ಬೆಂಗಳೂರು: ಶಾಲಾ ವಾಹನ ಚಾಲಕರ ವಿರುದ್ಧ ಟ್ರಾಫಿಕ್ ಪೊಲೀಸರು ಮಂಗಳವಾರ ಕಾರ್ಯಾಚರಣೆ ನಡೆಸಿದ್ದು, ಕುಡಿದು ಚಾಲನೆ ಮಾಡುತ್ತಿದ್ದ 16 ಚಾಲಕರ ವಿರುದ್ಧ ಕೇಸ್ (Drunk Driving Case) ದಾಖಲಿಸಿದ್ದಾರೆ. ಬೆಳ್ಳಂ ಬೆಳಗ್ಗೆ ಮದ್ಯಪಾನ ಮಾಡಿ ಶಾಲಾ ವಾಹನಗಳನ್ನು ಓಡಿಸುತ್ತಿರುವ ಬಗ್ಗೆ ಮಾಹಿತಿ ಪಡೆದಿದ್ದ ಪೊಲೀಸರು, ಶಾಲಾ ವಾಹನ ಚಾಲಕರಿಗೆ ಬಿಸಿ ಮುಟ್ಟಿಸಿದ್ದಾರೆ.
ಮಂಗಳವಾರ ಬೆಳಗ್ಗೆ 7 ಗಂಟೆಯಿಂದ 9.30 ರವರೆಗೆ ಪೊಲೀಸರು ವಾಹನಗಳ ತಪಾಸಣೆ ನಡೆಸಿದ್ದಾರೆ. ಸುಮಾರು 3,414 ಶಾಲಾ ವಾಹನಗಳನ್ನು ತಪಾಸಣೆ ನಡೆಸಲಾಗಿದ್ದು, ಈ ಪೈಕಿ 16 ಚಾಲಕರು ಕುಡಿದು ವಾಹನ ಚಲಾಯಿಸುವುದು ಬೆಳಕಿಗೆ ಬಂದಿದೆ. ಹೀಗಾಗಿ ಅವರ ವಿರುದ್ಧ ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಬಗ್ಗೆ ಸಂಚಾರ ಪೊಲೀಸ್ ಜಂಟಿ ಆಯುಕ್ತ ಎಂ.ಎನ್. ಅನುಚೇತ್ ಪ್ರತಿಕ್ರಿಯಿಸಿ, ಇವತ್ತು ಬೆಳಗ್ಗೆ ಸಂಚಾರ ಪೊಲೀಸರಿಂದ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ. ಮೂರು ಸಾವಿರಕ್ಕೂ ಹೆಚ್ಚು ಶಾಲಾ ವಾಹನಗಳನ್ನು ತಪಾಸಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ತಪಾಸಣೆ ವೇಳೆ 16 ಚಾಲಕರು ಕುಡಿದು ವಾಹನ ಓಡಿಸಿರುವುದು ಕಂಡುಬಂದಿದೆ. ಅವರ ವಿರುದ್ಧ ಕ್ರಿಮಿನಲ್ ಕೇಸ್ ಹಾಕಿ ಕ್ರಮ ಕೈಗೊಳ್ಳಲಾಗುತ್ತಿದೆ. ಚಾಲಕರ ಡ್ರೈವಿಂಗ್ ಲೈಸೆನ್ಸ್‌ಗಳನ್ನು ವಶಕ್ಕೆ ಪಡೆದು ಆರ್‌ಟಿಒ ಕಚೇರಿಗೆ ರವಾನೆ ಮಾಡಲಾಗಿದೆ. ಈ ಬಗ್ಗೆ ಶಾಲಾ ಮಂಡಳಿಗಳಿಗೂ ಮಾಹಿತಿ ನೀಡಿದ್ದೇವೆ. ಅವರು ಏನು ಮಾಹಿತಿ ನೀಡುತ್ತಾರೆ ಎಂಬ ಆಧಾರದ ಮೇಲೆ ಸಾರಿಗೆ ಇಲಾಖೆಗೆ ಮಾಹಿತಿ ನೀಡುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ | Rama Mandir : ರಾಮನನ್ನು ಅಪಮಾನಿಸುವ ವಿಡಿಯೊ ಸ್ಟೇಟಸ್ ; ಮುಸ್ಲಿಂ ಯುವಕನ ಮೇಲೆ ಕೇಸ್
ಕೆಲ ಶಾಲೆಗಳು ಖಾಸಗಿ ವಾಹನಗಳನ್ನು ಬಳಸುತ್ತಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಕೂಡ ಸಾರಿಗೆ ಇಲಾಖೆಗೆ ಮಾಹಿತಿ ನೀಡಿದ್ದೇವೆ ಎಂದು ಸಂಚಾರ ಜಂಟಿ ಪೊಲೀಸ್ ಆಯುಕ್ತ ಎಂ.ಎನ್. ಅನುಚೇತ್ ತಿಳಿಸಿದ್ದಾರೆ.
