ಬೆಂಗಳೂರು: ಗೆಳೆಯ/ಗೆಳತಿಯರ ಜತೆ ಪಾರ್ಟಿ ಮಾಡಿ ಅದೇ ಮತ್ತಿನಲ್ಲಿ ಕಾರು ಚಲಾಯಿಸುತ್ತಿದ್ದ ವ್ಯಕ್ತಿಯೊಬ್ಬ ಹೊಟ್ಟೆಪಾಡಿಗಾಗಿ ಹಲವು ಕೆಲಸಗಳನ್ನು ಮಾಡುತ್ತಾ ಮಧ್ಯರಾತ್ರಿ ಫುಡ್ ಡೆಲಿವರಿಗೆ ಹೊರಟಿದ್ದ ಅಮಾಯಕ ಯುವಕನನ್ನು (Food delicery boy) ಬಲಿ ಪಡೆದಿದ್ದಾನೆ. ಮೈಸೂರು ರಸ್ತೆ ನಾಯಂಡಹಳ್ಳಿ ಸಮೀಪದ ವಿಶ್ವಪ್ರಿಯ ಅಪಾರ್ಟ್ಮೆಂಟ್ ಮುಂಭಾಗ ಈ Hit and Run death ಘಟನೆ ನಡೆದಿದೆ.
ಹೆಚ್.ಡಿ.ಕೋಟೆ ಮೂಲದ ಪ್ರಸನ್ನ ಕುಮಾರ್ ಸಾವನ್ನಪ್ಪಿದ ಯುವಕ. ಕುಡಿದ ಮತ್ತಿನಲ್ಲಿ ಅಪಘಾತವೆಸಗಿದ ಕಾರು ಚಾಲಕ ವಿನಾಯಕ್ ಖಾಸಗಿ ಕಂಪನಿಯಲ್ಲಿ ಸೇಲ್ಸ್ ಎಕ್ಸಿಕ್ಯುಟಿವ್. ಅಪಘಾತವೆಸಗಿ ನಿಲ್ಲಿಸದೆ ಕಾರನ್ನು ಮುಂದಕ್ಕೋಡಿಸಿದ ಅವನನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಘಟನೆಯ ಫುಲ್ ಡಿಟೇಲ್ ಇಲ್ಲಿದೆ
ರಾತ್ರಿ ಸರಿಯಾಗಿ 1.45 ರ ಸಮಯ. ನಾಯಂಡಹಳ್ಳಿ ಕಡೆಯಿಂದ ರಾಜರಾಜೇಶ್ವರಿ ನಗರದತ್ತ ಕಿಯಾ ಕಾರೊಂದು ವೇಗವಾಗಿ ಹೋಗ್ತಿತ್ತು. ಅದೇ ವೇಳೆ ವಿಶ್ವಪ್ರಿಯ ಅಪಾರ್ಟ್ಮೆಂಟ್ ಸಮೀಪ ಮುಂದೆ ಹೋಗ್ತಿದ್ದ ಬೈಕ್ ಗೆ ಹಿಂದೆ ಬರ್ತಿದ್ದ ಕಾರು ವೇಗವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಸುಮಾರು 50 ಅಡಿಯಷ್ಟು ಮೇಲಕ್ಕೆ ಹಾರಿ ಕೆಳ ಬಿದ್ದ ಸವಾರನನ್ನು ಹಾಗೂ ಬೈಕ್‌ನ್ನು ತಳ್ಳಿಕೊಂಡು ಮುಂದೆ ನುಗ್ಗಿದ ಕಾರು ವಿಶ್ವಪ್ರಿಯ ಅಪಾರ್ಟ್ಮೆಂಟ್ ಬಳಿ ನಿಂತಿತ್ತು. ಅಷ್ಡರಲ್ಲಾಗಲೇ ಬೈಕ್ ಸವಾರ ಪ್ರಸನ್ನ ಕುಮಾರ್ ತಲೆಗೆ ಬಿದ್ದ ಬಲವಾದ ಪೆಟ್ಟಿನಿಂದ ಕೊನೆಯುಸಿರೆಳೆದಿದ್ದರು.
