ಬೆಂಗಳೂರು/ಶಿವಮೊಗ್ಗ: ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಳೆದೆರಡು ವರ್ಷದಿಂದ ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ ಹಾಗೂ ಸಿಬಿಐನಿಂದ ತನಿಖೆ ಎದುರಿಸುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ಗೆ (D.K. Shivakumar) ಮತ್ತೊಂದು ಸಂಕಷ್ಟ ಎದುರಾಗಿದೆ. ತಮ್ಮ ಪುತ್ರಿ ಐಶ್ವರ್ಯಳಿಗೆ ಸಿಬಿಐ ನೋಟಿಸ್ (CBI Notice) ಜಾರಿ ಮಾಡಿದ್ದು, ಹಲವು ದಾಖಲೆಗಳನ್ನು ಸಲ್ಲಿಸಲು ಸೂಚನೆ ನೀಡಿದೆ ಎಂದು ಡಿಕೆಶಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಮಧ್ಯೆ ಈ ಪ್ರಕರಣ ಅಂತಿಮ ಘಟ್ಟಕ್ಕೆ ತಲುಪಿದ್ದು, ಕೆಲವೇ ದಿನಗಳಲ್ಲಿ ಚಾರ್ಜ್‌ಶೀಟ್ ಸಲ್ಲಿಸಲು ಸಿಬಿಐ ಸಿದ್ಧತೆ ಮಾಡಿಕೊಂಡಿದೆ ಎಂದು ತಿಳಿದು ಬಂದಿದೆ.
ಅಕ್ರಮ ಆಸ್ತಿ ಗಳಿಗೆ ವಿಚಾರವಾಗಿ ಚಾರ್ಜ್‌ಶೀಟ್ ಸಲ್ಲಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, “ಏನ್ ಮಾಡಲಿ ನಾನು? ಈ ಸಂದರ್ಭದಲ್ಲಿ ಇವೆಲ್ಲವೂ ನಡೆಯುತ್ತಿದೆ. ನನ್ನ ಮಗಳು ಐಶ್ವರ್ಯಳಿಗೆ ಸಿಬಿಐನವರು ನೋಟಿಸ್ ಕಳಿಸಿದ್ದಾರೆ. ಕಾಲೇಜು ಶುಲ್ಕ ಕಟ್ಟಿದ್ದೆಲ್ಲವನ್ನೂ ಕೇಳುತ್ತಿದ್ದಾರೆ. ಫೆ. 24ಕ್ಕೆ ನನಗೆ ಇಡಿಯವರು ವಿಚಾರಣೆಗೆ ಕರೆದಿದ್ದಾರೆ. ನಾನು ಪ್ರಜಾಧ್ವನಿ ಮಾಡಲೋ ಅಥವಾ ಇಡಿಯವರ ಬಳಿ ಹೋಗಲೋ? ಎಂದು ಪ್ರಶ್ನೆ ಮಾಡಿದರು.
ಜಾರಿ ನಿರ್ದೇಶನಾಲಯದವರು ಇರುವುದು ನಮಗೆ ಮಾತ್ರ. ಆಡಳಿತ ಪಕ್ಷದವರಿಗೆ ಇಡಿ, ಸಿಬಿಐನವರು ಯಾರೂ ಇಲ್ಲ. ಇರಲಿ ನೋಡೋಣ ಏನಾಗುತ್ತದೆಯೋ ಎಂಬುದು ಗೊತ್ತಾಗುತ್ತದೆ ಎಂದು ಭದ್ರಾವತಿಯಲ್ಲಿ ಡಿ.ಕೆ. ಶಿವಕುಮಾರ್ ಹೇಳಿದರು.
ಅಂತಿಮ ಘಟಕ್ಕೆ ಪ್ರಕರಣ
ಚುನಾವಣಾ ಹೊತ್ತಿನಲ್ಲಿ ಡಿ.ಕೆ. ಶಿವಕುಮಾರ್ ಮತ್ತೊಂದು ಶಾಕ್ ಎದುರಾಗಿದೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣದ ತನಿಖೆಯು ಅಂತಿಮ ಘಟ್ಟಕ್ಕೆ ತಲುಪಿದೆ. ಕೆಲವೇ ದಿನಗಳಲ್ಲಿ ಚಾರ್ಜ್‌ಶೀಟ್ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದೆ. ಕಳೆದ ಎರಡು ವರ್ಷಗಳಿಂದ ಸಿಬಿಐ ತನಿಖೆ ನಡೆಸುತ್ತಿತ್ತು. ಡಿ.ಕೆ. ಶಿವಕುಮಾರ್ ಮನೆ ಹಾಗೂ ಸಂಬಂಧಿಕರ ಮನೆ ಮೇಲೆ ಸಿಬಿಐ ದಾಳಿ ಮಾಡಿತ್ತು.. ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಲವರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗಿತ್ತು. ಅಲ್ಲದೆ, ಡಿಕೆಶಿ ಆಸ್ತಿಯ ಮೌಲ್ಯಮಾಪನ ಕೂಡ ನಡೆಸಲಾಗಿತ್ತು.
ಡಿಕೆಶಿ ಅಕ್ರಮ ಆಸ್ತಿಯಲ್ಲಿ ಏರಿಕೆ?
ಸಿಬಿಐ ಅಧಿಕಾರಿಗಳು ಮಾಡಿದ್ದ ಆಸ್ತಿ ಮೌಲ್ಯಮಾಪನದ ವೇಳೆ ಆಸ್ತಿಯಲ್ಲಿ ಏರಿಕೆ ಕಂಡುಬಂದಿರುವುದು ಬೆಳಕಿಗೆ ಬಂದಿದೆ. ಐದು ವರ್ಷದಲ್ಲಿ ಶೇ. 49ರಷ್ಟು ಅಕ್ರಮ ಆಸ್ತಿ ಹೊಂದಿದ್ದಾರೆ. ತಮ್ಮ ಆದಾಯಕ್ಕಿಂತ 79 ಕೋಟಿ ಮೌಲ್ಯದ ಹೆಚ್ಚುವರಿ ಆಸ್ತಿ ಹೊಂದಿದ್ದಾರೆ ಎಂದು ಸಿಬಿಐ ಎಫ್‌ಐಆರ್ ದಾಖಲು ಮಾಡಿತ್ತು. ವಿಚಾರಣೆಯಲ್ಲಿ ನಾನೊಬ್ಬ ಕೃಷಿಕನಾಗಿದ್ದೇನೆ. ನಾನು ಕೃಷಿಯ ಮೂಲಕವೇ ಆಸ್ತಿ ಸಂಪಾದನೆ ಮಾಡಿದ್ದು, ಊರಲ್ಲಿ ನನ್ನದೇ ಆದ ತೋಟ ಇದೆ, ನಾವು ಶೇಂಗಾ, ರಾಗಿ ಬೆಳೆಯುತ್ತೇವೆ. ನಮಗೆ ಅದೇ ಆದಾಯದ ಮೂಲವಾಗಿದೆ. ಆ ಮೂಲದಿಂದಲೇ ಆಸ್ತಿ ಸಂಪಾದನೆ ಎಂದು ಹೇಳಿದರು.