ವರದಕ್ಷಿಣೆ ಕಾಟ! ಪತಿ ಎದುರಿಗೆ ಪತ್ನಿ ಆತ್ಮಹತ್ಯೆ
ಬೆಂಗಳೂರು: ನಗರದಲ್ಲಿ ವರದಕ್ಷಿಣೆ ಕಾಟಕ್ಕೆ (Dowry Case) ಗೃಹಿಣಿಯೊಬ್ಬರು ನೇಣಿಗೆ ಶರಣಾಗಿದ್ದಾರೆ. ರಂಜಿತಾ (29) ಮೃತ ದುರ್ದೈವಿ. ದೊಡ್ಡ ಬಸ್ತಿ ರಸ್ತೆ ಬಳಿಯ ಬಸವೇಶ್ವರನಗರದ ಮನೆಯಲ್ಲಿ (Bengaluru News) ಘಟನೆ ನಡೆದಿದೆ.
ರಂಜಿತಾ ಮಧು ಎಂಬುವವರ ಜತೆ ವಿವಾಹವಾಗಿದ್ದರು. ಮೊದಮೊದಲು ಇವರಿಬ್ಬರು ಅನ್ಯೋನ್ಯವಾಗಿದ್ದರು. ಆದರೆ ದಿನ ಕಳೆದಂತೆ ಪತಿ ಮಧು ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದ. ವರದಕ್ಷಿಣೆ ಜತೆಗೆ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿದ್ದ ಬಗ್ಗೆ ಪೋಷಕರೊಟ್ಟಿಗೆ ಆಗಾಗ ರಂಜಿತಾ ಹೇಳಿಕೊಳ್ಳುತ್ತಿದ್ದಳು.
ಪತಿ ಮಧು ಮನೆಯಲ್ಲಿ ಇರುವಾಗಲೇ ಈ ಘಟನೆ ನಡೆದಿದೆ. ಆತನೇ ಹತ್ಯೆ ಮಾಡಿ ನಂತರ ಆತ್ಮಹತ್ಯೆ ಎಂದು ಬಿಂಬಿಸುತ್ತಿದ್ದಾನೆ ಎಂದು ಗಂಭೀರ ಆರೋಪವನ್ನು ಮಾಡಿದ್ದಾರೆ. ರಂಜಿತಾ ಇಎಸ್‌ಎಸ್ ಶಾಲೆಯಲ್ಲಿ ಟೀಚರ್ ಆಗಿ ಕೆಲಸ ಮಾಡುತ್ತಿದ್ದಳು.
ಇದನ್ನೂ ಓದಿ | Love Case : ಪ್ರೀತಿಸಿ ಕೈಕೊಟ್ಟ ಕಾನ್ಸ್‌ಟೇಬಲ್; ಮದ್ವೆ ಆಗುವಂತೆ ಸ್ಟೇಷನ್ ಮುಂದೆ ಪ್ರೊಟೆಸ್ಟ್
ಸದ್ಯ ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಸಂಬಂಧ ದೂರು ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.