ತುಮಕೂರು: ಜಿಲ್ಲೆಯ (Tumkur) ಪಾವಗಡ ತಾಲೂಕಿನಲ್ಲಿ ಕಾರೊಂದು (Pavagada Accident) ಪಲ್ಟಿಯಾಗಿದ್ದು, ಇಬ್ಬರು ಶಿಕ್ಷಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನಿಬ್ಬರು ಶಿಕ್ಷಕರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳ ಸ್ಥಿತಿ ಗಂಭೀರವಾಗಿರುವ ಕಾರಣ ಅವರನ್ನು ಬೆಂಗಳೂರಿನ (Bengaluru) ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.
ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಕಣಿವೆನಹಳ್ಳಿ ಗೇಟ್ ಬಳಿ ಕಾರು ಪಲ್ಟಿಯಾಗಿದೆ. ನಾಲ್ವರೂ ತುಮಕೂರಿನಲ್ಲಿ ಮದುವೆ ಆರತಕ್ಷತೆ ಮುಗಿಸಿಕೊಂಡು ಪಾವಗಡಕ್ಕೆ ತೆರಳುತ್ತಿದ್ದರು. ಇದೇ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರು ಮಗುಚಿದೆ. ಕಾರು ಪಲ್ಟಿಯಾದ ತೀವ್ರತೆಗೆ ಒ. ಧನಂಜಯ ಹಾಗೂ ಶ್ರೀಕೃಷ್ಣ ಅವರು ಮೃತಪಟ್ಟಿದ್ದಾರೆ. ಶಿಕ್ಷಕರಾದ ನರಸಿಂಹ ಹಾಗೂ ವೆಂಕಟಾಚಲಪತಿ ಎಂಬುವರು ಗಾಯಗೊಂಡಿದ್ದಾರೆ.
ಒ. ಧನಂಜಯ ಅವರು ಪಾವಗಡ ಸರ್ಕಾರಿ ಜೂನಿಯರ್ ಕಾಲೇಜಿನ ಪ್ರೌಢಶಾಲಾ ವಿಭಾಗದ ಪ್ರಾಂಶುಪಾಲರಾಗಿದ್ದರು. ಇನ್ನು ಶ್ರೀಕೃಷ್ಣ ಅವರು ಪಾವಗಡ ತಾಲೂಕಿನ ಗೌಡೇಟಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾಗಿದ್ದರು. ಪಲ್ಟಿಯಾದ ತೀವ್ರತೆಗೆ ಕಾರು ಕೂಡ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಭೇಟಿ ನೀಡಿರುವ ಪಾವಗಡ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶನಿವಾರವಷ್ಟೇ (ಮೇ 11) ಮಹಾರಾಷ್ಟ್ರದ ಸಾಂಗೋಲಾ- ಜತ್ತ ಮಾರ್ಗದ ಬಳಿ ಕ್ರೂಸರ್ ವಾಹನ ಪಲ್ಟಿಯಾಗಿ ಮೂವರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದರು. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಳ್ಳಿಗೇರಿ ಗ್ರಾಮದ ಮಹಿಳೆಯರು ಮೃತರಾಗಿದ್ದರು. ಬಳ್ಳಿಗೇರಿ ಗ್ರಾಮದ ನಿವಾಸಿಗಳಾದ ಮಹಾದೇವಿ ಚೌಗಲಾ, ಗೀತಾ ದೊಡಮನಿ, ಕಸ್ತೂರಿ ಮೃತರು. ಬಳ್ಳಿಗೇರಿ ಗ್ರಾಮದಿಂದ ಮಹಾರಾಷ್ಟ್ರಕ್ಕೆ ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಕ್ರೂಸರ್ ವಾಹನದ ಎಡಬದಿಯ ಟೈರ್ ಸ್ಫೋಟಗೊಂಡಿದೆ.
ಇದನ್ನೂ ಓದಿ: Road Accident : ಪ್ರತ್ಯೇಕ ಅಪಘಾತದಲ್ಲಿ ಇಬ್ಬರು ಸಾವು; ಕರೆಂಟ್ ವೈರ್ ತಾಗಿ ವ್ಯಕ್ತಿ ಮೃತ್ಯು