ಇತ್ತ ಆಕ್ಸಿಡೆಂಟ್ ಆಗಿ ಬೈಕ್ ಸವಾರ ಪ್ರಸನ್ನ ಕುಮಾರ್ ಸಾವನ್ನಪ್ಪಿದರೂ, ಸೌಜನ್ಯಕ್ಕು ಕಾರು ನಿಲ್ಲಿಸದ ಚಾಲಕ ಕಾರನ್ನು ಡ್ರೈವ್ ಮಾಡಿಕೊಂಡು ಎಸ್ಕೇಪ್ ಆಗಿದ್ದ. ಅದನ್ನ ಕಂಡ ಸ್ಥಳೀಯರು ಕಾರನ್ನು ಬೆನ್ನು ಹತ್ತಿ ತಡೆದರು.. ಆ ವೇಳೆ ಕಾರು ನಿಲ್ಲಿಸದೇ ಬಂದಿದಕ್ಕೆ ಆಕ್ರೋಶಗೊಂಡಿದ್ದ ಸಾರ್ವಜನಿಕರು ಕಾರ್ ಡ್ರೈವರ್ ಮೇಲೆ ಹಲ್ಲೆ ಮಾಡಿದ್ದು, ಕಾರಿನ ಗಾಜುಗಳನ್ನು ಪುಡಿ ಪುಡಿ ಮಾಡಿದ್ರು. ಅಷ್ಟರಲ್ಲಾಗಲೇ ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಕಾರು ಚಾಲಕ. ವಿನಾಯಕನನ್ನು ವಶಕ್ಕೆ ಪಡೆದು ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಇನ್ನು ಚಾಲಕನನ್ನು ಪ್ರಾಥಮಿಕ ತಪಾಸಣೆಗೊಳಪಡಿಸಿದಾಗ ಕುಡಿದು ಕಾರು ಚಾಲನೆ ಮಾಡುತ್ತಿದ್ದಾಗಿ ಪತ್ತೆಯಾಗಿದೆ. ಖಾಸಗಿ ಕಂಪನಿಯ ಉದ್ಯೋಗಿಯಾಗಿರು ಕಾರು ಚಾಲಕ ವಿನಾಯಕ್ ಕಂಪನಿ ನೀಡಿದ್ದ ಇನ್ಸೆಂಟೀವ್ ಹಣದಲ್ಲಿ ಸ್ನೇಹಿತರೊಂದಿಗೆ ಪಾರ್ಟಿ ಮಾಡಿದ್ದು, ಪಾರ್ಟಿ ಬಳಿಕ ಸ್ನೇಹಿತರನ್ನು ಡ್ರಾಪ್ ಮಾಡಲು ತೆರಳುತ್ತಿದ್ದ.
ಮೃತ ಪ್ರಸನ್ನ ಕುಮಾರ್ ಸ್ವಾತಿ ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡ್ತಿದ್ದು, ಪಾರ್ಟ್ ಟೈಂ ಪುಡ್ ಡೆಲಿವರಿ ಮಾಡ್ತಿದ್ದ. ರಾತ್ರಿ ಪುಡ್ ಡೆಲಿವರಿ ಮಾಡಲು ಹೋಗಿದ್ದ ವೇಳೆ ಅಪಘಾತಕ್ಕೆ ಬಲಿಯಾಗಿದ್ದಾನೆ ಎಂದು ತನಿಖೆ ವೇಳೆ ಬೆಳಕಿಗೆ ಬಂದಿದ್ದು, ಆರೋಪಿ ವಿನಾಯಕ್ ನನ್ನ ವಶಕ್ಕೆ ಪಡೆದಿರುವ ಬ್ಯಾಟರಾಯನಪುರ ಸಂಚಾರಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಮೂವರು ಯುವತಿಯರೂ ಇದ್ದರು
ವಿನಾಯಕ್ ಚಲಾಯಿಸುತ್ತಿದ್ದ ಕಾರಿನಲ್ಲಿ ಸ್ನೇಹಿತ ಸಾಗರ್ ಹಾಗೂ ಮೂವರು ಯುವತಿಯರು ಇದ್ದರು ಎನ್ನಲಾಗಿದೆ. ಕಂಪನಿಯಲ್ಲಿ ನೀಡಿದ ಇನ್ಸೆಂಟಿವ್ ಹಣದಲ್ಲಿ ಪಾರ್ಟಿ ಮಾಡಿ ಎಲ್ಲರನ್ನೂ ಮನೆಗೆ ಡ್ರಾಪ್ ಮಾಡುವ ಕೆಲಸವನ್ನು ವಿನಾಯಕ್ ಮಾಡುತ್ತಿದ್ದ. ಘಟನೆ ನಡೆಯುತ್ತಿದ್ದಂತೆ ಯುವತಿಯರನ್ನು ಬೇರೆ ಆಟೋದಲ್ಲಿ ಕಳುಹಿಸಿ ಎಸ್ಕೇಪ್ ಮಾಡಿಸಲಾಗಿದೆ.