ತುಮಕೂರು: ಜೀವನದಲ್ಲಿ ಎಲ್ಲವೂ ಒಳಿತಾಗಲಿ, ದೇವರ ಕೃಪಾಶೀರ್ವಾದ ನಮ್ಮ ಬಳಿ ಇರಲಿ ಎಂದು ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ, ಪ್ರಾರ್ಥನೆ ಸಲ್ಲಿಸುತ್ತೇವೆ. ಆದರೆ, ತುಮಕೂರಿನಲ್ಲಿ (Tumkur) ಧರ್ಮಸ್ಥಳ ಮಂಜುನಾಥನ ದರ್ಶನಕ್ಕೆ ಹೊರಟಿದ್ದವರ ಕಾರು ಕೆರೆಗೆ ಬಿದ್ದಿದ್ದು, ಒಂದೇ ಕುಟುಂಬದ ಮೂವರು ನೀರುಪಾಲಾಗಿದ್ದಾರೆ. ಕಾರಿನಲ್ಲಿದ್ದ ನಾಲ್ವರಲ್ಲಿ ಮೂವರು ಮೃತಪಟ್ಟರೆ, ಒಬ್ಬರು ಪಾರಾಗಿದ್ದಾರೆ.
ತುಮಕೂರು ಜಿಲ್ಲೆ ಶಿರಾ ತಾಲೂಕಿನ ಬುಕ್ಕಾಪಟ್ಟಣ ಸಮೀಪದ ರಾಮಲಿಂಗಾಪುರ ಬಳಿಯ ಕೆರೆಯಲ್ಲಿ ಕಾರು ಬಿದ್ದಿದೆ. ಬೆಳಗಿನ ಜಾವ ಘಟನೆ ನಡೆದಿದ್ದು, ಕಾರು ಚಾಲಕನ ನಿಯಂತ್ರಣ ತಪ್ಪಿ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ. ಪ್ರವೀಣ್ ಎಂಬ ವ್ಯಕ್ತಿಯು ಪಾರಾಗಿದ್ದಾರೆ. ಪ್ರವೀಣ್ ಪತ್ನಿ ಯಮುನಾ, ಮಾವ ದೊಡ್ಡಣ್ಣ, ಅತ್ತೆ ಸಣ್ಣಮ್ಮ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಚಲಿಸುತ್ತಿದ್ದ ಎಲ್ಲರೂ ಶಿರಾ ತಾಲೂಕಿನ ವೀರಾಪುರ ಗ್ರಾಮದವರಾಗಿದ್ದಾರೆ.
ಮಾರುತಿ ಆಲ್ಟೊ ಕಾರಿನಲ್ಲಿ ವೀರಾಪುರ ಗ್ರಾಮದಿಂದ ನಾಲ್ವರೂ ಧರ್ಮಸ್ಥಕ್ಕೆ ತೆರಳುತ್ತಿದ್ದರು. ಮಂಜುನಾಥನ ದರ್ಶನಕ್ಕಾಗಿ ಧರ್ಮಸ್ಥಳಕ್ಕೆ ತೆರಳುತ್ತಿದ್ದರು. ಶಿರಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿಯು ಮೂವರ ಶವಗಳನ್ನು ಹೊರೆತೆಗೆದಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಕಾರನ್ನು ಹೊರತೆಗೆಯಲು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: Self-Harming : 3 ಮಕ್ಕಳು ಸೇರಿ ಒಂದೇ ಕುಟುಂಬದ 7 ಮಂದಿ ಸಾಮೂಹಿಕ ಆತ್ಮಹತ್ಯೆ
ಕೆಲ ದಿನಗಳ ಹಿಂದಷ್ಟೇ ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ಚಂಗೌಡನಹಳ್ಳಿ ಬಳಿಯ ನಾಲೆಗೆ ಬಿದ್ದು ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದರು. ಮೊದಲು ಯುವತಿಯೊಬ್ಬಳು ಕಾಲು ಜಾರಿ ನಾಲೆಗೆ ಬಿದ್ದಿದ್ದಳು. ಆಕೆಯನ್ನು ರಕ್ಷಿಸಲು ತಂದೆ-ತಾಯಿಯೂ ನಾಲೆಗೆ ಜಿಗಿದಿದ್ದರು. ಯುವತಿಯನ್ನೂ ರಕ್ಷಿಸಲು ಆಗದೆ ಆಕೆಯ ತಂದೆ-ತಾಯಿ ಕೂಡ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು.