂದು ವರದಿ ನೀಡಿದ್ದು, ಅದೂ ಕೂಡ ಚಾರ್ಚ್ ಶೀಟ್‌ನಲ್ಲಿ ಉಲ್ಲೇಖವಾಗಿದೆ.
ಲಂಚ ತೆಗೆದುಕೊಳ್ಳುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ
ಬೆಂಗಳೂರು: ಲಂಚ ತೆಗೆದುಕೊಳ್ಳುವ ವೇಳೆ ರೆಡ್ ಹ್ಯಾಂಡ್ ಆಗಿ ಅಸಿಸ್ಟೆಂಟ್ ಅಕೌಂಟ್ ಆಫೀಸರ್, ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ನವೀನ್ ಕುಮಾರ್ ಬಂಧಿತ ಅಧಿಕಾರಿ. ಪಿ. ಆರ್. ದೀಪಕ್ ಎಂಬುವವರರಿಗೆ ಬೆಸ್ಕಾಂ ಮೀಟರ್ ರಿಜಿಸ್ಟರ್‌ನಲ್ಲಿ ಹೆಸರು ಚೇಂಜ್ ಮಾಡಲು 50 ಸಾವಿರಕ್ಕೆ ಬೇಡಿಕೆ ಇಟ್ಟು 40 ಸಾವಿರ ರೂ. ಫೈನಲ್ ಮಾಡಿದ್ದರು. ನಂತರ ಲಂಚ ತೆಗೆದುಕೊಳ್ಳುವ ವೇಳೆ ಸಿಕ್ಕಿಬಿದ್ದಿದ್ದಾರೆ.
ಹಾವು ಕಡಿತದಿಂದ ಮಹಿಳೆ ಸಾವು
ತುಮಕೂರು: ಹಾವು ಕಡಿತದಿಂದ ಮಹಿಳೆ ಮೃತಪಟ್ಟಿರುವ ಘಟನೆ ಜಿಲ್ಲೆ ಕೊರಟಗೆರೆ ತಾಲೂಕಿನ ಗೌರಗಾನಹಳ್ಳಿಯಲ್ಲಿ ನಡೆದಿದೆ. ಸೋಮವಾರ ಸಂಜೆ ತೋಟದಲ್ಲಿ ಬೆಳೆದಿದ್ದ ಹೂಗಳನ್ನ ಕೊಯ್ಯಲು ಹೋಗಿದ್ದಾಗ ಮಹಿಳೆಗೆ ಹಾವು ಕಚ್ಚಿದೆ (Snake Bite).
ಶಾರದಮ್ಮ (42) ಮೃತ ದುರ್ದೈವಿ. ಹಾವು ಕಚ್ಚಿದ ಕೂಡಲೇ ಅವರನ್ನು ಕೊರಟಗೆರೆ ತಾಲೂಕು ಆಸ್ಪತ್ರೆಗೆ ಕರೆದೊಯ್ಯತ್ತಿದ್ದಾಗ ಮಾರ್ಗಮಧ್ಯೆ ಮಹಿಳೆ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಕೊರಟಗೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