ಬೆಂಗಳೂರು: ಕಾಲೇಜಿಗೆ ರಜೆ ಹಾಕಿ ಡ್ರೈವ್ ಹೊರಟಿದ್ದ ವಿದ್ಯಾರ್ಥಿಗಳನ್ನು ಹೊತ್ತ ಕಾರೊಂದು ಆನೆಕಲ್ ಬಳಿ ಕೆರೆಗೆ ಉರುಳಿದೆ. ಕಾರಿನಲ್ಲಿದ್ದ ಏಳು ವಿದ್ಯಾರ್ಥಿಗಳ ಪೈಕಿ ಐವರನ್ನು ರಕ್ಷಿಸಲಾಗಿದೆ. ಇಬ್ಬರು ನಾಪತ್ತೆಯಾಗಿದ್ದು ಅವರನ್ನು ರಕ್ಷಿಸುವ ಕಾರ್ಯಾಚರಣೆ ನಡೆಯುತ್ತಿದೆ.
ಆನೇಕಲ್ ನ ಚಿನ್ನಯ್ಯನಪಾಳ್ಯದ ಭುಜಂಗ ದಾಸಯ್ಯನ ಕೆರೆಗೆ ಈ ಕಾರು ಬಿದ್ದಿದೆ. ಬೆಂಗಳೂರಿನ ಕ್ರೈಸ್ಟ್ ಕಾಲೇಜಿನ ವಿದ್ಯಾರ್ಥಿಗಳು ಬೆಳಗ್ಗೆ ಕಾಲೇಜಿಗೆ ರಜೆ ಹಾಕಿ ಈ ಭಾಗಕ್ಕೆ ದೌಡಾಯಿಸಿದ್ದರು. ಅತಿ ವೇಗವಾಗಿ ಸಾಗುತ್ತಿದ್ದ ಕಾರು ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದಿದೆ. ದೊಡ್ಡ ಗಾತ್ರದ ಎಸ್‌ಸಿಯುವಿ ಕಾರು ಇದಾಗಿದೆ. ಅತಿವೇಗವಾಗಿ ಸಾಗಿದ ಕಾರು ಕೆರೆ ಕಟ್ಟೆ ಮೇಲೆಯೇ ಹಾದು ಹೋಗಿದೆ. ಬಳಿಕ ನಿಯಂತ್ರಣ ತಪ್ಪಿ ಉರುಳಿದೆ.
ಕಾರು ಸಮೇತ ಎಲ್ಲಾ ಏಳು ಮಂದಿ ನೀರಿಗೆ ಬಿದ್ದಿದ್ದಾರೆ. ಸ್ಥಳೀಯರು ಕೂಡಲೇ ಧಾವಿಸಿ ಐವರನ್ನು ಮೇಲೆತ್ತಿದ್ದಾರೆ. ಇನ್ನೂ ಇಬ್ಬರಿಗಾಗಿ ಶೋಧ ನಡೆಯುತ್ತಿದೆ. ಇವರು ಪಾನಮತ್ತರಾಗಿ ಕಾರು ಚಲಾಯಿಸಿಕೊಂಡು ಬಂದು ಕೆರೆಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಆದರೆ, ಸ್ಪಷ್ಟ ಮಾಹಿತಿ ಇಲ್ಲ.
ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರು ಜೆಸಿಬಿ ಸಹಾಯದಿಂದ ಕಾರು ಮೇಲೆತ್ತಲು ಪ್ರಯತ್ನಿಸುತ್ತಿದ್ದಾರೆ.
ಇದನ್ನೂ ಓದಿ| ಮಂಡ್ಯದಲ್ಲಿ ಕಾರು ಮತ್ತು ಲಾರಿ ನಡುವೆ ಭೀಕರ ಅಪಘಾತ, ಮೂವರು ಸಾವು